ಬಾಗಲಕೋಟೆ: ಡಿಸಿಸಿ ಬ್ಯಾಂಕ್​ಗೆ 12 ಕೋಟಿ ರೂ. ಪಂಗನಾಮ: ಈಗ ಸುಪ್ರೀಂನಿಂದ ಜಾಮೀನು ತಂದು ಅಚ್ಚರಿ ಮೂಡಿಸಿದ ಜವಾನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 27, 2022 | 11:27 AM

ಓರ್ವ ಜವಾನ ಬರೊಬ್ಬರಿ 12ಕೋಟಿ ವಂಚನೆ ಮಾಡಿ ಜಿಲ್ಲೆಯ ಪ್ರತಿಷ್ಟಿತ ಬ್ಯಾಂಕ್​ಗೆ ಮಕ್ಮಲ್ ಟೋಪಿ ಹಾಕಿದ್ದಾನೆ. ಇಂತಹ ಆಸಾಮಿ ವಿರುದ್ದ ಕೇಸ್ ಆಗಿದ್ದು, ಒಬ್ಬ ಜವಾನ ಸುಪ್ರೀಮ್ ಕೋರ್ಟ್​ನಿಂದ ಜಾಮೀನು ಪಡೆದು ಮತ್ತಷ್ಟು ಅಚ್ಚರಿ ‌ಮೂಡಿಸಿದ್ದಾನೆ.

ಬಾಗಲಕೋಟೆ: ಡಿಸಿಸಿ ಬ್ಯಾಂಕ್​ಗೆ 12 ಕೋಟಿ ರೂ. ಪಂಗನಾಮ: ಈಗ ಸುಪ್ರೀಂನಿಂದ ಜಾಮೀನು ತಂದು ಅಚ್ಚರಿ ಮೂಡಿಸಿದ ಜವಾನ
ಬಾಗಲಕೋಟೆ
Follow us on

ಬಾಗಲಕೋಟೆ: ಡಿಸಿಸಿ(DCC Bank) ಬ್ಯಾಂಕ್​ ಮ್ಯಾನೇಜರ್​ಗಳ ಕಂಪ್ಯೂಟರ್ ಐಡಿ ಪಾಸ್​ವರ್ಡ್ ಹ್ಯಾಕ್ ಮಾಡಿ ಬರೊಬ್ಬರಿ 12ಕೋಟಿ ಹಣವನ್ನು ವಂಚನೆ ಮಾಡಿದ್ದ ಬ್ಯಾಂಕ್ ಜವಾನ  ಪ್ರವೀಣ ಪತ್ರಿ ಇದೀಗ ಸುಪ್ರೀಂಕೋರ್ಟ್​ನಿಂದ ಜಾಮೀನು ಪಡೆದು ಅಚ್ಚರಿ ಮೂಡಿಸಿದ್ದಾನೆ. ಪೊಲೀಸ್​ ಕೇಸ್ ಆಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಪ್ರವೀಣ  ಇದೀಗ ಸುಪ್ರೀಂನಿಂದ ಜಾಮೀನು ಪಡೆದು ಬಂದಿದ್ದಾನೆ. ಈ ಹಿಂದೆ ಹೈಕೋರ್ಟ್​ನಲ್ಲಿ ಜಾಮೀನು ಸೀಗದ ಕಾರಣ ಸುಪ್ರೀಂ ಕೋರ್ಟ್​ಗೆ ಹೋಗಿದ್ದನು.

ಪ್ರವೀಣ ಪತ್ರಿ ಎನ್ನುವ ವ್ಯಕ್ತಿ ಬಾಗಲಕೋಟೆ ಡಿಸಿಸಿ ಬ್ಯಾಂಕ್​ನ ಶಾಖೆಗಳಾದ ಅಮೀನಗಢ, ಕಮತಗಿ, ಗೂಡೂರು ಬ್ಯಾಂಕ್​ಗಳಲ್ಲಿ ಜವಾನನ ಕೆಲಸ ಮಾಡಿಕೊಂಡಿದ್ದನು. ತಾನು ಕೆಲಸ ಮಾಡುತ್ತಿದ್ದ ಮೂರು ಬ್ಯಾಂಕ್​ ಮ್ಯಾನೇಜರ್​ಗಳ ಕಂಪ್ಯೂಟರ್ ಐಡಿ ಪಾಸ್​ವರ್ಡ್ ಹ್ಯಾಕ್ ಮಾಡಿ ಬರೊಬ್ಬರಿ 12ಕೋಟಿ ಹಣವನ್ನು ವಂಚನೆ ಮಾಡಿದ್ದಾನೆ. ಐದು ತಿಂಗಳ ಹಿಂದೆ ಈತನ ಶೋಕಿ ಜೀವನಶೈಲಿ ಕಂಡು ಡಿಸಿಸಿ ಬ್ಯಾಂಕ್ ಆಡಳಿತಮಂಡಳಿ ಪರಿಶೀಲನೆ ನಡೆಸಿದಾಗ ಈತನ ವಂಚನೆ ಬಯಲಾಗಿತ್ತು. ತಕ್ಷಣ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಈ ಪ್ರಕರಣ ಸಿಐಡಿ ತನಿಖೆಗೂ ಹಸ್ತಾಂತರವಾಗಿದೆ.

ಪೊಲೀಸ್​ ದೂರು ನೀಡಿದಾಗಿನಿಂದ ನಾಪತ್ತೆಯಾಗಿದ್ದ ಜವಾನ ಪ್ರವೀಣ ಪತ್ರಿ, ಹೈಕೋರ್ಟ್​ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾನೆ. ಅಲ್ಲಿ ಜಾಮೀನು ರಿಜೆಕ್ಟ್ ಆಗಿದ್ದು, ನಂತರ ತಲೆಮರೆಸಿಕೊಂಡು ದೆಹಲಿ ಸುಪ್ರೀಮ್​ಕೋರ್ಟ್​ಗೆ ಜಾಮೀನು ಅರ್ಜಿ ಸಲ್ಲಿಸಿದ್ದ. ನವೆಂಬರ್ 10ರಂದು ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ, ಸುಧಾಂಶು ದುಲಿಯಾ ಇದ್ದ ಸುಪ್ರೀಮ್​ಕೋರ್ಟ್​ನ ದ್ವಿಸದಸ್ಯ ಪೀಠ ಈತನಿಗೆ ಜಾಮೀನು ನೀಡಿದೆ. ತನಿಖಾಧಿಕಾರಿಗಳು ಪ್ರವೀಣ ಪತ್ರಿಗೆ ಬಾಧಕವಾಗುವಂತಹ ಕ್ರಮ ಕೈಗೊಳ್ಳಬಾರದು ಹಾಗೂ ಪ್ರವೀಣ ಕೂಡ ತನಿಖಾಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಬೇಕೆಂದು ಆದೇಶದಲ್ಲಿ ಹೇಳಲಾಗಿದೆ. ಈ ಮೂಲಕ ಸುಪ್ರೀಮ್ ಕೋರ್ಟ್​ಗೆ ಹೋಗಿ ಜಾಮೀನು ತಂದ ಜವಾನ ಎಂದು ಇತಿಹಾಸ ಮಾಡುವ ಮೂಲಕ ಎಲ್ಲರಿಗೂ ಶಾಕ್ ಮೂಡಿಸಿದ್ದಾನೆ.

ಆರೋಪಿ ಪ್ರವೀಣ್ ಪತ್ರಿ ಲೂಟಿ ಮಾಡಿದ್ದ ಹಣವನ್ನು ತನ್ನ ಖಾತೆ ಸೇರಿದಂತೆ ಇನ್ನಿತರ 40 ಜನರ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು ಮಹಾವಂಚನೆ ಎಸಗಿದ್ದ. ಸಿನಿಮಾ, ನಾಟಕ, ಅಲ್ಬಮ್ ಸಾಂಗ್, ಹೆಲಿಕಾಪ್ಟರ್ ಓಡಾಟ, ಟಿಕ್ ಟಾಕ್​ನಲ್ಲಿ ಹವಾ, ಪುಕ್ಸಟ್ಟೆ ಹಣ ಅಂತ ದಾನಧರ್ಮ ಮಾಡಿ ಬಿಲ್ಡಪ್​ ಕೂಡ ತಗೊತಿದ್ದ. ಈತ ಅಮೀನಗಡ ಶಾಖೆಯಲ್ಲಿ 10ಕೋಟಿ 23ಲಕ್ಷ, ಗುಡೂರು ಶಾಖೆಯಲ್ಲಿ 23ಲಕ್ಷ 2 ಸಾವಿರ ಹಾಗೂ ಕಮತಗಿ ಶಾಖೆಯಲ್ಲಿ 1 ಕೋಟಿ 80ಲಕ್ಷ ರೂಪಾಯಿ ವಂಚನೆ‌ ಮಾಡಿದ್ದು ತನಿಖೆಯಿಂದ ಬೆಳಕಿಗೆ ಬಂದಿತ್ತು.

ಮೂರು ಬ್ಯಾಂಕ್​ನಲ್ಲಿ 2015ರಿಂದ 22ವರೆಗೆ ಪ್ರಮುಖ ಆರೋಪಿ ಪ್ರವೀಣ ಜವಾನನಾಗಿ ಕೆಲಸ ಮಾಡಿದ್ದ.‌ ವಂಚನೆ ಹಿನ್ನೆಲೆ ಪ್ರವೀಣ ಪತ್ರಿ ಸೇರಿದಂತೆ ಮೂರು ಬ್ಯಾಂಕ್​ನ ಸಿಬ್ಬಂದಿ ಸೇರಿ ಒಟ್ಟು 23ಜನರ ವಿರುದ್ದ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಹಣ ಲಪಟಾಯಿಸಿದ ಪ್ರವೀಣ ಪತ್ರಿ ಸೇರಿದಂತೆ 6 ಜನ ಮ್ಯಾನೇಜರ್, 13 ಜನ ಕ್ಲರ್ಕ್, 1ಅಕೌಂಟೆಂಟ್​, 1ಮೇಲ್ವಿಚಾರಕ, 1ಜ್ಯೂನಿಯರ್ ಮ್ಯಾನೇಜರ್ ಸೇರಿ ಒಟ್ಟು 23ಜನರ ಆಸ್ತಿಯನ್ನು ಡಿಸಿಸಿ ಬ್ಯಾಂಕ್ ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿದೆ.‌ ಇನ್ನು ಎಫ್.ಐ.ಆರ್ ಆಗುತ್ತಿದ್ದಂತೆ ಎಲ್ಲರೂ ಎಸ್ಕೇಪ್ ಆಗಿದ್ದರು.‌ 22 ಜನರಿಗೆ ಮೊದಲೇ ಜಾಮೀನು ಸಿಕ್ಕಿತ್ತು, ಆದರೆ ಪ್ರವೀಣ ಪತ್ರಿಗೆ ಜಾಮೀನು ಸಿಕ್ಕಿರಲಿಲ್ಲ. ಈಗ ಪ್ರವೀಣ ಪತ್ರಿಗೂ ಜಾಮೀನು ಸಿಕ್ಕಿದೆ.

ಇನ್ನು ಡಿಸಿಸಿ ಬ್ಯಾಂಕ್ ಅಧಿಕಾರಿಗಳು ನಾವು ಪ್ರಕರಣದ ಬಗ್ಗೆ, ಈ ಹಿಂದೆಯೇ ಬೋರ್ಡ್ ಮೀಟಿಂಗ್ ಮಾಡಿ ರಾಜ್ಯ ಸಹಕಾರ ಇಲಾಖೆಗೆ ಈ ಪ್ರಕರಣ ಸಿಬಿಐ ತನಿಖೆಗೆ ವಹಿಸುವಂತೆ ಪತ್ರ ಬರೆದಿದ್ದೇವೆ.ರಾಜ್ಯ ಸಹಕಾರಿ ಇಲಾಖೆಯಿಂದ ಸರಕಾರಕ್ಕೆ ಸಿಬಿಐಗೆ ವಹಿಸುವಂತೆ ಪತ್ರ ಸಲ್ಲಿಸಲಾಗಿದೆ. ಮುಂದಿನ ನಡೆ ಬಗ್ಗೆ ಸರಕಾರ ಯಾವ ಹೆಜ್ಜೆ ಇಡಲಿದೆ ಎಂದು ಕಾದು ನೋಡಬೇಕಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ಬಾಗಲಕೋಟೆ: ಮಡಿದ ಹೆತ್ತವರಿಗಾಗಿ ಹೊಲದಲ್ಲಿ ದೇವಸ್ಥಾನ ಕಟ್ಟಿಸಿದ ಮಗ; ಪ್ರತಿವರ್ಷ ಜನಪದ ಜಾತ್ರೆ

ಒಟ್ಟಿನಲ್ಲಿ ಜವಾನ ಇಂತಹದ್ದೊಂದು ದೊಡ್ಡ ದೋಖಾ ಮಾಡುವುದರ ಜೊತೆಗ ಸುಪ್ರೀಮ್​ ಕೋರ್ಟ್​ನಿಂದ ಜಾಮೀನು ಪಡೆದಿದ್ದಾನೆ. ಈತನ ಚಾಲಾಕಿ ಬುದ್ದಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಮುಂದೆ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೆ ಕಾದುನೋಡಬೇಕಾಗಿದೆ.

ವರದಿ: ರವಿ ಮೂಕಿ ಟಿವಿ 9 ಬಾಗಲಕೋಟೆ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ