ಬಾಗಲಕೋಟೆ: ಮಡಿದ ಹೆತ್ತವರಿಗಾಗಿ ಹೊಲದಲ್ಲಿ ದೇವಸ್ಥಾನ ಕಟ್ಟಿಸಿದ ಮಗ; ಪ್ರತಿವರ್ಷ ಜನಪದ ಜಾತ್ರೆ

ಸೀಗಿಕೇರಿ ಗ್ರಾಮದ ಕಲಾವಿದ, ನಾಟಕಕಾರ ಹೆಚ್​.ಎನ್​. ಶೇಬನ್ನವರ ಹಾಗೂ ಕುಟುಂಬದವರು ಮಡಿದ ತಂದೆ ತಾಯಿಗಾಗಿ ದೇವಸ್ಥಾನವನ್ನೇ ಕಟ್ಟಿಸಿ. ಅವರ ಹೆಸರಿನಲ್ಲಿ ಜನಪದ ಜಾತ್ರೆ ಮಾಡುವ ಮೂಲಕ ಅಜರಾಮರವಾಗಿಸುವ ಕಾರ್ಯ ಮಾಡುತ್ತಿದ್ದಾರೆ.

ಬಾಗಲಕೋಟೆ: ಮಡಿದ ಹೆತ್ತವರಿಗಾಗಿ ಹೊಲದಲ್ಲಿ ದೇವಸ್ಥಾನ ಕಟ್ಟಿಸಿದ ಮಗ; ಪ್ರತಿವರ್ಷ ಜನಪದ ಜಾತ್ರೆ
ಬಾಗಲಕೋಟೆ
TV9kannada Web Team

| Edited By: Kiran Hanumant Madar

Nov 23, 2022 | 2:49 PM

ಬಾಗಲಕೋಟೆ: ತಾಲೂಕಿನ ಸೀಗಿಕೇರಿ ಗ್ರಾಮದ ನಾಟಕಕಾರ, ಕಲಾವಿದ ಹೆಚ್ ಎನ್ ಶೇಬನ್ನವರ(H.N.  Shebanna) ಎನ್ನುವವರು ತಮ್ಮ ತಂದೆ ತಾಯಿಗಾಗಿ ಹೊಲದಲ್ಲಿ ದೇವಸ್ಥಾನವನ್ನೇ ಕಟ್ಟಿಸಿ, ತಂದೆ ತಾಯಿ ಮೇಲಿನ ಪ್ರೀತಿ ಮೆರೆದಿದ್ದಾರೆ‌. ತಂದೆ ನಿಂಗನಗೌಡ ಶೇಬನ್ನವರ ಅವರು 2001ರಲ್ಲಿ ಮೃತಪಟ್ಟರೆ, ತಾಯಿ ಮರಗವ್ವ ಶೇಬನ್ನವರ ಅವರು 2002ರಲ್ಲಿ ಮೃತಪಟ್ಟಿದ್ದಾರೆ. ತಂದೆ ತಾಯಿ ಮೇಲೆ ಅಪಾರ ಪ್ರೀತಿ ಹೊಂದಿದ ಹೆಚ್.ಎನ್​.ಶೇಬನ್ನವರು 2021 ನವೆಂಬರ್​ 22 ರಂದು ತಮ್ಮ ಹೊಲದಲ್ಲಿರುವ ಅವರ ಗದ್ದುಗೆಗಳನ್ನೇ ಮೂರ್ತಿ ಮಾಡಿ ದೇವಸ್ಥಾನ ಕಟ್ಟಿಸಿದ್ದಾರೆ. ಅವರ ನೆನಪು ಎಂದೂ ಮಾಸಬಾರದು ಎಂದು ಪ್ರತಿವರ್ಷ ಜನಪದ ಜಾತ್ರೆ ಮಾಡುವ ಮೂಲಕ ತಂದೆ ತಾಯಿಯನ್ನು ತಮ್ಮ ಕಾರ್ಯಕ್ರಮಗಳ ಮೂಲಕ ಸದಾ ಜೀವಂತವಾಗಿರಿಸುವ ಕಾರ್ಯ ಮಾಡುತ್ತಿದ್ದಾರೆ.

ಹೆಚ್ ಎನ್ ಶೇಬನ್ನವರ ಅವರ ತಂದೆ ತಾಯಿ ಇಬ್ಬರು ವಯೋಸಹಜವಾಗಿ ಸಾವನ್ನಪ್ಪಿದ್ದಾರೆ. ಅವರ ಐದು ಜನ ಮಕ್ಕಳ‌ ಮೇಲೆ ಅಪಾರ ಪ್ರೀತಿ ಹೊಂದಿದ್ದರಂತೆ, ಮಕ್ಕಳಿಗೂ ಕೂಡ ತಂದೆ ತಾಯಿ ಎಂದರೆ ಬಿಡದಷ್ಟು ಪ್ರೀತಿ. ತಂದೆ ತಾಯಿಗಳ ಗದ್ದುಗೆಗೆ ನಿತ್ಯಪೂಜೆ, ಪುನಸ್ಕಾರ ಮಾಡಿ ದರ್ಶನ ಪಡೆಯುತ್ತಾರೆ. ಇದೇ ಕಾರಣಕ್ಕೆ ಹೆಚ್ ಎನ್ ಶೇಬನ್ನವರ ಅವರು ಮತ್ತು ಅವರ ಕುಟುಂಬ ಹೊಲದಲ್ಲಿ ದೇವಸ್ಥಾನ ಕಟ್ಟಿಸಿ, ಜನಪದ ಜಾತ್ರೆ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಇನ್ನು ತಂದೆ ತಾಯಿ ಸ್ಮರಣಾರ್ಥ ಗದ್ದುಗೆಗಳಿಗೆ ಸೀರೆ ದೋತಿ ಉಡಿಸಿ ಹೂಮಾಲೆ ಹಾಕಿ ಇಡೀ ಕುಟುಂಬ ಪೂಜೆ ಸಲ್ಲಿಸಿತು. ತಂದೆ ತಾಯಿ ಹೆಸರಲ್ಲಿ ನಡೆದ ಜನಪದ ಜಾತ್ರೆಯಲ್ಲಿ ಸಾಧಕರಿಗೆ ರಾಜ್ಯಮಟ್ಟದ ಶಂಕರಶ್ರೀ ಪ್ರಶಸ್ತಿ ವಿತರಿಸಿದರು. ಜೊತೆಗೆ ಜನಪದ ಜಾತ್ರೆ ಹಿನ್ನೆಲೆ ವಿವಿಧ ಕಲಾವಿದರಿಂದ ಜನಪದ ಹಾಡುಗಳು, ಸಿನಿಮಾ ಹಾಡುಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ:ACB: ಈ ಹಿಂದೆ ಎಸಿಬಿ ದಾಳಿಗೆ ಒಳಗಾಗಿದ್ದ ಬಾಗಲಕೋಟೆ ಆರ್ ಟಿಒ ಅಧಿಕಾರಿ ಸಸ್ಪೆಂಡ್, ಕಾರಣ ಇಂಟರೆಸ್ಟಿಂಗ್ ಆಗಿದೆ!

ಗ್ರಾಮದ ಹಾಗೂ ವಿವಿಧ ಕಡೆಯಿಂದ ಜನರು ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ತಂದೆ ತಾಯಿಗಳನ್ನು ಬದುಕಿದ್ದಾಗಲೇ ಸರಿಯಾಗಿ ನೋಡಿಕೊಳ್ಳದೆ ವೃದ್ದಾಶ್ರಮಕ್ಕೆ ಕಳಿಸುವ ಈ ಕಾಲದಲ್ಲಿ ತಂದೆ ತಾಯಿಗಳ ದೇವಸ್ಥಾನ ಕಟ್ಟಿಸಿದ್ದು ಒಂದು ಮಹತ್ವದ ವಿಚಾರ, ಮೇಲಾಗಿ ಪ್ರತಿ ವರ್ಷ ಅವರ ಹೆಸರಲ್ಲಿ ಇಂತಹ ಕಾರ್ಯ ‌ಮಾಡುತ್ತಿದ್ದಾರೆ. ಒಟ್ಟಿನಲ್ಲಿ ತಂದೆತಾಯಿ ವಯಸ್ಸಾದರೆ ಸಾಕು ನಿರ್ಲಕ್ಷ್ಯ ಮಾಡುವ ಎಷ್ಟೋ ಜನರಿಗೆ ಶೇಬನ್ನ ಅವರ ಈ ಕಾರ್ಯ ಅರಿವು ಮೂಡಿಸುವಂತಿದೆ. ತಂದೆ ತಾಯಿ ದೇವಸ್ಥಾನ ಕಟ್ಟಿಸಿ ಇಂತಹ ಮಹಾನ್ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ.

ವರದಿ: ರವಿ ಮೂಕಿ ಟಿವಿ9 ಬಾಗಲಕೋಟೆ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada