
ಬಾಗಲಕೋಟೆ, ಡಿಸೆಂಬರ್ 21: ಬಾಗಲಕೋಟೆ ನವನಗರದ 54ನೇ ಸೆಕ್ಟರ್ನಲ್ಲಿರುವ ದಿವ್ಯ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆಯಲ್ಲಿ (Mentally Challenged Student Assaulted) ಬಾಲಕನ ಮೇಲೆ ಶಿಕ್ಷಕ ದಂಪತಿ ಹಲ್ಲೆ ನಡೆಸಿದ ಘಟನೆ ಎಲ್ಲೆಡೆ ಆಕ್ರೋಶ ಹುಟ್ಟಿಹಾಕಿತ್ತು. ದೀಪಕ್ ರಾಠೋಡ್(16) ಎಂಬ ಹುಡುಗನ ಮೇಲೆ ಅಕ್ಷಯ್ ಇಂಗಳಕರ್ ಬೆಲ್ಟ್, ಪ್ಲಾಸ್ಟಿಕ್ ಪೈಪ್‌ನಿಂದ ಹಲ್ಲೆ ಮಾಡಿದರೆ, ಅವರ ಪತ್ನಿ ಆನಂದಿ ಬಾಲಕನ ಕಣ್ಣಿಗೆ ಖಾರದಪುಡಿ ಎರಚಿ ಹೇಯ ಕೃತ್ಯವೆಸಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನ ಬಂಧಿಸಿರುವ ಪೊಲೀಸರು, ಸಹ ಶಿಕ್ಷಕರರಾದ ವಿಠಲ್ ಮತ್ತು ವಿಶಾಲ್‌ನನ್ನೂ ವಶಕ್ಕೆ ಪಡೆದಿದ್ದಾರೆ.
ಬುದ್ಧಿಮಾಂದ್ಯ ಮಕ್ಕಳ ಮೇಲೆ ಹಿಂಸೆ ನಡೆಸಿ ಜಾತಿ ನಿಂದನೆ ಮಾಡಿದ ಆರೋಪದ ಹಿನ್ನೆಲೆ ದಿವ್ಯಜ್ಯೋತಿ ಬುದ್ಧಿಮಾಂದ್ಯ ರೆಸಿಡೆನ್ಶಿಯಲ್ ಸ್ಕೂಲ್ ಫಾರ್ ಮೆಂಟಲ್ ಚಾಲೆಂಜ್ಡ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನವನಗರ ಪೊಲೀಸ್ ಠಾಣೆಯಲ್ಲಿ ಅಕ್ಷಯ ಹಿಂದೂಲಕರ್, ರವಿಕಾಂತ ಬೂದಿಹಾಳ, ಅಕ್ಷಯ ಪತ್ನಿ ಆನಂದಿ ಹಿಂದೂಲಕರ್ ಹಾಗೂ ವಿಶಾಲ ಬಾಬುರಾವ್ ಪಾಟೀಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಹಲ್ಲೆಗೆ ಒಳಗಾದ ಬುದ್ಧಿಮಾಂದ್ಯ ಬಾಲಕ ದೀಪಕ್ ಅಶೋಕ ರಾಠೋಡನ ತಂದೆ ಅಶೋಕ ರಾಠೋಡ ದೂರು ನೀಡಿದ್ದು, ಭಾರತೀಯ ನ್ಯಾಯ ಸಂಹಿತೆ-2023, ಜೆಜೆ ಕಾಯ್ದೆ, ಆರ್‌ಪಿಡಬ್ಲ್ಯುಡಿ ಕಾಯ್ದೆ ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ. ಮೂರು ತಿಂಗಳ ಹಿಂದೆ ನಡೆದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಡಿವೈಎಸ್‌ಪಿ ಗಜಾನನ ಸುತಾರ್ ನೇತೃತ್ವದಲ್ಲಿ ಸ್ಥಳ ಮಹಜರು ಹಾಗೂ ಹಲ್ಲೆಗೆ ಬಳಸಿದ ಸಾಮಗ್ರಿಗಳ ಸೀಜ್ ಕಾರ್ಯ ಕೈಗೊಳ್ಳಲು ಕ್ರಮವಹಿಸಿದ್ದಾರೆ. ಆರೋಪಿಗಳನ್ನು ವಸತಿ ಶಾಲೆಗೆ ಕರೆತಂದು ಮಹಜರು ಪ್ರಕ್ರಿಯೆ ನಡೆಸಲಾಗುತ್ತಿದೆ.
ಈ ಹೇಯ ಕೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಾಲೆಗೆ ವಿಕಲಚೇತನ ಕಲ್ಯಾಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಭೇಟಿ ನೀಡಿದ್ದಾರೆ.ಈ ವೇಳೆ ದಿವ್ಯಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆ ನಡೆಸಲು ಪರವಾನಗಿ ಪಡೆದಿಲ್ಲವೆಂಬುದು ಗೊತ್ತಾಗಿದೆ. ಶಾಲೆಯಲ್ಲಿ 40 ಮಕ್ಕಳಿದ್ದು ಸದ್ಯ ಎಲ್ರನ್ನೂ ಬಾಲಮಂದಿರಕ್ಕೆ ಶಿಫ್ಟ್ ಮಾಡಲಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕ ದಂಪತಿಯಿಂದ ಹಲ್ಲೆ: ಕಣ್ಣಿಗೆ ಖಾರದಪುಡಿ ಎರಚಿ ಹೇಯ ಕೃತ್ಯ
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇದು ಅತ್ಯಂತ ಅಮಾನವೀಯ ಹಾಗೂ ಸಮಾಜಕ್ಕೆ ಕಳಂಕ ತರುವ ಘಟನೆ ಎಂದು ಹೇಳಿದ್ದಾರೆ. ಸರ್ಕಾರದ ಅನುಮತಿ ಇಲ್ಲದೇ ಅನಧಿಕೃತವಾಗಿ ಶಾಲೆ ನಡೆಸಲಾಗುತ್ತಿದ್ದು, ತಕ್ಷಣವೇ ವಸತಿ ಶಾಲೆ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದರು. ಮಕ್ಕಳ ರಕ್ಷಣಾ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಪೋಷಕರ ಅನುಮತಿ ಮೇರೆಗೆ ಮಕ್ಕಳನ್ನು ಸರ್ಕಾರಿ ಅನುದಾನಿತ ರಕ್ಷಣಾ ನಿಲಯಗಳಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ಶಿಕ್ಷಕ ದಂಪತಿಗಳ ರಾಕ್ಷಸಿ ಕೃತ್ಯ ಬಹಿರಂಗವಾಗುತ್ತಿದ್ದಂತೆ ಶಾಲೆಯಲ್ಲಿದ್ದ ಇತರೆ ಬುದ್ಧಿಮಾಂದ್ಯ ಮಕ್ಕಳ ಪೋಷಕರು ವಿವಿಧ ಊರುಗಳಿಂದ ಆಗಮಿಸಿ ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಒಟ್ಟು 32 ಮಕ್ಕಳಿರುವ ಈ ವಸತಿ ಶಾಲೆಯಿಂದ ಈವರೆಗೆ 11 ಮಕ್ಕಳನ್ನು ಪೋಷಕರೊಂದಿಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಲಾಗಿದೆ. ಶಾಲೆ ಎದುರು ಜಮಾಯಿಸಿದ ಪೋಷಕರು ಕಣ್ಣೀರು ಹಾಕುತ್ತಾ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಕೃತ್ಯಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:47 pm, Sun, 21 December 25