ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕ ದಂಪತಿಯಿಂದ ಹಲ್ಲೆ: ಕಣ್ಣಿಗೆ ಖಾರದಪುಡಿ ಎರಚಿ ಹೇಯ ಕೃತ್ಯ
ಬಾಗಲಕೋಟೆಯ ದಿವ್ಯ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಶಿಕ್ಷಕ ದಂಪತಿ 16 ವರ್ಷದ ಬುದ್ಧಿಮಾಂದ್ಯ ಬಾಲಕನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಬೆಲ್ಟ್, ಪ್ಲಾಸ್ಟಿಕ್ ಪೈಪ್‌ನಿಂದ ಹೊಡೆದು, ಬಾಲಕನ ಕಣ್ಣಿಗೆ ಖಾರದಪುಡಿ ಎರಚಿ ಕೌರ್ಯ ಮೆರೆದಿದ್ದಾರೆ. ಅಮಾನವೀಯ ಕೃತ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ, ಡಿಸೆಂಬರ್ 20: ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕ ದಂಪತಿ (Teacher Couple) ಹಲ್ಲೆ (Assaulted) ನಡೆಸಿ ರಾಕ್ಷಸಿ ಕೃತ್ಯ ಮೆರೆದಿರುವಂತಹ ಘಟನೆ ಬಾಗಲಕೋಟೆ ನವನಗರದ 54ನೇ ಸೆಕ್ಟರ್ನಲ್ಲಿರುವ ದಿವ್ಯ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆಯಲ್ಲಿ ನಡೆದಿದೆ. ದೀಪಕ್ ರಾಠೋಡ್(16) ಹಲ್ಲೆಗೊಳಗಾದ ಬುದ್ಧಿಮಾಂದ್ಯ ಬಾಲಕ. ಮಹಾರಾಷ್ಟ್ರ ಮೂಲದ ಶಿಕ್ಷಕ ಅಕ್ಷಯ್ ಇಂಗಳಕರ್ ಬೆಲ್ಟ್, ಪ್ಲಾಸ್ಟಿಕ್ ಪೈಪ್‌ನಿಂದ ಹಲ್ಲೆ ಮಾಡಿದರೆ, ಅವರ ಪತ್ನಿ ಮಾಲಿನಿ ಬಾಲಕನ ಕಣ್ಣಿಗೆ ಖಾರದಪುಡಿ ಎರಚಿ ಹೇಯ ಕೃತ್ಯವೆಸಗಿದ್ದಾರೆ. ಹಲ್ಲೆಯನ್ನ ಪ್ರಶ್ನಿಸಲು ಬಂದ ಪೋಷಕರಿಗೆ ಶಿಕ್ಷಕ ದಂಪತಿ ಬೆದರಿಕೆ ಹಾಕಿದ್ದಾರೆ. ಸದ್ಯ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಶಿಕ್ಷಕ ಅಕ್ಷಯ್ ಮತ್ತು ಅವರ ಪತ್ನಿ ಮಾಲಿನಿಯಿಂದ ಮಾತ್ರವಲ್ಲದೆ ಸಹ ಶಿಕ್ಷಕ ವಿಶಾಲ್ ಪಾಟೀಲ್ನಿಂದಲೂ ಬಾಲಕನ ಮೇಲೆ ಹಲ್ಲೆ ಮಾಡಲಾಗಿದೆ. ಸದ್ಯ ಬುದ್ಧಿಮಾಂದ್ಯ ಶಾಲೆಯ ಮುಂದೆ ಪೋಷಕರು ಜಮಾಯಿಸಿದ್ದಾರೆ. ಈ ನೀಚ ಶಿಕ್ಷಕ ದಂಪತಿ ಕೃತ್ಯಕ್ಕೆ ಮಕ್ಕಳ ಪೋಷಕರು ಕಣ್ಣೀರು ಹಾಕಿದ್ದು, ಇವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಶಿಕ್ಷಕ ದಂಪತಿಯನ್ನ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಬಾಲಕನ ತಾಯಿ ಹೇಳಿದ್ದಿಷ್ಟು
ಇನ್ನು ಟಿವಿ9 ಎದುರು ದೀಪಕ್ ರಾಠೋಡ್ ತಾಯಿ ಪಾರ್ವತಿ ಕಣ್ಣೀರಿಟ್ಟಿದ್ದು, ನಾನು ಪ್ರತಿ ತಿಂಗಳು ಆರು ಸಾವಿರ ರೂ ಹಣ ಕೊಡುತ್ತೇವೆ. ನಮ್ಮ ಮಕ್ಕಳಿಗೆ ಬಾತ್ ರೂಮ್, ಶೌಚಾಲಯ ತೊಳೆಯುವುದಕ್ಕೆ ಹಚ್ಚುತ್ತಾರೆ. ಒಪ್ಪದಿದ್ದಾಗ ಕಣ್ಣಲ್ಲಿ ಖಾರದ ಪುಡಿ ಹಾಕುವುದು, ಬೆಲ್ಟ್ ಹಾಗೂ ಪ್ಲಾಸ್ಟಿಕ್ ಪೈಪ್‌ನಿಂದ ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಕಠಿಣ ಕ್ರಮ ಆಗಬೇಕು. ಇದನ್ನು ಕೇಳಲು ಬಂದರೆ ಏನು ಮಾಡಿಕೊಳ್ಳುತ್ತೀರಾ ಮಾಡಿಕೊಳ್ಳಿ ಅಂತಾರೆ. ನಮ್ಮ ಮಗ ಅಷ್ಟೇ ಅಲ್ಲ ಬೇರೆ ಮಕ್ಕಳಿಗೂ ಹಲ್ಲೆ ಮಾಡಿದ್ದಾರೆ. ಈ ಶಾಲೆಯ ಲೈಸೆನ್ಸ್ ರದ್ದು ಮಾಡಿ ಬಂದ್ ಮಾಡಬೇಕು ಎಂದು ಬಾಲಕನ ತಾಯಿ ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಪೊಲೀಸ್ ವಿಚಾರಣೆ ವೇಳೆ ಶಿಕ್ಷಕ ಮತ್ತು ಪತ್ನಿ ವಾದ
ಹಲ್ಲೆ ಸಂಬಂಧ ಬಾಗಲಕೋಟೆಯ ನವನಗರ ಠಾಣೆ ಪೊಲೀಸರಿಂದ ಶಿಕ್ಷಕ ಅಕ್ಷಯ್, ಪತ್ನಿ ಮಾಲಿನಿ ವಿಚಾರಣೆ ಮಾಡಿದ್ದು, ನಾವು ಹಲ್ಲೆ ಮಾಡಿಲ್ಲ ಎಂದು ವಾದ ಮಾಡಿದ್ದಾರೆ. ನಾವು ಖಾರದಪುಡಿ ಎರಚಿಲ್ಲ ಹುಡುಗರೇ ಎರಚಿಕೊಂಡಿದ್ದಾರೆ. ಬೇಕಿದ್ದರೆ ಬೇರೆ ಹುಡುಗರನ್ನ ಕೇಳಿ ಎಂದು ಶಿಕ್ಷಕ ದಂಪತಿ ಸಮರ್ಥನೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




