ಮಂಗಗಳ ದಾಳಿಗೆ ಈರುಳ್ಳಿ ಬೆಳೆ ನಾಶ: ಬರಗಾಲದಲ್ಲಿ ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ

ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ತೆಗ್ಗಿ ಗ್ರಾಮದ‌‌ ರೈತರ ಹೊಲದಲ್ಲಿ ಇದೀಗ ಮಂಗಗಳ ಕಾಟ ಶುರುವಾಗಿದೆ. ಈರುಳ್ಳಿಯನ್ನು ತಿಂದು‌ ಮನಬಂದಂತೆ ಮಂಗಗಳು ಕಿತ್ತೆಸೆದಿವೆ. ಬರಗಾಲದಲ್ಲಿ ಬೆಳೆ ಉಳಿಸಿಕೊಳ್ಳಲು ರೈತರು ಪರದಾಟ ನಡೆಸಿದ್ದಾರೆ. ಸರ್ಕಾರ ನಮಗೆ ಸೂಕ್ತ ‌ಪರಿಹಾರ ಕೊಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. 

ಮಂಗಗಳ ದಾಳಿಗೆ ಈರುಳ್ಳಿ ಬೆಳೆ ನಾಶ: ಬರಗಾಲದಲ್ಲಿ ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ
ಮಂಗಗಳ ಹಾವಳಿ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on:Oct 27, 2023 | 7:56 PM

ಬಾಗಲಕೋಟೆ, ಅಕ್ಟೋಬರ್​​​​ 27: ಸದ್ಯ ಮೊದಲೇ‌ ಮಳೆಯಿಲ್ಲ. ಜಲಮೂಲ ಖಾಲಿಯಾಗಿವೆ. ಎಲ್ಲ ಕಡೆ ಬರಗಾಲ ಆವರಿಸಿದೆ. ರೈತರು ಮಳೆಯಿಲ್ಲದೆ ಬೆಳೆಯಿಲ್ಲದೆ ಕಂಗಾಲಾಗಿದ್ದಾರೆ. ಈ‌ ಮಧ್ಯೆ ಅಲ್ಪ ಸ್ವಲ್ಪ ಬಂದ ಈರುಳ್ಳಿ ಬೆಳೆಗೆ (Onion crop) ಮಂಗಗಳ ಕಾಟ‌ ಶುರುವಾಗಿದೆ. ಈರುಳ್ಳಿಯನ್ನು ತಿಂದು‌ ಮನಬಂದಂತೆ ಮಂಗಗಳು ಕಿತ್ತೆಸೆದಿವೆ. ಬರಗಾಲದಲ್ಲಿ ಬೆಳೆ ಉಳಿಸಿಕೊಳ್ಳಲು ರೈತರು ಪರದಾಟ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ತೆಗ್ಗಿ ಗ್ರಾಮದ‌‌ ರೈತರ ಹೊಲದಲ್ಲಿ ಇದೀಗ ಮಂಗಗಳ ಕಾಟ ಶುರುವಾಗಿದೆ.

ಈಗ ಮೊದಲೇ ಮಳೆಯಿಲ್ಲ ಬೆಳೆಯಿಲ್ಲದೆ ಬಾಗಲಕೋಟೆ ಜಿಲ್ಲೆಯಲ್ಲೂ ಬರ ಬಿದ್ದಿದೆ. ಆದರೂ ಕೆಲವೊಂದಿಷ್ಟು ರೈತರ ಹೊಲದಲ್ಲಿ ಅಲ್ಪ ಸ್ವಲ್ಪ ಬೆಳೆ ಬಂದಿದೆ. ಆದರೆ ಅದಕ್ಕೂ ಕಂಟಕ ಎದುರಾಗಿದೆ. ತೆಗ್ಗಿ ಗ್ರಾಮದಲ್ಲಿ ಇದೀಗ ಈರುಳ್ಳಿ ಬೆಳೆಗೆ ಮಂಗಗಳ ಕಾಟ ಶುರುವಾಗಿದೆ. ಸಾಮಾನ್ಯವಾಗಿ ಮಂಗಗಳು ಹಣ್ಣು ಹಂಪಲು ತರಕಾರಿ ಹೊಲಕ್ಕೆ ದಾಳಿ ಮಾಡುತ್ತವೆ. ಆದರೆ ವಿಪರ್ಯಾಸ ಅಂದರೆ ಭೂಮಿಯಲ್ಲಿ ಹುದುಗಿರುವ ಈರುಳ್ಳಿ ಮೇಲೂ ಮಂಗಗಳು ಲಗ್ಗೆಯಿಟ್ಟಿವೆ.

ಇದನ್ನೂ ಓದಿ: ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದೆ ಕೈ ಎತ್ತಿದ ರಾಜ್ಯ ಸರ್ಕಾರ, ವಿಜಯಪುರದಲ್ಲಿ ವೆಲೋಡ್ರಮ್ ನಿರ್ಮಾಣ ಸ್ಥಗಿತಗೊಳಿಸಿದ ಗುತ್ತಿಗೆ ಸಂಸ್ಥೆ

ಗ್ರಾಮದ ಚಂದ್ರಶೇಖರ್ ಕಾಳಣ್ಣವರ ಎಂಬುವರ ಒಂದುವರೆ ಎಕರೆ ಸೇರಿದಂತೆ ಹಿರೆಹಳ್ಳ, ಕೆಂಪು ಹಳ್ಳದ ದಂಡೆಯ ವಿವಿಧ ರೈತರ ಹೊಲದಲ್ಲಿನ ಈರುಳ್ಳಿಯನ್ನು ತಿಂದು ತೇಗಿವೆ. ಕಿತ್ತು ಬಿಸಾಡಿವೆ. ಬರದಿಂದ ಎಷ್ಟೊ ಪ್ರಮಾಣದಲ್ಲಿ ಈರುಳ್ಳಿ ಹುಟ್ಟಿಯೇ ಇಲ್ಲ. ಅಲ್ಲಲ್ಲಿ ಬೆಳೆದ ಈರುಳ್ಳಿಯನ್ನು ಮಂಗಗಳು ಕಿತ್ತೆಸೆದು ತಿಂದು ಹಾಳು ಮಾಡಿವೆ. ಇದರಿಂದ ರೈತರು ತಲೆ‌ ಮೇಲೆ‌ ಕೈ ಹೊತ್ತು ಕೂರುವಂತಾಗಿದೆ.

ತೆಗ್ಗಿ ಗ್ರಾಮದ ಹಳ್ಳದ ದಂಡೆ ಪಕ್ಕದ ಹೊಲಗಳಿಗೆ ಮಂಗಗಳ ಕಾಟ ಶುರುವಾಗಿದೆ. ಹೊಲದಲ್ಲಿ ಇತರೆ ಬೆಳೆಗಳು ಇದ್ದಿದ್ದರೆ ಈರುಳ್ಳಿಗೆ ಇಷ್ಟೊಂದು ‌ಕಾಟ ಆಗುತ್ತಿರಲಿಲ್ಲ. ಆದರೆ ಮಳೆಯಿಲ್ಲದೆ ಇತರೆ ಬೆಳೆಗಳು ಹಾಳಾಗಿವೆ. ಹೀಗಾಗಿ ಮಂಗಗಳು ಈರುಳ್ಳಿ ಬೆಳೆ ಮೇಲೆ ದಾಳಿ ಮಾಡಿ ಹಸಿವು ನೀಗಿಸಿಕೊಳ್ಳುತ್ತಿವೆ. ಆದರೆ ಮಂಗಗಳ‌ ಹಸಿವು ರೈತರಿಗೆ ಬರಗಾಲದಲ್ಲಿ ಗಾಯದ ಮೇಲೆ‌‌ ಬರೆ ಎಳೆದಂತಾಗಿದೆ.

ಇದನ್ನೂ ಓದಿ: ಬಾಗಲಕೋಟೆ: ಸಿದ್ದರಾಮಯ್ಯ ಸರ್ಕಾರದಿಂದ ನೇಕಾರರ ಬದುಕಿಗೆ ಕತ್ತಲೆ ಭಾಗ್ಯ, ವಿದ್ಯುತ್ ಅಭಾವದಿಂದ ದುಡಿಮೆಗೆ ಕತ್ತರಿ

ಹೊಲದಲ್ಲಿ ಅಲ್ಲೋ ಇಲ್ಲೋ ಇದ್ದ ಈರುಳ್ಳಿ ಕೂಡ ಕೈಗೆ ಬಾರದಾಗಿದೆ. ಎಕರೆಗೆ 25-30 ಸಾವಿರ ರೂ. ಖರ್ಚು ಮಾಡಿದ ರೈತರು ನಯಾ ಪೈಸೆ ಲಾಭವಿಲ್ಲದೆ‌ ಪರಾಡುವಂತಾಗಿದೆ. ಇನ್ನು ಮಂಗಗಳ ಹಾವಳಿ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಸ್ಥಳಕ್ಕೆ ಭೇಟಿ ನೀಡಿಲ್ಲ. ದಿನಾಲೂ ಬೆಳಿಗ್ಗೆ ಸಂಜೆ ಹಿಂಡು ಹಿಂಡಾಗಿ ಮಂಗಗಳು ದಾಳಿ‌ ನಡೆಸುತ್ತಲೇ ಇವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬಂದು ಮಂಗಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಬೇಕು. ಸರ್ಕಾರ ನಮಗೆ ಸೂಕ್ತ ‌ಪರಿಹಾರ ಕೊಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:55 pm, Fri, 27 October 23