ಬಾಗಲಕೋಟೆ: ಪ್ರೀತ್ಸೆ ಅಂತ ಪತ್ನಿ ಹಿಂದೆ ಬಿದ್ದಿದ್ದ ಸ್ನೇಹಿತನನ್ನ ಚಾಕು ಇರಿದು ಕೊಲೆ
ಅವರಿಬ್ಬರು ಸ್ನೇಹಿತರು, ಇಬ್ಬರ ಧರ್ಮ ಬೇರೆ ಬೇರೆ ಆದರೂ ಸ್ನೇಹ ಬಾಂದವ್ಯ ಮಾತ್ರ ಚೆನ್ನಾಗಿತ್ತು. ಆದರೆ ಇತ್ತೀಚೆಗೆ ಅದರಲ್ಲೊಬ್ಬ ಸ್ನೇಹಿತನ ಪತ್ನಿ ಮೇಲೆ ಕಣ್ಣು ಹಾಕಿ ಆಕೆಯ ಬೆನ್ನು ಬಿದ್ದಿದ್ದ. ಮೇಲಾಗಿ ಎರಡು ವರ್ಷದ ಹಿಂದೆ ಇಬ್ಬರು ಬೈಕ್ನಿಂದ ಬಿದ್ದಾಗ ಆದ ಕೇಸ್ನಿಂದ ಸ್ನೇಹ ಕೂಡ ಸ್ವಲ್ಪ ಹಳಸಿತ್ತು. ಒಂದು ಕಡೆ ಪತ್ನಿಗೆ ಪ್ರೀತ್ಸೆ ಅಂತ ಕಾಟ, ಇನ್ನೊಂದು ಕಡೆ ಬೈಕ್ ಅಪಘಾತದ ದ್ವೇಷ, ಇದರಿಂದ ಕಂಗೆಟ್ಟ ಸ್ನೇಹಿತ ರೋಷಿ ಹೋಗಿದ್ದ. ಕೊನೆಗೆ ಈ ಎರಡು ಕಾಟಕ್ಕೆ ಸ್ನೇಹಿತನ ಕತ್ತು ಕೊಯ್ದು ಅಂತ್ಯ ಹಾಡಿದ್ದಾನೆ.
ಬಾಗಲಕೋಟೆ: ಗುಳೇದಗುಡ್ಡ ಪಟ್ಟಣದಲ್ಲಿ ಸ್ನೇಹಿತನನ್ನೇ ಕೊಲೆ ಮಾಡಿ ವಿಕೃತಿ ಮೆರೆದಿದ್ದಾನೆ. ದಾದಾಫಿರ್ ಮುದ್ದೇಬಿಹಾಳ ಎಂಬ ವ್ಯಕ್ತಿ ತನ್ನ ಸ್ನೇಹಿತ ಈರಪ್ಪ ಮಾದರ ಎಂಬಾತನನ್ನ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಫೆಬ್ರವರಿ 6 ರಂದು ಸಂಜೆ 4.30 ರ ಅವಧಿಯಲ್ಲಿ ಹಳ್ಳದ ದಂಡಿಯಲ್ಲಿ ಇಬ್ಬರು ಮಧ್ಯ ಸೇವನೆ ಮಾಡಿದ್ದಾರೆ. ನಂತರ ಕುಡಿದ ಮತ್ತಲ್ಲಿ ತೇಲಾಡುತ್ತಿದ್ದ ಸ್ನೇಹಿತ ಈರಪ್ಪನ ಕುತ್ತಿಗೆಗೆ ಚಾಕು ಇರಿದು ದಾದಾಫಿರ್ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಅದೇ ಹಳ್ಳದಲ್ಲಿ ಬಿಸಾಕಿದ್ದು, ಫೆಬ್ರುವರಿ 8 ರಂದು ಕೊಲೆಯಾದ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಇದೀಗ ಪ್ರಕರಣ ಕೊಲೆ ಎಂದು ಬಯಲಾಗಿದ್ದು, ಈರಪ್ಪನನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕುತ್ತಾ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹ ಮಾಡುತ್ತಿದ್ದಾರೆ.
ಕೊಲೆಗೆ ಪ್ರಮುಖ ಕಾರಣವೆಂದರೆ?
ಈರಪ್ಪ ಮಾದರ ಹಾಗೂ ದಾದಾಫಿರ್ ಇಬ್ಬರು ಸ್ನೇಹಿತರಾಗಿದ್ದರು. ದಾದಾಫಿರ್ ಪತ್ನಿ ಮೇಲೆ ಈರಪ್ಪ ಕಣ್ಣು ಹಾಕಿದ್ದಾನೆ ಜೊತೆಗೆ ಪ್ರೀತ್ಸೆ ಪ್ರೀತ್ಸೆ ಎಂದು ಬೆನ್ನು ಬಿದ್ದಿದ್ದನಂತೆ. ಇದು ದಾದಾಫಿರ್ಗೆ ಇನ್ನಿಲ್ಲದ ಕಡುಕೋಪ ತರಿಸಿತ್ತು. ಜೊತೆಗೆ ಇಬ್ಬರು 2020 ರಲ್ಲಿ ಬಾಗಲಕೋಟೆ ಭಾಗದಲ್ಲಿ ಕುಡಿದು ಬೈಕ್ ಮೇಲೆ ಹೋಗುತ್ತಿದ್ದಾಗ ಬಿದ್ದಿದ್ದರು. ಪ್ರಕರಣ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿತ್ತು. ಈ ವೇಳೆ ದಾದಾಪಿರ್ ಗಂಭೀರ ಗಾಯಗೊಂಡ ಕಾರಣ ದಾದಾಫಿರ್ ಪತ್ನಿ ಈರಪ್ಪನ ವಿರುದ್ದವೇ ಕೇಸ್ ದಾಖಲಿಸಿದ್ದಳು. ಇದರಿಂದ ಈರಪ್ಪ ಸ್ನೇಹಿತ ದಾದಾಫಿರ್ ಮೇಲೆ ಉರಿದು ಬೀಳ್ತಿದ್ದ. ನನ್ನ ಮೇಲೆ ಕೇಸ್ ಹಾಕಿದ ನಿಮ್ಮನ್ನು ಬಿಡೋದಿಲ್ಲ ಎಂದು ಕಿಡಿ ಕಾರುತ್ತಿದ್ದ. ಮೇಲಾಗಿ ಪತ್ನಿ ಮೇಲೆ ಕಣ್ಣು ಹಾಕಿ ಹೇಗಾದರೂ ಮಾಡಿ ಅವಳನ್ನು ತನ್ನ ಬಲೆಗೆ ಬೀಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದ.
ಇದರಿಂದ ಮನದಲ್ಲೇ ಸ್ನೇಹಿತನ ಮೇಲೆ ದಾದಾಫಿರ್ ಕುದಿಯುತ್ತಿದ್ದ. ಇದಕ್ಕೆ ಅಂತ್ಯ ಹಾಡಬೇಕೆಂದು ಕಳೆದ ಮೂರು ತಿಂಗಳಿಂದ ಪ್ಲಾನ್ ಮಾಡಿಕೊಳ್ಳುತ್ತಿದ್ದ. ಕೊನೆಗೆ ಪೆಬ್ರವರಿ 6 ರಂದು ತನ್ನ ಮಾವ ಸದ್ದಾಮ್ ಹುಸೇನ್ ಮೂಲಕ ಈರಪ್ಪನಿಗೆ ಕರೆ ಮಾಡಿ ಕರೆಸಿ ಇದೇ ಹಳ್ಳದ ದಂಡೆ ಮೇಲೆ ಕುಡಿದು ಕುತ್ತಿಗೆಗೆ ಚಾಕು ಚುಚ್ಚಿದ್ದಾನೆ. ಓಡಲು ಯತ್ನಿಸಿದ ಈರಪ್ಪ ತೀವ್ರ ರಕ್ತಸ್ರಾವವಾಗಿ ಹೆಣವಾಗಿ ಬಿದ್ದಾಗ ಹಳ್ಳಕ್ಕೆ ಎಸೆದು ಎಂದಿನಂತೆ ಓಡಾಡಿಕೊಂಡಿದ್ದನು. ಪ್ರಕರಣವನ್ನ ಬೆನ್ನತ್ತಿದ ಗುಳೇದಗುಡ್ಡ ಪೊಲೀಸರು ಎರಡೇ ದಿನದಲ್ಲಿ ಪ್ರಕರಣ ಭೇದಿಸಿ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ದಾದಾಪಿರ್ ಹಾಗೂ ಕೊಲೆಗೆ ಸಹಕರಿಸಿದ ಸದ್ದಾಮ್ ಹುಸೇನ್ ಇಬ್ಬರು ಅಂದರ್ ಆಗಿದ್ದಾರೆ.
ಇದನ್ನೂ ಓದಿ:ಬೀದರ್: ಪ್ರೀತಿ ಮಾಡಿ ಮದುವೆಗೆ ನಿರಾಕರಿಸಿದ ಯುವತಿಯನ್ನ ಕತ್ತು ಹಿಸಿಕಿ ಕೊಲೆ ಮಾಡಿದ ಪಾಗಲ್ ಪ್ರೇಮಿ
ಒಟ್ಟಿನಲ್ಲಿ ಸ್ನೇಹಿತನ ಪತ್ನಿ ಮೇಲೆ ಕಣ್ಣು, ಹಳೆಯ ದ್ವೇಷ ಎರಡು ಸೇರಿ ನಡೆಯಬಾರದ ಘಟನೆ ನಡೆದು ಹೋಗಿದೆ. ಏನೇ ಇರಲಿ ಎಂತಹದ್ದೇ ಸಮಸ್ಯೆ ಇರಲಿ ಕೂತು ಬಗೆಹರಿಸಿಕೊಳ್ಳುವ ಬದಲು ಕೊಲೆ ಮಾಡಿದ್ದು ಮಾತ್ರ ದುರಂತದ ಸಂಗತಿ.
ವರದಿ: ರವಿ ಮೂಕಿ ಟಿವಿ9 ಬಾಗಲಕೋಟೆ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ