
ಬಾಗಲಕೋಟೆ, ಡಿಸೆಂಬರ್ 03: ಜಿಲ್ಲೆಯಲ್ಲಿ ಏಡ್ಸ್ (AIDS) ಮಹಾಮಾರಿ ಸದ್ದಿಲ್ಲದೇ ವ್ಯಾಪಿಸುತ್ತಿದೆ. ಮೊದಲಿಗಿಂತ ಇವಾಗ ಹೋಲಿಸಿದರೆ ಅದರ ಸಂಖ್ಯೆ ಕಡಿಮೆಯಾಗಿದ್ದು, ಮೂರನೇ ಸ್ಥಾನಕ್ಕೆ ಇಳಿದಿದೆ. ಆದರೆ ಪಾಸಿಟಿವಿಟಿ ರೇಟ್ನಲ್ಲಿ ಇಂದಿಗೂ ಕರ್ನಾಟಕದಲ್ಲೇ (Karnataka) ನಂಬರ್ ಒನ್ ಇದ್ದು, ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಜನರ ನಿದ್ದೆಗೆಡಿಸಿದೆ.
ಬಾಗಲಕೋಟೆ ಜಿಲ್ಲೆ ಅಂದರೆ ಕಳೆದ ಎರಡು ದಶಕಗಳ ಅವಧಿಯಲ್ಲಿ ಹೆಚ್ಐವಿ ವಿಚಾರಕ್ಕೆ ಸಂಬಂಧಪಟ್ಟಂತೆ ಜನರು ಚಕಿತರಾಗಿ ತಿರುಗಿ ನೋಡುತ್ತಾರೆ. ಇತ್ತೀಚೆಗೆ ಹೆಚ್ಐವಿ ಪ್ರಮಾಣ ಬಾಗಲಕೋಟೆ ಜಿಲ್ಲೆಯಲ್ಲಿ ಕಡಿಮೆಯಾಗಿದೆ. ಮೊದಲನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಇಳಿದಿದೆ. ಇದು ಒಂದು ಕಡೆ ಸಮಾಧಾನಕರ ಸಂಗತಿಯಾದರೆ, ರಾಜ್ಯದಲ್ಲೇ ಪಾಸಿಟಿವಿಟಿ ರೇಟ್ನಲ್ಲಿ ಇಂದಿಗೂ ಬಾಗಲಕೋಟೆ ನಂಬರ್ ಒನ್ ಸ್ಥಾನದಲ್ಲಿದೆ ಎಂಬುದನ್ನು ಕೇಳಿ ಜಿಲ್ಲೆಯ ಜನ ಭಯಭೀತರಾಗುವಂತೆ ಮಾಡಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ಯುಟ್ ಡಯಾರಿಯಲ್ ಡಿಸೀಸ್ ಏರಿಕೆ: ಆರೋಗ್ಯ ಇಲಾಖೆಗೂ ಟೆನ್ಷನ್ ಶುರು
ಜಿಲ್ಲೆಯಲ್ಲಿ ಹೆಚ್ಐವಿ ಸ್ಕ್ರೀನ್ ಟೆಸ್ಟ್ನಲ್ಲಿ 100 ಜನರನ್ನು ಟೆಸ್ಟ್ ಮಾಡಿದರೆ, 100 ಜನರಲ್ಲಿ ಒಬ್ಬರಂತೆ ಹೆಚ್ಐವಿ ಪಾಸಿಟಿವ್ ಕಂಡುಬರುತ್ತಿದ್ದಾರೆ. ಆ ಪ್ರಕಾರ ಪಾಸಿಟಿವಿಟಿ ರೇಟ್ನಲ್ಲಿ ಬಾಗಲಕೋಟೆ ಜಿಲ್ಲೆ ಇಡೀ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಈ ಕುರಿತಾಗಿ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಿಕ ಘಟಕದ ಮುಖ್ಯಸ್ಥ ಡಾ ಸುವರ್ಣಾ ಅವರು ಮಾಹಿತಿ ನೀಡಿದ್ದಾರೆ.
ಸದ್ಯ ಬಾಗಲಕೋಟೆ ಜಿಲ್ಲೆಯಲ್ಲಿ ಬರೋಬ್ಬರಿ 17,976 ಕೇಸ್ಗಳು ಆ್ಯಕ್ಟೀವ್ ಆಗಿವೆ. ಯುವಕರು, ಯುವತಿಯರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಎನ್ನದೇ ಯಾರೆಂದರಲ್ಲಿ ಹೆಚ್ಐವಿ ಕಂಡು ಬಂದಿದೆ. ಜಿಲ್ಲೆಯಲ್ಲಿ ಒಟ್ಟು ಅಲೈವ್ ಕೇಸಸ್ 17,976 ಗಳ ಪೈಕಿ 300 ಮಕ್ಕಳಲ್ಲಿ, 13 ಜನ ಗರ್ಭಿಣಿಯರಲ್ಲಿ, 47 ಜನ ಬಾಣಂತಿಯರಲ್ಲಿ ಕಂಡು ಬಂದಿದೆ. ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿಲ್ಲ.
ಮಹಾರಾಷ್ಟ್ರದ ಲಿಂಕ್‌ನಿಂದ ಹೆಚ್ಐವಿ ಮತ್ತಷ್ಟು ಹೆಚ್ಚಾಗಿದೆ. ಮಹಾರಾಷ್ಟ್ರ ಲಿಂಕ್ ಇರುವ ಜಿಲ್ಲೆಯ ಮುಧೋಳ ಮತ್ತು ಜಮಖಂಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಐವಿ ಕೇಸಗಳು ಕಂಡು ಬರುತ್ತಿವೆ. 2025-26ನೇ ಸಾಲಿನಲ್ಲಿ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ 82 ಕೇಸ್ ಮತ್ತು ಮುಧೋಳ ತಾಲೂಕಿನಲ್ಲಿ 86 ಕೇಸ್ ಪತ್ತೆಯಾಗಿವೆ. ಕಬ್ಬು ಕಟಾವುಗಾಗಿ ಪ್ರತಿವರ್ಷ ಮಹಾರಾಷ್ಟ್ರದಿಂದ ಬರುವ ಕಬ್ಬಿನ ಗ್ಯಾಂಗ್ ಜೊತೆ ಬಾಗಲಕೋಟೆ ಜಿಲ್ಲೆಗೆ ಬರುವ ಸಾವಿರಾರು ಮಹಾರಾಷ್ಟ್ರೀಯರ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಲೂ ಕೂಡ ಒಬ್ಬರಿಂದ ಒಬ್ಬರಿಗೆ ಹೆಚ್ಐವಿ ಹರಡುತ್ತಿದೆ.
ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ ಎಚ್ಚರ: ನಿದ್ದೆ, ಬೆಳಿಗ್ಗೆ ತಿಂಡಿ ಬಿಟ್ರೆ ಅಪಾಯ ಫಿಕ್ಸ್!; ಬೆಚ್ಚಿ ಬೀಳಿಸುತ್ತೆ ಇತ್ತೀಚಿನ ಮಾಹಿತಿ
ಇನ್ನು ಹೆಚ್ಐವಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಬೀದಿ ನಾಟಕ, ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುತ್ತಿದೆ. ಹೆಚ್ಚು ಟೆಸ್ಟ್ ಮಾಡುವುದರ ಮೂಲಕ ಹೆಚ್ಐವಿ ನಿರ್ನಾಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಒಟ್ಟಿನಲ್ಲಿ ಹೆಚ್ಐವಿಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಅಂಕಿ-ಅಂಶ ಜಿಲ್ಲೆಯ ಜನರಲ್ಲಿ ನಡುಕ ಹುಟ್ಟಿಸಿದ್ದು, ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ನಿರಂತರ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಸಾರ್ವಜನಿಕರು ಕೈ ಜೋಡಿಸಿ ಸಹಕರಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.