ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಈಚೆಗೆ ಆಕ್ರೋಶದ ಮಾತು ಆಡಿದ್ದ ಬೆನ್ನಲ್ಲೇ ಅವರ ಪುತ್ರ ಭೀಮಸೇನ ಸಹ ಆಕ್ರೋಶದ ಮಾತುಗಳನ್ನು ಆಡಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿರುವ ಭೀಮಸೇನ, ‘ಸಾಹುಕಾರ ನೀವು ಗಟ್ಟಿ ಆಗಬೇಕು ಅಂತ ನನಗೆ ಬಾಳ ಮಂದಿ ಹೇಳ್ತಿದ್ದಾರೆ, ಈಗ ನಾ ಗಟ್ಟಿಯಾಗಿಯೇ ಬಿಟ್ಟಿದ್ದೇನೆ. ಅದು ಎಲ್ಲಿಗೆ ಹತ್ತುತ್ತೋ ಹತ್ತಲಿ’ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟರು. ಇತ್ತೀಚೆಗಷ್ಟೇ ಸಾರ್ವಜನಿಕ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಚಿಮ್ಮನಕಟ್ಟಿ ಆಡಿದ್ದ ಮಾತುಗಳನ್ನು ಭೀಮಸೇನ ಅವರ ಈ ಹೇಳಿಕೆ ನೆನಪಿಸಿತು.
ಬಾದಾಮಿ ಪಟ್ಟಣದ ಕಾಳಿದಾಸ ಮೈದಾನದಲ್ಲಿ ನಡೆದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಚಿಮ್ಮನಕಟ್ಟಿ ಪುತ್ರ ಭೀಮಸೇನ್ ಆಡಿರುವ ಭಾವುಕ ನುಡಿಗಳ ವಿಡಿಯೊ ಇದೀಗ ವೈರಲ್ ಆಗಿದೆ. ಕ್ಷೇತ್ರದ ಜನತೆಯ ಪ್ರೀತಿ-ಅಭಿಮಾನಕ್ಕೆ ಕಣ್ಣೀರಿಟ್ಟ ಅವರು, ನನ್ನ ಜನ್ಮದಿನದ ಸಮಾರಂಭಕ್ಕೆ ಇಷ್ಟು ಜನ ಸೇರುತ್ತೀರಿ ಅಂದುಕೊಂಡಿರಲಿಲ್ಲ. ನನಗೆ ನೀವು ಆಸರಾಗಿರಿ. ನೀವೇ ತಂದೆ-ತಾಯಿ. ನನ್ನ ತಂದೆಯವರಿಗೆ ಹೇಗೆ ಶಕ್ತಿ ತುಂಬಿದ್ದೀರೋ ಹಾಗೆಯೇ ನನ್ನ ಜೊತೆಗೂ ನೀವು ನಿಲ್ಲಬೇಕು. ದಯಮಾಡಿ ನನಗೆ ನಿಮ್ಮ ಆಸರೆಬೇಕು ಎಂದರು.
ನಾನು ಯಾರಿಗೂ ಕೆಡುಕು ಮಾಡಿಲ್ಲ. ಆದರೂ ಏನೆಲ್ಲಾ ಅನುಭವಿಸುವಂತಾಗಿದೆ. ನನ್ನ ಹಣೆ ಬರಹ ಏನಿದೆಯೋ ಗೊತ್ತಿಲ್ಲ. ನಿಮ್ಮ ಉಡಿಯಲ್ಲಿ ಬಿದ್ದಿದ್ದೇನೆ. ನನ್ನನ್ನು ಎತ್ತಿಕೊಳ್ಳುವುದು, ಬಿಡುವುದು ನಿಮ್ಮ ಜವಾಬ್ದಾರಿ. ನನ್ನ ಜೊತೆಗೆ ನೀವು ನಿಂತಿದ್ದೀರಿ. ನನಗೆ ಆ ಭರವಸೆಯಿದೆ ಎಂದರು.
ನನ್ನ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಂದು ನಿಂತ್ರು: ಚಿಮ್ಮನಕಟ್ಟಿ
ಬಾಗಲಕೋಟೆಯಲ್ಲಿ ಈಚೆಗೆ ನಡೆದಿದ್ದ ವಿಧಾನ ಪರಿಷತ್ ಚುನಾವಣಾ ಸಭೆಯಲ್ಲಿ ಕಾಂಗ್ರೆಸ್ ನಾಯಕ ಬಿ.ಬಿ ಚಿಮ್ಮನಕಟ್ಟಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ನನ್ನನ್ನು ಪರಿಷತ್ ಸದಸ್ಯರಾಗಿ ಮಾಡುವುದಾಗಿ ಹೇಳಿದ್ದರು. ಆದರೆ ಪರಿಷತ್ ಸದಸ್ಯರನ್ನಾಗಿ ಮಾಡಿದರಾ? ಈ ಬಗ್ಗೆ ಎಷ್ಟು ನೋವು ಅನುಭವಿಸಿದ್ದೇನೆ ಎಂದು ನನಗೆ ಗೊತ್ತು. ನಾನು ಐದಾರು ಸಲ ಶಾಸಕ ಆಗಿದ್ದೆ. ಮಂತ್ರಿ ಆಗಿದ್ದೆ. ನನ್ನ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಂದು ನಿಂತ್ರು. ಈಗ ಅವರು ತಮ್ಮೂರು ಇರುವ ವರುಣಾಕ್ಷೇತ್ರದಲ್ಲಿ ನಿಲ್ಲಲಿ ಎಂದು ಹೇಳಿದ್ದರು.
ಸಿದ್ದರಾಮಯ್ಯ ಹಾಗೂ ಬೆಂಬಲಿಗರು ತಮ್ಮನ್ನು ಕಡೆಗಣಿಸಿದ್ದಾರೆ ಎಂಬ ವಿಚಾರಕ್ಕಾಗಿ ಅಸಮಾಧಾನಗೊಂಡಿರುವ ಚಿಮ್ಮನಕಟ್ಟಿ, ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರಿಷತ್ ಚುನಾವಣಾ ಪ್ರಚಾರ ವೇದಿಕೆಯಲ್ಲಿ ಭಾವುಕರಾಗಿದ್ದಾರೆ. ನಮ್ಮನ್ನ ಹುಲಿ ಹೋಗಿ ಇಲಿ ಮಾಡಿದ್ದೀರಿ. ಮುಂದಿನ ಸಲ ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ನಿಲ್ತಾರೆ. ಸಿದ್ದರಾಮಯ್ಯ ಮಗನ ಬಿಟ್ಟು ತಾವೇ ಸ್ಪರ್ಧಿಸಿದ್ರೆ ಗೆಲ್ತಿದ್ರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲುವ ಯೋಗ್ಯತೆ ಇಲ್ಲದಿದ್ರೆ ಅವರು ಯಾಕೆ ಸ್ಪರ್ಧಿಸಬೇಕಿತ್ತು. ಸ್ವಕ್ಷೇತ್ರದಲ್ಲೇ ಸಿದ್ದರಾಮಯ್ಯ ಗೆಲ್ಲಬೇಕು ಎಂದು ಚಾಲೆಂಜ್ ಮಾಡಿದ್ದಾರೆ. ಅದನ್ನ ಬಿಟ್ಟು ನಮಗೆ ಗಂಟುಬಿದ್ದರೆ ನಾವೇನು ಮಾಡಬೇಕು ಎಂದು ಮಾಜಿ ಶಾಸಕ ಚಿಮ್ಮನಕಟ್ಟಿ ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿ: ನನ್ನ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಂದು ನಿಂತ್ರು: ಬಿಬಿ ಚಿಮ್ಮನಕಟ್ಟಿ ಭಾಷಣ; ಸಿದ್ದರಾಮಯ್ಯಗೆ ಮುಜುಗರ!
ಇದನ್ನೂ ಓದಿ: ಕರ್ನಾಟಕದಲ್ಲಿ ಸರ್ಕಾರವೇ ಇಲ್ಲ; ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ