ದೇಶದಲ್ಲಿಯೇ ಮೊದಲ ಬಾರಿಗೆ ಮೃತ ವ್ಯಕ್ತಿ ಮೆದುಳು ಸಕ್ರಿಯಗೊಳಿಸಿ ಸಂಶೋಧನೆ.. ಬಾಗಲಕೋಟೆ ಮೆಡಿಕಲ್ ಕಾಲೇಜಿನಿಂದ ಮಹತ್ವದ ಸಾಧನೆ
ಮನುಷ್ಯನ ಮೆದುಳಿನ ಒಳಭಾಗದಲ್ಲಿ ಮತ್ತು ಹೊರ ಭಾಗದಲ್ಲಿ ಸಿ.ಎಸ್.ಎಫ್ ಎನ್ನುವ ನೀರಿನಂತಹ ಒಂದು ದ್ರವ ಇರುತ್ತದೆ. ಅದು ಮೆದುಳನ್ನು ಸಂರಕ್ಷಿಸುತ್ತೆ. ಕೆಲವೊಮ್ಮೆ ಈ ದ್ರವದ ಮೂಲಕ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಆದ್ರೆ ಮೃತ ಶರೀರದಲ್ಲಿ CSF ದ್ರವದ ಸಂಚಾರವಿರುವುದಿಲ್ಲ. ಹೀಗಾಗಿ ಈ ರೀತಿಯ ಮೆದುಳು ಶಸ್ತ್ರ ಚಿಕಿತ್ಸೆ ತರಬೇತಿಯನ್ನು ನೀಡುವುದು ಸಾಧ್ಯವಾಗುವುದಿಲ್ಲ.
ಬಾಗಲಕೋಟೆ: ಎಸ್ ನಿಜಲಿಂಗಪ್ಪ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯದಿಂದ ಮಹತ್ವದ ಸಾಧನೆಯೊಂದು ನಡೆದಿದೆ. ಮೃತ ವ್ಯಕ್ತಿಯ ಮೆದುಳಿಗೆ ಜೀವ ತುಂಬಿ ಸಂಶೋಧನೆ ಹಾಗೂ ತರಬೇತಿ ನಡೆಸುವುದರ ಮೂಲಕ ಗಮನ ಸೆಳೆದಿದ್ದಾರೆ. ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಪ್ರಯೋಗವೊಂದು ನಡೆದಿದೆ. ಹಾಗೂ ಜಗತ್ತಿನಲ್ಲಿ ಎರಡನೇ ಸಂಶೋಧನೆ ಇದಾಗಿದೆ. ಎರಡು ವರ್ಷದ ಹಿಂದೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮೊದಲ ಬಾರಿಗೆ ಇಂತಹದೇ ಒಂದು ಪ್ರಯೋಗ ನಡೆದಿತ್ತು. ಸದ್ಯ ಈಗ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾಲೇಜಿನ ಎಸ್ ನಿಜಲಿಂಗಪ್ಪ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರು ಮೃತ ದೇಹದ ಅಂಗಾಂಗ ಸಂರಕ್ಷಣೆ ಮಾಡಿ ಮೆದುಳಿನಲ್ಲಿ ಕೃತಕ ದ್ರವ ಸಿ.ಎಸ್.ಎಫ್(ಸೆರೆಬ್ರೊ ಸ್ಪೈನಲ್ ಪ್ಲುಯಿಡ್) ಸಂಚಾರ ಸೃಷ್ಟಿಸುವ ಸಂಶೋಧನೆ ಮಾಡಿದ್ದಾರೆ.
ಇನ್ನು ದೇಶದ ವಿವಿಧ ಭಾಗಗಳ 30 ನರರೋಗ ತಜ್ಞರಿಗೆ ಇದರ ತರಬೇತಿ ನೀಡಲಾಗುತ್ತಿದೆ. ವಿದ್ಯಾಲಯದ ಅಂಗರಚನಾ ಶಾಸ್ತ್ರ ವಿಭಾಗದ ಸಿಬ್ಬಂದಿಯಿಂದ ಈ ಸಾಧನೆ ನಡೆದಿದ್ದು ವಿದ್ಯಾಲಯದ ಅಂಗರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಂಜೀವ್ ಕೊಳಗಿ ನೇತೃತ್ವದಲ್ಲಿ 9 ತಜ್ಞವೈದ್ಯರಿಂದ ತರಬೇತಿ ನಡೆಯುತ್ತಿದೆ. ಈ ಮಾದರಿ ಮೂಲಕ ಅತ್ಯುತ್ತಮ ನ್ಯೂರೋಸರ್ಜನ್ಸ್ ಹುಟ್ಟು ಹಾಕಬಹುದು. ಮೆದುಳಿನ ಚಲನವಲನ ಜೀವಂತ ವ್ಯಕ್ತಿಯ ಮೆದುಳಿನ ರೀತಿಯಲ್ಲೇ ರಕ್ತ ಸಂಚಾರ ಮಾಡುತ್ತೆ ಎಂದು ಡಾ.ಸಂಜೀವ್ ಕೊಳಗಿ ಹೇಳಿದ್ದಾರೆ. ಪೆಬ್ರುವರಿ 13, 2021ರಂದು ಅಮೆರಿಕದಲ್ಲಿ ಆಯೋಜಿಸಿದ್ದ ತಲೆಬುರುಡೆ ಹಾಗೂ ಮೆದುಳು ನರರೋಗ ಶಸ್ತ್ರಚಿಕಿತ್ಸಾ ತಜ್ಞರ ಸಮ್ಮೇಳನದಲ್ಲಿ ವರ್ಚ್ಯುಯಲ್ ಮೂಲಕ ಡಾ:ಸಂಜೀವ್ ಪ್ರಬಂಧ ಮಂಡಿಸಿದ್ದರು.
ಮೃತ ಶರೀರದ ಮೆದುಳಿನಲ್ಲಿ ಕೃತಕ ದ್ರವ ಸಂಚಾರ ಮನುಷ್ಯನ ಮೆದುಳಿನ ಒಳಭಾಗದಲ್ಲಿ ಮತ್ತು ಹೊರ ಭಾಗದಲ್ಲಿ ಸಿ.ಎಸ್.ಎಫ್ ಎನ್ನುವ ನೀರಿನಂತಹ ಒಂದು ದ್ರವ ಇರುತ್ತದೆ. ಅದು ಮೆದುಳನ್ನು ಸಂರಕ್ಷಿಸುತ್ತೆ. ಕೆಲವೊಮ್ಮೆ ಈ ದ್ರವದ ಮೂಲಕ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಆದ್ರೆ ಮೃತ ಶರೀರದಲ್ಲಿ CSF ದ್ರವದ ಸಂಚಾರವಿರುವುದಿಲ್ಲ. ಹೀಗಾಗಿ ಈ ರೀತಿಯ ಮೆದುಳು ಶಸ್ತ್ರ ಚಿಕಿತ್ಸೆ ತರಬೇತಿಯನ್ನು ನೀಡುವುದು ಸಾಧ್ಯವಾಗುವುದಿಲ್ಲ. ಎಸ್ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಅಂಗ ರಚನಾ ಶಾಸ್ತ್ರ ವಿಭಾಗದಲ್ಲಿ ಅಲ್ಲಿನ ಬೋಧಕ ಸಿಬ್ಬಂದಿ ಮತ್ತು ಡಾ.ಅಜಯ ಹೆರೂರು ಅವರು ಜೊತೆಗೂಡಿ ಸಂಶೋಧನೆ ಮೂಲಕ ಮೃತ ಶರೀರದ ಮೆದುಳಿನಲ್ಲಿ ಕೃತಕ ದ್ರವವನ್ನು ಸಂಚರಿಸುವಂತೆ ಮಾಡಿ ಮೃತ ದೇಹದ ಮೆದುಳಿನ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ.
ಸೀತಾರಾಮು ಚಿತ್ರವನ್ನು ನೆನಪಿಸುತ್ತೆ ಈ ಪ್ರಯೋಗ ಕರಾಟೆ ಕಿಂಗ್ ಶಂಕರ್ ನಾಗ್ ಹಾಗೂ ಮಂಜುಳ ಅಭಿನಯಿಸಿದ್ದ ‘ಸೀತಾರಾಮು’ ಚಿತ್ರದ ಕಥೆ ಯಲ್ಲಿ, ನಾಯಕ, ನಾಯಕಿ ಪ್ರೀತಿಸುವ ಯುವಜೋಡಿಯೊಂದು ಮದುವೆಯಾಗಲು ನಿರ್ಧರಿಸುತ್ತಾರೆ. ಆದರೆ ಆ ಹೊತ್ತಿಗೆ ಹುಡುಗನ ಕೊಲೆಯಾಗುತ್ತದೆ. ಹುಡುಗಿಗೆ ಹುಚ್ಚು ಹಿಡಿಯುತ್ತದೆ. ಆಗ ಹುಡುಗನ ವೈದ್ಯ ಗೆಳೆಯನೊಬ್ಬ ಸತ್ತ ತನ್ನ ಸ್ನೇಹಿತನ ಮೆದುಳನ್ನು ಹುಡುಗಿಗೆ ಕಸಿ ಮಾಡಿಸುತ್ತಾನೆ. ಹುಡುಗಿಯ ರೂಪದಲ್ಲಿ ಸತ್ತ ನಾಯಕ ತನ್ನನ್ನು ಕೊಂದವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ.
1979ರಲ್ಲಿ ಅಂದರೆ ಇಂದಿಗೆ ಸರಿಯಾಗಿ 42 ವರ್ಷಗಳ ಹಿಂದೆ ತೆರೆ ಕಂಡು ಸೂಪರ್ ಹಿಟ್ ಆದ ಸಿನಿಮಾ ಸೀತಾರಾಮು ಚಿತ್ರ. ಇಲ್ಲಿನ ವೈದ್ಯರು ಮಾಡಿರುವ ಸಂಶೋಧನೆಗೆ ತಾಳೆ ಹಾಕುವಂತಾಗಿದೆ. ಬಾಗಲಕೋಟೆಯ ಎಸ್ ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಡಾ. ಸಂಜೀವ ಕೊಳಗಿ ಮತ್ತು ಡಾ. ಅಜಯ್ ಹೇರೂರ ತಂಡದ ಸಾಹಸದಿಂದ ಸಿನಿಮಾದ ಕಥೆ ಈಗ ನಿಜವಾಗಿದೆ. ಮೃತ ವ್ಯಕ್ತಿಯ ಮಿದುಳನ್ನು ಕೃತಕವಾಗಿ ಸಕ್ರಿಯಗೊಳಿಸಿ ಪ್ರಾಯೋಗಿಕ ಕಲಿಕೆಗೆ ಬಳಸುವ ಪ್ರಯೋಗವಿದು. ಇದು ಇಡೀ ದೇಶದಲ್ಲೇ ಪ್ರಥಮ ಎಂದು ಹೇಳಲಾಗಿದೆ.
ಇದನ್ನೂ ಓದಿ: ರಾಷ್ಟ್ರಪತಿಯಿಂದ ಎರಡು ಚಿನ್ನದ ಪದಕ ಪಡೆದುಕೊಂಡ ಬಿಸಿಲುನಾಡಿನ ವಿದ್ಯಾರ್ಥಿನಿ; ಮಹತ್ತರ ಸಾಧನೆಗೆ ಫುಲ್ ಖುಷ್!