ಬಾಗಲಕೋಟೆ: ಮದುವೆ ಆಮಂತ್ರಣದಲ್ಲಿ ಅಪ್ಪು!; ನೆಚ್ಚಿನ ನಟನನ್ನು ಸ್ಮರಿಸಿ ಗೌರವ ಸಲ್ಲಿಸಿದ ಜೋಡಿ

| Updated By: shivaprasad.hs

Updated on: Dec 14, 2021 | 9:50 AM

Puneeth Rajkumar: ಬಾಗಲಕೋಟೆಯ ಒಂದು ಜೋಡಿ ತಮ್ಮ ಮದುವೆ ಲಗ್ನ ಪತ್ರಿಕೆಯಲ್ಲಿ ಅಪ್ಪು ಭಾವಚಿತ್ರ ಪ್ರಕಟಿಸಿ ‘ಜೊತೆಗಿರುವ ಜೀವ ಎಂದೆಂದಿಗೂ ಜೀವಂತ, ಅಪ್ಪು ಅಮರ’ ಎಂಬ ಸಾಲುಗಳನ್ನು ಮುದ್ರಿಸಿ ತಮ್ಮ ಮದುವೆ ಕಾರ್ಯದಲ್ಲೂ ಅಪ್ಪುನ ನೆನೆದು ಗೌರವ ಸಲ್ಲಿಸಿದ್ದಾರೆ.

ಬಾಗಲಕೋಟೆ: ಮದುವೆ ಆಮಂತ್ರಣದಲ್ಲಿ ಅಪ್ಪು!; ನೆಚ್ಚಿನ ನಟನನ್ನು ಸ್ಮರಿಸಿ ಗೌರವ ಸಲ್ಲಿಸಿದ ಜೋಡಿ
ವಿವಾಹ ಆಮಂತ್ರಣದಲ್ಲಿ ಪುನೀತ್ ಚಿತ್ರ ಹಾಗೂ ಅಪ್ಪು ಅಭಿಮಾನಿ ಜೋಡಿ
Follow us on

ಬಾಗಲಕೋಟೆ: ಚಿತ್ರನಟ ಅಪ್ಪು ಪುನೀತ ನಮ್ಮನ್ನು ಅಗಲಿ ಈಗ ಒಂದುವರೆ ತಿಂಗಳಾಗಿದೆ. ಪುನೀತ್ ನಿಧನರಾದಾಗ ಎಷ್ಟೋ ಅಭಿಮಾನಿಗಳು ಕಣ್ಣೀರು ಹಾಕಿ ಗೋಳಾಡಿದ್ದಾರೆ. ಕಣ್ಣೀರು ಹಾಕುತ್ತಲೇ ಅಪ್ಪು ಅಂತಿಮ ದರ್ಶನ ಪಡೆದಿದ್ದಾರೆ. ಇನ್ನು ಅದೆಷ್ಟೋ ಅಭಿಮಾನಿಗಳು ಸೈಕಲ್ ಯಾತ್ರೆ, ಪಾದಯಾತ್ರೆ, ಎತ್ತಿನ ಬಂಡಿ ಮೂಲಕ ತಮ್ಮ ತಮ್ಮ ಊರುಗಳಿಂದ ಬೆಂಗಳೂರಿಗೆ ತೆರಳಿ ಪುನೀತ ಸಮಾಧಿ ದರ್ಶನ ಪಡೆದಿದ್ದಾರೆ. ಇಂದಿಗೂ ಪುನೀತ ಸಮಾಧಿ ದರ್ಶನ ಪಡೆಯುವ ಅಭಿಮಾನಿಗಳ ಸಂಖ್ಯೆ ನಿಂತಿಲ್ಲ. ಅಪ್ಪು ಹೆಸರಲ್ಲಿ ರಕ್ತದಾನ, ನೇತ್ರದಾನ ಎಲ್ಲವನ್ನೂ ಮಾಡಿ ಅಭಿಮಾನಿಗಳು ಸಾರ್ಥಕ ಅಭಿಮಾನ‌ ಮೆರೆದಿದ್ದಾರೆ. ಇಂತಹ ಸಾಮಾಜಿಕ ಕಾರ್ಯಗಳ ಮೂಲಕ ಪುನೀತ್ ಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಆದರೆ ಇಲ್ಲೊಂದು ಜೋಡಿ ತಮ್ಮ ಮದುವೆ ಲಗ್ನ ಪತ್ರಿಕೆಯಲ್ಲಿ ಅಪ್ಪು ಭಾವಚಿತ್ರ ಪ್ರಕಟಿಸಿ ‘ಜೊತೆಗಿರುವ ಜೀವ ಎಂದೆಂದಿಗೂ ಜೀವಂತ, ಅಪ್ಪು ಅಮರ’ ಎಂಬ ಸಾಲುಗಳನ್ನು ಮುದ್ರಿಸಿ ತಮ್ಮ ಮದುವೆ ಕಾರ್ಯದಲ್ಲೂ ಅಪ್ಪುನ ನೆನೆದು ಗೌರವ ಸಲ್ಲಿಸಿದ್ದಾರೆ.

ಹಾಗಾದರೆ ಯಾರು ಆ ಜೋಡಿ, ಅವರಿಗೇಕೆ ಪುನೀತ್ ಮೇಲೆ ಇಷ್ಟೊಂದು ಅಭಿಮಾನ?
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಹೊಸೂರು ಗ್ರಾಮದ ಯುವಕ ಶ್ರೀಧರ ಇಸರನಾಳ ಹಾಗೂ ಬಾಗಲಕೋಟೆ ತಾಲ್ಲೂಕಿನ ಕಿರಸೂರು ಗ್ರಾಮದ ಸವಿತಾ ಎಂಬ ಜೋಡಿ ಮದುವೆಯಲ್ಲೂ ಅಪ್ಪುವನ್ನು ನೆನೆದು ಅಭಿಮಾನ ಮೆರೆದಿದ್ದಾರೆ‌. ಶ್ರೀಧರ ಹಾಗೂ ಸವಿತಾ ಅವರ ಮದುವೆ 27-12-21 ರಂದು ಬಾದಾಮಿ ತಾಲ್ಲೂಕಿನ ಹೊಸೂರು ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದೆ. ಅಂದಿನ ಮದುವೆಗೆ ಬಂದು ಬಾಂದವರು, ಆಪ್ತರು, ಸ್ನೇಹಿತರಿಗೆ ಆಹ್ವಾನ ನೀಡಿರುವ ಜೋಡಿ ಲಗ್ನಪತ್ರಿಕೆಯಲ್ಲಿ ಅಪ್ಪು ಭಾವಚಿತ್ರ ಪ್ರಕಟಿಸೋದರ ಜೊತೆಗೆ “ಜೊತೆಗಿರುವ ಜೀವ ಎಂದೆಂದಿಗೂ ಜೀವಂತ ಅಪ್ಪು ಅಮರ” ಎಂದು ಪ್ರಕಟಿಸಿದ್ದಾರೆ. ಇದಕ್ಕೆ ಕಾರಣ ಶ್ರೀಧರ ಹಾಗೂ ಸವಿತಾ ಅವರು ಪುನೀತ್ ಅವರ ಅಪ್ಪಟ ಅಭಿಮಾನಿಗಳು, ಪುನೀತ ಅವರ ಸಿನಿಮಾ ನೋಡಿ ಸಂಭ್ರಮಪಟ್ಟವರು. ಆದರೆ ಪುನೀತ್ ದಿಢೀರ್ ಸಾವು ಈ ಜೋಡಿಗೂ ನೋವು ತಂದಿದೆ. ಆದ್ದರಿಂದ ಲಗ್ನಪತ್ರದ ಮೂಲಕ ಪುನೀತ್ ಅವರಿಗೆ ತಮ್ಮದೇ ಆದ ಅಭಿಮಾನ ವ್ಯಕ್ತಪಡಿಸಿದ್ದಾರೆ.

‘‘ನಾವು ಹಾಗೂ ನಾನು ಮದುವೆಯಾಗುತ್ತಿರುವ ಯುವತಿ ಸವಿತಾ ಹಾಗೂ ಇಬ್ಬರ ಮನೆಯವರು ಪುನೀತ್ ಅಭಿಮಾನಿಗಳು ಪುನೀತ್ ಅವರ ನಿಧನ ನಮಗೆ ಬಾರಿ ನೋವು ತಂದಿದೆ, ಅವರ ಅಗಲಿಕೆ ತುಂಬಲಾರದ ನಷ್ಟ ಅವರು ಮಾಡಿದ ಸಾಮಾಜಿಕ ಕಾರ್ಯ, ಬಡ‌ವರಿಗೆ, ಬಡ ಮಕ್ಕಳ ಶಿಕ್ಷಣಕ್ಕೆ ಅವರು ಮಾಡಿದ ಸಹಾಯ, ಅವರ ಚಿತ್ರಗಳು ಎಲ್ಲವೂ ನಮಗೆ ಸ್ಪೂರ್ತಿ. ಮದುವೆಯಾಗುವ ನಾವು ಲಗ್ನಪತ್ರದಲ್ಲಿ ಪುನೀತ್ ಅವರ ಭಾವಚಿತ್ರ ಪ್ರಕಟಿಸುವ ಮೂಲಕ ಅವರಿಗೆ ಗೌರವ ಶ್ರದ್ದಾಂಜಲಿ ಸಲ್ಲಿಸುತ್ತಿದ್ದೇವೆ. ಅವರ ಆಶೀರ್ವಾದ ಸದಾ ನಮ್ಮ ಮೇಲಿರುತ್ತೆ’’ ಅಂತಿದ್ದಾರೆ ಮದುವೆ ವರ ಶ್ರೀಧರ ಇಸರನಾಳ.

ಪತ್ರಿಕೆಯಲ್ಲಿ ಅಪ್ಪು ಹಾಗೂ ಅವರ ಚಿತ್ರದ ಸಾಲುಗಳು

ಇನ್ನು ಪುನೀತ್ ಬಗ್ಗೆ ಭಾವಚಿತ್ರ ಪ್ರಕಟಿಸಿ ನಮನ ಸಲ್ಲಿಸಿರುವ ಈ ಜೋಡಿ ಹಾಗೂ ಕುಟುಬಸ್ಥರು, ಕೋವಿಡ್ ನಿಯಮಾವಳಿ ಬಗ್ಗೆಯೂ ಲಗ್ನಪತ್ರದಲ್ಲಿ ಉಲ್ಲೇಖಿಸಿದ್ದಾರೆ‌. ಲಗ್ನಪತ್ರದಲ್ಲಿ ವಿಶೇಷ ಸೂಚನೆ ಅಂತ ಪ್ರಕಟಿಸಿ ಮಾಸ್ಕ್ ಧರಿಸಿಕೊಳ್ಳಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮನವಿ ಅಂತ ಮುದ್ರಿಸಿ ಮದುವೆಯಲ್ಲೂ ಕೋವಿಡ್ ಬಗ್ಗೆ ಜಾಗೃತಿ ಹಾಗೂ ಮದುವೆಗೆ ಬರುವವರಿಗೂ ಕೋವಿಡ್ ನಿಯಮ ಪಾಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ

ಒಟ್ಟಾರೆ ಹೊಸಜೀವನಕ್ಕೆ ಕಾಲಿಡುತ್ತಿರುವ ನವಜೋಡಿ ಮದುವೆ ಲಗ್ನಪತ್ರಿಕೆ ಮೂಲಕ ಅಪ್ಪುವನ್ನು ನೆನೆದಿದ್ದಾರೆ. ಪುನೀತ್ ರಾಜ್ಯದ ಜನರ ಮೇಲೆ ಎಂತಹ ಸ್ಥಾನ ಪಡೆದಿದ್ದಾರೆ ಎಂಬುದಕ್ಕೆ ಈ ಜೋಡಿ ಲಗ್ನಪತ್ರವೇ ಸಾಕ್ಷಿಯಾಗಿದೆ‌.

ವರದಿ: ರವಿ ಮೂಕಿ, ಟಿವಿ9 ಬಾಗಲಕೋಟೆ

ಇದನ್ನೂ ಓದಿ:

‘ಮರಕ್ಕಾರ್’ ಒಟಿಟಿ ಬಿಡುಗಡೆಯ ದಿನಾಂಕ ಘೋಷಣೆ; ಚಿತ್ರವನ್ನು ಕನ್ನಡದಲ್ಲೂ ವೀಕ್ಷಿಸಬಹುದೇ? ಇಲ್ಲಿದೆ ಮಾಹಿತಿ

ಫ್ರೆಂಡ್ಸ್​ ಅಂದ್ರೆ ಪ್ರಾಣ ಕೊಡೋಕೂ ರೆಡಿ ‘ಬಡವ ರಾಸ್ಕಲ್’; ಹೈಪ್ ಸೃಷ್ಟಿಸಿದ ಧನಂಜಯ ನಟನೆಯ​ ಸಿನಿಮಾ ಟ್ರೇಲರ್

Published On - 9:05 am, Tue, 14 December 21