ಸ್ವಾತಂತ್ರ್ಯ ಹೋರಾಟದಲ್ಲಿ ಎಂದಿಗೂ ಅಮರ ಈ ಹಲಗಲಿ ಬೇಡರು; ಇವರ ಬಗ್ಗೆ ನಿಮಗೆಷ್ಟು ಗೊತ್ತು?

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 15, 2024 | 8:13 PM

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಭಾರತೀಯ ವೀರರ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಳ್ಳುವ ಹುನ್ನಾರದಿಂದ ಬ್ರಿಟಿಷರು ನಿಶ್ಯಸ್ತ್ರೀಕರಣ ಕಾಯ್ದೆ ಜಾರಿಗೆ ತಂದರು. ಈ ಕಾಯ್ದೆಯನ್ನು ವಿರೋಧಿಸಿದ್ದ ಆ ಒಂದು ಪುಟ್ಟ ಗ್ರಾಮ, ಕಂಪನಿ ಸರ್ಕಾರದ ನಿದ್ದೆಗೆಡಿಸಿತ್ತು. ಸ್ವಾತಂತ್ರ್ಯ, ಸ್ವಾಭಿಮಾನಕ್ಕಾಗಿ ಕಂಪನಿ ಸರ್ಕಾರದ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದರು ಆ ಗ್ರಾಮದ ವೀರ ಕಲಿಗಳು‌. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ಎಂದಿಗೂ ಅಮರ ಈ ಹಲಗಲಿ ಬೇಡರು; ಇವರ ಬಗ್ಗೆ ನಿಮಗೆಷ್ಟು ಗೊತ್ತು?
ಹಲಗಲಿ ಬೇಡರು
Follow us on

ಬಾಗಲಕೋಟೆ, ಆ.15: 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೊತ್ತಿದ್ದ ವೇಳೆ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಬೇಡರು ನಡೆಸಿರುವ ಹೋರಾಟ, ಕಂಪನಿ ಸರ್ಕಾರಕ್ಕೆ ಸವಾಲ್ ಆಗಿತ್ತು. ಬ್ರಿಟಿಷರು ಜಾರಿಗೆ ತಂದಿದ್ದ ನಿಶ್ಯಸ್ತ್ರೀಕರಣದ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದ ಹಲಗಲಿ ಬೇಡರು, ಆಂಗ್ಲರ ವಿರುದ್ಧ ನೇರ ಯುದ್ಧಕ್ಕೆ ಇಳಿದಿದ್ದರು. ಹುಟ್ಟು ವೀರರಾಗಿದ್ದ ಹಲಗಲಿ ಬೇಡರನ್ನು ಸೋಲಿಸುವುದು ಬ್ರಿಟಿಷರಿಗೆ ಸುಲಭ ಆಗಿರಲಿಲ್ಲ. ಮಾಡಿದ ತಂತ್ರ, ಕುತಂತ್ರಗಳು ವಿಫಲ ಆಗುತ್ತಲೇ ಬಂದಿದ್ದವು. ಹೀಗಾಗಿ ಮಧ್ಯರಾತ್ರಿ ಭಾರಿ ಸೈನಿಕರ ಜೊತೆಗೆ ನುಗ್ಗಿದ್ದ ಹೇಡಿ ಬ್ರಿಟಿಷರು, ಇಡೀ ಊರಿಗೆ ಬೆಂಕಿ ಹಚ್ಚಿದ್ದರು. ಇದರಲ್ಲಿ ಅನೇಕರು ಪ್ರಾಣ ಕಳೆದುಕೊಂಡರೆ, ಜೀವ ಉಳಿದು ಬ್ರಿಟಿಷರ ವಿರುದ್ಧ ಕತ್ತಿ ಝಳಪಿಸಿದ್ದ ಹಲಗಲಿಯ ಜಡಗಾ, ಬಾಲ ಸೇರಿದಂತೆ ಅನೇಕರನ್ನು ಗಲ್ಲಿಗೇರಿಸಿದ್ದರು.

ಸ್ವಾತಂತ್ರ್ಯ ಹಾಗೂ ಸ್ವಾಭಿಮಾನಕ್ಕಾಗಿ ಹೋರಾಡಿದ ಈ ವೀರರ ಸಾಹಸಗಾಥೆ ಇವತ್ತಿಗೂ ಸಹ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣವನ್ನು ಕಳೆದುಕೊಂಡು ಹುತಾತ್ಮರಾಗಿರುವ ಹಲಗಲಿ ಬೇಡರ ಇತಿಹಾಸ ರೋಚಕವಾಗಿದೆ. ಇಂದಿಗೂ ಅವರ ವಂಶಸ್ಥರು ಹಲಗಲಿ ಗದರಾಮ ಇದ್ದಾರೆ. ಆದರೆ, ಇಂತಹ ವೀರ ಹೋರಾಟಗಾರರು ಮನೆತನಗಳಿಗೆ ಸರಕಾರದಿಂದ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎನ್ನುವುದೇ ಬೇಸರ.

ಇದನ್ನೂ ಓದಿ:ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾರು ಭಾರತದ ಜೊತೆ ಇದ್ದರು, ಯಾರು ಪಾಕಿಸ್ತಾನದ ಜೊತೆ ಅಂತ ಇತಿಹಾಸದಲ್ಲಿ ದಾಖಲಾಗಿದೆ: ಜಮೀರ್ ಅಹ್ಮದ್

ಅದರಲ್ಲಿ ಜಡಗಾ ಮತ್ತು ಬಾಲ ಅವರ ಪ್ರತಿಮೆಗಳು ಇದೀಗ ಹಲಗಲಿ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ಕಂಚಿನ ಪ್ರತಿಮೆಗಳು ನಿರ್ಮಾಣ ಮಾಡಬೇಕು. ಇವರ ಇತಿಹಾಸ, ದೇಶ-ಪ್ರೇಮವನ್ನು ಮುಂದಿನ ಪೀಳಿಗೆಗೂ ತಿಳಿಸಿಕೊಡುವ ಕಾರ್ಯಗಳು ಇಲ್ಲಿ ಆಗಬೇಕಿದೆ .ಬ್ರಿಟಿಷರ ವಿರುದ್ಧ ತೊಡೆತಟ್ಟಿ ನಿಂತಿದ್ದ ಹಲಗಲಿ ಬೇಡರ ಪೈಕಿ ಕಂಪನಿ ಸರ್ಕಾರಕ್ಕೆ ಒಬ್ಬಿಬ್ಬರ ವಿರುದ್ಧ ದ್ವೇಷ ಇರಲಿಲ್ಲ. ಇಡೀ ಗ್ರಾಮವನ್ನು ಬ್ರಿಟಿಷರು ಸರ್ವನಾಶ ಮಾಡುವ ನಿರ್ಧಾರ ಮಾಡಿದ್ದರು. ಎರಡು ಸಲ ತಮಗೆ ಆಗಿದ್ದ ಸೋಲು, ಅವಮಾನದ ಸೇಡಿನಲ್ಲಿ ಬೆಂದಿದ್ದ ಬ್ರಿಟಿಷರು, ಭಾರಿ ಸೇನೆಯೊಂದಿಗೆ ನುಗ್ಗಿ, ಗ್ರಾಮವನ್ನು ಲೂಟಿ ಮಾಡುತ್ತಾರೆ. ಸಿಕ್ಕ ಸಿಕ್ಕವರನ್ನು ಕೊಲೆ ಮಾಡುತ್ತಾರೆ. ಕೊನೆಗೆ ಇಡೀ ಊರಿಗೆ ಬೆಂಕಿ ಹಚ್ಚಿ ಗ್ರಾಮವನ್ನು ಸುಟ್ಟು ಬೂದಿ ಮಾಡಿ, ಗ್ರಾಮದ ಕುರುವು ಸಿಗದಂತೆ ನಾಶ ಮಾಡಿದರು.

ಈ ವೇಳೆ ಬ್ರಿಟಿಷರ ನಿದ್ದೆಗೆಡಿಸಿದ್ದ ಜಡಗಾ, ಬಾಲ

ಈ ವೇಳೆ ಬ್ರಿಟಿಷರ ನಿದ್ದೆಗೆಡಿಸಿದ್ದ ಜಡಗಾ, ಬಾಲ ಸೇರಿ ನಾಲ್ವರನ್ನು ಮುಧೋಳ ನಗರದ ಸಾರ್ವಜನಿಕವಾಗಿ ಗಲ್ಲಿಗೇರಿಸಿದರು. ಇಂದಿಗೂ ಊರಲ್ಲಿ ಜಡಗ ಬಾಲರು ಬಳಸಿದ ಖಡ್ಗಗಳು ಸೇರಿದಂತೆ ಅನೇಕ ಆಯುಧಗಳಿವೆ. ಇವುಗಳನ್ನು ಕಾಪಾಡುವುದಕ್ಕೆ ‌ಹಾಗೂ ಜಡಗ ಬಾಲರ ಸ್ಮರಣೆ ಸದಾ ಇರುವಂತೆ ಮಾಡಲು ಊರಲ್ಲಿ ವಸ್ತು ಸಂಗ್ರಹಾಲಯ ‌ಮಾಡಬೇಕೆಂಬುದು ಗ್ರಾಮಸ್ಥರ ಮನವಿಯಾಗಿದೆ. ದೇಶಕ್ಕಾಗಿ ಪ್ರಾಣವನ್ನು ಬಲಿಕೊಟ್ಟಿರುವ ವೀರರು, ಹುತಾತ್ಮರನ್ನು ನೆನಪಿಸುವ ನಿಟ್ಟಿನಲ್ಲಿ ಕಾರ್ಯ ಆಗಬೇಕಿದೆ. ಅವರು ಬಾಳಿ, ಬದುಕಿದ ಪ್ರದೇಶಗಳು, ಜಾಗಗಳನ್ನು ಅಭಿವೃದ್ಧಿಪಡಿಸಲು ಸರಕಾರ ಮುಂದಾಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ