ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ. ಮೀರಾತಾಯಿ ಕೊಪ್ಪಿಕರ್ ನಿಧನ
ಮುಧೋಳ ನಗರದ ರುಕ್ಮಿಣಿಬಾಯಿ ವಾತ್ಸಲ್ಯಧಾಮದ ಹಿರಿಯಚೇತನ ಡಾ. ಮೀರಾತಾಯಿ ಕೊಪ್ಪಿಕರ್ (೯೬) ನಿಧನರಾಗಿದ್ದಾರೆ.
ಬಾಗಲಕೋಟ: ಮುಧೋಳ (Mudhol) ನಗರದ ರುಕ್ಮಿಣಿಬಾಯಿ ವಾತ್ಸಲ್ಯಧಾಮದ ಹಿರಿಯಚೇತನ ಡಾ. ಮೀರಾತಾಯಿ ಕೊಪ್ಪಿಕರ್ (೯೬) ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮದ್ಯಾಹ್ನ ೧೨.೩೦ ರ ಸುಮಾರಿಗೆ ನಿಧನರಾಗಿದ್ದಾರೆ. ಡಾ ಮೀರಾತಾಯಿ ಕೊಪ್ಪಿಕರ್ ಅವರು ಮಹಾತ್ಮ ಗಾಂಧಿಜಿ (Mahatam Gandhi) ಅವರ ಅನುಯಾಯಿಯಾಗಿದ್ದು, ವಿನೋಬಾ ಭಾವೆ (Vinodha Bhave) ಅವರ ಭೂದಾನ ಚಳುವಳಿಯಲ್ಲಿ ಭಾಗಿಯಾಗಿದ್ದರು.
ಇವರು ಮಹಾತ್ಮ ಗಾಂಧಿಜಿ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ವಿನೋಬಾ ಬಾವೆ ಅವರ ಹೋರಾಟದಿಂದ ಪ್ರಭಾವಿತರಾಗಿದ್ದರು. ಮೂಲತಃ ಹುಬ್ಬಳ್ಳಿ ಧಾರವಾಡದವರಾದ ಇವರು ಕಳೆದ ೪೫ ವರ್ಷದಿಂದ ಆಶ್ರಮದಲ್ಲಿ ನೆಲೆಸಿದ್ದರು.
೨೦೦೮-೨೦೦೯ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೨೧-೨೨ ರಲ್ಲಿ ಇವರಿಗೆ ಗಾಂಧಿ ಪುರಸ್ಕಾರ ಲಭಿಸಿತ್ತು. ಈ ಪುರಸ್ಕಾರವನ್ನು ಸ್ವತಃ ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಬಂದು ಪ್ರಶಸ್ತಿ ಪ್ರಧಾನ ಮಾಡಿದ್ದರು. ಈ ಸಮಯದಲ್ಲಿ ಪ್ರಶಸ್ತಿ ಮೊತ್ತ ನಿರಾಕರಣೆ ಮಾಡಿದ್ದರು.
ಮದುವೆ ಸಂಸಾರ ಕುಟುಂಬದಿಂದ ದೂರವಿದ್ದ ಇವರು ತಾವೆ ಬಟ್ಟೆ ನೇಯ್ದು ಉಡುತ್ತಿದ್ದರು. ದೇಶ ವಿದೇಶದಿಂದ ಜನರು ಬಂದು ವಾತ್ಸಲ್ಯಧಾಮದಲ್ಲಿ ನೆಲೆಸಿ, ಮೀರಾತಾಯಿ ಅವರಿಂದ ಮಾರ್ಗದರ್ಶನ ಪಡೆದು ಹೋಗುತ್ತಿದ್ದರು. ದೇಶಾಭಿಮಾನ, ಜಾತ್ಯಾತೀತತೆ, ದೇಶಿ ಸಂಸ್ಕೃತಿ ಬಗ್ಗೆ ದೇಶ ವಿದೇಶಿಗರು ಮಾರ್ಗದರ್ಶನ ಪಡೆಯುತ್ತಿದ್ದರು.
ಇವರ ಅಂತ್ಯಕ್ರಿಯೆ ಇಂದು ಸಂಜೆ ೪ ಗಂಟೆಗೆ ವಾತ್ಸಲ್ಯಧಾಮದಲ್ಲಿ ನಡೆಯಲಿದೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:30 pm, Fri, 19 August 22