
ಬಾಗಲಕೋಟೆ, ಜುಲೈ 21: ಒಂದೆಡೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji), ಮತ್ತೊಂದೆಡೆ ವಿಜಯಾನಂದ ಕಾಶಪ್ಪನವರ (Vijayanand Kashappanavar) ನೇತೃತ್ವದಲ್ಲಿ ನಡೆದ ಟ್ರಸ್ಟ್ ಸಭೆ. ಇದರ ಬೆನ್ನಲ್ಲೇ ವಾಗ್ದಾಳಿ ನಡೆಸುತ್ತಿರುವ ನಾಯಕರು. ಹೀಗೆ ಕೂಡಲಸಂಗಮ ಪಂಚಮಸಾಲಿ ಪೀಠ ವಿವಾದ ತಾರಕಕ್ಕೇರುತ್ತಿದ್ದಂತೆಯೇ ಸಮಾಜದ ಮುಖಂಡರು ಸಂಧಾನದ ಸುಳಿವು ನೀಡಿದ್ದಾರೆ.
ಅತ್ತ ಹುಬ್ಬಳ್ಳಿಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಪಂಚಮಸಾಲಿ ಪೀಠದ ಟ್ರಸ್ಟ್ ಸಭೆ ನಡೆದಿದ್ದರೆ, ಇತ್ತ ಸ್ವಾಮೀಜಿ ಆರೋಗ್ಯ ವಿಚಾರಿಸಲು ಕೊಪ್ಪಳ, ಬೆಳಗಾವಿ, ವಿಜಯಪುರ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರ ದಂಡು ಹರಿದು ಬಂದಿತ್ತು. ಭಾನುವಾರ ಸಮಾಜದ ನಾಯಕರಾದ ಮಾಜಿ ಸಚಿವ ಸಿ.ಸಿ.ಪಾಟೀಲ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಅನೇಕರು ಆಗಮಿಸಿದ್ದರು. ಈ ವೇಳೆ ಮುಖಂಡರು ಕಾಶಪ್ಪನವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಶಪ್ಪನವರ ಪೀಠದಿಂದ ಸ್ವಾಮೀಜಿಯವರನ್ನು ಕೈ ಬಿಟ್ಟರೆ ಸ್ವಾಮೀಜಿಗಳೊಂದಿಗೆ ಮುನ್ನಡೆಯುತ್ತೇವೆ. ಪೀಠ ಯಾರಪ್ಪನ ಸ್ವತ್ತೂ ಅಲ್ಲ. ಹಿಟ್ಲರ್ ಧೋರಣೆ ಹುನಗುಂದ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಸಿಸಿ ಪಾಟಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರಾವಣ ಮಾಸದ ಹೊತ್ತಿಗೆ ಹಿರಿಯರ ಸಮ್ಮುಖದಲ್ಲಿ ಸಭೆ ಕರೆಯುತ್ತೇವೆ. ಇದಕ್ಕೆ ಕಾಶಪ್ಪನವರವರನ್ನೂ ಕರೆಯುತ್ತೇವೆ ಎನ್ನುವ ಮೂಲಕ ಸಂಧಾನ ಸುಳಿವು ನೀಡಿದ್ದಾರೆ.
ಕೂಡಲಸಂಗಮ ಪೀಠಕ್ಕೆ ಪೀಠಾಧಿಪತಿ ಬದಲಾವಣೆ ವಿಚಾರ ರಾಜ್ಯದಲ್ಲಿ ಹಲವೆಡೆ ಪಂಚಮಸಾಲಿ ಸಮುದಾಯದ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇವುಗಳ ಮಧ್ಯೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಗುಣಮುಖರಾಗಿ ಕೂಡಲಸಂಗಮ ಪೀಠಕ್ಕೆ ತೆರಳಿದ್ದಾರೆ.
ಇದಕ್ಕೂ ಮುನ್ನ, ಹರಿಹರದ ಮಾಜಿ ಶಾಸಕ ಎಚ್ಎಸ್ ಶಿವಶಂಕರ್ ಶಾಸಕ ಅರವಿಂದ ಬೆಲ್ಲದ ಅವರೊಂದಿಗೆ ಆಸ್ಪತ್ರೆಗೆ ಆಗಮಿಸಿ ಸ್ವಾಮೀಜಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ನಾಯಕರು, ಕೊನೆಗೆ ಸ್ವಾಮೀಜಿಗಳನ್ನು ಮತ್ತೆ ಕೂಡಲಸಂಗಮ ಪೀಠಕ್ಕೆ ಕರೆದುಕೊಂಡು ಹೋಗುವಂತೆ ಮಾಡಿದರು.
ಕಳೆದ ಬಾರಿಯೂ ಸಂಧಾನದ ಸೂತ್ರಧಾರರಾಗಿದ್ದ ಮಾಜಿ ಶಾಸಕ ಶಿವಶಂಕರ್ ಶನಿವಾರದಿಂದ ಕಾಶಪ್ಪನವರ ಜತೆಗೂ ಮಾತುಕತೆ ನಡೆಸಿದ್ದಾರೆ. ಇತ್ತ ಸ್ವಾಮೀಜಿಗಳ ಜೊತೆಗೂ ಮಾತುಕತೆ ಮಾಡಿದ್ದು, ಯಾರೂ ಸಹ ಪರಸ್ಪರ ವಿರುದ್ಧ ಹೇಳಿಕೆ ನೀಡದಂತೆ ಮನವಿ ಮಾಡಿದ್ದಾರೆ. ಸಮಾಜದ ಹಿರಿಯರ ಸಮ್ಮುಖದಲ್ಲಿ ಇನ್ನೆರಡು ದಿನದಲ್ಲಿ ಸಭೆ ಕರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಶೀಘ್ರ ಸಭೆ ನಡೆದು ವಿವಾದ ಶೀಘ್ರ ಬಗೆಹರಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಗಳು ಕಾಶಪ್ಪನವರ ಬಗ್ಗೆ ಮಾತಾಡಲು ನಿರಾಕರಿಸಿದ್ದು, ನಾನು ಸಂಗಮನಾಥನ, ಬಸವಣ್ಣನ ಆಶೀರ್ವಾದದಿಂದ, ಸಮಾಜದ ಜನರ ಪ್ರಾರ್ಥನೆಯಿಂದ ಗುಣಮುಖನಾಗಿದ್ದೇನೆ. ಆಸ್ಪತ್ರೆಯಲ್ಲಿ ಇದ್ದ ಕಾರಣ ಯಾವುದೇ ಬೆಳವಣಿಗೆಗಳ ಬಗ್ಗೆ ಗೊತ್ತಿಲ್ಲ.ಭಕ್ತರು ಯಾರೂ ಆತಂಕಗೊಳ್ಳಬೇಡಿ ಎಂದರು.
ಇದನ್ನೂ ಓದಿ: ಪಂಚಮಸಾಲಿ ಪೀಠಕ್ಕೆ ಜಡಿದಿದ್ದ ಬೀಗ ಓಪನ್: ಕಾಶಪ್ಪನವರ್, ಸ್ವಾಮೀಜಿ ಮಧ್ಯದ ಗುದ್ದಾಟಕ್ಕೆ ತಾತ್ಕಾಲಿಕ ಬ್ರೇಕ್
ಒಟ್ಟಿನಲ್ಲಿ, ಕೂಡಲಸಂಗಮದ ಪಂಚಮಸಾಲಿ ಪೀಠದ ಪೀಠಾಧಿಪತಿ ವಿವಾದ ಇತ್ತೀಚೆಗೆ ಮೇಲಿಂದ ಮೇಲೆ ಒಂದೊಂದು ತಿರುವು ಪಡೆಯುತ್ತಾ ಸಾಗುತ್ತಿದೆ. ಸಮಾಜದ ಹಿರಿಯರು ಸಂಧಾನ ಸಭೆಗೆ ಮುಂದಾಗಿದ್ದು,ಇದು ಯಶಸ್ವಿಯಾಗುತ್ತದೆಯಾ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ