ಹೃದಯಾಘಾತದಿಂದ ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್ ನಿಧನ; ಸರ್ಕಾರಿ ಗೌರವಗಳೊಂದಿಗೆ ಇಂದು ಸಂಜೆ 5 ಗಂಟೆಗೆ ಅಂತ್ಯಕ್ರಿಯೆ

| Updated By: preethi shettigar

Updated on: Feb 05, 2022 | 12:28 PM

ಇಬ್ರಾಹಿಂ ಸುತಾರ್ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೂರ್ತಿಯಾಗಿದ್ದರು. ಪ್ರವಚನಕ್ಕೆ ಹೆಸರಾಗಿದ್ದರು. ಅಲ್ಲದೇ ಬಣವಣ್ಣನವರ ಅನುಯಾಯಿಗಳಾಗಿದ್ದು, ಬಸವಣ್ಣನವರ ವಚನಗಳನ್ನು ಹೇಳುತ್ತಿದ್ದರು.

ಹೃದಯಾಘಾತದಿಂದ ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್ ನಿಧನ; ಸರ್ಕಾರಿ ಗೌರವಗಳೊಂದಿಗೆ ಇಂದು ಸಂಜೆ 5 ಗಂಟೆಗೆ ಅಂತ್ಯಕ್ರಿಯೆ
ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್
Follow us on

ಬಾಗಲಕೋಟೆ: ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್(Ibrahim Sutar) ಇಂದು ಬೆಳಿಗ್ಗೆ 6.30ಕ್ಕೆ ಹೃದಯಾಘಾತದಿಂದ(Heart attack) ಮೃತಪಟ್ಟಿದ್ದಾರೆ. ಬಾಗಲಕೋಟೆ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಹೃದಯಾಘಾತದಿಂದ ಪದ್ಮಶ್ರೀ(padma shri)  ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್(82) ನಿಧನರಾಗಿದ್ದಾರೆ. ಇಬ್ರಾಹಿಂ ಸುತಾರ್ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೂರ್ತಿಯಾಗಿದ್ದರು. ಪ್ರವಚನಕ್ಕೆ ಹೆಸರಾಗಿದ್ದರು. ಅಲ್ಲದೇ ಬಣವಣ್ಣನವರ ಅನುಯಾಯಿಗಳಾಗಿದ್ದು, ಬಸವಣ್ಣನವರ ವಚನಗಳನ್ನು ಹೇಳುತ್ತಿದ್ದರು.ಇಂದು ಬೆಳಿಗ್ಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ತಲುಪಿಸುವ ಮಾರ್ಗದಲ್ಲಿ ಸೂಫಿಸಂತ ಇಬ್ರಾಹಿಂ ಸುತಾರ್ ಕೊನೆಯುಸಿರೆಳೆದಿದ್ದಾರೆ.

ಇಬ್ರಾಹಿಂ ಎನ್​. ಸುತಾರ್​ ಮೇ 10, 1940 ರಲ್ಲಿ ಜನಿಸಿದರು. ಇವರ ತಂದೆ ಮಹಾಲಿಂಗಪುರದ ನಬಿಸಾಹೇಬ್​, ತಾಯಿ ಅಮೀನಾಬಿ. ಆರ್ಥಿಕವಾಗಿ ಸದೃಢರಾಗಿಲ್ಲದಿದ್ದರಿಂದ ಮೂರನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆದರು. ನಂತರ ನೇಕಾರ ವೃತ್ತಿ ಮೈಗೂಡಿಸಿಕೊಂಡರು. ಅದರ ಜತೆಗೆ ಮಸೀದಿಯಲ್ಲಿ ನಮಾಜು, ಕುರಾನ್​ ಅಧ್ಯಯನ ಮಾಡಿದರು. ಬಳಿಕ ಭಗವದ್ಗೀತೆ ಅಧ್ಯಯನ ಮಾಡಿದರು. ನಂತರದ ದಿನಗಳಲ್ಲಿ ಪ್ರವಚನಗಳನ್ನು ಮಾಡುತ್ತಾ ಭಾವೈಕ್ಯತೆಯ ಪಾಠವನ್ನು ಸಾರಿದರು. ಕನ್ನಡದ ಕಬೀರ ಎಂದೇ ಇವರು ಖ್ಯಾತರಾಗಿದ್ದು, ಇವರಿಗೆ 1995ರಲ್ಲಿ ಕರ್ನಾಟಕ ಸರ್ಕಾರ ರಾಜೋತ್ಸವ ಪ್ರಶಸ್ತಿಯನ್ನು ನೀಡಿದೆ. ಜತೆಗೆ ಭಾರತ ಸರ್ಕಾರ 2018ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಸೂಫಿಸಂತ ಇಬ್ರಾಹಿಂ ಸುತಾರ್ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ

ಸರ್ವಧರ್ಮ ಸಮನ್ವಯದ ಪ್ರವಚನಕಾರರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಮ್ ಸುತಾರ ನಿಧನರಾಗಿದ್ದಾರೆ. ಅವರು ಇಂದು ನಿಧನರಾದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ‌. ಸಮಾಜದಲ್ಲಿ ಸಾಮರಸ್ಯದ ಬೀಜ ಬಿತ್ತಲು ಶ್ರಮಿಸಿದ ಸಂತರು. ಅವರ ದಿವ್ಯಾತ್ಮಕ್ಕೆ ದೇವರು ಶಾಂತಿ ನೀಡಲಿ. ನೋವು ಭರಿಸುವ ಶಕ್ತಿ ಕುಟುಂಬದವರಿಗೆ ದೇವರು ಕರುಣಿಸಲಿ ಎಂದು ಸೂಫಿಸಂತ ಇಬ್ರಾಹಿಂ ಸುತಾರ್ ನಿಧನಕ್ಕೆ ಸಿಎಂ ಸಂತಾಪ ವ್ಯಕ್ತಪಡಿಸಿದ್ದಾರೆ.

ಸುತಾರ ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟ: ಹೆಚ್​.ಡಿ. ಕುಮಾರಸ್ವಾಮಿ

ಸಾಮರಸ್ಯದ ಕೊಂಡಿ, ಸೌಹಾರ್ದ ಸಮಾಜದ ಪ್ರತಿಪಾದಕರು ಪದ್ಮಶ್ರೀ ಪುರಸ್ಕೃತರಾಗಿದ್ದ ಕನ್ನಡದ ಕಬೀರ ಇಬ್ರಾಹಿಂ ಸುತಾರ ಅವರ ನಿಧನ ತೀವ್ರ ದುಃಖ ಉಂಟು ಮಾಡಿದೆ. ಸುತಾರ ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟ. ಈ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ

ಸೂಫಿಸಂತ ಇಬ್ರಾಹಿಂ ಸುತಾರ್ ನಿಧನಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. ನಾಡಿನ ಭಾವೈಕ್ಯತೆಯ ರಾಯಭಾರಿಯಂತಿದ್ದ ಪದ್ಮಶ್ರೀ ಇಬ್ರಾಹಿಂ ಸುತಾರ ಅವರು ಇಂದು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಧರ್ಮ, ಸೂಫಿ ಪರಂಪರೆಗಳ ಪ್ರವಚನಗಳ ಮೂಲಕ ಸಾಮರಸ್ಯಕ್ಕಾಗಿ ಅವರು ಶ್ರಮಿಸಿದ್ದರು. ಅವರಿಗೆ ಸದ್ಗತಿ ಪ್ರಾರ್ಥಿಸುತ್ತಾ, ಅವರ ಕುಟುಂಬ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್​ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರಿಗೆ ಸುತಾರ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ಸರ್ಕಾರಿ‌ ಪಿಯು ಕಾಲೇಜು ಆವರಣದಲ್ಲಿ ಸಾರ್ವಜನಿಕರಿಗೆ ಸುತಾರ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪಿಯು ಕಾಲೇಜಿಗೆ ಇಂದು ರಜೆ ನೀಡಲಾಗಿದೆ. ಇಂದು ಸಂಜೆ 5 ಗಂಟೆಗೆ ಅಂತಿಮ‌ ಸಂಸ್ಕಾರ ನೆರವೆರಲಿದೆ.

ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆಗೆ ಅಧಿಸೂಚನೆ

ಆಧುನಿಕ ಸೂಫಿಸಂತ ಪದ್ಮಶ್ರೀ ಇಬ್ರಾಹಿಂ ಸುತಾರ್ ನಿಧನ ಹಿನ್ನೆಲೆ ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಜಿಲ್ಲಾಡಳಿತದಿಂದ ಇಬ್ರಾಹಿಂ ಸುತಾರ್​ಗೆ ಅಂತಿಮ ಗೌರವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಉಪ ವಿಭಾಗಾಧಿಕಾರಿ ಸಿದ್ದು ಹುಲ್ಲಳ್ಳಿ ನೇತೃತ್ವ ವಹಿಸಿದ್ದಾರೆ. ಇಬ್ರಾಹಿಂ ಸುತಾರ್ ತೋಟದಲ್ಲಿ ಇಸ್ಲಾಂ ಧರ್ಮದ ವಿಧಿವಿಧಾನಗಳಂತೆ ಅಂತ್ಯಸಂಸ್ಕಾರ ನೆರವೆರಲಿದೆ.

ಇದನ್ನೂ ಓದಿ:

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಸೊಸೆ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ನಿಧನ

Ashok Rao: ಕನ್ನಡದ ಹಿರಿಯ ನಟ ಅಶೋಕ್​​ ರಾವ್​ ನಿಧನ; ಕ್ಯಾನ್ಸರ್​ನಿಂದ ಕೊನೆಯುಸಿರೆಳೆದ ಕಲಾವಿದ

Published On - 8:18 am, Sat, 5 February 22