ಮುಸ್ಲಿಮರು ಕೈಬಿಟ್ಟರೆ ಕಾಂಗ್ರೆಸ್ ಉಸಿರುಗಟ್ಟಿ ಸಾಯುತ್ತದೆ: ಸಚಿವ ಕೆ.ಎಸ್.ಈಶ್ವರಪ್ಪ
ರಾಷ್ಟ್ರವಾದಿ ಮುಸಲ್ಮಾನರು ಬಿಜೆಪಿಗೆ ಬರುವುದಾದರೆ ಸ್ವಾಗತ. ಆದರೆ ಯಾವ ಕಾರಣಕ್ಕೂ ಸಿ.ಎಂ.ಇಬ್ರಾಹಿಂರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದು ಬಾಗಲಕೋಟೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆ: ಕಾಂಗ್ರೆಸ್ ಕೇವಲ ವೋಟಿಗಾಗಿ ಮುಸ್ಲಿಮರನ್ನು(Muslims) ಬಳಸಿಕೊಂಡಿದೆ. ಮುಸ್ಲಿಮರು ಕೈಬಿಟ್ಟರೆ ಕಾಂಗ್ರೆಸ್(Congress) ಉಸಿರುಗಟ್ಟಿ ಸಾಯುತ್ತದೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ಮುಸಲ್ಮಾನರಿಗೆ ಇದು ಅರ್ಥವಾಗುತ್ತಿದೆ. ಬಿಜೆಪಿ(BJP) ಜೊತೆಗೆ ಹಿಂದುಳಿದವರು,ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗ ಮುಸಲ್ಮಾನರು ಕೂಡ ಬಿಜೆಪಿಗೆ ಬರುವುದಕ್ಕೆ ಸ್ವಲ್ಪ ಹಿಂದೆ ಮುಂದೆ ನೋಡುತ್ತಾ ಇದ್ದಾರೆ. ಕೇಂದ್ರ ಮಂತ್ರಿಮಂಡಲದ ವಿಸ್ತರಣೆ ಸಂದರ್ಭದಲ್ಲಿ ದಲಿತರು, ಹಿಂದುಳಿದವರಿಗೆ ಪ್ರಧಾನಿ ಮೋದಿ ಹೆಚ್ಚಿನ ಅವಕಾಶ ನೀಡಿದ್ದಾರೆ. ರಾಷ್ಟ್ರವಾದಿ ಮುಸಲ್ಮಾನರು ಬಿಜೆಪಿಗೆ ಬರುವುದಾದರೆ ಸ್ವಾಗತ. ಆದರೆ ಯಾವ ಕಾರಣಕ್ಕೂ ಸಿ.ಎಂ.ಇಬ್ರಾಹಿಂರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದು ಬಾಗಲಕೋಟೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಮುಸಲ್ಮಾನರ ನಾಯಕ ಸಿ.ಎಂ. ಇಬ್ರಾಹಿಂ ಯಾಕೆ ಈಗ ಕಾಂಗ್ರೆಸ್ ಪಕ್ಷ ಬಿಡುತ್ತಿದ್ದಾರೆ. ಈಗ ಜಮೀರ್ ಅಹ್ಮದ್ ಕೂಡ ಎಲ್ಲಾದ್ರು ಕಾಂಗ್ರೆಸ್ಸಿನಲ್ಲಿ ಕಾಣಿಸಿಕೊಳ್ಳುತ್ತಾರಾ? ಸಿದ್ದರಾಮಯ್ಯ ಹಿಂದೆನೂ ಜಮೀರ್ ಅಹ್ಮದ್ ಕಾಣಿಸೊಲ್ಲ. ಡಿ.ಕೆ. ಶಿವಕುಮಾರ್ ಹಿಂದೆನೂ ಜಮೀರ್ ಅಹ್ಮದ್ ಕಾಣಿಸುವುದಿಲ್ಲ. ಇದರಲ್ಲೇ ಎಲ್ಲವೂ ಅರ್ಥವಾಗುತ್ತಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಶಾಲಾ ಮಕ್ಕಳು ಹಿಜಾಬ್ ಧರಿಸುವ ವಿಚಾರ
ಶಾಲೆಗೆ ಹೋಗುವ ಮಗು ಶಿಕ್ಷಣ ಕಲಿಯಲಿಯಲು ಹೋಗುತ್ತದೆ. ನನ್ನದು ಯಾವ ಧರ್ಮ? ಧರ್ಮದ ವ್ಯವಸ್ಥೆ ಅಲ್ಲಿ ಏನು ಮಾಡಬೇಕು? ಎನ್ನುವುದು ಅಲ್ಲಿ ಆಗಬಾರದು. ಜಾತಿ, ಧರ್ಮ ಶಾಲೆಯಲ್ಲಿ ಬಂದರೆ ಮಕ್ಕಳ ಭಾವನೆಗೆ ದೊಡ್ಡ ಸಮಸ್ಯೆ ಆಗುತ್ತದೆ. ನಾವು ಮನುಷ್ಯರು ಶಾಲೆಯಲ್ಲಿರುವ ಎಲ್ಲಾ ಮಕ್ಕಳು ಒಂದೇ ರೀತಿ ಇದ್ದರೆ ಇದಾವ ಸಮಸ್ಯೆಯೂ ಆಗಲ್ಲ. ಶಿಸ್ತಿನಿಂದ ಯಾವ ಸಮವಸ್ತ್ರ ಹಾಕಬೇಕು ಅಂತಾ ಶಾಲೆಯಲ್ಲಿ ಹೇಳಿರುತ್ತಾರೆ ಅದನ್ನು ಧರಿಸಿ. ಆ ಸಮವಸ್ತ್ರ ಹಾಕಿಕೊಂಡರೆ ಯಾವುದೇ ಸಮಸ್ಯೆ ಇರಲ್ಲ. ಕೆಲವರು ರಾಜಕಾರಣಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಉಗ್ರವಾಗಿ ಖಂಡನೆ ಮಾಡುತ್ತಿದ್ದೇನೆ. ಹಿಂದೂ-ಮುಸ್ಲಿಮರು ಎಲ್ಲರೂ ಶಾಲೆಯಲ್ಲಿ ಸಹೋದರ-ಸಹೋದರಿಯಂತೆ ಇರಬೇಕು ಎಂದು ಬಾಗಲಕೋಟೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸಿಎಂ ದೆಹಲಿ ಪ್ರವಾಸ ವಿಚಾರ
ರಾಜ್ಯದ ಅಭಿವೃದ್ಧಿ, ಮಂತ್ರಿಮಂಡಲ ವಿಸ್ತರಣೆ, ಸಂಘಟನೆ ಕುರಿತ ಚರ್ಚೆಗೆ ದೆಹಲಿಗೆ ಸಿಎಂ ಬಸವರಾಜ ಬೊಮ್ಮಾಯಿ ಹೋಗುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ವಿಚಾರವಾಗಿ, ರಾಜಕಾರಣದ ಕುರಿತು ಚರ್ಚಿಸಲು ಕೇಂದ್ರ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಸಿಎಂ ದೆಹಲಿಗೆ ಹೋಗುವುದಕ್ಕೆ ಯಾರದ್ದಾದರು ಅಪ್ಪಣೆ ಬೇಕಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆ ತಿರುಗೇಟು
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೆ ಹೇಳುತ್ತಾ ಇರುತ್ತಾರೆ. ಇಬ್ರಾಹಿಂರಂಥವರು ಒಬ್ಬೊಬ್ಬರೆ ಕಾಂಗ್ರೆಸ್ ಬಿಟ್ಟು ಹೋಗುತ್ತಿದ್ದಾರೆ. 17ಜನ ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಬೇಡ ಅಂತ ಬೀಸಾಕಿ ಬಿಜೆಪಿಗೆ ಬಂದರು. ಕಾಂಗ್ರೆಸ್ ಶಾಸಕರನ್ನೇ ಅವರು ಹಿಡಿದಿಟ್ಟುಕೊಳ್ಳಲು ಆಗಿಲ್ಲ. ನಮ್ಮ ಶಾಸಕರು ಸಿಂಹದ ಮರಿ ಇದ್ದಂಗೆ. ಒಬ್ರು ಹೋಗಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದವರೇ ಚಾಮುಂಡಿಯಲ್ಲಿ ಸೋತರು. ಒಂದೆಡೆ ಡಿ.ಕೆ.ಶಿವಕುಮಾರ್, ಮತ್ತೊಂದು ಕಡೆ ಸಿದ್ದರಾಮಯ್ಯ ಗಿಣಿ ಭವಿಷ್ಯದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಬಾಗಲಕೋಟೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಮಾಜಿ ಸಂಸದ ರಮೇಶ ಕತ್ತಿ ಭಜನಾ ಕಾರ್ಯಕ್ರಮವೊಂದರಲ್ಲಿ ತನ್ಮಯತೆಯಿಂದ ಭಾಗಿಯಾಗಿರುವ ವಿಡಿಯೋ ವೈರಲ್
ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್ ತಿಂಗಳಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದಾರೆ: ಸಚಿವ ಕೆಎಸ್ ಈಶ್ವರಪ್ಪ
Published On - 10:32 am, Fri, 4 February 22