ತರಕಾರಿ ಮಾರಿ ಪ್ರಭುಲಿಂಗ ದೇವರಿಗೆ 16 ಲಕ್ಷ ರೂ. ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಅಣ್ಣನ ಮಕ್ಕಳಿಂದಲೇ ಬರ್ಬರ ಹತ್ಯೆ

ಬಾಗಲಕೋಟೆಯ ರಬಕವಿಬನಹಟ್ಟಿ ತಾಲ್ಲೂಕಿನ ಜಗದಾಳ ಗ್ರಾಮದಲ್ಲಿ 80 ವರ್ಷದ ದಾನಜ್ಜಿ ಅಲಿಯಾಸ್ ಚಂದ್ರವ್ವ ನೀಲಗಿ ಅವರನ್ನು 11 ಎಕರೆ ಆಸ್ತಿಗಾಗಿ ಅಣ್ಣನ ಮಕ್ಕಳೇ ಹತ್ಯೆ ಮಾಡಿದ್ದಾರೆ. ತೇರದಾಳದ ಪ್ರಭುಲಿಂಗೇಶ್ವರ ದೇವಸ್ಥಾನಕ್ಕೆ ಬೆಳ್ಳಿ ಬಾಗಿಲು ದಾನ ಮಾಡಿದ್ದಲ್ಲದೆ, ದಾನದಿಂದಲೇ ಹೆಸರಾದ ದಾನಜ್ಜಿಯ ಕೊಲೆ ನಡೆದಿರುವುದು ಸ್ಥಳೀಯರಲ್ಲಿ ಶೋಕಸಾಗರ ಸೃಷ್ಟಿಸಿದೆ.

ತರಕಾರಿ ಮಾರಿ ಪ್ರಭುಲಿಂಗ ದೇವರಿಗೆ 16 ಲಕ್ಷ ರೂ. ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಅಣ್ಣನ ಮಕ್ಕಳಿಂದಲೇ ಬರ್ಬರ ಹತ್ಯೆ
ದಾನಜ್ಜಿ ಅಲಿಯಾಸ್ ಚಂದ್ರವ್ವ ನೀಲಗಿ
Edited By:

Updated on: Jan 15, 2026 | 2:16 PM

ಬಾಗಲಕೋಟೆ, ಜನವರಿ 15: ಬಾಗಲಕೋಟೆ (Bagalkot) ಜಿಲ್ಲೆಯ ಜಗದಾಳ ಗ್ರಾಮದಲ್ಲಿ 80 ವರ್ಷದ ವೃದ್ಧೆ ದಾನಜ್ಜಿ ಅಲಿಯಾಸ್ ಚಂದ್ರವ್ವ ನೀಲಗಿ ಅವರನ್ನು ಅಣ್ಣನ ಮಕ್ಕಳೇ ಆಸ್ತಿಗಾಗಿ ಹತ್ಯೆ ಮಾಡಿದ್ದಾರೆ. 11 ಎಕರೆ ಆಸ್ತಿಗಾಗಿ ಈ ಅಮಾನವೀಯ ಕೃತ್ಯ ಎಸಗಲಾಗಿದೆ ಎಂಬುದು ತಿಳಿದುಬಂದಿದೆ. ಬಾಗಲಕೋಟೆ ಜಿಲ್ಲೆ ತೇರದಾಳ ಮತ್ತು ರಬಕವಿಬನಹಟ್ಟಿ ಭಾಗದಲ್ಲಿ ದಾನಜ್ಜಿ ಎಂದೇ ಹೆಸರಾಗಿದ್ದ ಚಂದ್ರವ್ವ ನೀಲಗಿ ಅವರ ಕೊಲೆ ಸ್ಥಳೀರನ್ನು ಆಘಾತಕ್ಕೀಡು ಮಾಡಿದೆ.

ತರಕಾರಿ ಮಾರಟ ಮಾಡಿ ಜೀವನ, ದಾನದಿಂದಲೇ ಪ್ರಸಿದ್ಧಿ

ದಾನಜ್ಜಿ ಅವರು ಜೀವನದುದ್ದಕ್ಕೂ ತರಕಾರಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕಳೆದ 60 ವರ್ಷಗಳಿಂದ ತೇರದಾಳದ ಪ್ರಭುಲಿಂಗೇಶ್ವರ ದೇವಸ್ಥಾನದ ಬಳಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಅವರು, ಕೂಡಿಟ್ಟ ಹಣದಿಂದ ಅನೇಕ ದಾನ ಕಾರ್ಯಗಳನ್ನು ಮಾಡಿದ್ದರು. ವಿಶೇಷವಾಗಿ, 2022ರಲ್ಲಿ ಪ್ರಭುಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಗೆ 20 ಕೆಜಿ ತೂಕದ, 16 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಬಾಗಿಲನ್ನು ದಾನ ಮಾಡಿದ್ದರು. ಇದಲ್ಲದೆ, ದೇವಸ್ಥಾನದಲ್ಲಿ 3 ಲಕ್ಷ ರೂಪಾಯಿ ವೆಚ್ಚದಲ್ಲಿ ಕೊಠಡಿಯೊಂದನ್ನೂ ನಿರ್ಮಿಸಿಕೊಟ್ಟಿದ್ದರು. ಅವರ ಈ ದಾನ-ಧರ್ಮಗಳ ಗುಣದಿಂದಾಗಿಯೇ ಅವರಿಗೆ ದಾನಜ್ಜಿ ಎಂಬ ಅನ್ವರ್ಥನಾಮ ಬಂದಿತ್ತು.

ಆಸ್ತಿಗಾಗಿ ನೀಚತನ ಪ್ರದರ್ಶಿಸಿದ ದಾನಜ್ಜಿಯ ಅಣ್ಣನ ಮಕ್ಕಳು

ಇಂತಹ ದಾನಕ್ಕೆ ಹೆಸರಾಗಿದ್ದ ವೃದ್ಧೆಯ ಕೊಲೆಗೆ ಆಸ್ತಿ ವಿವಾದವೇ ಕಾರಣವಾಗಿದೆ. ದಾನಜ್ಜಿ ಮತ್ತು ಅವರ ಅಣ್ಣನ ಮಕ್ಕಳ ನಡುವೆ 11 ಎಕರೆ ಆಸ್ತಿಯ ವಿಚಾರವಾಗಿ ಭಿನ್ನಾಭಿಪ್ರಾಯಗಳಿದ್ದವು. ಜನವರಿ 13ರಂದು, ಸರ್ವೆ ಅಧಿಕಾರಿಗಳು ದಾನಜ್ಜಿ ಅವರ ಹೊಲದ ಭೂಮಿಯ ಸರ್ವೆಗಾಗಿ ಬಂದಿದ್ದ ಸಂದರ್ಭದಲ್ಲಿ, ಅಜ್ಜಿ ಘಟಪ್ರಭಾ ಕಾಲುವೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಲು ಪ್ರಯತ್ನಿಸಲಾಗಿತ್ತು. ನಂತರ, ಆಕೆಯನ್ನು ಉಳಿಸುವ ರೀತಿಯಲ್ಲಿ ನಾಟಕವನ್ನೂ ಮಾಡಲಾಗಿತ್ತು. ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಹೈಡ್ರಾಮಾ ನಡೆಸಲಾಗಿತ್ತು. ಬಳಿಕ ಆರೋಪಿಗಳು ವೃದ್ಧೆಯನ್ನು ಕಾಡಯ್ಯ ಬನಹಟ್ಟಿ ಆಸ್ಪತ್ರೆಗೆ ಕರೆ ತಂದಿದ್ದರು. ಅಲ್ಲಿಂದ ತಾವೇ ಗೋಕಾಕ ಆಸ್ಪತ್ರೆಗೆ ಕಡೆಗೆ ಕರೆಕೊಂಡು ಹೋಗುತ್ತೇವೆಂದು ಕರೆದೊಯ್ದಿದ್ದ ಆರೋಪಿಗಳು ಕೊಲೆ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೊಲೆ ಮಾಡಿ ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಯತ್ನ

ಕೊಲೆ ಮಾಡಿದ ನಂತರ ದಾನಜ್ಜಿ ಅಣ್ಣನ ಮಕ್ಕಳು ಶವವನ್ನು ಆತುರವಾಗಿ ಅಂತ್ಯಸಂಸ್ಕಾರ ಮಾಡಲು ಪ್ರಯತ್ನ ನಡೆಸಿದ್ದರು. ಗೋಡೆಗೆ ಒರಗಿಸಿ ಶೃಂಗಾರ ಮಾಡಿ, ಶೀಘ್ರವಾಗಿ ಶವವನ್ನು ಸಾಗಿಸಲು ಮುಂದಾಗಿದ್ದರು. ಆದರೆ, ಸ್ಥಳೀಯರಲ್ಲಿ ಅನುಮಾನಗಳು ಹುಟ್ಟಿಕೊಂಡವು. ಗಡಿಬಿಡಿಯ ಈ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಈ ಭೀಕರ ಕೃತ್ಯ ಬಯಲಿಗೆ ಬಂದಿದೆ.

ಇದನ್ನೂ ಓದಿ: ಹುಡುಗಾಟವಲ್ಲ! ಶಾಲಾ ಮಕ್ಕಳಿಂದಲೇ SSLC ವಿದ್ಯಾರ್ಥಿಯ ಬರ್ಬರ ಕೊಲೆ

ರಬಕವಿಬನಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸದ್ಯ ಐದು ಮಂದಿ ಆರೋಪಿಗನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಬಾಗಲಕೋಟೆ ಎಸ್​​ಪಿ ಸಿದ್ಧಾರ್ಥ ಗೋಯಲ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ