ದೇಸಾಯಿವಾಡೆ: ಶಂಕರ್ ನಾಗ್ ಅವರ ಜೋಕುಮಾರ ಸ್ವಾಮಿ ಚಿತ್ರ ಶೂಟಿಂಗ್ ನಡೆದದ್ದು ಇಲ್ಲೇ

TV9 Digital Desk

| Edited By: guruganesh bhat

Updated on: Sep 26, 2021 | 5:11 PM

ಈ ಹಿಂದೆ ಉತ್ತರ ಕರ್ನಾಟಕದ ಬಹುಭಾಗವನ್ನು ದೇಸಾಯಿ ಮನೆತನಗಳೇ ಆಳ್ವಿಕೆ ನಡೆಸುತ್ತಿದ್ದವು.

ದೇಸಾಯಿವಾಡೆ: ಶಂಕರ್ ನಾಗ್ ಅವರ ಜೋಕುಮಾರ ಸ್ವಾಮಿ ಚಿತ್ರ ಶೂಟಿಂಗ್ ನಡೆದದ್ದು ಇಲ್ಲೇ
ದೇಸಾಯಿವಾಡೆ
Follow us

ಬಾಗಲಕೋಟೆ: ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಎಲ್ಲರನ್ನೂ ಸೆಳೆಯುವ ಮನೆಗಳೆಂದರೆ ವಾಡೆಗಳು. ಬಹುತೇಕ ಹಳ್ಳಿಗಳಲ್ಲಿ ವಾಡೆಗಳು ಅವನತಿಯ ಅಂಚಿಗೆ ತಲುಪಿವೆ. ಕೆಲವು ಕಡೆ ಈಗಾಗಲೇ ಅವುಗಳು ಶಿಥಿಲಗೊಂಡು ಹಾಳಾಗಿವೆ. ಆದರೆ ಇಂದಿಗೂ ಕೆಲವೆಡೆ ವಾಡೆಗಳು ತಮ್ಮ ವೈಭವ ಕಾಪಾಡಿಕೊಂಡು ಬಂದಿವೆ. ವಾಡೆಗಳ ವೈಭವ ಅದರ ವಿನ್ಯಾಸ ಗೋಡೆ ಕಂಬ ಪ್ರತಿಯೊಂದನ್ನು ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನಿಸುತ್ತದೆ. ಅಂತಹ ವಾಡೆಗಳಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹದಿನಾರು ಹಳ್ಳಿಗಳ ಊರು ಲೋಕಾಪುರ ದೇಸಾಯಿ ಮನೆತನ ಮತ್ತು ವಾಡೆ ಕೂಡ ಒಂದು. ತನ್ನದೇ ಆದ ಇತಿಹಾಸ ಹೊಂದಿದ ಲೋಕಾಪುರ ದೇಸಾಯಿವಾಡೆ ಇಂದಿಗೂ ಲೋಕಾಪುರದಲ್ಲಿ ತನ್ನ ವೈಭವದಿಂದ ಸೆಳೆಯುತ್ತದೆ.

ಸಿಕ್ಕೆ(ಶೀಲ್) ದೇಸಾಯಿ ಮನೆತನದ ದೇಸಾಯಿವಾಡೆಯು ಧಾರಾವಾಹಿ ಮತ್ತು ಸಿನೆಮಾ ಚಿತ್ರೀಕರಣಕ್ಕೆ ಹೇಳಿಮಾಡಿಸಿದ ಪ್ರಶಸ್ತ ಮನೆಯಾಗಿದೆ. ಈ ಸಿಕ್ಕಿ ದೇಸಾಯಿ ದೇಸಗತಿ ಮನೆತನದ ವಾಡೆ ಹಲವು ವಿಶೇಷಗಳನ್ನು ಹೊಂದಿದೆ. ಈ ಮನೆಯಲ್ಲಿ ಸಿನಿಮಾ ಮಾಡಿದರೆ ಅದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತದೆ ಎಂಬ ನಂಬಿಕೆಯೂ ಇದೆ. ಈ ಹಿಂದೆ ತೊಂಬತ್ತರ ದಶಕದಲ್ಲಿ ದೆಸಾಯಿವಾಡಯಲ್ಲಿ ಕರಾಟೆ ಕಿಂಗ್ ನಟ ಶಂಕರ್ ನಾಗ್ ಅವರ ಜೋಕುಮಾರ ಸ್ವಾಮಿ ಚಿತ್ರದ ಚಿತ್ರೀಕರಣ ಮಾಡಲಾಗಿತ್ತು ಎಂದು ವಾಡೆಯ ಹಿರಿಯರ ನೆನಪಿಸಿಕೊಳ್ಳುತ್ತಾರೆ. ಅಲ್ಲದೆ ಈ ಮನೆ ( ದೇಸಗತಿ ವಾಡೆ) ತನ್ನ ಹೆಚ್ಚು ಆಕರ್ಷಕವಾಗಿದೆ. ಸದರಿ ಕಟ್ಟೆ, ಗೋವಿಂದಪ್ಪನ ಕಟ್ಟೆ, ವಿಶಾಲ ಸಭಾಂಗಣ, ಕರ ಶೇಖರಣೆಯ ವಿಶೇಷ ಕೋಣೆ, ಹಳೇ ಲಾಕರ್, ಎರಡು ಗರುಡಗಂಭ, ಮೂವತ್ತಕ್ಕೂ ಹೆಚ್ಚು ಮೇಲ್ಮುದ್ದಿ ಅಂಟಿ ಕೊಂಡ ಕಂಬಗಳು, ಬ್ರಿಟಿಷ್ ಕಾಲದ ಮಂಚ, ವಾಡೆಯ ಅಗಸಿ ಬಾಗಿಲು, ಅಡುಗೆ ಮನೆ, ತಾಮ್ರದ ಅಡುಗೆ ಹಂಡೆ, ಪಾತ್ರೆಗಳು, ಬೀಸುವ ಕಲ್ಲು, ರುಬ್ಬುವ ಗುಂಡುದೇವರ ಕೋಣೆ, ಗ್ರಾಮದೇವತೆ ವಾಡೆ ಲಕ್ಷ್ಮೀ ದೇವಾಲಯ ಲೋಕಾಪುರದ ದೇಸಾಯಿ ವಾಡೆಯ ವೈಶಿಷ್ಟ್ಯತೆಗೆ ಸಾಕ್ಷಿಯಾಗಿ ನಿಲ್ಲುತ್ತವೆ.

ಬ್ರಿಟಿಷರ ಆಳ್ವಿಕೆ ಮುನ್ನವೇ ನಿರ್ಮಾಣ ಈ ಹಿಂದೆ ಉತ್ತರ ಕರ್ನಾಟಕದ ಬಹುಭಾಗವನ್ನು ದೇಸಾಯಿ ಮನೆತನಗಳೇ ಆಳ್ವಿಕೆ ನಡೆಸುತ್ತಿದ್ದವು. ಅದರಲ್ಲೂ ಸುತ್ತಮುತ್ತಲಿನ ಹಳ್ಳಿಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ದೇಸಾಯಿ ಮನೆತನವೇ ಊರಿನ ಕಾರುಬಾರು ಮಾಡುತ್ತಿತ್ತು. ಅಂತಹ ಮನೆತನಗಳು ಇಂದಿಗೂ ಇದ್ದು, ಅದರಲ್ಲಿ ಲೋಕಾಪುರ ದೇಸಾಯಿ ಮನೆತನವೂ ಒಂದಾಗಿದೆ. ಅವರು ನಿರ್ಮಿಸಿದ ನೂರಾರು ವರ್ಷಗಳ ಮನೆ ಈಗಲೂ ವಾಸಸ್ಥಳಕ್ಕೆ ಯೋಗ್ಯವಾಗಿವೆ. ನಮ್ಮ ಪೂರ್ವಿಕರು ಕಟ್ಟಿಸಿದ ಪುರಾತನ ಕಾಲದ ಮನೆ ಇದು. ಹಿಂದೆ ನಮ್ಮ ಹಿರಿಯರು ಹದಿನಾರು ಹಳ್ಳಿಗಳ ಉಸ್ತುವಾರಿಗಳಾಗಿದ್ದರು. ಎಲ್ಲ ಆಡಳಿತ ದಾಖಲಾತಿ ವ್ಯವಹಾರ ಕಚೇರಿ ಪ್ರಕಾರದ ಕೆಲಸಗಳು ಎಲ್ಲವೂ ಇದೇ ಮನೆಯಲ್ಲೇ ನಡೆಯುತ್ತಿದ್ದವು. ನಮ್ಮದು ದೇಸಗತಿ ಮನೆತನ, ಅವರು ಅಂದು ಕಟ್ಟಿಸಿದ ಮನೆ ಇಂದಿಗೂ ಇದ್ದು ಈಗಲೂ ವೈಭವ ಕಾಪಾಡಿಕೊಂಡಿದೆ. ಎಂಟು ತಲೆಮಾರುಗಳ ಮನೆ ಇದಾಗಿದ್ದು, ಇಂತಹ ಮನೆತನದಲ್ಲಿ ಹುಟ್ಟಿದ ಹೆಮ್ಮೆ ನಮಗಿದೆ. ಜೊತೆಗೆ ಇದನ್ನು ಉಳಿಸಿಕೊಂಡು ಹೋಗುವುದು ನಮಗೆ ಇರುವ ದೊಡ್ಡ ಜವಾಬ್ದಾರಿ ಎಂದು ದೇಸಾಯಿ ಮನೆತನದ ಸಿದ್ದರಾಮಪ್ಪ ದೇಸಾಯಿ ಹೆಮ್ಮೆ ವ್ಯಕ್ತಪಡಿಸುತ್ತಾರೆ.

ಈ ದೇಸಾಯಿಯವರ ಬೃಹತ್ ಮನೆ 17 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಅಂದಿನಿಂದ ಇಂದಿನವರೆಗೆ ಮನೆ ಎಲ್ಲಿಯೂ ತನ್ನ ಅಸ್ತಿತ್ವವನ್ನು ಕಳೆದುಕೊಂಡಿಲ್ಲ. ಅಲ್ಲದೆ ಆಗಿನ ಕಾಲದಲ್ಲಿ ಬಳಸುತ್ತಿದ್ದ ಸುಣ್ಣದ ಗಚ್ಚು, ಕಟ್ಟಿಗೆ, ಕಲ್ಲಿನಿಂದ ಈ ಮನೆ ನಿರ್ಮಾಣವಾಗಿದೆ. ಮನೆ ಮುಂದೆ ವಿಶಾಲವಾದ ಅಂಗಳವಿದ್ದು, ಕುದುರೆ ಲಾಯ, ಎತ್ತುಗಳನ್ನ ಕಟ್ಟಲು ದೊಡ್ಡದೊಡ್ಡ ಕೊಟ್ಟಿಗೆಗಳಿದ್ದವು. ಇನ್ನು ಒಳಾಂಗಣ ಪ್ರವೇಶ ಮಾಡುತ್ತಿದ್ದಂತೆಯೇ ವಿಶಾಲವಾದ (ಹಾಲ್) ಅಡುಗೆ ಮನೆ, ಕಾರುಬಾರು ಕೊಠಡಿ, ವಾಡೆಯ ಯಜಮಾನರು ಪರಿವಾರದವರು ಕೂರಲು ಕೋಣೆಗಳು ಸಹ ಇವೆ. ಇನ್ನು ದಾಖಲೆ ಪತ್ರಗಳನ್ನು ಇಡಲು ಕೊಠಡಿಗಳಿವೆ. ಈ ಎಲ್ಲವನ್ನು ಮುಂಭಾಗದ ದೊಡ್ಡ ಕಂಬಗಳು ಹೊತ್ತು ನಿಂತಿರುವುದು ಎಲ್ಲರ ಗಮನ ಸೆಳೆಯುತ್ತಿವೆ.

ಒಟ್ಟಾರೆ ಲೋಕಾಪುರ ದೇಸಗತಿ ದೇಸಾಯರ ವಾಡೆ ವಿಶೇಷತೆಗಳ ಕೇಂದ್ರದ ಜತೆಗೆ ಭಾವೈಕ್ಯತೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ದರ್ಬಾರ್ ಕೇಂದ್ರವಾಗಿತ್ತು. ಶಂಕರ್ ನಾಗ್ ಸಿನಿಮಾ ಚಿತ್ರೀಕರಿಸಿದ ಸ್ಥಳವಾಗಿತ್ತು ಎಂಬುದು ವಾಡೆಯ ಜನರಿಗೆ ಹೆಮ್ಮೆಯ ವಿಷಯ. ಸದ್ಯ ನೂರಾರು ವರ್ಷ ಕಳೆದರೂ ಇಂದಿಗೂ ಗತವೈಭವ ಕಾಪಾಡಿಕೊಂಡು ಬಂದಿದ್ದು ಎಲ್ಲರನ್ನು ಸೆಳೆಯುತ್ತಿದೆ.

ವಿಶೇಷ ವರದಿ: ರವಿ ಮೂಕಿ ಟಿವಿ9 ಬಾಗಲಕೋಟೆ

ಇದನ್ನೂ ಓದಿ: 

ಬಾಗಲಕೋಟೆ: ಹದಿನೆಂಟು ತಿಂಗಳ ಹೋರಿಗೆ 3.25 ಲಕ್ಷ ರೂಪಾಯಿ; ಕಿಲಾರಿ ತಳಿಯ ವಿಶೇಷತೆ ಏನು ಗೊತ್ತಾ?

ಬಾಗಲಕೋಟೆ: ಹಳೆ ವಿದ್ಯಾರ್ಥಿಗಳಿಂದ ಹೊಸ ರೂಪ ಪಡೆದ ಸರ್ಕಾರಿ ಶಾಲೆ; ಮಕ್ಕಳನ್ನು ಆಕರ್ಷಿಸುತ್ತಿದೆ ಸ್ಮಾರ್ಟ್​ ಕ್ಲಾಸ್​ ಪಾಠ

(Shankar Nag Jokumaraswamy film shooted in Bagalkot Mudhol Desai Wada home here is the special report)

ತಾಜಾ ಸುದ್ದಿ

Related Stories

Click on your DTH Provider to Add TV9 Kannada