ಬಾಗಲಕೋಟೆ: ಹದಿನೆಂಟು ತಿಂಗಳ ಹೋರಿಗೆ 3.25 ಲಕ್ಷ ರೂಪಾಯಿ; ಕಿಲಾರಿ ತಳಿಯ ವಿಶೇಷತೆ ಏನು ಗೊತ್ತಾ?
ಈ ಹೋರಿಗೆ ಇಷ್ಟು ಬೆಲೆ ಸಿಗಲು ಕಾರಣ. ಇದು ನೋಡುವುದಕ್ಕೆ ಸ್ಪುರದ್ರೂಪಿಯಾಗಿದೆ. ಇದರ ಎತ್ತರ ಮೈಮಾಟದಿಂದ ಯಾರೆ ನೋಡಿದರೂ ಅವರ ಗಮನ ಸೆಳೆಯುವಂತಹ ಕಿಲಾರಿ ಹೋರಿ ಇದಾಗಿದೆ. ಇದರಿಂದ ವಿವಿಧ ಕಡೆ ಜಾನುವಾರು ಪ್ರದರ್ಶನ ಇದ್ದಲ್ಲಿ ಇದನ್ನು ಕರೆದೊಯ್ಯುತ್ತಾರೆ.
ಬಾಗಲಕೋಟೆ: ಒಂದು ಹೋರಿ ಅಥವಾ ಎತ್ತಿಗೆ ಅಬ್ಬಬ್ಬಾ ಎಂದರೆ ಎಷ್ಟು ಬೆಲೆ ಇರಬಹುದು. 30 ರಿಂದ 50 ಸಾವಿರ. ಇನ್ನೂ ಹೆಚ್ಚೆಂದರೆ ಒಂದು ಜೋಡಿ ಎತ್ತಿಗೆ ಒಂದು ಲಕ್ಷ ರೂಪಾಯಿ ಬೆಲೆ ಇರೋದನ್ನು ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದರೆ ಇಲ್ಲೊಂದು ಹೋರಿಯ ಬೆಲೆ ಕೇಳಿದರೆ ಖಂಡಿತ ಆಶ್ಚರ್ಯ ಆಗುತ್ತದೆ. ಏಕೆಂದರೆ ಈ ಹೋರಿಯ ಬೆಲೆ ಬರೊಬ್ಬರಿ 3.25 ಲಕ್ಷ ರೂಪಾಯಿ. ಇಷ್ಟೊಂದು ಬೆಲೆಗೆ ಹೋರಿಯನ್ನು ಒಬ್ಬ ರೈತರು ಈಗಾಗಲೇ ಖರೀದಿ ಮಾಡಿದ್ದು, ಸದ್ಯ ಇದರ ಬೆಲೆ ಈಗ ಎಲ್ಲರಿಗೂ ಅಚ್ಚರಿಯುಂಟು ಮಾಡಿದೆ.
ಹೋರಿ ಯಾವ ತಳಿ ಯಾವುದು ? ಇಷ್ಟೊಂದು ದೊಡ್ಡ ಮೊತ್ತಕ್ಕೆ ಹೋರಿ ಮಾರಾಟವಾಗಿದ್ದು ಯಾಕೆ? ಯಾರದ್ದು? ಯಾವ ತಳಿಯ ಹೋರಿ ಎನ್ನುವುದು ಕೂಡ ಇಲ್ಲಿ ಬಹಳ ಮುಖ್ಯವಾಗುತ್ತದೆ. ಇದು ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ತೇರದಾಳ ಪಟ್ಟಣದ ನಾಲ್ಕನೇ ಕಿನಾಲ್ ತೋಟದ ವಸತಿ ಪ್ರದೇಶದ ರೈತರ ಹೋರಿ. ಭೀಮಪ್ಪ ಬರಡಗಿ ಎಂಬುವವರ ಹೋರಿ ಇದಾಗಿದ್ದು, ಕಿಲಾರಿ ಜಾತಿಗೆ ಸೇರಿದೆ. ದೇಶಿ ತಳಿ ಎಂದು ಕರೆಯುವ ಕಿಲಾರಿ ಹೋರಿಗೆ ಬಾರಿ ಬೇಡಿಕೆ ಇದೆ.
ನೋಡುವುದಕ್ಕೆ ಪೊಗರ್ದಸ್ತಾಗಿ ಮಾಂಸಖಂಡಗಳನ್ನು ತುಂಬಿಕೊಂಡ ಕಿಲಾರಿ ಹೋರಿ ತುಂಬಾ ಸುಂದರವಾಗಿ ಕಾಣುವ ಮೈಮಾಟ ಹೊಂದಿದ್ದು, ಎಲ್ಲರನ್ನೂ ಸೆಳೆಯುತ್ತದೆ. ಎತ್ತರದಲ್ಲೂ ಆರು ಅಡಿಯಷ್ಟಿದ್ದು ಓಡುವುದರಲ್ಲೂ ಎತ್ತಿದ ಕೈ. ತನ್ನ ಮೈಮಾಟದಿಂದ, ಅಂದ ಚೆಂದದಿಂದಲೇ ಕೇವಲ ಹದಿನೆಂಟು ತಿಂಗಳಲ್ಲಿ 3.25 ಲಕ್ಷ ರೂಪಾಯಿ ಬೆಲೆ ಪಡೆದುಕೊಂಡಿದೆ ಈ ಕಿಲಾರಿ ಹೋರಿ.
ಭೀಮಪ್ಪ ಬರಡಗಿ ಎಂಬುವರ ಈ ಹೋರಿಯನ್ನು ಸದ್ಯ ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಹಾರೂಗೇರಿ ಮೂಲದ ಆಶೋಕ ಕುರಿ ಎಂಬುವವರು ಖರೀದಿ ಮಾಡಿದ್ದಾರೆ. ಕೇವಲ ಹದಿನೆಂಟು ತಿಂಗಳ ಹೋರಿ ಇಷ್ಟೊಂದು ದೊಡ್ಡ ಬೆಲೆಗೆ ಮಾರಾಟವಾದ ಸುದ್ದಿ ಎಲ್ಲ ರೈತವಲಯದಲ್ಲಿ ಅಚ್ಚರಿ ಮೂಡಿಸಿರೋದಂತೂ ನಿಜ. ಭೀಮಪ್ಪ ಬರಡಗಿ ಓರ್ವ ರೈತರಾಗಿದ್ದು, ದಿನಾಲೂ ಕೃಷಿ ಕೆಲಸ ಮಾಡುತ್ತಾರೆ. ಆರು ತಿಂಗಳು ಇದ್ದಾಗ ಒಂದು ಲಕ್ಷಕ್ಕೆ ಈ ಹೋರಿ ಖರೀದಿಸಿದ್ದರು. ಈಗ ಹದಿನೆಂಟು ತಿಂಗಳಿಗೆ ಮೂರು 3.25 ಲಕ್ಷ ರೂ. ಮಾರಾಟ ಮಾಡಿದ್ದಾರೆ.
ಮೊದಲಿನಿಂದಲೂ ನನಗೆ ದನಕರುಗಳು ಅಂದರೆ ಪ್ರಾಣ ಕೃಷಿ ಜೊತೆಗೆ ಅವುಗಳನ್ನು ಬೆಳೆಸುವುದು ದಷ್ಟಪುಷ್ಟವಾಗಿ ತಯಾರು ಮಾಡುವುದು ಎಂದರೆ ಬಹಳ ಇಷ್ಟ. ಈ ಕಿಲಾರಿ ಹೋರಿಯನ್ನು ಅದೇ ರೀತಿ ತುಂಬಾನೆ ಹುಮ್ಮಸ್ಸಿನಿಂದ ಅದಕ್ಕೆ ಯಾವುದೇ ಆಹಾರ ಕಡಿಮೆಯಾಗದಂತೆ ತಿನ್ನಿಸಿ ಬೆಳೆಸಿದ್ದೇವೆ. ದಿನಾಲೂ ಮೈ ತೊಳೆಯುವುದು, ಅದರ ಆರೈಕೆ ಮಾಡುವುದು ಸಮಯಕ್ಕೆ ಸರಿಯಾಗಿ ಮೇವು , ಹಿಂಡಿ ಹಾಲು, ಮೊಟ್ಟೆ ಎಲ್ಲವನ್ನೂ ತಿನ್ನಿಸಿ ಬೆಳೆಸಿದ್ದೇವೆ. ಈಗ ನಮ್ಮ ಹೋರಿಗೆ ಇಷ್ಟೊಂದು ಬೆಲೆ ಸಿಕ್ಕಿದೆ. ಮಾರಾಟ ಮಾಡುವುದಕ್ಕೆ ಮನಸ್ಸಿರಲಿಲ್ಲ. ಸದ್ಯ ಹೋರಿಯನ್ನು ಖರೀದಿಸಿರುವವರು ಜಾನುವಾರುಗಳ ಬಗ್ಗೆ ಬಾರಿ ಪ್ರೀತಿ ಹೊಂದಿದ್ದಾರೆ. ಇನ್ನೂ ಚೆನ್ನಾಗಿ ನಮ್ಮ ಹೋರಿಯನ್ನು ಸಾಕುತ್ತಾರೆ ಎಂಬ ವಿಶ್ವಾಸವಿದೆ ಅದಕ್ಕೆ ಹೋರಿಯನ್ನು ಕೊಟ್ಟಿದ್ದೇವೆ ಎಂದು ಭೀಮಪ್ಪ ಬರಡಗಿ ಹೇಳಿದ್ದಾರೆ.
ಈ ಹೋರಿಗೆ ಇಷ್ಟು ಬೆಲೆ ಸಿಗಲು ಕಾರಣ. ಇದು ನೋಡುವುದಕ್ಕೆ ಸ್ಪುರದ್ರೂಪಿಯಾಗಿದೆ. ಇದರ ಎತ್ತರ ಮೈಮಾಟದಿಂದ ಯಾರೆ ನೋಡಿದರೂ ಅವರ ಗಮನ ಸೆಳೆಯುವಂತಹ ಕಿಲಾರಿ ಹೋರಿ ಇದಾಗಿದೆ. ಇದರಿಂದ ವಿವಿಧ ಕಡೆ ಜಾನುವಾರು ಪ್ರದರ್ಶನ ಇದ್ದಲ್ಲಿ ಇದನ್ನು ಕರೆದೊಯ್ಯುತ್ತಾರೆ. ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿದಂತೆ ಉತ್ತರಕರ್ನಾಟಕದ ವಿವಿಧ ಕಡೆ ಆಯೋಜಿಸಿದ್ದ ಜಾನುವಾರು ಪ್ರದರ್ಶನದಲ್ಲಿ ಇದು ಭಾಗಿಯಾಗಿ ಬಹುಮಾನ ದೋಚಿದ, ಎಲ್ಲರ ಗಮನ ಸೆಳೆದಿದೆ.
ಹೋರಿಯನ್ನು ಈ ರೀತಿ ಬೆಳೆಸುವುದಕ್ಕೆ ರೈತರ ಶ್ರಮ ಜೊತೆಗೆ ಹಣವೂ ಖರ್ಚಾಗುತ್ತದೆ. ಈ ಕಿಲಾರಿ ಹೋರಿ ಸಾಕುವುದಕ್ಕೆ ತಿಂಗಳಿಗೆ ಆರು ಸಾವಿರದಷ್ಟು ಹಣ ಬೇಕಾಗುತ್ತದೆ. ದಿನಾಲೂ ಇದಕ್ಕೆ ಎರಡು ಲೀಟರ್ ಹಾಲು,ಗೋದಿ ಹಿಟ್ಟು, ಮೈದಾ ಹಿಟ್ಟು, ಎರಡು ಹೊತ್ತು ಶೆಂಗಾ ಹಿಂಡಿ ತಿನ್ನಿಸಲಾಗುತ್ತದೆ. ಜೊತೆಗೆ ದಿನಾಲು ಹಸಿಮೇವು ,ಒಣಮೇವು ಇದ್ದದ್ದೆ. ಹೀಗೆ ಪ್ರತಿನಿತ್ಯ ಹೋರಿ ಆರೈಕೆ ಮಾಡಿದ ಪರಿಣಾಮ ಈಗ ಇಷ್ಟೊಂದು ಬೆಲೆ ಪಡೆಯುವಲ್ಲಿ ರೈತರು ಯಶಸ್ವಿಯಾಗಿದ್ದಾರೆ. ಒಟ್ಟಾರೆ ಹದಿನೆಂಟು ತಿಂಗಳ ಹೋರಿಯ ಬೆಲೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇಷ್ಟೇ ಅಲ್ಲದೆ ಹೋರಿಯನ್ನು ನೋಡುವುದಕ್ಕೆ ಅಂತಾ ಜನರು ರೈತರ ಮನೆ ಕಡೆ ದಾವಿಸುತ್ತಿದ್ದಾರೆ.
ವರದಿ: ರವಿ ಮೂಕಿ
ಇದನ್ನೂ ಓದಿ: ಧಾರವಾಡದ ಮೈಲಾರಿಗೆ ಗ್ರಾಮಸ್ಥರಿಂದ ಬೀಳ್ಕೊಡುಗೆ; ವಿಶೇಷ ಆಚರಣೆಗೆ ಸಾಕ್ಷಿಯಾದ ಹೋರಿ ನಿವೃತ್ತಿ
ಬಾಗಲಕೋಟೆ: ಚಾಂಪಿಯನ್ ಟಗರಿಗೆ ಬಂಗಾರದ ಬೆಲೆ; ಎಂಟು ಲಕ್ಷ ಕೊಡುತ್ತೇವೆ ಎಂದರೂ ಮಾರದ ಟಗರು ಮಾಲೀಕ
Published On - 10:51 am, Wed, 22 September 21