ಧಾರವಾಡದ ಮೈಲಾರಿಗೆ ಗ್ರಾಮಸ್ಥರಿಂದ ಬೀಳ್ಕೊಡುಗೆ; ವಿಶೇಷ ಆಚರಣೆಗೆ ಸಾಕ್ಷಿಯಾದ ಹೋರಿ ನಿವೃತ್ತಿ

ಧಾರವಾಡ ಜಿಲ್ಲೆಯ ಬೆಳ್ಳಿಗಟ್ಟಿ ಗ್ರಾಮದಲ್ಲಿನ ಮೈಲಾರಿ ನಿವೃತ್ತಿ ಪಡೆದ ಹೋರಿ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ರೈತರು ಬಗೆಬಗೆಯ ಸ್ಪರ್ಧೆಗಳನ್ನು ಆಯೋಜಿಸುತ್ತಾರೆ. ಬಿಡುವಿನ ಕಾಲದಲ್ಲಿ ರೈತರು ಕೊಂಚ ವಿಶ್ರಾಂತಿ ಪಡೆಯಲು ಅನೇಕ ಸ್ಪರ್ಧೆ, ಆಟಗಳನ್ನು ಆಯೋಜಿಸಲಾಗುತ್ತದೆ.

ಧಾರವಾಡದ ಮೈಲಾರಿಗೆ ಗ್ರಾಮಸ್ಥರಿಂದ ಬೀಳ್ಕೊಡುಗೆ; ವಿಶೇಷ ಆಚರಣೆಗೆ ಸಾಕ್ಷಿಯಾದ ಹೋರಿ ನಿವೃತ್ತಿ
ಮೈಲಾರಿ
Follow us
TV9 Web
| Updated By: preethi shettigar

Updated on:Aug 13, 2021 | 9:03 AM

ಧಾರವಾಡ: ಸಾಮಾನ್ಯವಾಗಿ ನೌಕರರಿಗೆ ನಿವೃತ್ತಿಯ ವಯಸ್ಸನ್ನು ನಿಗದಿಪಡಿಸಲಾಗಿರುತ್ತದೆ. ಆಟಗಾರರು ಕೂಡ ನಿಗದಿತ ಸಮಯಕ್ಕೆ ನಿವೃತ್ತಿಯಾಗುತ್ತಾರೆ. ಇನ್ನು ಕೆಲ ರಾಜಕಾರಣಿಗಳು ರಾಜಕೀಯದಿಂದ ನಿವೃತ್ತಿ ಪಡೆಯುತ್ತಾರೆ. ಆದರೆ ಧಾರವಾಡದಲ್ಲಿ ಹೋರಿಯೊಂದು ತನ್ನ ಹವ್ಯಾಸದಿಂದ ನಿವೃತ್ತಿಯಾಗಿದೆ. ಹೀಗೆ ನಿವೃತ್ತಿಯಾದ ದಿನದಂದು ಹೋರಿಯ ಮಾಲಿಕ ಹಾಗೂ ಗ್ರಾಮಸ್ಥರು ವಿಭಿನ್ನ ಬಗೆಯ ಗೌರವ ಅರ್ಪಣೆ ಮಾಡಿ ಬೀಳ್ಕೊಡುಗೆ ಸಮಾರಂಭ ನಡೆಸಿದ್ದಾರೆ. ಆ ಮೂಲಕ ಜಾನುವಾರುಗಳನ್ನು ಕೂಡ ಪ್ರೀತಿಯಿಂದ ಕಾಣಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಖಾಲಿ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ಮೈಲಾರಿ ಪ್ರಸಿದ್ಧಿ ಧಾರವಾಡ ಜಿಲ್ಲೆಯ ಬೆಳ್ಳಿಗಟ್ಟಿ ಗ್ರಾಮದಲ್ಲಿನ ಮೈಲಾರಿ ನಿವೃತ್ತಿ ಪಡೆದ ಹೋರಿ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ರೈತರು ಬಗೆಬಗೆಯ ಸ್ಪರ್ಧೆಗಳನ್ನು ಆಯೋಜಿಸುತ್ತಾರೆ. ಬಿಡುವಿನ ಕಾಲದಲ್ಲಿ ರೈತರು ಕೊಂಚ ವಿಶ್ರಾಂತಿ ಪಡೆಯಲು ಅನೇಕ ಸ್ಪರ್ಧೆ, ಆಟಗಳನ್ನು ಆಯೋಜಿಸಲಾಗುತ್ತದೆ. ಟಗರು ಕಾಳಗ, ಕರಾವಳಿ ಪ್ರದೇಶದಲ್ಲಿ ಕಂಬಳ ಪ್ರಸಿದ್ಧಿ. ಇಂಥ ಸ್ಪರ್ಧೆಗಳ ಪೈಕಿ ಧಾರವಾಡದಲ್ಲಿ ಪ್ರಸಿದ್ಧಿ ಹಾಗೂ ಜನಪ್ರಿಯವಾಗಿದ್ದು ಖಾಲಿ ಗಾಡಾ ಓಟದ ಸ್ಪರ್ಧೆ. ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಜಾತ್ರೆ ಇದ್ದರೂ ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ರೈತರು ಕೂಡ ತಮ್ಮ ತಮ್ಮ ಹೋರಿ ಸಾಮರ್ಥ್ಯವನ್ನು ತೋರಿಸಲು ಇಂಥ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಇಂಥ ಸ್ಪರ್ಧೆಗಳಲ್ಲಿ ಅನೇಕ ಬಾರಿ ಎಲ್ಲರ ಗಮನ ಸೆಳೆದಿದ್ದೇ ಈ ಮೈಲಾರಿ.

ಒಂದೂವರೆ ವರ್ಷದ ಹೋರಿ ಧಾರವಾಡ ತಾಲೂಕಿನ ಬೆಳ್ಳಿಗಟ್ಟಿ ಗ್ರಾಮದ ಬಸಪ್ಪ ತೇಗೂರು ಎನ್ನುವ ರೈತ ಹಾವೇರಿ ಜಿಲ್ಲೆಯಿಂದ 22 ವರ್ಷದ ಹಿಂದೆ ಒಂದೂವರೆ ವರ್ಷದ ಹೋರಿಯೊಂದನ್ನು ತಂದಿದ್ದರು. ಆಗ ಈ ಹೋರಿಗೆ 11 ಸಾವಿರ ರೂಪಾಯಿ ನೀಡಿ ಖರೀದಿಸಿದ್ದರು. ಪ್ರೀತಿಯಿಂದ ಈ ಹೋರಿಗೆ ಮೈಲಾರಿ ಎಂದು ಹೆಸರನ್ನು ಇಟ್ಟರು. ಕೃಷಿ ಚಟುವಟಿಕೆಗೆ ಅವಶ್ಯಕ ಅಂತಾ ಹೋರಿಯನ್ನು ತಂದಿದ್ದ ಬಸಪ್ಪ ಅವರಿಗೆ ದಿನಗಳೆದಂತೆ ಈ ಹೋರಿ ಸಾಮಾನ್ಯವಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಏಕೆಂದರೆ ಒಂದೆರಡು ವರ್ಷಗಳಲ್ಲಿಯೇ ಹೋರಿ ಕೃಷಿ ಚಟುವಟಿಕೆಗೆ ಹೊಂದಿಕೊಂಡು ಬಿಟ್ಟಿತು. ಅಲ್ಲದೇ ಎಷ್ಟೇ ಕೆಲಸ ಮಾಡಿಸಿದರೂ ಆಯಾಸವೇ ಆಗುತ್ತಿರಲಿಲ್ಲ. ಇದನ್ನು ಗಮನಿಸಿದ ಬಸಪ್ಪ ತೇಗೂರು, ಈ ಎತ್ತಿಗೆ ನಿಧಾನವಾಗಿ ಬೇರೆ ತರಬೇತಿಯನ್ನು ಕೂಡ ನೀಡತೊಡಗಿದರು. ಓಡಲು ನಿಂತರೆ ಅಷ್ಟು ಸುಲಭವಾಗಿ ಯಾರ ಕೈಗೂ ಸಿಗುತ್ತಿರಲಿಲ್ಲ. ಇದನ್ನು ಗಮನಿಸಿದ ಬಸಪ್ಪ ತೇಗೂರು, ಈ ಮೈಲಾರಿಯನ್ನು ಖಾಲಿ ಗಾಡಾ ಓಟದ ಸ್ಪರ್ಧೆಗೆ ಬಳಸಿಕೊಳ್ಳಲು ನಿರ್ಧರಿಸಿದರು.

ಕಣಕ್ಕೆ ಇಳಿದ ಮೊದಲನೇ ಸ್ಪರ್ಧೆಯಲ್ಲಿಯೇ ಬಹುಮಾನ ಮೈಲಾರಿ ಸುಮಾರು ಐದು ವರ್ಷ ತುಂಬಿದಾಗ ಸ್ಥಳೀಯ ಜಾತ್ರೆಗಳಲ್ಲಿ ನಡೆದ ಖಾಲಿ ಗಾಡಾ ಓಟದ ಸ್ಪರ್ಧೆಯಲ್ಲಿ ಕಣಕ್ಕೆ ಇಳಿಸಲಾಯಿತು. ಮೊದಲನೇ ಸ್ಪರ್ಧೆಯಲ್ಲಿಯೇ ಮೈಲಾರಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಅದಾಗಲೇ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ, ಹಲವಾರು ಬಾರಿ ಗೆದ್ದಿದ್ದ ಹೋರಿಗಳಿಗೆ ಮೈಲಾರಿ ಟಕ್ಕರ್ ನೀಡಿತ್ತು. ಯಾವಾಗ ಮೈಲಾರಿ ಓಟದಲ್ಲಿ ನಿಸ್ಸೀಮ ಎನ್ನುವುದು ಗೊತ್ತಾಯಿತೋ ಆಗ ಬಸಪ್ಪ ಹೆಚ್ಚು ಹೆಚ್ಚು ಆ ಕಡೆಗೆ ಗಮನ ಹರಿಸಲು ಶುರು ಮಾಡಿದರು. ಕೃಷಿ ಚಟುವಟಿಕೆ ಇಲ್ಲದೇ ಇದ್ದಾಗ ಮೈಲಾರಿಗೆ ಓಟದ ತರಬೇತಿ ನೀಡಲಾರಂಭಿಸಿದರು. ಉಳಿದ ಹೋರಿಗಳಿಗಿಂತ ಮೈಲಾರಿ ಬೇಗ ಬೇಗನೇ ಈ ಸ್ಪರ್ಧೆಯಲ್ಲಿ ಪಳಗಿತು.

ಆರಂಭದಲ್ಲಿ ಟಿವಿ, ಅಲಮಾರಿ, ಹಂಡೆಗಳನ್ನು ಗೆದ್ದ ಮೈಲಾರಿ ಸಾಮಾನ್ಯವಾಗಿ ಜಾತ್ರೆಗಳಲ್ಲಿ ಆಯೋಜಿಸುವ ಸ್ಪರ್ಧೆಗಳಲ್ಲಿ ಬಹುಮಾನವಾಗಿ ಜನರಿಗೆ ಉಪಯೋಗವಾಗುವ ವಸ್ತುಗಳನ್ನು ನೀಡಲಾಗುತ್ತದೆ. ಅದರಲ್ಲೂ ಟಿವಿ, ಅಲಮಾರಿಗಳನ್ನು ಕೊಡೋದೇ ಹೆಚ್ಚು. ಇದರೊಂದಿಗೆ ಬಳಿಕ ರೇಡಿಯೋ, ಟಿವಿಗಳು ಕೂಡ ಸೇರಿಕೊಂಡವು. ಈ ಭಾಗದ ಯಾವುದೇ ಜಾತ್ರೆ ಇದ್ದರೂ, ಅಲ್ಲಿ ನಡೆಯುವ ಖಾಲಿ ಗಾಡಾ ಓಟದ ಸ್ಪರ್ಧೆಗೆ ಮೈಲಾರಿಯನ್ನು ಬಸಪ್ಪ ಕರೆದೊಯ್ದುಬಿಡುತ್ತಿದ್ದರು. ಮೈಲಾರಿ ಬಂದರೆ ಸಾಕು, ಉಳಿದ ರೈತರು ದ್ವಿತೀಯ ಬಹುಮಾನಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ ಎನ್ನುವಷ್ಟರಮಟ್ಟಿಗೆ ಮೈಲಾರಿ ಪ್ರಸಿದ್ಧಿಯಾಯಿತು. ಮೈಲಾರಿ ಇಂಥ ಸ್ಪರ್ಧೆಗಳಲ್ಲಿ ಭಾಗವಹಿಸಿ ಟಿವಿ, ಅಲಮಾರಿ, ದೊಡ್ಡ ಹಂಡೆಗಳನ್ನು ಗೆದ್ದು ಕೊಟ್ಟಿತು. ಸ್ಪರ್ಧೆಗಳಲ್ಲಿ ಗೆಲ್ಲುವುದು ಹೆಚ್ಚುತ್ತಾ ಹೋದಂತೆ ಬಸಪ್ಪ ಅವರಿಗೆ ಮೈಲಾರಿ ಮೇಲೆ ಪ್ರೀತಿಯೂ ಹೆಚ್ಚಾಗುತ್ತಾ ಹೋಯಿತು. ಅದರೊಂದಿಗೆ ಮೈಲಾರಿಯನ್ನು ಮತ್ತಷ್ಟು ಸದೃಢ ಮಾಡುವ ಜವಾಬ್ದಾರಿಯೂ ಹೆಚ್ಚುತ್ತಾ ಸಾಗಿತು.

ಒಟ್ಟು 36 ತೊಲೆ ಚಿನ್ನ ಗೆದ್ದಿರೋ ಮೈಲಾರಿ ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಜಾತ್ರೆಗಳಲ್ಲಿ ನಗದು ಬಹುಮಾನವನ್ನು ಇಡಲಾಗಿದೆ. ದೊಡ್ಡ ಪ್ರಮಾಣದ ಮೊತ್ತವನ್ನು ಇಡಲಾಗುತ್ತಿದೆ. ಇಂಥ ಸ್ಪರ್ಧೆಗೆ ಸಾಕಷ್ಟು ಜನ ದಾನಿಗಳು ಹಣವನ್ನು ನೀಡಲು ಮುಂದೆ ಬರುತ್ತಿರುವುದೇ ಇದಕ್ಕೆ ಕಾರಣ. ಕೆಲವು ಕಡೆಗಳಲ್ಲಿ ಚಿನ್ನವನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಮೈಲಾರಿ ಇಂಥ ಹಲವಾರು ಬಹುಮಾನವನ್ನು ಗೆದ್ದಿದೆ. ಇದುವರೆಗೂ ಮೈಲಾರಿ ಗೆದ್ದಿರುವ ಚಿನ್ನದ ಪ್ರಮಾಣ 36 ತೊಲೆ. ಅಂದರೆ ಬರೋಬ್ಬರಿ 360 ಗ್ರಾಂ ಚಿನ್ನ. ಇದರಲ್ಲಿ ಬಸಪ್ಪ ಅವರಿಗೆ 180 ಗ್ರಾಂ ಚಿನ್ನ ಸಿಕ್ಕಿದೆ. ಉಳಿದ ಚಿನ್ನ ಗಾಡಿಯ ಮಾಲಿಕರಿಗೆ ಸಿಕ್ಕಿದೆ. ಸಾಮಾನ್ಯವಾಗಿ ಖಾಲಿ ಗಾಡಾ ಓಟದ ಸ್ಪರ್ಧೆಗೆ ವಿಶೇಷವಾದ ಚಕ್ಕಡಿಯನ್ನು ಬಳಸಲಾಗುತ್ತದೆ. ಈ ಚಕ್ಕಡಿಯನ್ನು ಚೆನ್ನಾಗಿ ನಿರ್ವಹಣೆ ಮಾಡುವ ಜರೂರತ್ತು ಕೂಡ ಇರುತ್ತದೆ. ಹೀಗಾಗಿ ಬಸಪ್ಪ ಅವರು ತಮ್ಮ ಸ್ನೇಹಿತರ ಚಕ್ಕಡಿಗೆ ಮೈಲಾರಿಯನ್ನು ಬಳಸಿ, ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡುತ್ತಿದ್ದರು ಗೆದ್ದ ಬಹುಮಾನದಲ್ಲಿ ಚಕ್ಕಡಿ ಮಾಲಿಕರಿಗೆ ಅರ್ಧ, ಎತ್ತಿನ ಮಾಲಿಕರಿಗೆ ಅರ್ಧ ಸಿಗುತ್ತಿತ್ತು.

ಸುಮಾರು 20 ವರ್ಷಗಳ ಕಾಲ ಕೃಷಿ ಕೆಲಸದಲ್ಲಿ ತೊಡಗಿಕೊಂಡಿರುವ ಮೈಲಾರಿ ಸ್ಪರ್ಧೆಗೂ ಸೈ, ಕೃಷಿ ಚಟುವಟಿಕೆಗೂ ಜೈ ಎನ್ನುವಂತಿದೆ. ಹೀಗಾಗಿ ಮನೆಯವರ ಪ್ರೀತಿಯನ್ನು ಗಳಿಸಿರುವ ಮೈಲಾರಿಗೆ ಪ್ರತಿವರ್ಷ ಹುಟ್ಟಿದ ಹಬ್ಬ ಆಚರಿಸಿಕೊಳ್ಳುವ ಅದೃಷ್ಟವಿದೆ. ಬಸಪ್ಪ ಮೈಲಾರಿಯನ್ನು ಖರೀದಿಸಿದ ತಂದಿದ್ದ ದಿನವನ್ನೇ ಹುಟ್ಟಿದ ಹಬ್ಬ ಎಂದು ಆಚರಿಸುತ್ತಾರೆ. ಆರು ವರ್ಷಗಳ ಹಿಂದೆ ಬಸಪ್ಪ ಮೃತಪಟ್ಟರು. ಅವರು ನಿಧನದ ಬಳಿಕವೂ ಅವರ ಮಗ ಕಲ್ಲಪ್ಪ ತೇಗೂರು ಮೈಲಾರಿಯ ಹುಟ್ಟಿದ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ. ಇದೀಗ ಮೈಲಾರಿಗೆ 24 ವರ್ಷ ವಯಸ್ಸು. ಮನೆಯ ಮಗನಂತೆಯೇ ಕಾಣುವ ಮೈಲಾರಿಗೆ ಇದೀಗ ನಿವೃತ್ತಿ ನೀಡಲು ಬಸಪ್ಪ ಯೋಚಿಸಿ, ಹುಟ್ಟಿದ ಹಬ್ಬದ ದಿನವೇ ಮೈಲಾರಿಗೆ ನಿವೃತ್ತಿ ಘೋಷಿಸಿದ್ದಾರೆ.

ಇನ್ನು ಮುಂದೆ ಮೈಲಾರಿ ಮನೆಯಲ್ಲಿಯೇ ಇರುತ್ತದೆ. ಯಾವುದೇ ಕಾರಣಕ್ಕೂ ಮೈಲಾರಿಗೆ ಯಾವುದೇ ಕೆಲಸವನ್ನು ನೀಡುವಂತಿಲ್ಲ. ಇಷ್ಟು ದಿನ ದುಡಿದ ಮೈಲಾರಿ ಇನ್ನು ಮುಂದೆ ನಿವೃತ್ತ ಹೋರಿ. ಹೀಗಾಗಿ ನಿವೃತ್ತಿಯ ದಿನವನ್ನು ಕೂಡ ಅದ್ಧೂರಿಯಾಗಿಯೇ ಆಚರಿಸಿದ ಬಸಪ್ಪ, ಮೈಲಾರಿಯನ್ನು ಶೃಂಗರಿಸಿ, ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಿದ್ದಾರೆ. ಬಳಿಕ ದೊಡ್ಡದೊಂದು ಕೇಕ್ ತಂದು ಕತ್ತರಿಸಿ ಬಸಪ್ಪ ಅವರ ಕುಟುಂಬ ಖುಷಿ ಪಟ್ಟಿತು. ಈ ಕ್ಷಣಕ್ಕೆ ಇಡೀ ಗ್ರಾಮದ ಜನರು ಸಾಕ್ಷಿಯಾದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರೆಲ್ಲಾ ಮೈಲಾರಿಯ ನಿವೃತ್ತಿ ಜೀವನ ಸುಖಕರವಾಗಲೆಂದು ಹಾರೈಸಿ ಹೋದರು.

ಒಂದೂವರೆ ವರ್ಷದ ಹೋರಿಯನ್ನು 11 ಸಾವಿರ ರೂಪಾಯಿಗೆ ಖರೀದಿಸಿ ತಂದ ಬಳಿಕವೇ ತಮ್ಮ ಮನೆಗೆ ಶುಕ್ರದೆಸೆ ಆರಂಭವಾಯಿತು. ನಮ್ಮ ತಂದೆ ಬಸಪ್ಪ ಅವರಿಗೆ 15 ಎಕರೆ ಜಮೀನು ಇದ್ದರೂ ಒಂದು ಹೊತ್ತು ಊಟಕ್ಕಾಗಿ ಪರದಾಡುವಂಥ ಸ್ಥಿತಿ ಇತ್ತು. ಯಾವಾಗ ಮೈಲಾರಿ ಮನೆಗೆ ಬಂತೋ ಅಂದಿನಿಂದ ಕುಟುಂಬದ ಸಮಸ್ಯೆಗಳು ಒಂದೊಂದೇ ಕರಗುತ್ತಾ ಹೋದವು ಎಂದು ಬಸಪ್ಪ ಅವರ ಮಗ ಕಲ್ಲಪ್ಪ ಹೇಳಿದ್ದಾರೆ.

ಇದೀಗ ಹದಿನೈದು ಎಕರೆ ನೀರಾವರಿ ಜಮೀನಿನಲ್ಲಿ ಸಾಕಷ್ಟು ಸಂಪಾದನೆ ಮಾಡುತ್ತಿದ್ದೇವೆ. ನಮ್ಮ ಕಷ್ಟದ ದಿನಗಳನ್ನು ಹೋಗಲಾಡಿಸಿದ ಮೈಲಾರಿಗೆ ಇದೀಗ ನಿವೃತ್ತಿ ಜೀವನವನ್ನು ನೀಡುತ್ತಿದ್ದೇವೆ. ಸಾಮಾನ್ಯವಾಗಿ ಎತ್ತುಗಳಿಗೆ ದುಡಿಯಲು ಸಾಧ್ಯವಾಗದೇ ಇದ್ದಾಗ ಅವುಗಳನ್ನು ಕಸಾಯಿಖಾನೆಗೆ ನೀಡುವವರೇ ಹೆಚ್ಚು. ಆದರೆ ತಮ್ಮ ಮನೆಯಲ್ಲಿ ಇಷ್ಟು ದಿನ ದುಡಿದ ಹೋರಿಯನ್ನು ಅದರ ಕೊನೆಯ ದಿನಗಳಲ್ಲಿ ಪ್ರೀತಿಯಿಂದ ಕಾಣಬೇಕು. ಅವು ತಮ್ಮ ಕೊನೆಯ ದಿನಗಳನ್ನು ನೆಮ್ಮದಿಯಿಂದ ಕಾಣುವಂಥ ವಾತಾವರಣವನ್ನು ಸೃಷ್ಟಿಸಬೇಕು. ಅಂದಾಗ ಮಾತ್ರ ನಾವು ಜಾನುವಾರುಗಳಿಗೆ ಗೌರವ ನೀಡಿದಂತಾಗುತ್ತದೆ ಎಂದು ಕಲ್ಲಪ್ಪ ತೇಗೂರು ಅಭಿಪ್ರಾಯಪಟ್ಟಿದ್ದಾರೆ.

ವರದಿ: ನರಸಿಂಹಮೂರ್ತಿ ಪ್ಯಾಟಿ

ಇದನ್ನೂ ಓದಿ: ಹೋರಿ ಪುಣ್ಯತಿಥಿ; ಒಂದು ವರ್ಷದ ಹಿಂದೆ ತೀರಿಕೊಂಡ ಹೋರಿಯನ್ನು ನೆನೆದು ಕಣ್ಣೀರಿಟ್ಟ ಕುಟುಂಬಸ್ಥರು

ಹಾವೇರಿ ಹೋರಿ ಅಭಿಮಾನಿಯ ಚಿತ್ರ ಚಮತ್ಕಾರ: ಗ್ರಾಮದ ಗೋಡೆಗಳ ಮೇಲೆ ಹೋರಿ ಚಿತ್ರಗಳ ಮೆರವಣಿಗೆ!

Published On - 9:03 am, Fri, 13 August 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್