ಬಾಗಲಕೋಟೆ: ಹಳೆ ವಿದ್ಯಾರ್ಥಿಗಳಿಂದ ಹೊಸ ರೂಪ ಪಡೆದ ಸರ್ಕಾರಿ ಶಾಲೆ; ಮಕ್ಕಳನ್ನು ಆಕರ್ಷಿಸುತ್ತಿದೆ ಸ್ಮಾರ್ಟ್ ಕ್ಲಾಸ್ ಪಾಠ
ಅಮೀನಗಡ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸದ್ಯ 189 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಇಲ್ಲಿ ದೊರೆಯುತ್ತದೆ. ಆದರೆ ಸ್ಮಾರ್ಟ್ ಕ್ಲಾಸ್ ಇಲ್ಲಿ ಇದ್ದಿರಲಿಲ್ಲ. ಇದನ್ನರಿತ 1996-97 ನೇ ಸಾಲಿನ ವಿದ್ಯಾರ್ಥಿಗಳು ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಸ್ಮಾರ್ಟ್ ಕ್ಲಾಸ್ ಆರಂಭವಾಗುವಂತೆ ಮಾಡಿದ್ದಾರೆ.
ಬಾಗಲಕೋಟೆ: ಸರಕಾರಿ ಶಾಲೆಗಳು ಅಂದರೆ ಜನರು ನೋಡುವ ದೃಷ್ಟಿಕೋನವೇ ಬೇರೆ. ಇದಕ್ಕೆ ಕಾರಣ ಇತ್ತೀಚೆಗೆ ಖಾಸಗಿ ಶಾಲೆಗಳ ಕಡೆಗಿನ ಒಲವು ಹೆಚ್ಚಾಗಿದೆ. ಆದರೂ ಕೆಲವೊಂದು ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿ ಇರುತ್ತವೆ. ಅಂತಹ ಶಾಲೆಗಳ ಪಟ್ಟಿಯಲ್ಲಿ ಇಲ್ಲೊಂದು ಶಾಲೆ ಕೂಡ ಸೇರ್ಪಡೆಯಾಗಿದೆ. ತಾವು ಕಲಿತ ಶಾಲೆ ಎನ್ನುವ ಅಭಿಮಾನದಿಂದ ಮಾಡಿದ ಕಾರ್ಯದಿಂದ ಈ ಶಾಲೆ ಓದುವ ಹಂಬಲವಿರುವ ಮಕ್ಕಳನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಅಮೀನಗಡ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ಅಭಿವೃದ್ಧಿಯತ್ತ ಸಾಗುತ್ತಿದೆ. ಒಂದು ಕ್ಷಣ ನೋಡಿದರೆ ಸಾಕು ಶಾಲೆಯನ್ನು ಮತ್ತೆ ಮತ್ತೆ ನೋಡಬೇಕೆನ್ನಿಸುವ ಸೌಂದರ್ಯ ಕಣ್ಮನ ಸೆಳೆಯುತ್ತದೆ. ಶಾಲೆ ಕಪೌಂಡ್ಗೆ ಲೇಪಿಸಿದ ಬಣ್ಣ, ಬರೆದ ಬರಹಗಳು, ಚಿತ್ರಗಳು ಆಕರ್ಷಿಸುತ್ತವೆ. ಜೊತೆಗೆ ಶಾಲೆಯ ಕಟ್ಟಡಗಳು ಬಣ್ಣದಿಂದ ಕಂಗೊಳಿಸುತ್ತಿವೆ. ಹಾಗಂತ ಈ ಶಾಲೆಗೆ ಸರಕಾರದಿಂದ ವಿಶೇಷ ಅನುದಾನ ಬಂದಿಲ್ಲ.ಇಷ್ಟೆಲ್ಲ ಅಭಿವೃದ್ಧಿ, ಅಂದ ಚೆಂದಕ್ಕೆ ಕಾರಣ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು.
ತಾವು ಕಲಿತ ಶಾಲೆ ಮೊದಲು ಬಹಳ ಅಧೋಗತಿಗೆ ತಲುಪಿತ್ತು. ಜನರು ಮನಬಂದಂತೆ ವರ್ತಿಸಿ ಶಾಲೆಯ ಪರಿಸರ ಹಾಳು ಮಾಡಿದ್ದರು. ಇದರಿಂದ ಶಾಲೆಯ ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆ ಎಂಬ ಅಭಿಮಾನದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸರಕಾರಿ ಶಾಲೆ ಎಲ್ಲರನ್ನು ಸೆಳೆಯುವಂತೆ ಮಾಡಿದ್ದೇವೆ ಎಂದು ಹಳೆಯ ವಿದ್ಯಾರ್ಥಿ ಯಮನೂರ ತಿಳಿಸಿದ್ದಾರೆ.
ಅಮೀನಗಡ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸದ್ಯ 189 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಇಲ್ಲಿ ದೊರೆಯುತ್ತದೆ. ಆದರೆ ಸ್ಮಾರ್ಟ್ ಕ್ಲಾಸ್ ಇಲ್ಲಿ ಇದ್ದಿರಲಿಲ್ಲ. ಇದನ್ನರಿತ 1996-97 ನೇ ಸಾಲಿನ ವಿದ್ಯಾರ್ಥಿಗಳು ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಸ್ಮಾರ್ಟ್ ಕ್ಲಾಸ್ ಆರಂಭವಾಗುವಂತೆ ಮಾಡಿದ್ದಾರೆ. ಮಕ್ಕಳಿಗೆ ಎಲ್ಇಡಿ ಕೊಡಿಸಿ ಅದರ ಮೂಲಕ ಚಿತ್ರಸಹಿತ ಪಾಠ ಮಾಡೋದಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.ಇದರಿಂದ ದಿನಾಲೂ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ಗಳು ಇಲ್ಲಿ ನಡೆಯುತ್ತವೆ.
ಇನ್ನು ಶಾಲೆ ಹಾಗೂ ಶಾಲೆ ಕೊಠಡಿಗಳಿಗೆ ಬಣ್ಣ ಬಳಿಯಲು ಕೂಡ ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದೆ. ಇದನ್ನು ಕೂಡ ಹಳೆಯ ವಿದ್ಯಾರ್ಥಿಗಳು ಹಳೆಯ ವಿದ್ಯಾರ್ಥಿಗಳನ್ನೊಳಗೊಂಡ ಸಂದೇಶ ಸೇವಾ ಸಂಸ್ಥೆ ಹಾಗೂ ಇನ್ನಿತರ ಹಳೆಯ ವಿದ್ಯಾರ್ಥಿಗಳು ಬಣ್ಣ ಹಚ್ಚಿ ತಮ್ಮ ಶಾಲೆ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದಾರೆ. ಯಾವುದೇ ಸರಕಾರಿ ಅನುದಾನಕ್ಕಾಗಿ ಕಾಯದೆ ವಿದ್ಯಾರ್ಥಿಗಳ ಸಹಕಾರದಿಂದ ಈ ಶಾಲೆ ಇಂದು ಎಲ್ಲರನ್ನು ಸೆಳೆಯುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಶಾಲೆಯ ಎಲ್ಲಾ ಶಿಕ್ಷಕರು ಕೂಡ ತಲಾ ಐದು ಸಾವಿರ ರೂಪಾಯಿ ಸೇರಿಸಿ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದಾರೆ. ಹಳೆಯ ವಿದ್ಯಾರ್ಥಿಗಳ ಕಾರ್ಯಕ್ಕೆ ಶಿಕ್ಷಕವೃಂದ ಹರ್ಷ ವ್ಯಕ್ತ ಪಡಿಸುತ್ತಿದೆ. ಎಲ್ಲರೂ ತಮ್ಮ ತಮ್ಮ ಶಾಲೆ ಮೇಲಿನ ಅಭಿಮಾನದಿಂದ ಈ ರೀತಿ ಸಹಾಯ ಹಸ್ತ ಚಾಚಿದರೆ ಯಾವುದೇ ಸರಕಾರಿ ಶಾಲೆ ಖಾಸಗಿ ಶಾಲೆಗಳಿಗಿಂತ ಕಮ್ಮಿ ಇರುವುದಿಲ್ಲ.ಇವರ ಕಾರ್ಯ ಎಲ್ಲರಿಗೂ ಮಾದರಿ ಎಂದು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಅಮೀನಗಡದ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.
ಒಟ್ಟಾರೆ ಸರಕಾರಿ ಶಾಲೆಯೊಂದು ಹಳೆ ವಿದ್ಯಾರ್ಥಿಗಳ ಅಭಿಮಾನದಿಂದ ಹೈಟೆಕ್ ಆಗಿದೆ. ಅಭಿಮಾನ ಎನ್ನುವುದು ಒಂದಿದ್ದರೆ ಏನೆಲ್ಲ ಬದಲಾವಣೆ ಆಗಬಹುದು ಎಂಬುವುದಕ್ಕೆ ಈ ಶಾಲೆ ಸಾಕ್ಷಿಯಾಗಿದೆ.
ವರದಿ: ರವಿ ಮೂಕಿ
ಇದನ್ನೂ ಓದಿ: ಆದಿವಾಸಿ ಮಕ್ಕಳ ಕಲಿಕೆಗಾಗಿ ಮೈಸೂರಿನ 6 ಹಾಡಿಗಳಲ್ಲಿ ಚಿಗುರು ಶಾಲೆ ಆರಂಭ