ದರ ನಿಗದಿಯಲ್ಲಿ ಕಾರ್ಖಾನೆ ಮಾಲೀಕರು, ರೈತರ ಮಧ್ಯೆ ಶೀತಲ ಸಮರ; ಮತ್ತೆ ಶುರುವಾಗುತ್ತಾ ಕಬ್ಬು ಹೋರಾಟ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 03, 2023 | 4:11 PM

ಕಬ್ಬು ಹಂಗಾಮು ಶುರುವಾಗಿದ್ದು, ರೈತರು ಕಾರ್ಖಾನೆಗಳಿಗೆ ಕಬ್ಬು ಕಳಿಸುತ್ತಿದ್ದಾರೆ. ಅದರಂತೆ ಕಾರ್ಖಾನೆಗಳು ಕಬ್ಬಿಗೆ ದರ ನಿಗದಿ ಮಾಡಿಯೂ ಆಗಿದೆ. ಆದರೆ, ಕಬ್ಬು ಬೆಳೆಗಾರರು ಮಾತ್ರ ಕಬ್ಬಿಗೆ ಪ್ರತಿ ಟನ್​ಗೆ 3500 ರೂಪಾಯಿ ನೀಡಲೇಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದಕ್ಕಾಗಿ ಬೆಳಗಾವಿ ಅಧಿವೇಶನ ಚಲೋ ಹೊರಡಲು ರೈತರು ಮುಂದಾಗಿದ್ದಾರೆ. 

ದರ ನಿಗದಿಯಲ್ಲಿ ಕಾರ್ಖಾನೆ ಮಾಲೀಕರು, ರೈತರ ಮಧ್ಯೆ ಶೀತಲ ಸಮರ; ಮತ್ತೆ ಶುರುವಾಗುತ್ತಾ ಕಬ್ಬು ಹೋರಾಟ?
ಕಬ್ಬಿಗೆ ದರ ನಿಗದಿ ಮಾಡುವಂತೆ ರೈತರ ಹೋರಾಟ
Follow us on

ಬಾಗಲಕೋಟೆ, ಡಿ.03: ಬಾಗಲಕೋಟೆಯು ಕಬ್ಬು(Sugar Cane) ಬೆಳೆಯುವುದಕ್ಕೆ ಹೆಸರಾದ ಜಿಲ್ಲೆ. ಅದರಂತೆ ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ಬಾಗಲಕೋಟೆ(Bagalakote) ಡಿಸಿ ಕಚೇರಿಯಲ್ಲಿ ಕೆಲ ದಿನಗಳ ಹಿಂದೆ ‌ನಡೆದ ಸಭೆ ಕೂಡ ವಿಫಲವಾಗಿದೆ. ಆದರೆ, ಕಾರ್ಖಾನೆ ಮಾಲೀಕರು ಎಫ್ ಆರ್ ಪಿ ಪ್ರಕಾರ ದರ ನಿಗದಿ ಮಾಡಿ, ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂ ನಿಗದಿ ಮಾಡಿವೆ. ಈಗಾಗಲೇ ಕಬ್ಬು ನುರಿಸುತ್ತಿರುವ ಕಾರ್ಖಾನೆಗಳು 1 ಲಕ್ಷ 75 ಸಾವಿರ ಟನ್​ವರೆಗೆ ಕಬ್ಬು ನುರಿಸಿವೆ. ಕಬ್ಬು ನುರಿಸಿದ ಒಂದು ತಿಂಗಳ ಒಳಗಾಗಿ ರೈತರ ಅಕೌಂಟ್​ಗೆ ದುಡ್ಡು ಹಾಕುವ ಭರವಸೆ ನೀಡಿವೆ. ಆದ್ರೆ, ಕಬ್ಬು ಕಾರ್ಖಾನೆ ಮಾಲೀಕರ ದರ ನಿಗದಿಗೆ ಬಾಗಲಕೋಟೆ ಜಿಲ್ಲೆಯ ರೈತರು ಸುತಾರಾಂ ಒಪ್ಪುತ್ತಿಲ್ಲ.

ಕಬ್ಬಿಗೆ ಕನಿಷ್ಠ 3500 ರೂ. ನೀಡುವಂತೆ ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧ ಚಲೋ ಹೊರಟ ರೈತರು

ಈ ಬಾರಿ ಸಕ್ಕರೆ ದರ ಕೆಜಿಗೆ 60 ರೂ ವರೆಗೆ ತಲುಪಲಿದೆ. ಹೀಗಾಗಿ ನಮ್ಮ ಕಬ್ಬಿಗೆ ಕನಿಷ್ಠ 3500 ರೂ. ನೀಡುವಂತೆ ಆಗ್ರಹಿಸಿದ್ದಾರೆ. ಜೊತೆಗೆ ತಮ್ಮ‌ ಬೇಡಿಕೆ ಈಡೇರಿಸುವಂತೆ ಬೆಳಗಾವಿ ಸುವರ್ಣ ಸೌಧ ಚಲೋ ಹೊರಟಿದ್ದಾರೆ. ಕಬ್ಬು ದರ ನಿಗದಿಯಲ್ಲಿ ಕೇಂದ್ರ ಸರ್ಕಾರದ ಎಫ್.ಆರ್​ಪಿ ದರ ಮಾದರಿಯನ್ನು ನಾವು ಒಪ್ಪಲ್ಲ. ಕಾರಣ ಕಾರ್ಖಾನೆಗಳ ಜೊತೆ ಶಾಮೀಲಾಗಿರುವ ಅಧಿಕಾರಿಗಳು, ಕಬ್ಬಿನ ರಿಕವರಿ ಕಡಿಮೆ ಮಾಡುವ ಮೂಲಕ ಎಫ್ಆರ್.ಪಿ ದರ ನಿಗದಿ ಮಾಡಿ, ರೈತರ ಮೇಲೆ ಬರೆ ಎಳೆಯುತ್ತಿದೆ. ಹೀಗಾಗಿ ನಾವು ಯಾವುದೇ ಕಾರಣಕ್ಕೂ ಎಫ್.ಆರ್ ಪಿ ಒಪ್ಪಲ್ಲ ಎಂದು ರೈತರು ಹೇಳುತ್ತಿದ್ದಾರೆ.

ಇದನ್ನೂ ಓದಿ:ಮೈಸೂರು: ಕಾಡಾನೆ ದಾಳಿಯಿಂದ ಬೆಳೆದು ನಿಂತು ಕಬ್ಬು ನಾಶ, ಪರಿಹಾರ ಕೇಳುತ್ತಿರುವ ನೊಂದ ರೈತ

ಕಬ್ಬು ಕಳುಹಿಸಿರುವ ರೈತರ ಅಕೌಂಟ್​ಗೆ ಪ್ರತಿ ಟನ್​ಗೆ 3500 ರೂ. ನಿಗದಿ ಮಾಡಿ ಎಂದು ಆಗ್ರಹಿಸಿದ್ದಾರೆ. ಇಲ್ಲವೆ ನಾವು ಮತ್ತೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತೆ ಎಂದು ಕಾರ್ಖಾನೆ ಮಾಲೀಕರಿಗೆ ಎಚ್ಚರಿಸಿದ್ದಾರೆ. ಅಲ್ಲದೇ ಈ ಬಾರಿ ಮಳೆ ಇಲ್ಲ, ಹೀಗಾಗಿ ಕಬ್ಬು ಬೆಳೆಯ ಪ್ರಮಾಣ ಕಡಿಮೆಯಾಗಿದೆ. ಹೀಗಿರುವಾಗ ಕಾರ್ಖಾನೆ ಮಾಲೀಕರು ರೈತರ ಹಿತ ಕಾಯಬೇಕು. ಅಲ್ಲದೇ ಬರ ಘೋಷಣೆ ಮಾಡಿರುವ ಸರ್ಕಾರ ರೈತರ ಕಬ್ಬಿಗೆ ಹೆಚ್ಚುವರಿ 500 ರೂ. ಬೆಂಬಲ ಬೆಲೆ ಘೊಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಚಳಿಗಾಲದ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಘೋಷಣೆ ಮಾಡಬೇಕು. ಇಲ್ಲದಿದ್ರೆ ನಾವು ಸುವರ್ಣ ಸೌಧಕ್ಕೆ ತೆರಳಿ ಪ್ರತಿಭಟನೆ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ. ಇನ್ನು ಈ ಬಗ್ಗೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್​ ಬಿ ತಿಮ್ಮಾಪುರ ಮಾತನಾಡಿ, ‘ಹಿಂದೆ ಸಭೆ ಫಲ ಪ್ರದವಾಗಿದೆ. ರೈತರು ಸುವರ್ಣಸೌಧ ಮುಂದೆ ಪ್ರತಿಭಟನೆ ‌ಮಾಡಲು‌ ಮುಂದಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದರು. ಒಟ್ಟಿನಲ್ಲಿ ಅನ್ನದಾತರು, ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ. ಇತ್ತ ಕಬ್ಬು ನುರಿಸುವ ಕಾರ್ಖಾನೆಗಳು 3 ಸಾವಿರ ಘೋಷಣೆ ಮಾಡಿವೆ. ಸುವರ್ಣ ಸೌಧದ ಅಂಗಳದಲ್ಲಿ ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಾ ಕಾದು ನೋಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನುಬ ಓದಲು ಇಲ್ಲಿ ಕ್ಲಿಕ್ ಮಾಡಿ