ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ವೈರಲ್ ಆಗ್ತಿರುವ ಲಡ್ಡು ಮುತ್ಯಾ ಯಾರು? ಅಸಲಿ ಪವಾಡ ಪುರುಷನ ಕಥೆ ಇಲ್ಲಿದೆ
"ಲಡ್ಡು ಮುತ್ಯಾನ ಅವತಾರ ಈಗಿನ ಸಂಚಾರಿ ದೇವರ" ಎಂಬ ಹಾಡಿನೊಂದಿಗೆ ಫ್ಯಾನ್ ನಿಲ್ಲಿಸಿ ಭಕ್ತರನ್ನು ಆಶೀರ್ವಾದ ಮಾಡುವ ವಿಕಲಚೇತನ ವ್ಯಕ್ತಿ ಫೇಮಸ್ ಆಗಿದ್ದಾರೆ. ಆದರೆ ಅವರು ನಿಜವಾದ ಪವಾಡ ಪುರುಷರಲ್ಲ. ಬಾಗಲಕೋಟೆ ತಾಲೂಕಿನ ಸೀಮಿಕೇರಿ ಬಳಿ ಲಡ್ಡು ಮುತ್ಯಾನ ನೈಜ ಮಠವಿದೆ. ಲಡ್ಡು ಮುತ್ಯಾ ಅವರು 1993ರ ಆಗಸ್ಟ್ 2ರಂದು ಲಿಂಗೈಕ್ಯರಾದರು. ಸದ್ಯ ರೀಲ್ಸ್ ವೈರಲ್ ಆಗುತ್ತಿದ್ದು ಭಕ್ತರು ಆಕ್ರೋಶ ಹೊರ ಹಾಕಿದ್ದಾರೆ.
ಬಾಗಲಕೋಟೆ, ಅ.03: ಇನ್ಸ್ಟಾಗ್ರಾಮ್ ಓಪನ್ ಮಾಡಿದರೆ ಸಾಕು ಹತ್ತಾರು ಲಡ್ಡು ಮುತ್ಯಾನ (Laddu Mutya) ರೀಲ್ಸ್ಗಳು ಸಾಲು ಸಾಲಾಗಿ ಬರುತ್ತವೆ. ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ (Instagram Reels), ತಿರುಗುವ ಫ್ಯಾನ್ ನಿಲ್ಲಿಸಿ ಅದರ ಧೂಳನ್ನು ವಿಭೂತಿ ರೀತಿ ಭಕ್ತರ ಹಣೆಗೆ ಹಚ್ಚುವ ನಕಲಿ ಲಡ್ಡು ಮುತ್ಯಾನ ರೀಲ್ಸ್ಗಳು ಹರಿದಾಡುತ್ತಿವೆ. ವಿಕಲಚೇತನನೋರ್ವ ಮಾಡಿದ ಈ ರೀಲ್ಸ್ ಭಾರೀ ವೈರಲ್ ಆಗಿದ್ದು ಹತ್ತಾರು ಜನ ಅದನ್ನು ಅನುಕರಣೆ ಮಾಡಿ ರೀಲ್ಸ್ ಮಾಡ್ತಿದ್ದಾರೆ. ಆದರೆ ಯಾರು ಈ ಲಡ್ಡು ಮುತ್ಯಾ, ಅವರು ಮಾಡಿದ ಪವಾಡವೇನು? ಲಡ್ಡು ಮುತ್ಯಾನ ಹಾಡಿಗೆ ರೀಲ್ಸ್ ಮಾಡಿದ ವಿಕಲಚೇತನ ವ್ಯಕ್ತಿ ಪವಾಡ ಪುರುಷನಾ ಎಂಬ ಬಗ್ಗೆ ಹಲವರಿಗೆ ಹಲವು ಅನುಮಾನಗಳು ಮೂಡಿವೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಬಾಗಲಕೋಟೆಯ ಪವಾಡ ಪುರುಷ ಲಿಂಗೈಕ್ಯ ಲಡ್ಡು ಮುತ್ಯಾ ಅವರ ಹೆಸರಲ್ಲಿ ನಕಲಿ ಲಡ್ಡು ಮುತ್ಯಾ ಎಂದು ವಿಕಲಚೇತನ ವ್ಯಕ್ತಿಯ ವಿಡಿಯೋ ವೈರಲ್ ಆಗಿದೆ. “ಲಡ್ಡು ಮುತ್ಯಾನ ಅವತಾರ ಈಗಿನ ಸಂಚಾರಿ ದೇವರ” ಎಂಬ ಹಾಡಿನೊಂದಿಗೆ ವಿಕಲಚೇತನ ವ್ಯಕ್ತಿ ರೀಲ್ಸ್ ಮಾಡಿ ಫೇಮಸ್ ಆಗಿದ್ದಾರೆ. ಇಬ್ಬರು ವ್ಯಕ್ತಿಗಳು ಚೇರ್ನಲ್ಲಿ ಕುಳಿತ ನಕಲಿ ಲಡ್ಡು ಮುತ್ಯಾನ ಎತ್ತಿ ಹಿಡಿಯುತ್ತಾರೆ. ಆಗ ನಕಲಿ ಮುತ್ಯಾ ತಿರುಗುವ ಫ್ಯಾನ್ ನಿಲ್ಲಿಸಿ ಅದರ ಧೂಳನ್ನೆ ಭಸ್ಮದ ರೀತಿ ಲೇಪಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಟ್ರೆಂಡಿಂಗ್ ನಲ್ಲಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಸೇರಿದಂತೆ ದೇಶದಾದ್ಯಂತ, ವಿದೇಶದಲ್ಲೂ ಯುವಕರು, ಹಿರಿಯರು, ಮಕ್ಕಳು ಸೇರಿದಂತೆ ಅನೇಕರು ನಕಲಿ ಲಡ್ಡು ಮುತ್ಯಾನ ಅನುಕರಣೆ ಮಾಡಿ ವಿಡಿಯೊ ಪೋಸ್ಟ್ ಮಾಡ್ತಿದ್ದಾರೆ.
ನಕಲಿ ಲಡ್ಡು ಮುತ್ಯಾನ ರೀಲ್ಸ್ಗೆ ನೈಜ ಲಡ್ಡು ಮುತ್ಯಾನ ಭಕ್ತರ ಆಕ್ರೋಶ
ಲಡ್ಡು ಮುತ್ಯಾನ ಈ ಅನುಕರಣೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಅಲ್ಲದೆ ಈ ವಿಡಿಯೋಗಳು ಟ್ರೋಲ್ ಕೂಡ ಆಗುತ್ತಿವೆ. ಹೀಗಾಗಿ ತಮ್ಮ ಜಿಲ್ಲೆಯ ಪವಾಡ ಪುರುಷ ಲಡ್ಡು ಮುತ್ಯಾನ ಅವಮಾನ ಸಹಿಸಲಾಗದ ಜನರು ಆಕ್ರೋಶ ಹೊರ ಹಾಕಿದ್ದಾರೆ. ನಕಲಿ ಲಡ್ಡು ಮುತ್ಯಾನ ರೀಲ್ಸ್ ಬಗ್ಗೆ ನೈಜ ಲಡ್ಡು ಮುತ್ಯಾನ ಭಕ್ತರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಉಡುಪಿಯ ಈ ಪಟ್ಟಣದಲ್ಲಿದೆ ಮಹಿಷ ದೇವಸ್ಥಾನ: ಇಲ್ಲಿ ನಿತ್ಯವೂ ನೆರವೇರುತ್ತೆ ಮಹಿಷಾಸುರನಿಗೆ ಪೂಜೆ!
ಯಾರು ಈ ಪವಾಡ ಪುರುಷ ಲಡ್ಡು ಮುತ್ಯಾ?
ಬಾಗಲಕೋಟೆ ತಾಲೂಕಿನ ಸೀಮಿಕೇರಿ ಬಳಿ ಲಡ್ಡು ಮುತ್ಯಾನ ನೈಜ ಮಠವಿದೆ. ಲಡ್ಡು ಮುತ್ಯಾ ಅವರು 1993ರ ಆಗಸ್ಟ್ 2ರಂದು ಲಿಂಗೈಕ್ಯರಾದರು. ಇವರು ತಲೆಗೆ ಮೈಗೆ ಗೋಣಿ ಚೀಲದ ತಟ್ಟು ಸುತ್ತಿಕೊಳ್ತಿದ್ದರು. ತಟ್ಟಿಗೆ ಲಡ್ ಅಂತ ಕೂಡ ಇವರನ್ನು ಕರೆಯಲಾಗುತ್ತಿತ್ತು. ಈ ಕಾರಣಕ್ಕೆ ಲಡ್ಡು ಮುತ್ಯಾ ಎಂಬ ಹೆಸರು ಬಂತು. ಲಡ್ಡು ಮುತ್ಯಾ ಅವರ ಮೂಲ ಹೆಸರು ಮಲ್ಲಯ್ಯ. 1970-1990ರ ದಶಕದಲ್ಲಿ ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಲಡ್ಡು ಮುತ್ಯಾ ಅವರನ್ನು ಪವಾಡ ಪುರುಷ ಎಂದು ಪೂಜಿಸುತ್ತಿದ್ದರು. ಇವರು ಮದುವೆಯಾದ ಬಳಿಕ ಪತ್ನಿ ತ್ಯಜಿಸಿ ವಿರಾಗಿಯಾಗಿದ್ದರು.
ಮೈಮೇಲೆ ಬರಿ ಗೋಣಿ ಚೀಲದ ತಟ್ಟು ಸುತ್ತಿಕೊಳ್ಳುತ್ತಿದ್ದರು. ಇವರು ಆಡಿದ ಮಾತುಗಳು ನಿಜವಾಗ್ತಿದ್ದವು. ಅವರು ಯಾವ ಅಂಗಡಿಗೆ ಬಂದು ಹೋಗ್ತಾರೆ ಅವರಿಗೆ ಭಾರಿ ಲಾಭವಾಗ್ತಿತ್ತು. ಅವರ ಭಾಗ್ಯದ ಬಾಗಿಲು ತೆರೆಯುತ್ತಿತ್ತು. ಅವರು ಯಾರ ಮನೆಗೆ ಕಾಲಿಡ್ತಾರೆ ಅವರಿಗೆ ಅದೃಷ್ಟ ದೇವತೆ ಒಲಿಯುತ್ತಿದ್ದಳು. ಅವರ ಕುಟುಂಬ ಅಭಿವೃದ್ಧಿ ಆಗ್ತಿತ್ತು ಎಂಬ ನಂಬಿಕೆ ಇತ್ತು.
ನಕಲಿ ಲಡ್ಡು ಮುತ್ಯಾಗೂ ಮೂಲ ಲಡ್ಡು ಮುತ್ಯಾಗೂ ಸಂಬಂಧವಿಲ್ಲ
ಲಡ್ಡು ಮುತ್ಯಾ ಮಠ ಇರೋದು ಸೀಮಿಕೇರಿಯಲ್ಲಿ ಮಾತ್ರ. ಬೇರೆ ಎಲ್ಲೂ ಇಲ್ಲ. ಯಾವುದೇ ಶಾಖಾ ಮಠವಿಲ್ಲ. ಇತರೆ ಮಠದಿಂದ ಯಾವ ಸ್ವಾಮೀಜಿಗಳನ್ನು ನೇಮಕ ಮಾಡಿಲ್ಲ. ಸೀಮಿಕೇರಿಯಲ್ಲಿ ಲಡ್ಡು ಮುತ್ಯಾ ಗದ್ದುಗೆ ಇದೆ. ಅಲ್ಲಿ ಅವರ ಮೂರ್ತಿ ಕೂಡ ಇದೆ. ಅಲ್ಲೇ ಬಂದು ಭಕ್ತರು ದರ್ಶನ ಪಡೆಯಬಹುದು. ಪ್ರತಿ ಹುಣ್ಣಿಮೆ, ಅಮಾವಾಸ್ಯೆಯಂದು ಇಲ್ಲಿ ಪ್ರಸಾದ ಹಂಚಲಾಗುತ್ತದೆ. ರೀಲ್ಸ್ ನಲ್ಲಿ ಬರುವ ನಕಲಿ ಲಡ್ಡು ಮುತ್ಯಾನಿಂದ ಯಾರೂ ಮೋಸ ಹೋಗಬಾರದು. ನಕಲಿ ಲಡ್ಡು ಮುತ್ಯಾ ಹಾಗೂ ಸಹಚರರು ಹಣ ಪಡೆದು ವಂಚನೆ ಮಾಡುತ್ತಿದ್ದಾರೆ. ಅವರಿದ ಲಡ್ಡು ಮುತ್ಯಾನ ಭಕ್ತರಿಗೆ ಬೇಸರವಾಗಿದೆ. ಇದು ಲಿಂಗೈಕ್ಯ ಲಡ್ಡು ಮುತ್ಯಾರಿಗೆ ಮಾಡುತ್ತಿರುವ ಅವಮಾನ ಅಂತ ಭಕ್ತರು, ಲಡ್ಡು ಮುತ್ಯಾ ಮಠದ ಆಡಳಿತ ಮಂಡಳಿ ಆಕ್ರೋಶ ಹೊರ ಹಾಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:17 am, Thu, 3 October 24