ಬಾಗಲಕೋಟೆ: ದೊಡ್ಡಮ್ಮನ ಮಗನ ಜೊತೆ ಅನೈತಿಕ ಸಂಬಂಧ; ಪತಿ ಕೊಲೆ ಪ್ರಕರಣಕ್ಕೆ ಸಿಗ್ತು ಟ್ವಿಸ್ಟ್
ಮೊದಲು ಕುಟುಂಬಸ್ಥರು ಇದೇ ಶಾಂತಪ್ಪನ ಶವ ಎಂದು ತಿಳಿಸಿದ್ದರು. ಈಗ ಇದು ಅಲ್ಲ ಅಂತಿದ್ದಾರೆ.ಈ ಬಗ್ಗೆ ಶವ ಶೋಧ ಕಾರ್ಯ ಮುಂದುವರೆದಿದೆ ಎಂದು ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.
ಬಾಗಲಕೋಟೆ: ದೊಡ್ಡಮ್ಮನ ಮಗನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪತ್ನಿ ತನ್ನ ಪತಿಯನ್ನೇ(Husband) ಪ್ರಿಯಕರನೊಂದಿಗೆ ಸೇರಿ ಹತ್ಯೆ(Murder) ಮಾಡಿ ನದಿಗೆ ಎಸೆದಿದ್ದ ಪ್ರಕರಣದಲ್ಲಿ ಇದೀಗ ತಿರುವು ಸಿಕ್ಕಿದೆ. ಪತ್ತೆಯಾದ ಶವ ಶಾಂತಪ್ಪನದ್ದು ಅಲ್ಲ ಎಂದು ಸಂಬಂಧಿಕರು ಹೇಳುತ್ತಿದ್ದಾರೆ. ಹೌದು ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಮಹಾಂತಪುರ ಗ್ರಾಮದ ಶಾಂತಪ್ಪನ ಶವ ಹುಡುಕಾಟಕ್ಕೆ ಮತ್ತೆ ಪೊಲೀಸರು ಮುಂದಾಗಿದ್ದಾರೆ. ಯಾದಗಿರಿ ಜಿಲ್ಲೆ ಭೀಮರಾಯನಗುಡಿ ಠಾಣೆ ವ್ಯಾಪ್ತಿಯ ಕಾಲುವೆಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಇದುವೇ ಶಾಂತಪ್ಪನ ಶವ ಎನ್ನಲಾಗಿತ್ತು.ಇದೀಗ ಶಾಂತಪ್ಪನ ಸಹೋದರ ಮೂರ್ತೆಪ್ಪ ಶಾಂತಪ್ಪನ ಭಾವಚಿತ್ರ ಕಂಡು ಆತ ರೌಂಡ್ ಟಿ ಶರ್ಟ್ ಧರಿಸಿರಲಿಲ್ಲ. ಜೊತೆಗೆ ಒಳವಸ್ತ್ರ ಬೇರೆ ಇದೆ ಎಂದು ಹೇಳಿದ್ದಾರೆ. ಹೀಗಾಗಿ ಶಾಂತಪ್ಪನ ಶವಕ್ಕಾಗಿ ಇದೀಗ ಶೋಧ ಕಾರ್ಯ ಮುಂದುವರೆದಿದೆ.
ತನ್ನ ದೊಡ್ಡಮ್ಮನ ಮಗ ಬಸವರಾಜ ಜೊತೆ ಶಾಂತಪ್ಪ ಮಾದರನ ಪತ್ನಿ ಹುಲಗವ್ವ ಅನೈತಿಕ ಸಂಬಂಧ ಹೊಂದಿದ್ದಳು. ಅನೈತಿಕ ಸಂಬಂಧ ಪ್ರಶ್ನಿಸಿ ಪತಿ ಶಾಂತಪ್ಪ ಪತ್ನಿ ಹುಲಗವ್ವಳಿಗೆ ಎಚ್ಚರಿಕೆ ನೀಡಿದ್ದನು. ಹೀಗಾಗಿ ಪ್ರಿಯಕರನ ಜೊತೆ ಸೇರಿ ಪತಿ ಕೊಲೆಗೆ ಪತ್ನಿ ಸಂಚು ರೂಪಿಸಿದ್ದು, ಪತಿಯನ್ನು ಅಕ್ಟೋಬರ್ 23 ರಂದು ಹತ್ಯೆಗೈದು ಆಲಮಟ್ಟಿ ಜಲಾಶಯದಲ್ಲಿ ಎಸೆದಿದ್ದರು. ಶಾಂತಪ್ಪ ಮಾದರ(45)ನನ್ನು ಕೊಡಲಿಯಿಂದ ಹೊಡೆದು ಕತ್ತು ಹಿಸುಕಿ ಕೊಲೆಗೈದು ಆಲಮಟ್ಟಿ ಜಲಾಶಯದಲ್ಲಿ ಎಸೆದಿದ್ದರು. ಬಳಿಕ ಕಾಣೆಯಾಗಿದ್ದಾನೆ ಎಂದು ಇಳಕಲ್ ಗ್ರಾಮೀಣ ಠಾಣೆಯಲ್ಲಿ ಪತ್ನಿ ದೂರು ದಾಖಲಿಸಿದ್ದಳು.
ಇತ್ತೀಚೆಗೆ ಅಪರಿಚಿತ ಶವವೊಂದು ಯಾದಗಿರಿಯ ಭೀಮರಾಯನಗುಡಿ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಅದೇ ಶಾಂತಪ್ಪನ ಶವ ಎಂದು ತಿಳಿಯಲಾಗಿತ್ತು. ಸದ್ಯ ಆ ಶವ ಶಾಂತಪ್ಪನದ್ದಲ್ಲ ಎಂದು ಕುಟುಂಬಸ್ಥರು ಹೇಳಿದ್ದು, ಶವ ಶೋಧ ಕಾರ್ಯ ಮುಂದುವರೆದಿದೆ. ಅಲ್ಲದೇ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಶಾಂತಪ್ಪನ ಹೆಂಡತಿ ಹಾಗೂ ಆಕೆಯ ಪ್ರಿಯಕರ ಸೇರಿ ಒಟ್ಟು ಐವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದ್ಯ ಶಾಂತಪ್ಪನ ಶವ ಸಿಕ್ಕಿದೆ ಎಂದು ನಿರಾಳರಾಗಿದ್ದ ಪೊಲೀಸರಿಗೆ ಈಗ ಮತ್ತೆ ಶವ ಹುಡುಕಾಟದ ತಲೆಬಿಸಿ ಹೆಚ್ಚಿದೆ.
ಶವ ಗುರುತು ಸಿಗದ ರೀತಿಯಲ್ಲಿ ಕೊಳೆತ ಕಾರಣ ಮೊದಲು ಗೊಂದಲವಾಗಿತ್ತು. ಆದರೆ ಸಿಕ್ಕ ದೇಹದ ಬಟ್ಟೆ ಬೇರೆಯಾಗಿವೆ. ನಮ ಸಹೋದರ ರೌಂಡ್ ಟೀ ಶರ್ಟ್ ಧರಿಸಿರಲಿಲ್ಲ, ಜೊತೆಗೆ ಒಳವಸ್ತ್ರ ಕೂಡ ಬೇರೆ ಇದೆ. ಆದ್ದರಿಂದ ಇದು ನಮ್ಮ ಸಹೋದರನ ಶವ ಅಲ್ಲವೆಂದು ಪೊಲೀಸರಿಗೆ ತಿಳಿಸಿದ್ದೇನೆ ಎಂದು ಮೂರ್ತೆಪ್ಪ ತಿಳಿಸಿದ್ದಾನೆ.
ಇನ್ನು ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್, ಮೊದಲು ಕುಟುಂಬಸ್ಥರು ಇದೇ ಶಾಂತಪ್ಪನ ಶವ ಎಂದು ತಿಳಿಸಿದ್ದರು. ಈಗ ಇದು ಅಲ್ಲ ಅಂತಿದ್ದಾರೆ.ಈ ಬಗ್ಗೆ ಶವ ಶೋಧ ಕಾರ್ಯ ಮುಂದುವರೆದಿದೆ ಎಂದಿದ್ದಾರೆ.
ಒಟ್ಟಾರೆ ಇಲ್ಲಿ ಶಾಂತಪ್ಪನ ಕೊಲೆ ಮಾಡಿರೋದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.ಆದರೆ ಶವ ಮಾತ್ರ ಶಾಂತಪ್ಪನದ್ದು ಅಲ್ಲ ಎಂದು ಹೇಳುತ್ತಿದ್ದು, ಕೃಷ್ಣಾನದಿಯಲ್ಲಿ ಎಸೆದ ಶವ ಸಿಗುತ್ತೋ ಇಲ್ಲವೋ ಕಾದು ನೋಡಬೇಕು.
ವರದಿ: ರವಿ ಮೂಕಿ
ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆಗೆ ಯತ್ನಿಸಿದ ಪತ್ನಿ, ಪತ್ನಿ-ಪ್ರಿಯಕರ ಅರೆಸ್ಟ್
ಚಿತ್ರದುರ್ಗ: ಕ್ಷುಲ್ಲಕ ವಿಚಾರಕ್ಕೆ 2 ಕುಟುಂಬಗಳ ನಡುವೆ ಜಗಳ; ವ್ಯಕ್ತಿ ಕೊಲೆಯಲ್ಲಿ ಅಂತ್ಯ