ಆಮೆಗತಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ; ಸರ್ಕಾರದಿಂದ ದೊರೆಯದ ಸಮರ್ಪಕ ಅನುದಾನ
ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಮೊದಲ ಹಂತದ ಕಾಮಗಾರಿಗೆ 80 ಕೋಟಿ ವೆಚ್ಚ ಹಾಗೂ ಎರಡನೇ ಹಂತದ ಕಾಮಗಾರಿಗೆ 17.51 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ ಸರ್ಕಾರದಿಂದ ಇದುವರೆಗೆ ಬಿಡುಗಡೆಯಾದ ಅನುದಾನದಿಂದ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ.
ಬಳ್ಳಾರಿ: ಸರ್ಕಾರದ ಯಾವುದಾದರೂ ಒಂದು ಕಾಮಗಾರಿ ಪೂರ್ಣಗೊಳ್ಳಬೇಕಾದರೆ 3 ವರ್ಷ ಅಥವಾ 4 ವರ್ಷ ಬೇಕಾಗಬಹುದು ಎಂದು ಭಾವಿಸಬೇಕಾಗಿದ್ದು ಸಾಮಾನ್ಯ ಎನ್ನುವಂತಾಗಿದೆ. ಆದರೆ, ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಆರಂಭಗೊಂಡಿರುವ ಕಾಮಗಾರಿಗೆ 10 ವರ್ಷಗಳೇ ಕಳೆದರೂ ಕಾಮಗಾರಿ ಮಾತ್ರ ಪೂರ್ಣಗೊಳ್ಳುತ್ತಿಲ್ಲ. ರಾಜ್ಯ ಸರ್ಕಾರ ಸಮರ್ಪಕ ಅನುದಾನ ಬಿಡುಗಡೆ ಮಾಡದ ಕಾರಣ ದಶಕದಿಂದಲೂ ಈ ಭಾಗದ ಜನರ ಕನಸು ಈಡೇರುತ್ತಿಲ್ಲ. ಹೀಗಾಗಿ ಸ್ಥಳಿಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಹಾಗೂ ನೆರೆಯ ಐದಾರು ಜಿಲ್ಲೆಗಳ ಜನರ ಚಿಕಿತ್ಸೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಜೀವಿನಿಯಾಗುತ್ತದೆ ಎಂದು ಈ ಭಾಗದ ಜನರು ಕನಸು ಕಂಡಿದ್ದರು. ಈ ಭಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಳ್ಳುವುದರಿಂದ ದೂರದ ಬೆಂಗಳೂರು, ಮಣಿಪಾಲ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಹೋಗುವುದು ತಪ್ಪುತ್ತದೆ ಎಂದು ಭಾವಿಸಿದ್ದರು. ಜೊತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೈಟೆಕ್ ಚಿಕಿತ್ಸೆ ಸಿಗುತ್ತದೆ ಎಂದು ನಂಬಿಕೊಂಡಿದ್ದರು. ಆದರೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದಾಗಿ ಸುಮಾರು ₹100 ಕೋಟಿಗೂ ಅಧಿಕ ವೆಚ್ಚದಲ್ಲಿ ಆರಂಭವಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಅನುದಾನದ ಕೊರತೆಯಿಂದಾಗಿ ಇನ್ನೂ ಮುಗಿದಿಲ್ಲ.
2010 ರಲ್ಲಿ ಆಗಿನ ಬಿಜೆಪಿ ಸರ್ಕಾರದ ವೇಳೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕಾಮಗಾರಿ ಆರಂಭವಾಗಿತ್ತು. ಈ ಕಾಮಗಾರಿ ಶುರುವಾಗಿ ಬರೋಬ್ಬರಿ 10 ವರ್ಷ ಮುಗಿದಿದೆ. ಆದರೂ ಇನ್ನು ಕಾಮಗಾರಿ ಪೂರ್ಣಗೊಂಡಿಲ್ಲ. ಸರ್ಕಾರದಿಂದ ಸಕಾಲದಲ್ಲಿ ಸಮರ್ಪಕ ಅನುದಾನ ಬಿಡುಗಡೆ ಮಾಡದ ಕಾರಣ ಆಸ್ಪತ್ರೆ ಕಾಮಗಾರಿಗೆ ಸಂಪೂರ್ಣವಾಗಿ ಗ್ರಹಣ ಹಿಡಿದಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರನ್ನು ಕೇಳಿದರೆ ಅನುದಾನದ ಕೊರತೆಯಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡಿಲ್ಲ, ಸರ್ಕಾರಕ್ಕೆ ಹೆಚ್ಚಿನ ಅನುದಾನದ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮೊದಲ ಹಂತದ ಕಾಮಗಾರಿಗೆ ₹80 ಕೋಟಿ ವೆಚ್ಚ ಹಾಗೂ ಎರಡನೇ ಹಂತದ ಕಾಮಗಾರಿಗೆ ₹17.51 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ ಸರ್ಕಾರದಿಂದ ಇದುವರೆಗೆ ಬಿಡುಗಡೆಯಾದ ಅನುದಾನದಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ಹೀಗಾಗಿ ಆಸ್ಪತ್ರೆಯ ಕಾಮಗಾರಿ ಅನುದಾನ ಇಲ್ಲದೆ ಆಮೆಗತಿಯಲ್ಲಿ ನಡೆಯುತ್ತಿದೆ. ಈ ವೇಳೆಗಾಗಲೇ ಆಸ್ಪತ್ರೆಯ ಕಾಮಗಾರಿ ಪೂರ್ಣಗೊಂಡು ಈ ಭಾಗದ ಜನರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರೋಗ್ಯ ಸಂಜೀವಿನಿಯಾಗಬೇಕಿತ್ತು.
ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಸರ್ಕಾರದ ಅನುದಾನದ ಜೊತೆಗೆ ಸ್ಥಳೀಯವಾಗಿ ಜಿಲ್ಲಾ ಖನಿಜ ನಿಧಿಯ ನೂರಾರು ಕೋಟಿ ರೂಪಾಯಿ ಜಿಲ್ಲಾಡಳಿತದ ಖಜಾನೆಯಲ್ಲಿಯೇ ಇದೆ. ಇದನ್ನ ಬಳಕೆ ಮಾಡಿಕೊಂಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಬಹುದಿತ್ತು. ಆದರೆ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಜಿಲ್ಲಾ ಖನಿಜ ನಿಧಿಯನ್ನು ಕೂಡ ಬಳಕೆ ಮಾಡಿಲ್ಲ ಎಂದು ಸ್ಥಳೀಯರಾದ ವೆಂಕಟೇಶ್ ಹೆಗೆಡೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗುವುದರಿಂದ ಕೇವಲ ಬಳ್ಳಾರಿ ಜಿಲ್ಲೆಗೆ ಮಾತ್ರ ಅನುಕೂಲವಾಗದೇ, ನೆರೆಯ ಕೊಪ್ಪಳ, ರಾಯಚೂರು, ಆಂಧ್ರದ ಅನಂತಪುರ, ಕರ್ನೂಲ್ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಜನರ ಪಾಲಿಗೆ ಆರೋಗ್ಯ ಸಂಜೀವಿನಿಯಾಗಬೇಕಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾಗಿ ಇನ್ನು ಮುಗಿಯದೇ ಆಮೆಗತಿಯಲ್ಲಿ ಸಾಗಿರುವುದು ನಿಜಕ್ಕೂ ವಿಪರ್ಯಾಸ.
(ವರದಿ: ಬಸವರಾಜ ಹರನಹಳ್ಳಿ – 9980914155)
ಇದನ್ನೂ ಓದಿ: ವಿವಾದದ ನಂತರ ಎಚ್ಚೆತ್ತು, ಮನೆಬಿಟ್ಟು ಆಸ್ಪತ್ರೆಯಲ್ಲೇ ಲಸಿಕೆ ಹಾಕಿಸಿಕೊಂಡ ಕೃಷಿ ಸಚಿವ ಬಿ ಸಿ ಪಾಟೀಲ್!
(Ballari super Specialty Hospital Works are pending because of government negligence)