ಬಳ್ಳಾರಿ: ಹಸಿದವರಿಗಾಗಿಯೇ ಸಿದ್ಧವಾಗಿದೆ ರೋಟಿ ಘರ್, ಒಂದು ರೂಪಾಯಿಗೆ ಹೊಟ್ಟೆ ತುಂಬಾ ಊಟ!

ಪ್ರತಿ ನಿತ್ಯ 300-400 ಕ್ಕೂ ಹೆಚ್ಚು ಆಹಾರ ಪೊಟ್ಟಣಗಳನ್ನು ನೀಡಲಾಗುತ್ತಿದೆ. ಪೊಟ್ಟಣದಲ್ಲಿ ಜೋಳದ ರೊಟ್ಟಿ, ವಿವಿಧ ಪಲ್ಯ, ಬಿಸಿ ಬಿಸಿ ಅನ್ನ, ಸಾಂಬಾರು ಜತೆಗೆ ವಾರದಲ್ಲಿ ಒಂದು ಬಾರಿ ಸಿಹಿ ವಿತರಿಸಲಾಗುತ್ತದೆ ಎಂದು ಜೈನ್ ಸಂಘದ ಅಧ್ಯಕ್ಷ ಸಂಕಲ್ ಚಂದ್ ಜೈನ್ ತಿಳಿಸಿದ್ದಾರೆ.

ಬಳ್ಳಾರಿ: ಹಸಿದವರಿಗಾಗಿಯೇ ಸಿದ್ಧವಾಗಿದೆ ರೋಟಿ ಘರ್,  ಒಂದು ರೂಪಾಯಿಗೆ ಹೊಟ್ಟೆ ತುಂಬಾ ಊಟ!
1 ರೂಪಾಯಿಗೆ ಹೊಟ್ಟೆ ತುಂಬಾ ಊಟ
TV9kannada Web Team

| Edited By: sadhu srinath

Aug 28, 2021 | 11:14 AM

ಬಳ್ಳಾರಿ: ಕೊರೊನಾ ಸೋಂಕು ವಿಶ್ವದ ಸ್ಥಿತಿಗತಿಗಳನ್ನೇ ಬದಲಾಯಿಸಿದೆ. ಸೋಂಕಿನಿಂದ ಸಹಸ್ರಾರು ಜನರು ಮೃತಪಟ್ಟಿದ್ದಾರೆ. ಅದರಲ್ಲೂ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಪಾಡು ಹೇಳತಿರದು. ಇನ್ನು ಅನೇಕರು ಜೀವನಾಧಾರವಾಗಿದ್ದ ಕೆಲಸ ಕಳೆದುಕೊಂಡಿದ್ದು, ಮಧ್ಯಮ ವರ್ಗದವರು ಬಡವರಾಗಿದ್ದಾರೆ. ಬಡವರು ಕಡುಬಡವರಾಗಿದ್ದಾರೆ. ಇದರ ಮಧ್ಯೆ ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಕಡುಬಡವರ ಹಸಿವು ನೀಗಿಸಲು ಬಳ್ಳಾರಿಯ ಜೈನ್ ಸಂಘ ಮುಂದಾಗಿದ್ದು, ಜೈನ್ ರೋಟಿ ಘರ್ ಹೆಸರಿನಲ್ಲಿ 1 ರೂಪಾಯಿಗೆ ಊಟ ನೀಡುತ್ತಿದೆ.

ಬಳ್ಳಾರಿ ನಗರದಲ್ಲಿ ಬಡವರ ಹೋಟೆಲ್ ಎಂದೇ ಪ್ರಸಿದ್ಧವಾದ ಜೈನ್ ಮಾರ್ಕೆಟ್ ಬಳಿಯಿದ್ದ ಜೈನ ಸಮುದಾಯ ರೋಟಿ ಘರ್ ಈಗ ಸಂಚಾರಿ ರೋಟಿ ಘರ್ ಆಗಿ ಬದಲಾಗಿದೆ. ಹಸಿದವರಿಗೆ ಅವರಿರುವ ಜಾಗಕ್ಕೆ ತೆರಳಿ ಊಟ ನೀಡಲು ಜೈನ್ ಸಂಘ ಮುಂದಾಗಿದೆ. ಸಾಮಾನ್ಯವಾಗಿ ಇರುವ ಸ್ಥಳದಲ್ಲೆ ಊಟ ನೀಡುವವರು ಶೆಡ್ ಅಥವಾ ಹೊಟೇಲ್ ತರ ನಿರ್ಮಾಣ ಮಾಡಿಕೊಳ್ಳುತ್ತಾರೆ. ಆದರೆ, ಈ ರೀತಿ ನಿಗದಿತ ಒಂದೇ ಜಾಗದಲ್ಲಿ ಆಹಾರ ನೀಡಿದರೆ ದೂರವಿರುವ ಬಡಜನರಿಗೆ ಆಹಾರ ಸಿಗುವುದಿಲ್ಲ. ಅಲ್ಲದೆ, ದಿನನಿತ್ಯ ಇಲ್ಲಿನ ನಿವಾಸಿಗಳಿಗೆ ಮಾತ್ರ ಅದು ಸೀಮಿತವಾಗುತ್ತದೆ ಎಂಬ ಉದ್ದೇಶದಿಂದ ಜೈನ್ ಸಂಘ ವಿಭಿನ್ನವಾಗಿ ಆಲೋಚಿಸಿ ವರ್ಷದ 365 ದಿನಗಳಲ್ಲೂ ವ್ಯಾನ್ ಮೂಲಕ ಪ್ರತಿ ದಿನ ಮದ್ಯಾಹ್ನ 1 ಗಂಟೆಗೆ ಆಹಾರ ನೀಡಲು ತೆರಳುತ್ತಿದೆ.

ಈ ವಾಹನ, ನಗರದಲ್ಲಿನ ಬಡವರು, ನಿರ್ಗತಿಕರು, ಕಾರ್ಮಿರು ಇರುವ ಸ್ಥಳದಲ್ಲಿಯೇ ಹಾಗೂ ಸರ್ಕಾರಿ ಆಸ್ಪತ್ರೆಗಳ ಮುಂಭಾಗ, ಎಪಿಎಂಸಿ, ಬಸ್‌ ನಿಲ್ದಾಣ ಮತ್ತು ಪುಟ್ಪಾತ್ ಮೇಲೆ ಇರುವ ನಿರ್ಗತಿಕರ ಹತ್ತಿರ ಹೋಗಿ ಪ್ರತಿ ನಿತ್ಯ 300-400 ಕ್ಕೂ ಹೆಚ್ಚು ಆಹಾರ ಪೊಟ್ಟಣಗಳನ್ನು ನೀಡುತ್ತಿದೆ. ಪೊಟ್ಟಣದಲ್ಲಿ ಜೋಳದ ರೊಟ್ಟಿ, ವಿವಿಧ ಪಲ್ಯ, ಬಿಸಿ ಬಿಸಿ ಅನ್ನ, ಸಾಂಬಾರು ಜತೆಗೆ ವಾರದಲ್ಲಿ ಒಂದು ಬಾರಿ ಸಿಹಿ ವಿತರಿಸಲಾಗುತ್ತದೆ ಎಂದು ಜೈನ್ ಸಂಘದ ಅಧ್ಯಕ್ಷ ಸಂಕಲ್ ಚಂದ್ ಜೈನ್ ತಿಳಿಸಿದ್ದಾರೆ.

ಜೈನ್ ಸಂಘದ ಹಣಕಾಸಿನ ನೆರವಿನಿಂದ ಈ ಮಹತ್ವ ಕಾರ್ಯ ಸಾಧ್ಯವಾಗಿದೆ. ಜೈನ್ ಯುವಕರ ತಂಡದಲ್ಲಿ 80 ಜನ ಯುವಕರಿದ್ದು, ಪ್ರತಿನಿತ್ಯ 10 ಜನ ಯುಕರನ್ನೊಳಗೊಂಡ ತಂಡ ಕಾರ್ಯನಿರ್ವಹಿಸಲಿದೆ. ಇದರ ನಡುವೆ ಪ್ರತಿದಿನ ನಗರದ ಏರಿಯಾಗಳನ್ನು ಗುರುತಿಸಿ ಅಲ್ಲಿಗೆ ಹೋಗಿ ಆಹಾರದ ಪಾಕೇಟ್‌ಗಳನ್ನು ಕೊಡಲಾಗುತ್ತಿದೆ. ರೊಟ್ಟಿಯ ಜೊತೆಗೆ ರೈಸ್ ಕೂಡ ನೀಡಲಾಗುತ್ತಿದೆ. ಇದಕ್ಕೆ 1 ರೂ. ನೀಡಿದರೆ ಸಾಕು. ಇನ್ನೂ ಕೆಲವರ ಬಳಿ 1 ರೂ. ಇಲ್ಲದಿದ್ದರೆ ಅಂತವರಿಗೆ ಉಚಿತವಾಗಿ ಆಹಾರದ ಪಾಕೆಟ್​ಗಳನ್ನು ಕೊಡುತ್ತಾರೆ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಜೈನ ಸಮುದಾಯ ತಾವು ದುಡಿದ ಹಣದಲ್ಲಿ ಕೆಲಭಾಗವನ್ನು ಕ್ರೋಡಿಕರಿಸಿ ಹಸಿದು ಬಂದವರಿಗೆ, ಬಡವರಿಗಾಗಿ ಊಟ ಕೊಡಬೇಕು ಎನ್ನುವ ಉದ್ದೇಶದಿಂದ ರೋಟಿ ಘರ್ ಆರಂಭಿಸಿದ್ದು, ಇದು ಬಡವರ ಪಾಲಿಗೆ ವರದಾನವಾಗಿದೆ. ಅದು ಏನೇ ಇರಲೀ ದಾನ ಧರ್ಮವೆಂಬ ಪದಗಳು ಅರ್ಥ ಕಳೆದುಕೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ ಜೈನ ಸಂಘ ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ.

ವರದಿ: ಬಸವರಾಜ ಹರನಹಳ್ಳಿ

ಇದನ್ನೂ ಓದಿ:

ಅಫ್ಘಾನಿಸ್ತಾನದಿಂದ ಬಂದವರಿಗೆ ಭಾರತದಲ್ಲಿ ಉಚಿತ ಪೋಲಿಯೊ ಲಸಿಕೆ: ಕೇಂದ್ರ ಆರೋಗ್ಯ ಸಚಿವ

Shocking Video: ಗ್ರಾಹಕರಿಗೆ ಕೊಡಬೇಕಾಗಿದ್ದ ಊಟ ಕದ್ದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada