
ಬಳ್ಳಾರಿ, ಫೆಬ್ರವರಿ 1: ಬಾಕಿ ಇರುವ ಬಿಲ್ ಪಾವತಿ ಮಾಡದ ಕಾರಣ ಬಳ್ಳಾರಿ (Ballari) ಜಿಲ್ಲೆಯಾದ್ಯಂತ 8 ಇಂದಿರಾ ಕ್ಯಾಂಟೀನ್‌ಗಳು (Indira Canteen) ಬಂದ್ ಆಗಿವೆ. ಬಳ್ಳಾರಿ ನಗರದ ಐದು ಇಂದಿರಾ ಕ್ಯಾಂಟೀನ್‌ಗಳು ಸೇರಿ ಒಟ್ಟು 8 ಕ್ಯಾಂಟೀನ್‌ಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಸರ್ಕಾರದಿಂದ 3.38 ಕೋಟಿ ರೂಪಾಯಿ ಬಿಲ್ ಬಾಕಿ ಇರುವುದರಿಂದ ನಿರ್ವಹಣೆ ಸಾಧ್ಯವಾಗದೆ ಕ್ಯಾಂಟೀನ್‌ಗಳು ಮುಚ್ಚಿವೆ. ಕಾಂಗ್ರೆಸ್ ಸರ್ಕಾರದ (Congress Government) ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಿಂದಾಗಿ ಇಂದಿರಾ ಕ್ಯಾಂಟೀನ್‌ಗಳು ಮುಚ್ಚುವಂತಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ಬಳ್ಳಾರಿ ನಗರದ ಜಿಲ್ಲಾಸ್ಪತ್ರೆ, ವಿಮ್ಸ್, ಮೋತಿ ವೃತ್ತ, ಎಪಿಎಂಸಿ ಆವರಣದ ಕ್ಯಾಂಟೀನ್‌ಗಳು ಮುಚ್ಚಿವೆ. ಬಳ್ಳಾರಿ ನಗರವೊಂದರಲ್ಲೇ ಸರ್ಕಾರ 3.38 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದೆ. 2021 ರಿಂದಲೇ ಕೋಟಿ ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ.
ಖಾಸಗಿ ಏಜೆನ್ಸಿ ಮೂಲಕ ಇಂದಿರಾ ಕ್ಯಾಂಟೀನ್ಗಳನ್ನು ನಡೆಸಲಾಗುತ್ತಿದೆ. ಇದೀಗ, ಬಿಲ್ ಬಿಡುಗಡೆಯಾಗದ ಕಾರಣ ಕ್ಯಾಂಟೀನ್ ನಡೆಸುವುದು ಕಷ್ಟ ಎಂದು ಖಾಸಗಿ ಏಜೆನ್ಸಿಗಳು ಅವುಗಳನ್ನು ಮುಚ್ಚಿವೆ. ರೇಷನ್, ತರಕಾರಿ, ಗ್ಯಾಸ್, ಸಿಬ್ಬಂದಿ ಸಂಬಳಕ್ಕೂ ಹಣ ಇಲ್ಲದೆ ಕ್ಯಾಂಟೀನ್ಗಳನ್ನು ಬಂದ್ ಮಾಡಲಾಗಿದೆ ಎಂದು ಖಾಸಗಿ ಏಜೆನ್ಸಿಗಳು ತಿಳಿಸಿವೆ.
ಇದೀಗ ಕ್ಯಾಂಟೀನ್‌ಗಳು ಮುಚ್ಚಿರುವುದರಿಂದ ಬಡವರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ.
ಸದ್ಯ ಜನರಿಲ್ಲದೆ ಬಣಗುಡುತ್ತಿರುವ ಇಂದಿರಾ ಕ್ಯಾಂಟೀನ್‌ಗಳು ಅನೈತಿಕ ಚಟುವಟಿಕೆಗಳ ತಾಣಗಳಾಗುತ್ತಿವೆ. ಜನವರಿ 20 ರಿಂದ ಕ್ಯಾಂಟೀನ್‌ಗಳು ಮುಚ್ಚಿವೆ. ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತ, ಸರ್ಕಾರಕ್ಕೆ ನಿರ್ವಹಣೆ ಏಜನ್ಸಿಯಿಂದ ಪತ್ರ ಬರೆಯಲಾಗಿದೆ. ಆದಾಗ್ಯೂ ಖಾಸಗಿ ಏಜೆನ್ಸಿ ಮನವಿಗೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಬೇಸರದಿಂದ ಕ್ಯಾಟೀನ್ ಸೇವೆ ಸ್ಥಗಿತ ಮಾಡುತ್ತಿದ್ದೇವೆ ಎಂದು ಏಜೆನ್ಸಿಯು ಪಾಲಿಕೆಗೆ ಪತ್ರ ಬರೆದಿದೆ. ಏತನ್ಮಧ್ಯೆ, ಕ್ಯಾಂಟೀನ್ಗಳನ್ನು ಮುಚ್ಚಲಾಗಿದ್ದರೂ ಜಿಲ್ಲಾಡಳಿತ ಕ್ಯಾರೇ ಎನ್ನುತ್ತಿಲ್ಲ.
ಬಳ್ಳಾರಿ ನಗರದಲ್ಲಿ 5, ಸಿರಗುಪ್ಪದಲ್ಲಿ 1, ಕೂಡ್ಲಿಗಿಯಲ್ಲಿ 1, ಸಂಡೂರಿನಲ್ಲಿ 1 ಕ್ಯಾಂಟೀನ್ ಮುಚ್ಚಿವೆ. ಅಂದರೆ, ಜಿಲ್ಲೆಯಾದ್ಯಂತ ಒಟ್ಟು ಎಂಟು ಕ್ಯಾಂಟೀನ್‌ಗಳು ಬಂದ್ ಆಗಿವೆ. ಇವುಗಳದ್ದೆಲ್ಲ ಸೇರಿ ಒಟ್ಟು ಬಾಕಿ ಇರುವ ಬಿಲ್ ಮೊತ್ತ 4.5 ಕೋಟಿ ರೂ. ಆಗಿದೆ. ಬಾಕಿ ಬಿಲ್ ಪಾವತಿಸುವರಗೆ ಕ್ಯಾಂಟೀನ್ ಮುಚ್ಚಿರುತ್ತೇವೆ ಎಂದು ಕ್ಯಾಂಟೀನ್ ನಿರ್ವಹಣೆ ಎಜೆನ್ಸಿ ತಿಳಿಸಿದೆ.
ಇದನ್ನೂ ಓದಿ: ಗ್ಯಾರಂಟಿಗೆ ಮತ ನೀಡಿ, ಅಕ್ಷತೆಗಲ್ಲ ಎಂಬುದು ನಮ್ಮ ಉದ್ದೇಶ: ಹೇಳಿಕೆ ಸಮರ್ಥಿಸಿಕೊಂಡ ಹೆಚ್ಸಿ ಬಾಲಕೃಷ್ಣ
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು ಇಂದಿರಾ ಕ್ಯಾಂಟೀನ್. ನಂತರ ಬಿಜೆಪಿ ಸರ್ಕಾರ ಬಂದ ಬಳಿಕ ಕ್ಯಾಂಟೀನ್ ನಿರ್ವಹಣೆ ಕುಂಟುತ್ತಾ ಸಾಗಿತ್ತು. ಆದರೆ, 2023ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಇಂದಿರಾ ಕ್ಯಾಂಟೀನ್ಗಳಿಗೆ ಜೀವ ತುಂಬಲಿದೆ ಎಂಬ ನಿರೀಕ್ಷೆ ಜನರಲ್ಲಿತ್ತು. ಆದರೆ, ಇದೀಗ ಗ್ಯಾರಂಟಿ ಯೋಜನೆಗಳ ಸಲುವಾಗಿ ಅನುದಾನ ಬಿಡುಗಡೆ ಮಾಡದೆ ಇಂದಿರಾ ಕ್ಯಾಂಟೀನ್‌ಗಳು ಸೊರಗುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ