ಬಳ್ಳಾರಿ ಬ್ಯಾನರ್ ಗಲಾಟೆ ಕೇಸ್ ತನಿಖೆ ಹೊಣೆ ಸಿಐಡಿಗೆ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ವೇಳೆ ಗುಂಡಿನ ದಾಳಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಈ ಸಂಬಂಧ ಎಲ್ಲಾ ಕೇಸ್ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಗಲಾಟೆ ಪ್ರಕರಣದ ತನಿಖೆ ಬಗ್ಗೆ ಶಾಸಕ ಜನಾರ್ದನ ರೆಡ್ಡಿ ಭಾರಿ ಅಸಮಾಧಾನ ಹೊರ ಹಾಕಿದ್ದರು. ಘಟನೆ ನಡೆದು 9 ದಿನಗಳಾದರೂ ಒಬ್ಬ ಗನ್‌ಮ್ಯಾನ್ ಮಾತ್ರ ಬಂಧನ ಮಾಡಲಾಗಿದೆ. ಭರತ್ ರೆಡ್ಡಿಯನ್ನು ಯಾಕೆ ಬಂಧಿಸಿಲ್ಲ ಎಂದು ರೆಡ್ಡಿ ಪ್ರಶ್ನಿಸಿದ್ದರು. ಜೊತೆಗೆ ಕೇಸ್ ತನಿಖೆ ಸಿಬಿಐನಿಂದ ನಡೆಯಬೇಕು ಎಂದಿದ್ದರು.

ಬೆಂಗಳೂರು, ಜನವರಿ 09: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ವೇಳೆ ಗುಂಡಿನ ದಾಳಿ ಪ್ರಕರಣದ ತನಿಖೆಯನ್ನುಸಿಐಡಿಗೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಲ್ಲಾ ಪ್ರಕರಣವನ್ನ ಸಿಐಡಿಗೆ ವರ್ಗಾಯಿಸಲಾಗಿದೆ. ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡು ತೀವ್ರ ವಿವಾದ ಸೃಷ್ಟಿಸಿರುವ ಹಿನ್ನೆಲೆ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಬಳ್ಳಾರಿ ಪ್ರಕರಣ ಸಿಐಡಿಗೆ ವಹಿಸುವ ವಿಚಾರ ಸಂಬಂಧ ಇಂದೇ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಚರ್ಚೆ ಮಾಡ್ತೇನೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದರು. ಆ ಬೆನ್ನಲ್ಲೇ ಆದೇಶ ಹೊರಬಿದ್ದಿದೆ.
ಬ್ಯಾನರ್ ಗಲಾಟೆ ಪ್ರಕರಣದ ಕೇಸ್ ತನಿಖೆ ಸಿಐಡಿಗೆ ವಹಿಸುವ ವಿಚಾರ ಸಂಬಂಧ ಈ ಹಿಂದೆಯೂ ಗೃಹ ಸಚಿವ ಪರಮೇಶ್ವರ್ ಸುಳಿವು ನೀಡಿದ್ದರು. ಪೊಲೀಸರ ಗನ್ ಹಾಗೂ ರಿವಾಲ್ವರ್ನಿಂದ ಫೈರಿಂಗ್ ಆಗಿಲ್ಲ, ಖಾಸಗಿ ಗನ್ನಿಂದ ಫೈರಿಂಗ್ ಆಗಿದ್ದೆಂದು ಎಡಿಜಿಪಿ ದೃಢಪಡಿಸಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಆರೋಪಿಗಳನ್ನು ಬಂಧಿಸ್ತೇವೆ. ಹತ್ಯೆಗೆ ಪೆಟ್ರೋಲ್ ಬಾಂಬ್ ಬಳಕೆ ಮಾಡಿದ್ದಾರೆಂಬ ಆರೋಪವೂ ಇದ್ದು,ತನಿಖೆ ಆದಮೇಲೆ ಅದೆಲ್ಲ ಗೊತ್ತಾಗುತ್ತೆ. ಅಗತ್ಯಬಿದ್ದರೆ ಸಿಐಡಿಗೆ ಪ್ರಕರಣ ಕೊಡುತ್ತೇವೆ ಎಂದು ಹೇಳಿದ್ದರು.
ಇದನ್ನೂ ಓದಿ: ಬಳ್ಳಾರಿ ಗಲಭೆ ಕೇಸ್; ಗನ್‌ಮ್ಯಾನ್ ಹೊರತು ಪಡಿಸಿ 25 ಆರೋಪಿಗಳಿಗೆ ಜಾಮೀನು
ಸಿಬಿಐ ತನಿಖೆಗೆ ಆಗ್ರಹಿಸಿದ್ದ ಜನಾರ್ದನ ರೆಡ್ಡಿ
ಗಲಾಟೆ ಪ್ರಕರಣದ ತನಿಖೆ ಬಗ್ಗೆ ಶಾಸಕ ಜನಾರ್ದನ ರೆಡ್ಡಿ ಭಾರಿ ಅಸಮಾಧಾನ ಹೊರ ಹಾಕಿದ್ದರು. ಘಟನೆಯಲ್ಲಿ ಮೃತಪಟ್ಟಿದ್ದ ರಾಜಶೇಖರ್ ಮತೃದೇಹ ಹೂಳಲು ಮೊದಲು ಗುಂಡಿ ತೋಡಿ, ಆ ನಂತರ ಶವ ಸುಡಲಾಗಿದೆ. ಶಾಸಕ ಭರತ್ ರೆಡ್ಡಿ ನಿರ್ದೇಶನದಂತೆ ಕೊಲೆಯಾಗಿದೆ. ತಂದೆ ಸಮಾಧಿ ಬಳಿ ರಾಜಶೇಖರ್ ಅಂತ್ಯಕ್ರಿಯೆ ಆಗಬೇಕು ಎಂದಿದ್ದರು. ಆದರೆ ಹೂಳಲು ತೋಡಿದ್ದ ಗುಂಡಿ ಮುಚ್ಚುವಂತೆ ನಿರ್ದೇಶನ ಬಂದಿದೆ. ಹೀಗಾಗಿ ಸ್ಮಶಾನದಲ್ಲಿ ತೋಡಿದ್ದ ಗುಂಡಿಯನ್ನು ತೆಂಗಿನಕಾಯಿ ನೀರು ಹಾಕಿ ಮುಚ್ಚಿದ್ದಾರೆ. ಬಳಿಕ ಯಾವುದೇ ಸಾಕ್ಷ್ಯ ಸಿಗದ ಹಾಗೆ ರಾಜಶೇಖರ್ ಮೃತದೇಹವನ್ನು ಗ್ಯಾಸ್‌ನಿಂದ ಸುಡಲಾಗಿದೆ. ಘಟನೆ ನಡೆದು 9 ದಿನಗಳಾದರೂ ಒಬ್ಬ ಗನ್‌ಮ್ಯಾನ್ ಮಾತ್ರ ಬಂಧನ ಮಾಡಲಾಗಿದೆ. ಭರತ್ ರೆಡ್ಡಿಯನ್ನು ಯಾಕೆ ಬಂಧಿಸಿಲ್ಲ ಎಂದು ರೆಡ್ಡಿ ಪ್ರಶ್ನಿಸಿದ್ದರು. ಘಟನೆಗೆ ಕಾರಣಕರ್ತರಾದ ಶಾಸಕನ ಬಂಧನವಾಗಬೇಕು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:52 pm, Fri, 9 January 26