ಬಳ್ಳಾರಿ ಬಾಣಂತಿಯರ ಮರಣ: ಸರ್ಕಾರಿ ಕೆಲಸ ಸಿಕ್ಕ ಖುಷಿಯಲ್ಲಿದ್ದ ನಂದಿನಿ ಸಾವು, ನಿರ್ಲಕ್ಷ್ಯಕ್ಕೆ ಬಲಿಯಾಯ್ತು ಅಮಾಯಕ ಜೀವ

| Updated By: ವಿವೇಕ ಬಿರಾದಾರ

Updated on: Nov 30, 2024 | 12:40 PM

ಬಳ್ಳಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರು ಮೃತಪಟ್ಟಿದ್ದು ಆಘಾತ ಉಂಟುಮಾಡಿದೆ. ನಂದಿನಿ ಎಂಬ ಬಾಣಂತಿಯ ಸಾವಿನ ಹಿಂದಿನ ದಾರುಣ ಕಥೆ ಕರಳು ಹಿಂಡುವಂತಿದೆ. ನಂದಿನಿ ಉನ್ನತ ವಿದ್ಯಾಭ್ಯಾಸ ಪಡೆದು, ಸರ್ಕಾರಿ ನೌಕರಿ ಪಡೆಯಲು ಸಿದ್ಧಳಾಗಿದ್ದಳು. ಆದರೆ ಅವಧಿಗೂ ಮುನ್ನ ಸಿಸೇರಿಯನ್‌ ಮೂಲಕ ಹೆರಿಗೆಯಾದ ನಂತರ, ಗ್ಲುಕೋಸ್ ದ್ರಾವಣದ ಕಾರಣದಿಂದ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಇದು ಆರೋಗ್ಯ ವ್ಯವಸ್ಥೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸುತ್ತದೆ.

ಬಳ್ಳಾರಿ ಬಾಣಂತಿಯರ ಮರಣ: ಸರ್ಕಾರಿ ಕೆಲಸ ಸಿಕ್ಕ ಖುಷಿಯಲ್ಲಿದ್ದ ನಂದಿನಿ ಸಾವು, ನಿರ್ಲಕ್ಷ್ಯಕ್ಕೆ ಬಲಿಯಾಯ್ತು ಅಮಾಯಕ ಜೀವ
ಬಿಮ್ಸ್ ಆಸ್ಪತ್ರೆ​, ಮೃತ ನಂದಿನಿ
Follow us on

ಬಳ್ಳಾರಿ, ನವೆಂಬರ್​ 30: ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆ (BIMS)ಯಲ್ಲಿ ನಾಲ್ವರು ಬಾಣಂತಿಯರು ಮೃತಪಟ್ಟಿದ್ದಾರೆ. ನಾಲ್ವರಲ್ಲಿ ಬಳ್ಳಾರಿ ತಾಲೂಕಿನ ಬಾಣಾಪುರ ಗ್ರಾಮದ ನಂದಿನಿ ಎಂಬುವರು ನವೆಂಬರ್​ 09 ರಂದು ಹೆರಿಗೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ನವೆಂಬರ್​ 12 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಅಂದು ಮಧ್ಯರಾತ್ರಿ ಮೃತಪಟ್ಟಿದ್ದು, ದುರ್ದೈವದ ಸಂಗತಿಯಾಗಿದೆ.

ಇನ್ನು, ಮೃತ ಬಾಣಂತಿ ನಂದಿನಿ ಹಿಂದೆ ಕರುಳು ಹಿಂಡುವ ಕಥೆ ಇದೆ. ನಂದಿನಿ ಛಲಗಾರ್ತಿ ಅಂದುಕೊಂಡಿದ್ದನ್ನು ಸಾಧಿಸಿ ತೀರುವ ಮಹಿಳೆಯಾಗಿದ್ದಳು. ಬಡತನದಲ್ಲಿ ಬೆಳದಿದ್ದ ನಂದಿನಿ ಕಷ್ಟಪಟ್ಟು ಓದಿ ಡಬಲ್​​ ಡಿಗ್ರಿ ತನ್ನದಾಗಿಸಿಕೊಂಡಿದ್ದಳು. ನಂದಿನಿ ಪೋಷಕರು ಕೂಡ ಮಗಳ ಓದಿಗೆ ಯಾವುದೇ ಕೊರತೆ ಬಾರದಂತೆ ನೋಡಿಕೊಂಡಿದ್ದರು.

ನಂದಿನಿ ಪೋಷಕರ ಬಳಿ ಕೇವಲ ಎರಡೂವರೆ ಎಕರೆ ಜಮೀನು ಇತ್ತು. ಇದರಲ್ಲಿ ಬಂದ ಆದಾಯದಲ್ಲೆ ಜೀವನ ನಡೆಸುತ್ತಿದ್ದರು. ಮಗಳು ನಂದಿನಿಯನ್ನು ವಿದ್ಯಾವಂತಳನ್ನಾಗಿ ಮಾಡಿದ್ದರು. ಪೋಷಕರ ಆಸೆಯಂತೆ ವಿದ್ಯಾವಂತಳಾದ ನಂದಿನಿ, ನಾನು ದುಡಿದು ನಿಮ್ಮನ್ನು ನೋಡಿಕೊಳ್ಳುತ್ತೇನೆ ಅಂತ ತಂದೆ-ತಾಯಿಗೆ ಹೇಳಿದ್ದಳು.

ಸರ್ಕಾರಿ ವೇತನ ಪಡೆಯಬೇಕಿದ್ದ ನಂದಿನಿ

ತಂದೆ-ತಾಯಿಗೆ ಆಸರೆ‌ ಆಗಬೇಕೆಂದು ನಂದಿನಿ ಅತಿಥಿ ಶಿಕ್ಷಕಳಾಗಿ ಕೆಲಸ ಮಾಡುತ್ತಿದ್ದಳು. ಇದರ ನಡುವೆಯೇ ನಂದಿನಿ ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆ ಬರೆದಿದ್ದಳು. “ಅಮ್ಮ-ಅಪ್ಪ ನಾನು ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಯಲ್ಲಿ ಪಾಸಾಗುತ್ತೇನೆ, ನಿಮ್ಮನ್ನು ಸುಖವಾಗಿ ನೋಡಿಕೊಳ್ಳುತ್ತೇನೆ” ಎಂದು ನಂದಿನಿ ಹೇಳಿದ್ದಳು. ಪರೀಕ್ಷೆಯ ಫಲಿತಾಂಶ ಬಂದಿದ್ದು, ನಂದಿನಿ ಪಾಸಾಗಿದ್ದಳು. ಇನ್ನೇನು ಕೆಲವೇ ದಿನಗಳಲ್ಲಿ ನಂದಿನಿ ಸರ್ಕಾರಿ ನೌಕರಿಗೆ ಸೇರಬೇಕಿತ್ತು.

ಇದನ್ನೂ ಓದಿ: ಬಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದ 7 ಮಂದಿ ಗರ್ಭಿಣಿಯರಲ್ಲಿ ಮೂವರಿಗೆ ಇಲಿ ಜ್ವರ

ನಂದಿನಿ ಮದುವೆ, ಜಮೀನು ಮಾರಾಟ

ನಂದಿನಿ ಕೆಲಸ ಮಾಡಲು ಆರಂಭಿಸುತ್ತಿದ್ದಂತೆ, ಪೋಷಕರು ಆಕೆಗೆ ವರ ನೋಡಲು ಆರಂಭಿಸಿದರು. ಕಂಕಣಭಾಗ್ಯ ಕೂಡಿ ಬಂದಿದ್ದು ನಂದಿನಿಯನ್ನು ಮೋಕ ಗ್ರಾಮದ ಯುವಕನ ಜೊತೆ 10 ತಿಂಗಳ ಹಿಂದೆ ವಿವಾಹ ಮಾಡಿಕೊಟ್ಟರು. ಮಗಳ ಮದುವೆಗೆಂದು ಪೋಷಕರು ಇದ್ದ ಎರಡೂವರೆ ಎಕರೆ ಜಮೀನು ಮಾರಿ, ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು.

ಬಿಮ್ಸ್​ಗೆ ದಾಖಲು ಹಾರಿಹೋದ ಪ್ರಾಣಪಕ್ಷಿ

ಗರ್ಭವತಿಯಾದ ನಂದಿನಿ ನವೆಂಬರ್​ 9 ರಂದು ಬಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದಳು. ನವೆಂಬರ್​ 12 ರಂದು ಸಿಸೇರಿಯನ್​ ಮೂಲಕ ವೈದ್ಯರು ಹೆರಿಗೆ ಮಾಡಿದ್ದಾರೆ. ನಂದಿನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗುವಿಗೆ ಜನ್ಮ ನೀಡಿದ ಎರಡೇ ದಿನಗಳಲ್ಲಿ ನಂದಿನಿ ಪ್ರಾಣ ಬಿಟ್ಟಿದ್ದಾಳೆ. ಬಾಣಂತಿಯಾದ ನಂದಿನಿ ಸಾವಿಗೆ ಗ್ಲೊಕೋಸ್ ಸಹಿತ ಇಂಟ್ರಾವೀನಸ್ (ಐವಿ) ದ್ರಾವಣ ಕಾರಣ ಎಂಬುವುದು ತನಿಖೆಯಲ್ಲಿ ತಿಳಿದುಬಂದಿದೆ.

ಅವಧಿಗೂ ಮುನ್ನ ಸಿಸೇರಿಯನ್

“ನಂದಿನಿಗೆ ಡಿಸೆಂಬರ್​ 5 ರ ಬಳಿಕ ಹೆರಗೆ ಆಗಬೇಕಿತ್ತು. ಆದರೆ, ಅವಧಿಗೂ ಮುನ್ನ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಿದ್ದಾರೆ. ಅಮ್ಮ ಸರ್ಕಾರಿ ನೌಕರಿ‌ ಆಗುತ್ತೆ, ನಾನೇ ನಿಮಗೆ ಆಸರೆ ಆಗುತ್ತೇನೆ ಅಂದ್ದಿದ್ದಳು. ಪರೀಕ್ಷೆಯಲ್ಲಿ ಪಾಸ್​ ಆಗಿದ್ದಾಳೆ, ಆದರೆ ಅವಳೆ ಇಲ್ಲ. ಖಾಸಗಿ‌ ಆಸ್ಪತ್ರೆಗೆ ಹೋಗಿದ್ದರೆ ಮಗಳು ಬದುಕುತ್ತಿದ್ದಳು. ಗ್ಲುಕೋಸ್ ಬಾಟಲ್ ಮಗಳ ಸಾವಿಗೆ ಕಾರಣವಾಯ್ತು. ಹೆರಿಗೆಯಿಂದ ಸಾವು ಬರುತ್ತೆ ಅಂತ ಗೊತ್ತಿದ್ದರೆ ನಾವು ನಂದಿನಿಗೆ ಮದ್ವೆ ಮಾಡುತ್ತಿರಲಿಲ್ಲ” ಎಂದು ನಂದಿನಿ ತಾಯಿ ಕಣ್ಣೀರು ಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:17 pm, Sat, 30 November 24