ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ಕಾರಣ ಬಹಿರಂಗ!
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ 15 ದಿನಗಳಲ್ಲಿ ಐದು ಬಾಣಂತಿಯರು ಮೃತಪಟ್ಟಿದ್ದಾರೆ. ತನಿಖಾ ತಂಡದ ವರದಿಯ ಪ್ರಕಾರ, ಸಿಸೇರಿಯನ್ ಸಮಯದಲ್ಲಿ ನೀಡಲಾದ ಕಳಪೆ ಗುಣಮಟ್ಟದ IV ಗ್ಲುಕೋಸ್ ಕಾರಣ ಎಂದು ಉಲ್ಲೇಖವಾಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.
ಬಳ್ಳಾರಿ, ನವೆಂಬರ್ 29: ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ (BIMS) ಕಳೆದ 15 ದಿನಗಳಲ್ಲಿ ನಾಲ್ವರು ಬಾಣಂತಿಯರ ಸಾವಿಗೆ ಕಾರಣವೇನು ಎಂಬುವುದು ತಿಳಿದಿದೆ. ಸಿಸೇರಿಯನ್ ವೇಳೆ ನೀಡಿದ್ದ “IV ಗ್ಲೂಕೋಸ್”ನಿಂದ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ತನಿಖಾ ಸಂಸ್ಥೆ ಸರ್ಕಾರಕ್ಕೆ (Karnataka Government) ಸಲ್ಲಿಸಿದ್ದ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.
ಐವಿ (ಇಂಟ್ರಾವೆನಸ್ ದ್ರಾವಣ) ಕಳಪೆ ಗುಣಮಟ್ಟದಿಂದ ಕೂಡಿದೆ. ಆದರೂ, ಕೂಡ ವೈದ್ಯರು ಸಿಸೇರಿಯನ್ ವೇಳೆ “IV ಗ್ಲುಕೋಸ್” ನೀಡಿದ್ದರಿಂದ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ತನಿಖಾ ತಂಡ ಪತ್ತೆ ಹಚ್ಚಿದೆ. ಹೀಗಾಗಿ, ಇಂಟ್ರಾವೆನಸ್ ದ್ರಾವಣ (IV ಗ್ಲುಕೋಸ್) ಬಳಕೆ ಮಾಡದಂತೆ ಆರೋಗ್ಯ ಇಲಾಖೆ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.
ಏನಾಗಿತ್ತು?
ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಣಿಯರಿಗೆ ಸಿಸೇರಿಯನ್ ಮಾಡಲಾಗಿತ್ತು. ಸಿಸೇರಿಯನ್ ಬಳಿಕ ಬಾಣಂತಿಯರ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ನವೆಂಬರ್ 09 ರಂದು ಹೆರಿಗೆ ಬಳಿಕ ಏಕಾಏಕಿ 07 ಜನ ಬಾಣಂತಿಯರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆರೋಗ್ಯದಲ್ಲಿನ ಏರುಪೇರಿಂದ ಕಳೆದ 15 ದಿನಗಳಲ್ಲಿ ಐವರು ಬಾಣಂತಿಯರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ 5 ಬಾಣಂತಿಯರ ಸಾವು, ಸರ್ಕಾರದ ವಿರುದ್ಧ ಅಶೋಕ್ ಆಕ್ರೋಶ
ಇದು ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿದೆ. ಸರ್ಕಾರದ ವಿರುದ್ಧ ವಿಪಕ್ಷಗಳು ಹರಿಹಾಯ್ದಿವೆ. ಬಾಣಂತಿಯರ ಸಾವಿಗೆ ಕಾರಣವೇನು ಎಂಬುವುದನ್ನು ತಿಳಿಯಲು ಸರ್ಕಾರ ತಜ್ಞರ ಸಮಿತಿ ರಚಿಸಿತ್ತು. ಡಾ. ಸವಿತಾ, ಡಾ. ಭಾಸ್ಕರ್ ಮತ್ತು ಡಾ. ಹರ್ಷ ಅವರನ್ನು ಒಳಗೊಂಡ ತಜ್ಞರ ಸಮಿತಿಯನ್ನು ಸರ್ಕಾರ ರಚನೆ ಮಾಡಿದ್ದು, ಈ ಕೂಡಲೇ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸಾವಿಗೆ ಏನು ಕಾರಣ ಎಂದು ತನಿಖೆ ನಡೆಸಬೇಕು ಎಂದು ಸೂಚಿಸಿತ್ತು. ತನಿಖೆ ಬಳಿಕ ಸರ್ಕಾರಕ್ಕೆ ತುರ್ತು ವರದಿಯನ್ನ ಸಲ್ಲಿಕೆ ಮಾಡಬೇಕೆಂದು ಸೂಚನೆ ನೀಡಿತ್ತು. ತನಿಖೆ ನಡೆಸಿದ ತಂಡ ಸಾವಿಗೆ ಕಾರಣವೇನು ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಐವಿ ಗ್ಲೂಕೋಸ್ ನೀಡಿರುವುದೇ ಗರ್ಭಿಣಿಯರ ಸಾವಿಗೆ ಕಾರಣ ಎಂದು ತನಿಖಾ ತಂಡ ವರದಿ ನೀಡಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.
ಬಾಣಂತಿಯರು ಮೃತಪಟ್ಟಿದ್ದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಸರ್ಕಾರ ತನಿಖೆ ನಡೆಸಲು ಸಮಿತಿ ರಚಿಸಿ, ವರದಿ ತರಿಸಿಕೊಂಡಿದೆ. ವರದಿಯನ್ನು ಸರ್ಕಾರ ಗೌಪ್ಯವಾಗಿಟ್ಟಿದ್ದು, ವಿಪಕ್ಷಗಳ ಆಕ್ರೋಶವಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:52 pm, Fri, 29 November 24