ರೆಡ್ಡಿಗಳ ದಂಗಲ್​​ಗೆ ಖಾಕಿ ತಲೆದಂಡ: ಸಚಿವ ಜಮೀರ್​​ ಎದುರು ದಕ್ಷ ಅಧಿಕಾರಿ ಕಣ್ಣೀರು!

ಬ್ಯಾನರ್​​ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದ ರೆಡ್ಡಿಗಳ ನಡುವಿನ ದಂಗಲ್​​ ಸಂಬಂಧ ಎಸ್ಪಿ ಅಮಾನತು ಬೆನ್ನಲ್ಲೇ ಡಿಐಜಿಪಿಯನ್ನೂ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಈ ವಿಚಾರವಾಗಿ ಹಿರಿಯ ಅಧಿಕಾರಿ ವರ್ತಿಕಾ ಕಟಿಯಾರ್ ಸಚಿವ ಜಮೀರ್​​ ಅಹ್ಮದ್​​ ಮುಂದೆ ಕಣ್ಣಿರು ಹಾಕಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಎಸ್ಪಿಯಾಗಿದ್ದ ಪವನ್ ನೆಜ್ಜೂರು ಕೂಡ ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ ಎಂಬ ಸುದ್ದಿ ರಾಜ್ಯವ್ಯಾಪಿ ಚರ್ಚೆಗೆ ಕಾರಣವಾಗಿರುವ ನಡುವೆಯೇ ಮತ್ತೋರ್ವ ಅಧಿಕಾರಿ ಘಟನೆಯಿಂದ ನೊಂದಿರೋದು ಬೆಳಕಿಗೆ ಬಂದಿದೆ.

ರೆಡ್ಡಿಗಳ ದಂಗಲ್​​ಗೆ ಖಾಕಿ ತಲೆದಂಡ: ಸಚಿವ ಜಮೀರ್​​ ಎದುರು ದಕ್ಷ ಅಧಿಕಾರಿ ಕಣ್ಣೀರು!
ಸಚಿವರ ಬಳಿ ಅಧಿಕಾರಿ ಕಣ್ಣೀರು.
Edited By:

Updated on: Jan 09, 2026 | 4:07 PM

ಬೆಂಗಳೂರು, ಜನವರಿ 09: ಬ್ಯಾನರ್​​ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್​​ ಕಾರ್ಯಕರ್ತ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಹಿರಿಯ ಅಧಿಕಾರಿಗಳ ತಲೆದಂಡ ಮಾಡಿತ್ತು. ಆರಂಭದಲ್ಲಿ ಎಸ್ಪಿ ಪವನ್ ನೆಜ್ಜೂರು ಅವರನ್ನು ಮಾತ್ರ ಅಮಾನತು ಮಾಡಲಾಗಿತ್ತಾದರೂ ಬಳಿಕ ಡಿಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು. ಸಿವಿಲ್ ರೈಟ್ಸ್ ಮತ್ತು ಎನ್ಫೋರ್ಸ್​ಮೆಂಟ್​ ವಿಭಾಗಕ್ಕೆ ಟ್ರಾನ್ಸ್​​ಫರ್​​ ಆಗಿರುವ ವರ್ತಿಕಾ, ಸರ್ಕಾರದ ನಿಲುವಿಗೆ ತೀವ್ರ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ಸಚಿವರ ಮುಂದೆ ಕಣ್ಣೀರು

ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್‌ ಮುಂದೆ ದಕ್ಷ ಅಧಿಕಾರಿ ವರ್ತಿಕಾ ಕಟಿಯಾರ್​​ ಕಣ್ಣೀರು ಹಾಕಿದ್ದು, ತಡರಾತ್ರಿಯೂ ಸ್ಥಳದಲ್ಲಿದ್ದು ನ್ಯಾಯುತವಾಗಿ ಕೆಲಸ ಮಾಡಿದ್ದೇನೆ. ಇಷ್ಟಾದರೂ ತನ್ನ ವರ್ಗಾವಣೆ ಮಾಡಿ ಅನ್ಯಾಯ ಮಾಡಿದ್ದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ. ತೀವ್ರ ಬೇಸರಗೊಂಡಿದ್ದ ವರ್ತಿಕಾರಿಗೆ ಈ ವೇಳೆ ಸಚಿವ ಜಮೀರ್ ಅಹಮ್ಮದ್‌ ಖಾನ್ ಧೈರ್ಯತುಂಬಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಳ್ಳಾರಿ ಬ್ಯಾನರ್ ಗಲಾಟೆ; ಭರತ್ ರೆಡ್ಡಿ ಬೆಂಬಲಿಗರಿಂದ ಜನಾರ್ದನ ರೆಡ್ಡಿ ವಿರುದ್ಧ ಸ್ಫೋಟಕ ಸಾಕ್ಷ್ಯ ಬಿಡುಗಡೆ

ಇನ್ನು ಸರ್ಕಾರ ತಮ್ಮನ್ನು ಅಮಾನತು ಮಾಡಿರುವ ವಿಚಾರವಾಗಿ ಪವನ್ ನೆಜ್ಜೂರು ಕೂಡ ಮಾನಸಿಕವಾಗಿ ಬಹಳ ನೊಂದಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ತುಮಕೂರಿನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಆಘಾತಕಾರಿ ಸುದ್ದಿಗಳು ಹರಿದಾಡಿದ್ದವು. ಸ್ನೇಹಿತನ ಫಾರ್ಮ್‌ಹೌಸ್‌ನಲ್ಲಿ ಮಾತ್ರೆ ಸೇವಿಸಿದ್ದ ನಜ್ಜೂರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ ಎನ್ನಲಾಗಿತ್ತು. ಬಳಿಕ ಈ ಬಗ್ಗೆ ಖುದ್ಧು ಸ್ಪಷ್ಟನೆ ನೀಡಿದ್ದ ಪವನ್ ನೆಜ್ಜೂರ್ ಅವರ ತಂದೆ, ಯಾವುದೇ ಕಾರಣಕ್ಕೂ ನನ್ನ ಪುತ್ರ ಆತ್ಮಹತ್ಯೆಯ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದರು.

ಬ್ಯಾನರ್​​ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ಅವರನ್ನ ಅಮಾನತು ಮಾಡಿತ್ತು. ದುರ್ದೈವ ಅಂದರೆ ಬಳ್ಳಾರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಪವನ್ ನೆಜ್ಜೂರು ಸಸ್ಪೆಂಡ್ ಆಗಿದ್ದರು. ರೆಡ್ಡಿಗಳ ದಂಗಲ್‌ನಲ್ಲಿ ಪೊಲೀಸ್ ಅಧಿಕಾರಿಗಳ ತಲೆದಂಡದ ಬಗ್ಗೆ ಕಿಡಿ ಕಾರಿದ್ದ ವಿಪಕ್ಷಗಳು, ಸರ್ಕಾರದ ಮಾನ ಉಳಿಸಿಕೊಳ್ಳುವುದಕ್ಕೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದ್ದವು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.