AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಬ್ಯಾನರ್ ಗಲಾಟೆ: ಭರತ್ ರೆಡ್ಡಿ ಬೆಂಬಲಿಗರಿಂದ ಜನಾರ್ದನ ರೆಡ್ಡಿ ವಿರುದ್ಧ ಸ್ಫೋಟಕ ಸಾಕ್ಷ್ಯ ಬಿಡುಗಡೆ

ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಜನಾರ್ದನ ರೆಡ್ಡಿ ಕಚೇರಿ ಮೇಲೆ ಗನ್‌ಮ್ಯಾನ್ ನಿಂತ ಫೋಟೋವನ್ನು ಕಾಂಗ್ರೆಸ್​​ ಬಿಡುಗಡೆಮಾಡಿದ್ದು, ಇದು ರೆಡ್ಡಿ ವಿರುದ್ಧ ಹೊಸ ಆರೋಪಕ್ಕೆ ಕಾರಣವಾಗಿದೆ. ಈ ನಡುವೆ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ರೆಡ್ಡಿ ಹಾಗೂ ಆಪ್ತರ ದೂರುಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ಬಳ್ಳಾರಿ ಬ್ಯಾನರ್ ಗಲಾಟೆ: ಭರತ್ ರೆಡ್ಡಿ ಬೆಂಬಲಿಗರಿಂದ ಜನಾರ್ದನ ರೆಡ್ಡಿ ವಿರುದ್ಧ ಸ್ಫೋಟಕ ಸಾಕ್ಷ್ಯ ಬಿಡುಗಡೆ
ಭರತ್​​ ರೆಡ್ಡಿ ಆಪ್ತರು ರಿಲೀಸ್​​ ಮಾಡಿರುವ ಫೋಟೋ.
ವಿನಾಯಕ ಬಡಿಗೇರ್​
| Edited By: |

Updated on:Jan 07, 2026 | 9:18 AM

Share

ಬಳ್ಳಾರಿ, ಜನವರಿ 07: ಬ್ಯಾನರ್​​ ವಿಚಾರವಾಗಿ ನಡೆದ ಗಲಾಟೆ ವೇಳೆ ಕಾಂಗ್ರೆಸ್​​ ಕಾರ್ಯಕರ್ತ ಮೃತಪಟ್ಟಿದ್ದ ಪ್ರಕರಣಕ್ಕೆ ದಿನಕ್ಕೊಂದು ಹೊಸ ಟ್ವಿಸ್ಟ್​​ ಸಿಗುತ್ತಿದೆ. ಗಲಭೆ ವೇಳೆ ಜನಾರ್ದನ ರೆಡ್ಡಿ ಮನೆ ಮೇಲೆ ಗನ್‌ಮ್ಯಾನ್‌ ನಿಂತಿರೋದು ಎನ್ನಲಾದ ಫೋಟೋವೊಂದನ್ನು ಶಾಸಕ ಭರತ್ ರೆಡ್ಡಿ ಬೆಂಬಲಿಗರು ರಿಲೀಸ್​​ ಮಾಡಿದ್ದಾರೆ. ಜನಾರ್ದನ ರೆಡ್ಡಿ ಕಡೆಯವರಿಂದಲೂ ಫೈರಿಂಗ್ ನಡೆದಿದೆ ಎಂದು ಆರೋಪಿಸಲಾಗಿದ್ದು, ಸರ್ಕಾರಿ ಗನ್‌ಮ್ಯಾನ್ ವಿಚಾರಣೆಗೆ ಕಾಂಗ್ರೆಸ್ ಒತ್ತಾಯ ಮಾಡಿದೆ. ಹೀಗಾಗಿ ಈಗ ಬಿಡುಗಡೆ ಮಾಡಲಾಗಿರುವ ಫೋಟೋ ಬಗ್ಗೆಯೂ ಬಳ್ಳಾರಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಇನ್ನು ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ರೆಡ್ಡಿ ಹಾಗೂ ಬೆಂಬಲಿಗ ನಾಗರಾಜ್ ನೀಡಿದ ದೂರಿನ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೆ ಯತ್ನ ಎಂದು ಆರೋಪಿಸಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಕೇಸ್ ದಾಖಲಿಸಿದ್ದರೆ, ಅವರ ಆಪ್ತ ನಾಗರಾಜ್ ಅಟ್ರಾಸಿಟಿ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಬ್ಯಾನರ್ ಹರಿದ ಸ್ಥಳ, ಜನಾರ್ದನ ರೆಡ್ಡಿ ತೋರಿಸಿದ ಜಾಗಗಳನ್ನು ಬಾಂಬ್ ನಿಷ್ಕ್ರಿಯ ದಳ ಮತ್ತು ಎಫ್​ಎಸ್​ಎಲ್​ ತಂಡ ಪರಿಶೀಲನೆ ನಡೆಸಿದೆ. ಜನಾರ್ದನ ರೆಡ್ಡಿ ದೂರಿನ ಕೇಸ್​​ ತನಿಖಾಧಿಕಾರಿ ಅಯ್ಯನಗೌಡ ಮತ್ತು ಅಟ್ರಾಸಿಟಿ ಕೇಸ್ ತನಿಖಾಧಿಕಾರಿ ಬಸವರಾಜ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಜನಾರ್ದನ ಮನೆ ಸಿಸಿಕ್ಯಾಮರ ದೃಶ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶಾಸಕ ಜನಾರ್ದನ ರೆಡ್ಡಿ ತೋರಿಸಿದ್ದ ಬುಲೆಟ್ ಕೂಡ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಗಲಭೆಗೆ ಮತ್ತೊಂದು ಸ್ಫೋಟಕ ತಿರುವು! ಗಲಾಟೆ ಶುರುವಾಗಿದ್ದು ಹೇಗೆ ಗೊತ್ತಾ?

ಶಾಸಕ ಭರತ್‌ ರೆಡ್ಡಿ ಕಡೆಯವರು ಫೈ ರಿಂಗ್‌ ಮಾಡುತ್ತಿರುವ ದೃಶ್ಯಗಳನ್ನ ಬಿಜೆಪಿ ನಾಯಕರು ರಿಲೀಸ್‌ ಮಾಡಿದ್ದರು. ಇತ್ತ ಬಿಜೆಪಿ ಕಡೆಯವರು ಖಾರದಪುಡಿ ಎರಚಿರೋದು, ಬ್ಯಾನರ್‌ ಹರಿಯುತ್ತಿರುವ ದೃಶ್ಯಗಳನ್ನ ಕಾಂಗ್ರೆಸ್​ ಪಡೆ ಬಿಡುಗಡೆ ಮಾಡಿತ್ತು. ನಿನ್ನೆ ಬಳ್ಳಾರಿಗೆ ಭೇಟಿ ನೀಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್​​ ಕೂಡ ಜನಾರ್ದನ ರೆಡ್ಡಿ ವಿರುದ್ಧ ಕಿಡಿ ಕಾರಿದ್ದರು. ಜನಾರ್ದನರೆಡ್ಡಿಯನ್ನು ಕೊಲ್ಲಲು ಬಂದಿದ್ದರೆ ಮಹಜರು ಮಾಡಿಸಬೇಕಿತ್ತು. ಜನಾರ್ದನರೆಡ್ಡಿ ಬುಲೆಟ್‌ ತೋರಿಸ್ತಿದ್ರು, ಅವರಿಗೆ ಹೊಡೆದಿತ್ತಾ ಅದು? ತಪ್ಪು ಮಾಹಿತಿ ನೀಡೋದು ಸರಿಯಲ್ಲ, ಹೇಳಿದ್ದಕ್ಕೆಲ್ಲಾ ಉತ್ತರ ಕೊಡಲ್ಲ ಎಂದಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 9:17 am, Wed, 7 January 26