ಬಳ್ಳಾರಿ ಗಲಭೆಗೆ ಮತ್ತೊಂದು ಸ್ಫೋಟಕ ತಿರುವು! ಗಲಾಟೆ ಶುರುವಾಗಿದ್ದು ಹೇಗೆ ಗೊತ್ತಾ?
ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಗಲಭೆಯ ದೃಶ್ಯಾವಳಿಗಳು ಹೊರಬಂದಿವೆ. ಜನಾರ್ದನ ರೆಡ್ಡಿ ಬೆಂಬಲಿಗರೇ ಬ್ಯಾನರ್ ಹರಿದು ಗಲಾಟೆ ಆರಂಭಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಇದಕ್ಕೆ ಸಾಕ್ಷಿಯೆಂಬಂತೆ ವೀಡಿಯೋಗಳನ್ನೂ ಹರಿಬಿಡಲಾಗಿದೆ. ದೃಶ್ಯಗಳಲ್ಲಿ ಗಲಾಟೆಗೆ ಪ್ರಚೋದನೆ ನೀಡಿದ ಹಲವು ಅಂಶಗಳು ಕಂಡುಬಂದಿವೆ.

ಬಳ್ಳಾರಿ, ಜನವರಿ 06: ಜಿಲ್ಲೆಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರಂಭಿಕ ಹಂತದ ದೃಶ್ಯಗಳು ಬಹಿರಂಗವಾಗಿದ್ದು, ಇಡೀ ಗಲಾಟೆಗೆ ಹೊಸ ತಿರುವು ಪಡೆದುಕೊಂಡಿದೆ. ಗಲಾಟೆ ಆರಂಭಿಸಿದ್ದು ಜನಾರ್ದನ ರೆಡ್ಡಿ ಬೆಂಬಲಿಗರೆಂಬುದಾಗಿ ಕಾಂಗ್ರೆಸ್ ಗುಂಪು ಆರೋಪಿಸಿದ್ದು, ಇದಕ್ಕೆ ಸಾಕ್ಷಿಯಾಗಿ ಕೆಲವು ದೃಶ್ಯಗಳನ್ನು ಕಾಂಗ್ರೆಸ್ ಮುಖಂಡರು ಬಿಡುಗಡೆ ಮಾಡಿದ್ದಾರೆ.
ಶಾಸಕ ಭರತ್ ರೆಡ್ಡಿ ಬೆಂಬಲಿಗರು ಜನಾರ್ದನ ರೆಡ್ಡಿ ನಿವಾಸದೆದುರು ಬ್ಯಾನರ್ ಕಟ್ಟುತ್ತಿದ್ದಂತೆ ಬಿಜೆಪಿಗರು ಹರಿದು ಆಕ್ರೋಶ ಹೊರಹಾಕಿದ್ದರು. ವಿಷಯ ತಿಳಿದ ನಂತರ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಖಾಸಗಿ ಗನ್ ಮ್ಯಾನ್ಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಈ ಗಲಾಟೆಯಲ್ಲಿ ಗುಂಡಿನ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದ. ಘಟನೆಯ ಕುರಿತಾಗಿ ಹಲವು ಗೊಂದಲ ಉಂಟಾಗಿದ್ದ ಹಿನ್ನೆಲೆಯಲ್ಲಿಯೇ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಗಲಾಟೆಗೆ ಸಂಬಂಧಿಸಿದ ಹಲವು ವೀಡಿಯೋಗಳು ಹೊರಬಂದಿವೆ.
ಉದ್ದೇಶಪೂರ್ವಕವಾಗಿ ಬ್ಯಾನರ್ ಕಿತ್ತ ಬಿಜೆಪಿಗರು
ದೃಶ್ಯಗಳಲ್ಲಿರುವಂತೆ ಜನಾರ್ದನ ರೆಡ್ಡಿ ಮನೆ ಕಾಂಪೌಂಡ್ ಹೊರಭಾಗದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್ ಅಳವಡಿಸಿದ್ದರು. ರಸ್ತೆ ಬದಿಯಲ್ಲಿ ಅಳವಡಿಸಿದ್ದ ಈ ಬ್ಯಾನರ್‌ಗಳನ್ನು ಉದ್ದೇಶಪೂರ್ವಕವಾಗಿ ರೆಡ್ಡಿ ಬೆಂಬಲಿಗರು ಕಿತ್ತು ಹಾಕಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲೇ ವಿರೋಧ ವ್ಯಕ್ತಪಡಿಸಿದ್ದು, ಬಳಿಕ ಮತ್ತೆ ಅದೇ ಜಾಗದಲ್ಲಿ ಬ್ಯಾನರ್ ಅಳವಡಿಸಲು ಮುಂದಾದಾಗ ಗಲಾಟೆ ತೀವ್ರಗೊಂಡಿತ್ತು. ಹೀಗೆ ಕ್ಷಣಾರ್ಧದಲ್ಲಿ ಎರಡೂ ಕಡೆಯಿಂದ ಸಾವಿರಾರು ಜನ ಸೇರಿ ಪರಿಸ್ಥಿತಿ ಗಲಭೆಯಾಗಿ ಮಾರ್ಪಟ್ಟಿದ್ದು, ತಳ್ಳಾಟ- ನೂಕಾಟ ಏರ್ಪಟ್ಟಿತ್ತು.
ಇದನ್ನೂ ಓದಿ ಬಳ್ಳಾರಿ ಗಲಭೆ: 20 ಜನರ ಬಂಧನ, ಕಾಂಗ್ರೆಸ್ನವರೆಷ್ಟು, ಬಿಜೆಪಿಯವರೆಷ್ಟು? ರೆಡ್ಡಿಗೂ ಸಂಕಷ್ಟ
ತೊಡೆತಟ್ಟಿ ಗಲಾಟೆಗೆ ಪ್ರಚೋದನೆ ನೀಡಿದ್ದ ಮಹಿಳೆ
ಈ ನಡುವೆ ಬಿಜೆಪಿ ಕಾರ್ಯಕರ್ತೆಯೊಬ್ಬರು ತೊಡೆತಟ್ಟಿ ಗಲಾಟೆಗೆ ಪ್ರಚೋದನೆ ನೀಡಿದ ವೀಡಿಯೋವೊಂದು ವೈರಲ್ ಆಗಿದೆ. ಎರಡು ಪಕ್ಷಗಳ ಬೆಂಬಲಿಗರ ನಡುವೆ ಗಲಭೆ ಏರ್ಪಟ್ಟಾಗಲೇ ಈ ಘಟನೆಯೂ ನಡೆದಿದ್ದು, ಪೊಲೀಸರು ಆಕೆಯನ್ನು ಸಮಾಧಾನ ಪಡಿಸಿ ಕಳುಹಿಸಿದ್ದಾರೆ. ಅದರೊಂದಿಗೆ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಖಾರಿದ ಪುಡಿ ಎರಚಿದ್ದು, ಉರಿ ತಾಳದ ವ್ಯಕ್ತಿ ಮೈಮೇಲೆ ನೀರು ಹಾಕಿಕೊಂಡ ದೃಶ್ಯಗಳೂ ಸಹ ಹೊರಬಂದಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:44 am, Tue, 6 January 26