ಬಳ್ಳಾರಿ ಗಲಭೆ: 26 ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್
ಬಳ್ಳಾರಿಯ ಬ್ಯಾನರ್ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗನ್‌ಮ್ಯಾನ್ ಗುರುಚರಣ್ ಸಿಂಗ್ ಸೇರಿದಂತೆ ಒಟ್ಟು 26 ಆರೋಪಿಗಳಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ನ್ಯಾಯಾಲಯ ಆದೇಶ ಬೆನ್ನಲ್ಲೇ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಬೆಂಗಳೂರು, ಜನವರಿ 05: ಬಳ್ಳಾರಿಯ ಬ್ಯಾನರ್ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಬಲಿ ಪ್ರಕರಣಕ್ಕೆ (bellary violence Case) ಸಂಬಂಧಿಸಿದಂತೆ ಕೊಲೆ ಆರೋಪಿ ಗುರುಚರಣ್ ಸಿಂಗ್ ಸೇರಿ 26 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ (Judicial Custody) ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ. ಸದ್ಯ ಪೊಲೀಸರು ಪ್ರಕರಣದ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ.
ಹೊಸ ವರ್ಷದ ಮೊದಲ ದಿನವೇ ಗಣಿನಾಡು ಬಳ್ಳಾರಿ ಹೊತ್ತಿ ಉರಿದಿತ್ತು. ಅಂದು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಫೈರಿಂಗ್‌ಗೆ ಬಲಿ ಆಗಿದ್ದ. ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್‌ಮ್ಯಾನ್‌ನಿಂದಲೇ ಈ ಫೈರಿಂಗ್ ಆಗಿದೆ ಅನ್ನೋದು ಗೊತ್ತಾಗಿತ್ತು. ಗನ್‌ಮ್ಯಾನ್ ಗುರುಚರಣ್ ಸಿಂಗ್ ವಿರುದ್ಧವೇ ಪೊಲೀಸರು ಬೊಟ್ಟು ಮಾಡಿದ್ದರು. ಗುರುಚರಣ್ ಹಾರಿಸಿದ್ದ ಬುಲೆಟ್‌ಗೆ ರಾಜಶೇಖರ್ ಮೃತಪಟ್ಟಿದ್ದಾನೆ ಅನ್ನೋದನ್ನ ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಗುಂಡು ಹಾರಿಸಿದ ಗುರುಚರಣ್ ಸಿಂಗ್ ಸೇರಿ ಒಟ್ಟು 26 ಮಂದಿ ಲಾಕ್!
ಜನವರಿ 1ರಂದು ನಡೆದಿದ್ದ ಗಲಭೆ ದಿನ ಶಾಸಕ ಭರತ್ ರೆಡ್ಡಿ ಆಪ್ತನ ಗನ್‌ಮ್ಯಾನ್‌ನಿಂದಲೇ ಫೈರಿಂಗ್ ಆಗಿದೆ ಅನ್ನೋದು ಗೊತ್ತಾಗಿದೆ. ಗನ್‌ಮ್ಯಾನ್‌ಗಳಾದ ಗುರುಚರಣ್ ಸಿಂಗ್, ಬಲ್ಜಿತ್ ಸಿಂಗ್ ಹಾಗೂ ಮಹೇಂದ್ರ ಸಿಂಗ್ನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅಷ್ಟೇ ಅಲ್ಲ ಗುರುಚರಣ ಸಿಂಗ್ ತಂಗಿದ್ದ ಎಂಆರ್ವಿ ಬಡಾವಣೆಯಲ್ಲಿರುವ ಮನೆಗೆ ಕರೆತಂದು ಮಹಜರೂ ಮಾಡಿದ್ದಾರೆ. ಈ ವೇಳೆ ಬುಲೆಟ್ ಕಾಟ್ರಿಜ್ಗಳನ್ನ ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಜನಾರ್ದನ ರೆಡ್ಡಿ ನಿವಾಸದ ಬಳಿಯೂ ತಂದು ಮಹಜರು ಮಾಡಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಗಲಭೆ: 20 ಜನರ ಬಂಧನ, ಕಾಂಗ್ರೆಸ್ನವರೆಷ್ಟು, ಬಿಜೆಪಿಯವರೆಷ್ಟು? ರೆಡ್ಡಿಗೂ ಸಂಕಷ್ಟ
ಇನ್ನು ಬಳ್ಳಾರಿ ಬ್ಯಾನರ್ ಗಲಾಟೆ ಸಂಬಂಧ ಬ್ರೂಸ್‌ಪೇಟೆ ಠಾಣೆಯಲ್ಲಿ ಒಟ್ಟು 6 ಪ್ರಕರಣ ದಾಖಲಾಗಿವೆ. ಮೊನ್ನೆ 45 ಜನರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದ ಪೊಲೀಸರು, ಕಾಂಗ್ರೆಸ್‌ನ 10, ಬಿಜೆಪಿಯ 11 ಕಾರ್ಯಕರ್ತರು ಸೇರಿದಂತೆ 26 ಜನರನ್ನು ಬಂಧಿಸಿದ್ದರು. ಕೇಸ್ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವ್ಯಾಪ್ತಿಗೆ ಬರುವುದರಿಂದ 26 ಆರೋಪಿಗಳನ್ನು ಇಂದು ಕೋರ್ಟ್ಗೆ ಹಾಜರು ಪಡಿಸಿ ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:22 pm, Mon, 5 January 26