ಬಳ್ಳಾರಿಯಲ್ಲಿ ಶಾಂತಿಮಂತ್ರ ಜಪಿಸಿದ ಡಿಕೆ ಶಿವಕುಮಾರ್: ರೆಡ್ಡಿ ಬ್ರದರ್ಸ್ ವಿರುದ್ಧ ವಾಗ್ದಾಳಿ
ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ, ಫೈರಿಂಗ್ ಮತ್ತು ಕಾರ್ಯಕರ್ತನ ಸಾವಿನಿಂದ ರಾಜಕೀಯ ಬಿಗುವಿಗೆ ತಿರುಗಿದೆ. ಈ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಬಳ್ಳಾರಿಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ ಮಾತನಾಡಿದ್ದು, ಶಾಂತಿ ಮಂತ್ರ ಜಪಿಸಿದರು. ಜೊತೆಗೆ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಬೆಂಗಳೂರು, ಜನವರಿ 06: ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ಗಲಾಟೆ ಮತ್ತು ಫೈರಿಂಗ್ ಪ್ರಕರಣ (Ballari Banner Violence) ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಶಾಸಕ ಭರತ್ ರೆಡ್ಡಿ ಕಡೆಯವರು ಫೈರಿಂಗ್ ಮಾಡುತ್ತಿರುವ ದೃಶ್ಯಗಳನ್ನ ಬಿಜೆಪಿ ನಾಯಕರು ರಿಲೀಸ್ ಮಾಡಿದ್ದರು. ಇತ್ತ ಬಿಜೆಪಿ ಕಡೆಯವರು ಖಾರದಪುಡಿ ಎರಚಿರೋದು, ಬ್ಯಾನರ್ ಹರಿಯುತ್ತಿರುವ ದೃಶ್ಯಗಳನ್ನ ಕಾಂಗ್ರೆಸ್ ಪಡೆ ಕೂಡ ರಿಲೀಸ್ ಮಾಡಿದೆ. ಇದರ ನಡುವೆ ಬಳ್ಳಾರಿಗೆ ಇಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಭೇಟಿ ನೀಡಿದ್ದು, ಶಾಂತಿಮಂತ್ರ ಜಪಿಸಿದ್ದಾರೆ.
ಬ್ಯಾನರ್ ಗಲಾಟೆಯಿಂದ ಧಗಧಗಿಸಿದ್ದ ಬಳ್ಳಾರಿ ಸದ್ಯ ಸಹಜಸ್ಥಿತಿಗೆ ಮರಳಿದೆ. ಅದೇ ಬಳ್ಳಾರಿಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ಎಂಟ್ರಿಕೊಟ್ಟಿದ್ದರು. ಗಲಾಟೆಯಲ್ಲಿ ಫೈರಿಂಗ್‌ಗೆ ಬಲಿ ಆಗಿರುವ ರಾಜಶೇಖರ್ ಮನೆಗೆ ಭೇಟಿ ನೀಡಿದ ಡಿಸಿಎಂ, ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಮಗನನ್ನ ನೆನೆದು ರಾಜಶೇಖರ್ ತಾಯಿ ತುಳಸಿ ಕಣ್ಣೀರು ಹಾಕಿದರು.
ಶಾಂತಿ ಕಾಪಾಡುವಂತೆ ಡಿಕೆ ಶಿವಕುಮಾರ್ ಮನವಿ
ಜಿಲ್ಲೆಯ ಶಾಸಕರನ್ನು ಹೊರಗಿಟ್ಟು ಅಧಿಕಾರಿಗಳ ಸಭೆ ಕೂಡ ಮಾಡಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಶಾಂತಿ ಕಾಪಾಡಬೇಕು. ಅಸೂಯೆಯಿಂದ ನಮ್ಮ ಕಾರ್ಯಕ್ರಮ ತಡೆಯಲು ಯತ್ನಿಸಿದ್ದಾರೆ. ಕಾರ್ಯಕ್ರಮದ ಬ್ಯಾನರ್ ಕಿತ್ತಾಕಿದ್ದಕ್ಕೆ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ನಮ್ಮ ಶಾಸಕ ತಡವಾಗಿ ಬಂದಿದ್ದಾರೆ. ಭರತ್ ರೆಡ್ಡಿ ಹೊಸ ಶಾಸಕ, ಬಿಸಿ ರಕ್ತ ಮಾತಾಡಿರಬಹುದು. ಬಳ್ಳಾರಿಯಲ್ಲಿ ಶಾಂತಿ ಕಾಪಾಡಲು ಎಲ್ಲ ಪ್ರಯತ್ನ ಮಾಡಿದ್ದೇವೆ. ನಮ್ಮವರು ತಪ್ಪು ಮಾಡಿದರೆ ಖಂಡಿತ ತಪ್ಪು ಅಂತಾ ಹೇಳ್ಳುತ್ತೇವೆ. ಇಲ್ಲ ಅಂದರೆ ಅದನ್ನ ತಿದ್ದಲು ಆಗಲ್ಲ. ಮನೆಯಲ್ಲಿ ಬೈಯುವಂತೆ ನಮ್ಮ ಕಾರ್ಯಕರ್ತರಿಗೂ ಹೇಳ್ಳುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ರಾಜಶೇಖರ್ ತಾಯಿಗೆ ಡಿಕೆ ಶಿವಕುಮಾರ್ ಸಾಂತ್ವನ: ಸರ್ಕಾರದಿಂದ ನೆರವು ನೀಡುವುದಾಗಿ ಭರವಸೆ
ಜನಾರ್ದನರೆಡ್ಡಿಯನ್ನು ಕೊಲ್ಲಲು ಬಂದಿದ್ದರೆ ಮಹಜರು ಮಾಡಿಸಬೇಕಿತ್ತು. ಆ ಬುಲೆಟ್ ಎಲ್ಲಿತ್ತು?, ಹೊರಗಡೆ ಬಿದ್ದಿತ್ತು, ಮನೆಯಲ್ಲಿ ಬಿದ್ದಿರಲಿಲ್ಲ. ಜನಾರ್ದನರೆಡ್ಡಿ ಬುಲೆಟ್ ತೋರಿಸ್ತಿದ್ರು, ಅವರಿಗೆ ಹೊಡೆದಿತ್ತಾ ಅದು? ತಪ್ಪು ಮಾಹಿತಿ ನೀಡೋದು ಸರಿಯಲ್ಲ, ಹೇಳಿದ್ದಕ್ಕೆಲ್ಲಾ ಉತ್ತರ ಕೊಡಲ್ಲ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ಮಾಡಿದ್ದಾರೆ.
ಹೀಗಾದರೆ ನ್ಯಾಯ ಹೇಗೆ ಸಿಗುತ್ತೆ ಎಂದ ಶ್ರೀರಾಮುಲು
ಇನ್ನು ಶಾಸಕ ಭರತ್ ರೆಡ್ಡಿ ಜತೆ ಕೂತು, ಡಿಸಿಎಂ ನಡೆಸಿದ ಸುದ್ದಿಗೋಷ್ಠಿ ಬಿಜೆಪಿ ನಾಯಕರನ್ನ ಕೆರಳಿಸಿದೆ. ಕೊಲೆ ಆರೋಪಿ ಜತೆ ಕೂತು ಮಾತನಾಡಿದ್ದಾರೆ. ಹೀಗಾದರೆ ನ್ಯಾಯ ಹೇಗೆ ಸಿಗುತ್ತೆ ಅಂತಾ ಶ್ರೀರಾಮುಲು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಗಲಭೆಗೆ ಮತ್ತೊಂದು ಸ್ಫೋಟಕ ತಿರುವು! ಗಲಾಟೆ ಶುರುವಾಗಿದ್ದು ಹೇಗೆ ಗೊತ್ತಾ?
ಇದರ ನಡುವೆ ಶಾಸಕ ಜನಾರ್ದನರೆಡ್ಡಿ ಕರೆತಂದು ಇಂದು ಸ್ಥಳ ಪರಿಶೀಲನೆ ನಡೆಸಲಾಯ್ತು. ಜನಾರ್ದನ ರೆಡ್ಡಿ ದೂರು ಹಿನ್ನೆಲೆ ಅವರನ್ನೇ ಕರೆತಂದು ಮಹಜರು ನಡೆಸಿದರು. ಕೊಲೆ ಯತ್ನ, ಗುಂಪುಗಾರಿಕೆ ಬಗ್ಗೆ ತನಿಖಾಧಿಕಾರಿಗಳು ಸಾಕ್ಷ್ಯ ಕೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.