ಬಾಡಿಗೆಗೆಂದು ಸುಮಾರು 500 ಕಾರುಗಳನ್ನ ಪಡೆದು ಗಿರವಿಗೆ ಇಟ್ಟ ಭೂಪ!

ಪ್ರತಿ ತಿಂಗಳು ಸಾವಿರಾರು ರೂಪಾಯಿ ಬಾಡಿಗೆ ಸಿಗುತ್ತೆ ಅಂತಾ ಕಂಡ ಕಂಡವರಿಗೆ ಕಾರನ್ನು ಬಾಡಿಗೆ ಕೊಡುವವರಿಗೆ ಕನಸಲ್ಲೂ ಊಹಿಸಲಾಗದಂತ ಶಾಕ್​ ಕೊಟ್ಟಿದ್ದಾನೆ ಇಲ್ಲೊಬ್ಬ ಭೂಪ. ಒಂದಲ್ಲ ಎರಡಲ್ಲ ಬರೋಬ್ಬರಿ 500 ಕಾರುಗಳನ್ನ ಬಾಡಿಗೆಗೆ ಪಡೆದಿದ್ದ ಆಸಾಮಿ, ಮಾಲಕರಿಗೆ ಮಕ್ಮಲ್​ ಟೋಪಿ ಹಾಕಿದ್ದಾನೆ. ಆರಂಭದಲ್ಲಿ ಬಾಡಿಗೆ ಸರಿಯಾಗೇ ನೀಡ್ತಿದ್ದ ಈತನ ನವರಂಗಿ ಆಟ ಕಂಡು ಕಾರುಗಳ ಮಾಲಕರು ಬೆಚ್ಚಿಬಿದ್ದಿದ್ದಾರೆ.

ಬಾಡಿಗೆಗೆಂದು ಸುಮಾರು 500 ಕಾರುಗಳನ್ನ ಪಡೆದು ಗಿರವಿಗೆ ಇಟ್ಟ ಭೂಪ!
ಬಾಡಿಗೆಗೆಂದು ಸುಮಾರು 500 ಕಾರುಗಳನ್ನ ಪಡೆದು ಗಿರವಿಗೆ ಇಟ್ಟ ಭೂಪ!
Updated By: ಪ್ರಸನ್ನ ಹೆಗಡೆ

Updated on: Sep 25, 2025 | 10:22 AM

ಬಳ್ಳಾರಿ, ಸೆಪ್ಟೆಂಬರ್​ 25: ಬಾಡಿಗೆ ವಾಹನಗಳ ಟ್ರೆಂಡ್​ ಸದ್ಯ ಜೋರಾಗಿಯೇ ಇದೆ. ಅದರಲ್ಲೂ ಸೆಲ್ಫ್​ ಡ್ರೈವಿಂಗ್​ಗೆಂದು ವಾಹನಗಳನ್ನ ಪಡೆಯುವವರೇ ಹೆಚ್ಚು. ಹೀಗಾಗಿ ಕೆಲ ವಾಹನಗಳ ಮಾಲಕರು ಕಂಡ ಕಂಡವರಿಗೆಲ್ಲ ವಾಹನಗಳನ್ನ ಬಾಡಿಗೆಗೆ ಕೊಡುವುದೂ ಉಂಟು. ಅಂತಹ ಮಾಲಕರಿಗೆ ಬಳ್ಳಾರಿಯಲ್ಲೊಬ್ಬ ವ್ಯಕ್ತಿ ಭರ್ಜರಿ ಶಾಕ್​ ಕೊಟ್ಟಿದ್ದಾನೆ. ಯಾಮಾರಿ ಯಾರ್ಯಾರಿಗೋ ವಾಹನಗಳನ್ನ ಬಾಡಿಗೆ ನೀಡಿದ್ರೆ ಅವು ಇನ್ಯಾರದ್ದೋ ಬಳಿ ಗಿರವಿ ಇರುತ್ತವೆ ಅನ್ನೋದನ್ನ ಪ್ರೂವ್ ಮಾಡಿ ತೋರಿಸಿದ್ದಾನೆ.

ಕಾರು ಪಡೆದಿದ್ದು ಬಾಡಿಗೆಗೆ, ಇಟ್ಟಿದ್ದು ಗಿರವಿಗೆ!

ರಾಯಚೂರು ಜಿಲ್ಲೆಯ ಸಿಂಧನೂರಿನ M.D.ಜಹೀದ್ ಭಾಷಾ ಅಲಿಯಾಸ್ ಸೋನು ಎಂಬಾತ ಬಳ್ಳಾರಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಕಾರುಗಳನ್ನ ಬಾಡಿಗೆಗೆ ಪಡೆದಿದ್ದ. ಕಾರುಗಳ ಮಾಲಕರಿಗೆ ಪ್ರತಿ ತಿಂಗಳು 50-60 ಸಾವಿರ ರೂಪಾಯಿಗಳ ವರೆಗೆ ಬಾಡಿಗೆ ನೀಡುವ ಭರವಸೆ ನೀಡಿದ್ದ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ತಾನು ಹೇಳಿದಂತೆ ಸೋನು ಬಾಡಿಗೆಯನ್ನ ಕಾರುಗಳ ಮಾಲಕರಿಗೆ ಸರಿಯಾಗಿಯೇ ನೀಡ್ತಿದ್ದ. ಆ ಬಳಿಕ ತನ್ನ ನವರಂಗಿ ಆಟ ತೋರಿಸಲು ಈತ ಶುರುಮಾಡಿದ್ದು, ಬಾಡಿಗೆ ಕೇಳಿದ್ರೆ ಒಂದೊಂದೇ ಕತೆ ಹೇಳುತ್ತಿದ್ದ. ಇದು ಹೀಗೆ ಮುಂದುವರಿದು ಮೂರು ತಿಂಗಳವರೆಗಿನ ಬಾಡಿಗೆ ಹಣ ಬಾಕಿಯಾದಾಗ ಕಾರುಗಳ ಮಾಲಕರು ಎಚ್ಚೆತ್ತುಕೊಂಡಿದ್ದಾರೆ. ಕಾರಿನ ಜಿಪಿಎಸ್​ ಟ್ರ್ಯಾಕ್​ ಮಾಡಿದಾಗ ಅವುಗಳನ್ನು ಅಪರಿಚಿತರ ಬಳಿ ಸೋನು ಗಿರವಿ ಇಟ್ಟಿರೋದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಶಿಥಿಲಗೊಂಡ ಶಾಲಾ ಕಟ್ಟಡ, ಬಯಲಿನಲ್ಲೇ ಪಾಠ! ಬಳ್ಳಾರಿಯ ಈ ಶಾಲೆಯ 600 ವಿದ್ಯಾರ್ಥಿಗಳಿಗೆ ಸಂಕಷ್ಟ

ಹೇಗೆ ವಂಚನೆ ಮಾಡ್ತಿದ್ದ?

ಬಳ್ಳಾರಿಯ ತನ್ನ ಸ್ನೇಹಿತರ ಮೂಲಕವೇ ಕಾರುಗಳ ಮಾಹಿತಿಯನ್ನ ಸೋನು​ ಪಡೆದುಕೊಳ್ಳುತ್ತಿದ್ದ. ತನ್ನ ಚಾಣಾಕ್ಷ ಬುದ್ಧಿ ಉಪಯೋಗಿಸಿ, ಮಾಲಕರ ಜೊತೆ ನೇರ ಸಂಪರ್ಕವಿಲ್ಲದೆ ವ್ಯವಹಾರ ಮಾಡುತ್ತಾ ಬಂದಿದ್ದ. ಬಾಡಿಗೆ ಪಡೆದಿದ್ದ ಕಾರುಗಳಿಗೆ ಒಪ್ಪಂದವನ್ನೂ ಈತ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಆರಂಭದಲ್ಲಿ ಈತ ಸರಿಯಾಗಿ ಬಾಡಿಗೆ ಹಣ ನೀಡುತ್ತಿದ್ದ ಕಾರಣ ಕಾರುಗಳ ಮಾಲಕರೂ ಈತನನ್ನ ನಂಬಿದ್ದರು.

ತಿಂಗಳು ತಿಂಗಳು ಬಾಡಿಗೆ ಹಣ ಬರುತ್ತೆ ಎಂದು ಈ ಖತರ್ನಾಕ್ ಅಸಾಮಿ ಸೋನುಗೆ ಕಾರುಗಳನ್ನ ಬಾಡಿಗೆಗೆ ಕೊಟ್ಟಿದ್ದ ನೂರಾರು ಜನ ಮಾಲಕರೀಗ ಕಂಗಾಲಾಗಿದ್ದಾರೆ. ಸದ್ಯ ಬಾಡಿಗೆಯೂ ಇಲ್ಲ, ಕಾರುಗಳೂ ಇಲ್ಲದ ಸ್ಥಿಯಲ್ಲಿದ್ದಾರೆ. ವಂಚನೆಗೆ ಒಳಗಾದವರು ಸದ್ಯ ಬಳ್ಳಾರಿ ಬ್ರೂಸ್ ಪೇಟೆ ಪೊಲೀಸರ ಮೊರೆ ಹೋಗಿದ್ದು, ನಮಗೆ ನ್ಯಾಯ ಕೊಡಿಸಿ. ನಮ್ಮ ಕಾರುಗಳನ್ನ ಮರಳಿ ನಮಗೆ ಕೊಡಿಸಿ ಎಂದು ಅಂಗಲಾಚಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.