ಶಿಥಿಲಗೊಂಡ ಶಾಲಾ ಕಟ್ಟಡ, ಬಯಲಿನಲ್ಲೇ ಪಾಠ! ಬಳ್ಳಾರಿಯ ಈ ಶಾಲೆಯ 600 ವಿದ್ಯಾರ್ಥಿಗಳಿಗೆ ಸಂಕಷ್ಟ
ಅದು ಗಡಿ ಭಾಗದ ಕನ್ನಡ ಶಾಲೆ. ಆ ಶಾಲೆಯ ಕಟ್ಟಡ ವ್ಯವಸ್ಥೆ ನೋಡಿದರೆ ನಿಜಕ್ಕೂ ಜೀವ ಭಯ ಬರುತ್ತದೆ. ಎಲ್ಲೆಂದರಲ್ಲಿ ಕಿತ್ತು ಬಿದ್ದಿರುವ ಮೇಲ್ಛಾವಣಿ, ಬಿರಕು ಬಿಟ್ಟಿರುವ ಕೊಠಡಿಗಳು, ಅವ್ಯವಸ್ಥೆಯ ಆಗರವಾಗಿರುವ ಕನ್ನಡ ಶಾಲೆ. ಆ ಶಾಲೆಯಲ್ಲಿಯೇ ಜೀವ ಕೈಯಲ್ಲಿ ಹಿಡಿದು 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಬಳ್ಳಾರಿ, ಸೆಪ್ಟೆಂಬರ್ 18: ಬಳ್ಳಾರಿ (Ballari) ತಾಲೂಕಿನ ಎತ್ತಿನಬೂದಿಹಾಳ ಗ್ರಾಮದ ಕನ್ನಡ ಶಾಲೆಯ ದುಸ್ಥಿತಿ ಕೇಳುವವರೇ ಇಲ್ಲವಾಗಿದ್ದಾರೆ. ಕ್ಷಣಕ್ಷಣಕ್ಕೂ ಉದುರಿ ಬೀಳುತ್ತಿರುವ ಕಾಂಕ್ರೀಟ್, ಅಸ್ಥಿಪಂಜರದಂತೆ ಆಗರುವ ಮೇಲ್ಚಾವಣಿ, ಹೀಗಾಗಿ ಕೊಠಡಿ ಹೊರಗೆ ಕುಳಿತು ಮಕ್ಕಳು ಪಾಠ ಕೇಳುತ್ತಿದ್ದಾರೆ. ಎಲ್ಕೆಜಿ, ಯುಕೆಜಿ ಸೇರಿದಂತೆ ಒಂದನೇ ತರಗತಿಯಿಂದ ಎಂಟನೇ ತರಗತಿ ವರಗೆ ಸರಿಸುಮಾರು 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಆದರೆ, ಸರಿಯಾದ ಕೊಠಡಿಗಳ ವ್ಯವಸ್ಥೆ ಇಲ್ಲ. ಇರುವ 19 ಕೊಠಡಿಗಳಲ್ಲಿ ಕೇವಲ 7 ಕೊಠಡಿಗಳು ಮಾತ್ರ ಬಳಕೆಗೆ ಬರುತ್ತವೆ. ಉಳಿದ ಕೊಠಡಿಗಳು ಈಗಲೋ ಆಗಲೋ ನೆಲಕ್ಕೆ ಬಿಳುವಂತಿವೆ. ಹೀಗಾಗಿ ಜೀವ ಭಯದಲ್ಲಿ ಮಕ್ಕಳು ನಿತ್ಯ ಪಾಠ ಕೇಳುತ್ತಿದ್ದಾರೆ. ಕೆಲ ತರಗತಿ ಮಕ್ಕಳು ಕೊಠಡಿಗಳ ವ್ಯವಸ್ಥೆ ಇಲ್ಲದ ಕಾರಣ ಬಯಲಲ್ಲಿ ಶಿಕ್ಷಣ ಕಲಿಯುವಂತಾಗಿದೆ.
ಕೊಠಡಿಗಳ ವ್ಯವಸ್ಥೆ ಇಲ್ಲದ ಕಾರಣ ಶಾಲೆಯ ಬಯಲು ಮಂದಿರಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಶಿಕ್ಷಕರ ಕೊರತೆಯಿದೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ.
ಮೇಲಧಿಕಾರಿಗಳ ಗಮನಕ್ಕೆ ತಂದರೂ ಸುಧಾರಿಸಿಲ್ಲ ಎತ್ತಿನಬೂದಿಹಾಳ ಕನ್ನಡ ಶಾಲೆಯ ಸ್ಥಿತಿ
ಶಾಲೆ ದುಸ್ಥಿತಿ ಬಗ್ಗೆ ಮೇಲಾಧಿಕಾರಿಗಳಿಗೆ, ಜನಪ್ರತಿನಿಧಿಗಳ ಗಮನಕ್ಕೆ ತಂದ್ರು ಪ್ರಯೋಜನವಾಗಿಲ್ಲ. ಮಳೆ ಬಂದರೆ ಶಾಲಾ ಕೊಠಡಿಗಳು ಸೋರುತ್ತವೆ, ಗ್ರೌಂಡ್ ಕೆರೆಯಂತಾಗುತ್ತೆ. ಹಾವು, ಚೇಳು, ವಿಷಜಂತುಗಳ ಭಯವಿದೆ. ಇಷ್ಟೆಲ್ಲ ಸಮಸ್ಯೆಗಳ ಮದ್ಯ 600 ಕ್ಕೂ ಹೆಚ್ಚು ಮಕ್ಕಳ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಗಡಿ ಭಾಗದ ಕನ್ನಡ ಶಾಲೆಗಳನ್ನ ಉಳಿಸಿ ಎಂದು ಸಾಕಷ್ಟು ಹೋರಾಟಗಳು ನಡೆಯುತ್ತಿವೆ. ಅಂಥದ್ದರಲ್ಲಿ ಕನ್ನಡ ಕಲಿಯಲು ಮಕ್ಕಳು ಬಂದರೂ ಕೊಠಡಿಯಿಲ್ಲ, ಸರಿಯಾದ ಶಿಕ್ಷಕರಿಲ್ಲ. ಇದು ನಿಜಕ್ಕೂ ದುರಂತ.
ಇದನ್ನೂ ಓದಿ: ನವಜಾತ ಶಿಶುವನ್ನು 10 ಸಾವಿರ ರೂ.ಗೆ ಮಾರಾಟ! ಇಬ್ಬರು ಆಶಾ ಕಾರ್ಯಕರ್ತೆಯರು ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು
ಒಟ್ಟಿನಲ್ಲಿ, ಗಡಿಭಾಗದ ಕನ್ನಡ ಶಾಲೆಗಳ ಅಭಿವೃದ್ಧಿ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು. ಜೊತೆಗೆ ಬಳ್ಳಾರಿಯ ಎತ್ತಿನಬೂದಿಹಾಳ ಗ್ರಾಮದ ಶಾಲೆಯ ದುಸ್ಥಿತಿಯನ್ನೊಮ್ಮೆ ಅವಲೋಕನ ಮಾಡಿ ಶಾಲೆಯನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:57 am, Thu, 18 September 25