ಬಳ್ಳಾರಿ ಬಿಮ್ಸ್​ನಲ್ಲಿ ನಿಲ್ಲದ ಬಾಣಂತಿಯರ ಮರಣ: ಎರಡು ದಿನಗಳ ಅಂತರದಲ್ಲಿ 2ನೇ ಸಾವು

ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಎರಡು ದಿನಗಳ ಅಂತರದಲ್ಲಿ ಇಬ್ಬರು ಬಾಣಂತಿಯರು ಮೃತಪಟ್ಟಿದ್ದಾರೆ. ರೇಷ್ಮಾ ಬಿ ಎಂಬ 25 ವರ್ಷದ ಬಾಣಂತಿ ಸಿಸೇರಿಯನ್ ನಂತರ ಆರೋಗ್ಯ ಸಮಸ್ಯೆಗಳಿಂದ ಬಳಲಿ ಮೃತಪಟ್ಟಿದ್ದಾರೆ. ಕುಟುಂಬಸ್ಥರು ಸೂಕ್ತ ಚಿಕಿತ್ಸೆ ದೊರೆಯದಿರುವುದರಿಂದ ಸಾವು ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ಬಾಣಂತಿಯ ಕುಟುಂಬಸ್ಥರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಬಿಮ್ಸ್​ನಲ್ಲಿ ನಿಲ್ಲದ ಬಾಣಂತಿಯರ ಮರಣ: ಎರಡು ದಿನಗಳ ಅಂತರದಲ್ಲಿ 2ನೇ ಸಾವು
ಬಿಮ್ಸ್​, ಮೃತ ಬಾಣಂತಿ ರೇಷ್ಮಾ
Edited By:

Updated on: Feb 05, 2025 | 7:39 AM

ಬಳ್ಳಾರಿ, ಫೆಬ್ರವರಿ 05: ಬಳ್ಳಾರಿ ಬಿಮ್ಸ್ (BIMS) ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿಯ (Maternal) ಸಾವಾಗಿದೆ. ಕೇವಲ ಎರಡು ದಿನಗಳ ಅಂತರಲ್ಲಿ ಇಬ್ಬರು ಬಾಣಂತಿಯರು ಬಿಮ್ಸ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಗ್ರಾಮದ ಬಾಣಂತಿ ರೇಷ್ಮಾ ಬಿ (25) ಮೃತ ಬಾಣಂತಿ. ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ರೇಷ್ಮಾ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ರೇಷ್ಮಾ ಬಿ ಅವರು ಜನವರಿ 4 ರಂದು ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ರೇಷ್ಮಾ ಅವರಿಗೆ ನಾರ್ಮಲ್ ಹೆರಿಗೆ ಆಗುತ್ತೆ ಅಂತ ವೈದ್ಯರು ಎರಡು ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಿಸಿಕೊಂಡಿದ್ದಾರೆ. ಎರಡು ದಿನದ ಬಳಿಕ ಜನವರಿ 6 ರಂದು ನಾರ್ಮಲ್ ಹರಿಗೆ ಕಷ್ಟ, ಹೀಗಾಗಿ ಸಿಜರಿಯನ್ ಮೂಲಕ ಹೆರಿಗೆ ಮಾಡಬೇಕು ಅಂತ ಹೇಳಿ ಸಿಜರಿಯನ್ ಮಾಡಿದ್ದಾರೆ. ಗಂಡು ಮಗು ಜನಿಸಿದೆ. ತಾಯಿ ಮತ್ತು ಮಗುವಿನ ಆರೋಗ್ಯ ಚೆನ್ನಾಗಿದೆ ಅಂತ ವೈದ್ಯರು ಕುಟುಂಬಸ್ಥರಿಗೆ ಹೇಳಿದ್ದಾರೆ.

ಜನವರಿ 8 ರಂದು ತಾಯಿ ಮಗುವನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ. ಅದರೆ, ಮನೆಗೆ ಹೋಗಿ ವಾರದ ಬಳಿಕ ರೇಷ್ಮಾಗೆ ಆಯಾಸ, ಉಸಿರಾಟದ ಸಮಸ್ಯೆ ಕಂಡು ಬಂದಿದೆ. ಹೀಗಾಗಿ, ಜನವರಿ 14 ರಂದು ಮತ್ತೆ ಬಿಮ್ಸ್ ಆಸ್ಪತ್ರೆಗೆ ಬಾಣಂತಿ ರೇಷ್ಮಾರನ್ನು ದಾಖಲು ಮಾಡಿದ್ದಾರೆ. ಸತತ 21 ದಿನಗಳಿಂದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಬಾಣಂತಿ ರೇಷ್ಮ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ರೇಷ್ಮಾ ಮೃತಪಟ್ಟಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಜನವರಿ 14 ರಂದು ಮತ್ತೆ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿ ರೇಷ್ಮಾರಿಗೆ ಆರಂಭದಲ್ಲಿ ವೈದ್ಯರು ಎಲ್ಲವೂ ನಾರ್ಮಲ್ ಇದೆ ವಾಪಾಸ್ ಮನೆಗೆ ಹೋಗಿ ಅಂತ ಹೇಳಿದ್ದಾರೆ. ಆದರೆ, ರೇಷ್ಮಾರ ಪತಿ ಪಟ್ಟು ಹಿಡಿದು ಆಸ್ಪತ್ರೆಗೆ ದಾಖಲು ಮಾಡಿಸಿದ ಮೇಲೆ, ಸ್ಕ್ಯಾನಿಂಗ್​ ಮಾಡಿದಾಗ, ಸಿಜರಿಯನ್ ಬಳಿಕ ರೇಷ್ಮಾರ ಲಂಗ್ಸ್ ವೀಕ್, ಹಾರ್ಟ್ ವೀಕ್, ಕಿಡ್ನಿ ವೈಫಲ್ಯವಾಗಿರುವುದು ಗೊತ್ತಾಗಿದೆ. ಆಗ ವೈದ್ಯರು ಎಚ್ಚೆತ್ತಿದ್ದಾರೆ. ಅಷ್ಟರಲ್ಲಾಗಲೇ ರೇಷ್ಮಾ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಡೈಯಾಲಿಸ್ ಎಲ್ಲ ರೀತಿ ಚಿಕಿತ್ಸೆ ಕೊಟ್ಟಿದ್ದಾರೆ. ಆದರೆ, ಎಲ್ಲವೂ ಕೈ ಮೀರಿ ಹೋಗಿತ್ತು. ಬಾಣಂತಿ ರೇಷ್ಮಾ ಮೃತಪಟ್ಟಿದ್ದಾರೆ.

“ನನ್ನ ಮಗಳನ್ನು ವೈದ್ಯರೇ ಕೊಲೆ ಮಾಡಿದರು, ಆರೋಗ್ಯವಾಗಿದ್ದ ಮಗಳನ್ನು ಹೆಣ ಮಾಡಿದ್ದಾರೆ. ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲ. ವೈದ್ಯರು ನಿರ್ಲಕ್ಷ್ಯ ಮಾಡಿದ್ದಕ್ಕೆ ಸಾವಾಗಿದೆ’” ಅಂತ ರೇಷ್ಮಾ ಪೋಷಕರು ಆರೋಪಿಸಿದ್ದಾರೆ.

ಇನ್ನು, ಕಳೆದ ಭಾನುವಾರವೂ ಕುರಗೋಡು ತಾಲೂಕಿನ ಕೋಳೂರು ಗ್ರಾಮದ ಮಹಾದೇವಿ (21) ಎನ್ನುವ ಬಾಣಂತಿ ಸಾವಾಗಿತ್ತು. ಮಾಹದೇವಿ ಕುಟುಂಬಸ್ಥರೂ ಕೂಡ ವೈದ್ಯರ ನಿರ್ಲಕ್ಷ್ಯದ ಆರೋಪ ಮಾಡಿದ್ದರು. ಬಾಣಂತಿಯರ ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕು ಅಂತ ಕುಟುಂಬಸ್ಥರ ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಜಿಲ್ಲೆಯಲ್ಲಿ 8 ತಿಂಗಳಲ್ಲಿ 23 ಬಾಣಂತಿಯರ ಸಾವು: ಹೆಚ್ಚಿದ ಆತಂಕ

2024ರಲ್ಲಿ ಒಂದು ತಿಂಗಳ ಅಂತರದಲ್ಲಿ ಬಿಮ್ಸ್​​ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಬಾಣಂತಿಯರ ಸಾವಿಗೆ ಕಾರಣ ತಿಳಿಯಲು ರಾಜ್ಯ ಸರ್ಕಾರ ತಜ್ಞರ ತಂಡವನ್ನು ಬಿಮ್ಸ್​ ಆಸ್ಪತ್ರೆಗೆ ಕಳುಹಿಸಿ ಪರಿಶೀಲನೆ ನಡೆಸಿ ವರದಿ ನೀಡುವಂತೆಯೂ ಹೇಳಿತ್ತು. ಅದರಂತೆ ತಜ್ಞರ ತಂಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವರದಿಯೂ ನೀಡಿದೆ. ವರದಿ ಆಧರಿಸಿ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು, ಇನ್ಮುಂದೆ ಬಾಣಂತಿಯರ ಸಾವಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆಯೂ ನೀಡಿತ್ತು. ಆದರೆ, ಇನ್ನೂವರೆಗೂ ಬಿಮ್ಸ್​ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ನಿಂತಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:38 am, Wed, 5 February 25