ಆಂಧ್ರ ಕೋಟಾದಡಿ ರಾಜ್ಯಸಭೆ ಪ್ರವೇಶಿಸಲು ಶ್ರೀರಾಮುಲು ಪ್ಲಾನ್: ರೆಡ್ಡಿ ಜತೆಗಿನ ಮುನಿಸನ್ನೇ ಲಾಭವಾಗಿಸಿಕೊಳ್ಳಲು ತಂತ್ರ

ಕರ್ನಾಟಕ ಬಿಜೆಪಿಯಲ್ಲಿ ಆಂತರಿಕ ಸಂಘರ್ಷ ಮುಗಿಲುಮುಟ್ಟಿದ್ದು, ಶ್ರೀರಾಮುಲು ಹಾಗೂ ಶಾಸಕ ಜನಾರ್ದನ ರೆಡ್ಡಿ ಮುನಿಸಿನಿಂದ ಪಕ್ಷಕ್ಕೆ ಆಗಬಹುದಾದ ಹಾನಿ ತಪ್ಪಿಸಲು ವರಿಷ್ಠರು ಇಬ್ಬರಿಗೂ ಬುಲಾವ್ ನೀಡಿದ್ದಾರೆ. ಆದರೆ, ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿರುವ ರಾಮುಲು, ಆಂಧ್ರ ಕೋಟಾದಿಂದ ರಾಜ್ಯಸಭೆ ಸ್ಥಾನ ಕೇಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ಆಂಧ್ರ ಕೋಟಾದಡಿ ರಾಜ್ಯಸಭೆ ಪ್ರವೇಶಿಸಲು ಶ್ರೀರಾಮುಲು ಪ್ಲಾನ್: ರೆಡ್ಡಿ ಜತೆಗಿನ ಮುನಿಸನ್ನೇ ಲಾಭವಾಗಿಸಿಕೊಳ್ಳಲು ತಂತ್ರ
ಶ್ರೀರಾಮುಲು
Edited By:

Updated on: Jan 31, 2025 | 11:46 AM

ಬಳ್ಳಾರಿ, ಜನವರಿ 31: ಶಾಸಕ ಜನಾರ್ದನ ರೆಡ್ಡಿನ ಜತೆಗಿನ ಮುನಿಸಿನಿಂದ ಸದ್ಯ ಕರ್ನಾಟಕ ರಾಜಕಾರಣದಲ್ಲಿ, ಅದರಲ್ಲೂ ಬಿಜೆಪಿಯಲ್ಲಿ ಹೆಚ್ಚು ಚರ್ಚಿತರಾಗಿರುವ ಶ್ರೀರಾಮುಲು ಇದನ್ನೇ ಮುಂದಿಟ್ಟುಕೊಂಡು ರಾಜ್ಯಸಭೆ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿರುವ ರಾಮುಲುಗೆ ಸದ್ಯ ಬಿಜೆಪಿಯಲ್ಲಿ ಯಾವುದೇ ಹುದ್ದೆ ಇಲ್ಲದೆ ಖಾಲಿ ಇದ್ದಾರೆ. ಇದೇ ಸಂದರ್ಭದಲ್ಲಿ ಹೈಕಮಾಂಡ್​ನಿಂದ ಭೇಟಿಗೆ ಕರೆ ಬಂದಿದ್ದು, ರಾಜ್ಯಸಭೆ ಸ್ಥಾನದ ಬಗ್ಗೆ ವರಿಷ್ಠರ ಭೇಟಿ ವೇಳೆ ಪ್ರಸ್ತಾಪಿಸುವ ಸಾಧ್ಯತೆ ಇದೆ.

ಈಗಾಗಲೇ ಜನಾರ್ದ ರೆಡ್ಡಿ ಹಾಗೂ ಶ್ರೀರಾಮುಲು ಮುನಿಸನ್ನು ತಣ್ಣಗಾಗಿಸಲು ಹೈಕಮಾಂಡ್​​ನಿಂದ ಇಬ್ಬರಿಗೂ ಬುಲಾವ್ ಬಂದಿದೆ. ದೆಹಲಿ ಚುನಾವಣೆ ಮುಗಿದ ಬಳಿಕ ದೆಹಲಿಗೆ ಬರುವಂತೆ ಶ್ರೀರಾಮುಲುಗೆ ವರಿಷ್ಠರು ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರೆಡ್ಡಿ ಜತೆಗಿನ ಮುನಿಸನ್ನೇ ತಮಗೆ ಲಾಭ ಆಗುವ ರೀತಿ ಬಳಕೆ ಮಾಡಿಕೊಳ್ಳಲು ರಾಮುಲು ಯತ್ನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆ ಸದಸ್ಯನಾಗಿ ಅಯ್ಕೆ ಮಾಡುವಂತೆ ಶ್ರೀರಾಮುಲು ಹೈಕಮಾಂಡ್ ಭೇಟಿ ವೇಳೆ ಮನವಿ ಮಾಡುವ ಸಾಧ್ಯತೆ ಇದೆ. ರಾಜ್ಯದಲ್ಲಿ ಮತ್ತೊಮ್ಮೆ ಸಕ್ರಿಯರಾಗಿ ಪಕ್ಷ ಕಟ್ಟಲು ತಮ್ಮನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಬೇಕು ಎಂದು ಅವರು ವರಿಷ್ಠರ ಬಳಿ ಅಹವಾಲು ತೋಡಿಕೊಳ್ಳುವ ನಿರೀಕ್ಷೆ ಇದೆ.

ಆಂಧ್ರ ಪ್ರದೇಶ ಕೋಟಾದಿಂದ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ವೈಎಸ್​​ಆರ್​​ಪಿ ವಿಜಯ ಸಾಯಿರೆಡ್ಡಿ ಕೆಲವು ದಿನಗಳ ಹಿಂದೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಆ ಸ್ಥಾನ ತೆರವಾಗಿದೆ. ಅವರ ಅವಧಿ ಇನ್ನೂ ನಾಲ್ಕು ವರ್ಷ ಬಾಕಿ ಇದೆ. ಹೀಗಾಗಿ ಆಂಧ್ರ ಕೋಟಾದಡಿ ರಾಜ್ಯಸಭೆಗೆ ಆಯ್ಕೆ ಮಾಡುವಂತೆ ರಾಮುಲು ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಳ್ಳಾರಿ ಬಿಜೆಪಿಯಲ್ಲಿ ಬಣಬಡಿದಾಟ ಶುರು: ಕುತೂಹಲ ಮೂಡಿಸಿದ ಶ್ರೀರಾಮುಲು ರಾಜಕೀಯ ನಡೆ

ಈ ಬಗ್ಗೆ ಈಗಾಗಲೇ ರಾಮುಲು ಸೂಕ್ಷ್ಮವಾಗಿ ರಾಜ್ಯ ಮುಖಂಡ ಮೂಲಕ ಸಂದೇಶ ಕಳುಹಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ, ರಾಮುಲು ದೆಹಲಿ ಭೇಟಿ ವೇಳೆ ಮಹತ್ವದ ಬೇಡಿಕೆ ಇಡುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ