ಗಣಿನಾಡು ಬಳ್ಳಾರಿಯಲ್ಲಿ ಸದ್ದಡಗಿದ್ದ ಗಣಿಗಾಗಿಕೆ ಅಕ್ರಮ ಮತ್ತೆ ಶುರುವಾಗಿದೆಯಾ?
ರಾಜ್ಯದಲ್ಲಿ ಸದ್ಯಕ್ಕೆ ಗಣಿಗಾರಿಕೆಯಲ್ಲಿ ಜೀರೊ ಮೆಟಿರೀಯಲ್ ಸಾಗಾಟಕ್ಕೆ ಅವಕಾಶವಿಲ್ಲ. ಬ್ರೇಕ್ ಹಾಕಲಾಗಿದೆ. ನೆರೆಯ ಆಂಧ್ರದ ಗಡಿಯಿಂದಲೇ ಅಲ್ಲಿನ ಕೈಗಾರಿಕೆಗಳಿಗೆ ಕಳುಹಿಸಲಾಗುತ್ತಿದೆ ಎಂದು ತಿಳಿದುಬಂದಿದ್ದು, ಸದ್ಯ ಐದು ಲಾರಿಗಳು ಸಿಕ್ಕಿವೆ. ಈ ಮಧ್ಯೆ ಜಿಲ್ಲೆಯಲ್ಲಿ ಅಕ್ರಮ ಅದಿರು ಸಾಗಾಟ ನಡೆದಿದೆಯಾ ಎಂಬ ಜನರ ಪ್ರಶ್ನೆಗಳಿಗೆ ಪೊಲೀಸರು ಉತ್ತರಿಸಬೇಕಾಗಿದೆ.
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಒಂದು ದಶಕದಿಂದ ಸದ್ದಡಗಿದ್ದ ಅಕ್ರಮ ಗಣಿಗಾಗಿಕೆ (Illegal Mining) ಇದೀಗ ಪುನಃ ಸದ್ದಿಲ್ಲದೇ ಸದ್ದು ಮಾಡುತ್ತಿದೆ. ಇನ್ನು ಓಬಳಾಪುರಂ ಗಣಿಯಲ್ಲಿ ಸೀಜ್ ಮಾಡಿದ್ದ ಅದಿರು ಕಳುವಾಗುತ್ತಿದೆಯಾ? ಇಂಥಹದ್ದೊಂದು ಅನುಮಾನ ಮೂಡುತ್ತಿದ್ದೆ. ಬಳ್ಳಾರಿ ಪೊಲೀಸರು (Bellary Police) ಅಕ್ರಮ ಅದಿರು ಸಾಗಿಸುತ್ತಿದ್ದ ಲಾರಿಗಳನ್ನು (Mining Transport) ವಶಕ್ಕೆ ಪಡೆದಿರುವುದು ಅನುಮಾನಕ್ಕೆ ಪುಷ್ಠಿ ನೀಡುವಂತಿದೆ.
ಗಣಿನಾಡು ಖ್ಯಾತಿಯ ಬಳ್ಳಾರಿ ಜಿಲ್ಲೆಯಲ್ಲಿ ಒಂದು ದಶಕದ ಹಿಂದೆ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆದಿತ್ತು. ೨೦೦೫-೦೬ರಿಂದ ೨೦೧೦ರವರೆಗಿನ ಅವಧಿಯಲ್ಲಿ ಗಣಿಗಾರಿಕೆ ಉತ್ತುಂಗದಲ್ಲಿದ್ದಾಗ ಗಣಿ ಧೂಳಿಗೂ ಚಿನ್ನದ ಬೆಲೆ ಇತ್ತು. ಆದರೆ, ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ೨೦೧೧ರಲ್ಲಿ ಅಕ್ರಮ ಗಣಿಗಾರಿಕೆಗೆ ಸಂಪೂರ್ಣ ನಿಷೇಧ ಹೇರಿದ ಬಳಿಕ ಸದ್ದು ಅಡಗಿತ್ತು. ಇದೀಗ, ನೆರೆಯ ಆಂಧ್ರ ಗಡಿ ಭಾಗದ ಗಣಿಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಗುಮಾನಿ ಇದ್ದು, ಅಕ್ರಮವಾಗಿ ಅದಿರು ಸಾಗಿಸುತ್ತಿದ್ದ ಲಾರಿಗಳನ್ನು ಬಳ್ಳಾರಿ ಗ್ರಾಮೀಣ ಠಾಣೆಯ ಪೊಲೀಸರು ಈಚೆಗೆ ವಶಕ್ಕೆ ಪಡೆದಿದ್ದು, ಕಳೆದ ದಶಕದಿಂದ ಅಡಗಿದ್ದ ಅಕ್ರಮ ಗಣಿಗಾರಿಕೆಯ ಸದ್ದು, ಇದೀಗ ಪುನಃ ಮಾಡುತ್ತಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಕಳೆದ ಕೆಲ ದಿನಗಳ ಹಿಂದೆ ನೆರೆಯ ಆಂಧ್ರ ಪ್ರದೇಶದ ಗಡಿಯಲ್ಲಿನ ಅದಿರು ತುಂಬಿಕೊಂಡು ಕರ್ನಾಟಕದ ಗಡಿಗ್ರಾಮ ಹಲಕುಂದಿ ಮಾರ್ಗವಾಗಿ ಆಂಧ್ರಕ್ಕೆ ಅದಿರು ಸಾಗಿಸುತ್ತಿದ್ದ ಲಾರಿಗಳನ್ನು ಬಳ್ಳಾರಿ ಗ್ರಾಮೀಣ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಹೇಳುವಂತೆ ಎರಡು ಲಾರಿಗಳು ಅದಿರು ತುಂಬಿದ್ದು, ಮೂರು ಲಾರಿಗಳು ಖಾಲಿಯಾಗಿವೆ. ಜೊತೆಗೆ ಒಂದು ಜೆಸಿಬಿ ಯಂತ್ರ, ಒಂದು ಕಾರನ್ನು ಸಹ ವಶಕ್ಕೆ ಪಡೆದಿದ್ದಾರೆ. ಆಂಧ್ರದಲ್ಲಿ ಅದಿರು ತುಂಬಿಕೊಂಡಿದ್ದ ಲಾರಿಗಳು, ರಾಜ್ಯದ ಗಡಿಗ್ರಾಮ ಹಲಕುಂದಿ ಮಾರ್ಗವಾಗಿ ಪುನಃ ಆಂಧ್ರಕ್ಕೆ ಸಾಗಿಸುತ್ತಿದ್ದವು ಎನ್ನಲಾಗಿದೆ. ಆದರೆ, ಈ ಅದಿರು ಎಲ್ಲಿಯದ್ದು? ಯಾವ ಗಣಿ ಪ್ರದೇಶದಿಂದ ತಂದಿದ್ದು? ಲಾರಿಗಳ ಮಾಲೀಕರಾರು? ಎಂಬಿತ್ಯಾದಿ ವಿಷಯಗಳ ಕುರಿತು ಪೊಲೀಸರಿಗೂ ಮಾಹಿತಿಯಿಲ್ಲವಂತೆ.
ಇದನ್ನೂ ಓದಿ: ಮತ್ತೆ ನಾಡದ್ರೋಹಿ ಕೆಲಸಕ್ಕೆ ಕೈ ಹಾಕಿದ ಎಂಇಎಸ್; ಏಳು ಬೇಡಿಕೆಗಳ ಈಡೇರಿಸುವಂತೆ ಮಹಾರಾಷ್ಟ್ರ ಸಚಿವರಿಗೆ ಮನವಿ
ಈ ಕುರಿತು ಪೊಲೀಸರು ಸದ್ಯ ಚಾಲಕರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ಮಾಹಿತಿಗಾಗಿ ಇನ್ನೂ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೆರೆಯ ಆಂಧ್ರ ಪ್ರದೇಶದ ಓಬಳಾಪುರಂ ಗ್ರಾಮದ ಬಳಿಯಿರುವ ಓಬಳಾಪುರಂ ಮೈನ್ಸ್ ಕಂಪನಿಯ ಗಣಿಗಾರಿಕೆಯನ್ನು ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ನಿಷೇಧಿಸಿದೆ.
ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಒಂದು ದಶಕದ ಹಿಂದೆ ಗಣಿಗಾರಿಗೆ ಸ್ಥಗಿತಗೊಂಡಿತ್ತು. ಅಂದು ಸಂಗ್ರಹಿಸಿದ್ದ ಅದಿರನ್ನು ಸಹ ಸಂಬಂಧಪಟ್ಟ ಅಧಿಕಾರಿಗಳು ಒಎಂಸಿ ಗಣಿ ಪ್ರದೇಶದಲ್ಲೇ ಸೀಜ್ ಮಾಡಿಟ್ಟಿದ್ದರು. ಆ ಅದಿರನ್ನು ಇದೀಗ ಲಾರಿಗಳಲ್ಲಿ ಬೇರೆಡೆ ಸಾಗಿಸಿ ಕಳ್ಳತನ ಮಾಡಲಾಗುತ್ತಿದೆ ಎಂಬ ಮಾತುಗಳು ಓಬಳಾಪುರಂ ಗ್ರಾಮದಲ್ಲಿ ಹರಿದಾಡುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ