ಕರ್ನಾಟಕದ ಈ ಟೋಲ್ ಪ್ಲಾಜಾದಲ್ಲಿ ಫಾಸ್ಟ್ಟ್ಯಾಗ್ ಪಾವತಿ ವ್ಯವಸ್ಥೆಯೇ ಇಲ್ಲ! ಯಾಕೆ ಹೀಗೆ ಗೊತ್ತೇ?
ಎಲ್ಲ ಟೋಲ್ ಪ್ಲಾಜಾಗಳಲ್ಲಿ ಈಗ ಫಾಸ್ಟ್ಟ್ಯಾಗ್ ಪಾವತಿಗೇ ಆದ್ಯತೆ. ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳಿಂದ ದುಪ್ಪಟ್ಟು ಟೋಲ್ ವಸೂಲಿ ಮಾಡಲಾಗುತ್ತದೆ. ಆದರೆ, ಈ ಒಂದು ಟೋಲ್ ಪ್ಲಾಜಾದಲ್ಲಿ ಮಾತ್ರ ನಗದು ರೂಪದಲ್ಲಿಯೇ ವ್ಯವಹಾರ ನಡೆಯುತ್ತದೆ! ಇದರ ಕಾರಣ ಮಾತ್ರ ವಿಭಿನ್ನ. ಆ ಕುರಿತ ಮಾಹಿತಿ ಇಲ್ಲಿದೆ.

ಬಳ್ಳಾರಿ, ಡಿಸೆಂಬರ್ 9: ಕರ್ನಾಟಕದ ಯಾವುದೇ ಭಾಗಕ್ಕೆ ಹೋದರೂ ಟೋಲ್‌ಗಳಲ್ಲಿ ಫಾಸ್ಟ್ಟ್ಯಾಗ್ (FASTag) ಪಾವತಿ ವ್ಯವಸ್ಥೆ ಇರುವುದನ್ನು ನೋಡಿರುತ್ತೇವೆ. ಆದರೆ, ಬಳ್ಳಾರಿ (Ballari) ಜಿಲ್ಲೆ ಸಂಡೂರು ಪಟ್ಟಣದ ಹೊಸಪೇಟೆ ರಸ್ತೆ ಬಳಿ ಇರುವ ಟೋಲ್ ಪ್ಲಾಜಾದಲ್ಲಿ ಫಾಸ್ಟ್ಟ್ಯಾಗ್ ಪಾವತಿ ವ್ಯವಸ್ಥೆಯೇ ಇಲ್ಲ. ಇಲ್ಲಿ ಕೇವಲ ನಗದು ಹಣದ ಮೂಲಕ ಮಾತ್ರ ವ್ಯವಹಾರ ನಡೆಯುತ್ತದೆ. ಲೆಕ್ಕವಿಲ್ಲ, ಪತ್ರವಿಲ್ಲ. ಈ ಟೋಲ್ ಪ್ಲಾಜಾದಲ್ಲಿ ಪ್ರತಿನಿತ್ಯ 10 ರಿಂದ 15 ಲಕ್ಷ ರೂ. ಸಂಗ್ರಹ ಆಗುವ ಅಂದಾಜಿದೆ. ಆದರೆ, ಸರ್ಕಾರಕ್ಕೆ ಕೇವಲ 1 ರಿಂದ 2 ಲಕ್ಷ ರೂ. ಮಾತ್ರ ಪಾವತಿ ಮಾಡಲಾಗುತ್ತಿದೆ.
ಸಚಿವರು, ಸಂಸದರಿಗೆ ಹಣ ಸಂದಾಯ: ಬಿಜೆಪಿ ಆರೋಪ
ಫಾಸ್ಟ್ಟ್ಯಾಗ್ ಇಲ್ಲದ ಈ ಟೋಲ್ ಮೂಲಕ ಹಣ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ ಈಗ ಕೇಳಿಬಂದಿದೆ. ಈ ಟೋಲ್ ಪ್ಲಾಜಾದಿಂದ ಸಚಿವ ಸಂತೋಷ ಲಾಡ್, ಸಂಸದ ಇ. ತುಕಾರಾಂಗೆ ಹಣ ಹೋಗುತ್ತಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧಕ್ಷ ಬಂಗಾರು ಹನುಮಂತ ಆರೋಪಿಸಿದ್ದಾರೆ.
ಈ ಟೋಲ್ KRDCL ಸಂಸ್ಥೆ ವ್ಯಾಪ್ತಿಗೆ ಬರುತ್ತದೆ. ಅಲ್ಲಿ ನಿತ್ಯ ಓಡಾಡುವ ಸಾವಿರಾರು ಗಣಿ ಲಾರಿಗಳಿಂದ ಟೋಲ್ ಸಂಗ್ರಹ ಮಾಡಲಾಗುತ್ತದೆ. ಹೀಗೆ ಲಕ್ಷಾಂತರ ರೂಪಾಯಿ ಹಣ ಸಂಗ್ರಹ ಆಗುತ್ತದೆ. ಆದರೆ, ಸರ್ಕಾರಕ್ಕೆ ಕೋಡುವುದು ಮಾತ್ರ ಕೇವಲ 1 ಲಕ್ಷ ರೂ.ನಿಂದ 1.5 ಲಕ್ಷ ರೂ. ಮಾತ್ರ. ಉಳಿದ ಹಣ ಸಚಿವ ಸಂತೋಷ ಲಾಡ್, ಸಂಸದ ಈ ತುಕಾರಾಂ ಅವರ ಜೇಬಿಗೆ ಹೋಗುತ್ತದೆ ಎಂದು ಬಂಗಾರು ಹನುಮಂತ ಗಂಭೀರ ಆರೋಪ ಮಾಡಿದ್ದಾರೆ.
ಕೆಆರ್ಡಿಸಿಎಲ್ ಹೇಳೋದೇನು?
ಫಾಸ್ಟ್ಟ್ಯಾಗ್ ಪಾವತಿ ವ್ಯವಸ್ಥೆ ಇಲ್ಲದ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಆರ್ಡಿಸಿಎಲ್, ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ಸರ್ಕಾರ ಯಾವಾಗ ಅನುಮತಿ ಕೊಡುತ್ತದೆಯೋ ಆವಾಗಲೇ ಫಾಸ್ಟ್ ಟ್ಯಾಗ್ ಪಾವತಿ ವ್ಯವಸ್ಥೆ ಜಾರಿಗೊಳಿಸುತ್ತೇವೆ ಎಂದು ತಿಳಿಸಿದೆ.
ಇದನ್ನೂ ಓದಿ: ರೈತರಿಗೆ ಶಾಕ್ ಕೊಟ್ಟ ಸರ್ಕಾರ: ತುಂಗಭದ್ರಾ ಡ್ಯಾಂ ದುರಸ್ತಿ ನೆಪವೊಡ್ಡಿ 2ನೇ ಬೆಳೆಗಿಲ್ಲ ನೀರು
ಒಟ್ಟಿನಲ್ಲಿ, ಗಣಿನಾಡು ಬಳ್ಳಾರಿಯ ಸಂಡೂರು ಪಟ್ಟಣದಲ್ಲಿ ಇರುವ ಟೋಲ್‌ಗೆ ಫಾಸ್ಟ್ಟ್ಯಾಗ್ ಪಾವತಿ ವ್ಯವಸ್ಥೆ ಇಲ್ಲದಿರುವುದು ಸಾಮಾನ್ಯ ವಾಹನ ಸವಾರರಿಗೆ ಸಮಸ್ಯೆ ತಂದೊಡ್ಡಿದೆ. ಜತೆಗೆ ಲಾರಿ ಚಾಲಕರಿಗೂ ಸಮಸ್ಯೆ ಉಂಟುಮಾಡಿದೆ. ಕೂಡಲೇ ಸರ್ಕಾರ ಆ ಸಮಸ್ಯೆ ಬಗೆ ಹರಿಸಿ, ಗೊಂದಲಕ್ಕೆ ತೆರೆ ಎಳೆಯಬೇಕಿದೆ.



