ರೈತರಿಗೆ ಶಾಕ್ ಕೊಟ್ಟ ಸರ್ಕಾರ: ತುಂಗಭದ್ರಾ ಡ್ಯಾಂ ದುರಸ್ತಿ ನೆಪವೊಡ್ಡಿ 2ನೇ ಬೆಳೆಗಿಲ್ಲ ನೀರು
ತುಂಗಭದ್ರಾ ಡ್ಯಾಂ ಗೇಟ್ ದುರಸ್ತಿ ಮಾಡುತ್ತಿರುವುದರಿಂದ ರೈತರ 2ನೇ ಬೆಳೆಗೆ ನೀರು ಕೊಡಲ್ಲ ಎಂದು ಟಿಬಿ ಡ್ಯಾಂ ಬೋರ್ಡ್ ಹಾಗೂ ಸರ್ಕಾರ ಹೇಳುತ್ತಿದೆ. ಇದು ರೈತರನ್ನು ಆತಂಕಕ್ಕೀಡು ಮಾಡಿದೆ. ಆದರೆ, ಸರ್ಕಾರದ ಈ ನಡೆ ಖಂಡಿಸಿ ರೈತರ ಜತೆ ವಿಪಕ್ಷಗಳು ಹೋರಾಟಕ್ಕೆ ಧುಮುಕುವ ಸಾಧ್ಯತೆ ದಟ್ಟವಾಗಿದೆ.

ಬಳ್ಳಾರಿ, ನವೆಂಬರ್ 27: ತುಂಗಭದ್ರಾ ಜಲಾಶಯ (Tungabhadra Dam) ಕಲ್ಯಾಣ ಕರ್ನಾಟಕದ ಜೀವನಾಡಿ. 10 ಲಕ್ಷಕ್ಕೂ ಅಧಿಕ ಎಕರೆ ಜಮೀನಿಗೆ ನೀರುಣಿಸುತ್ತದೆ ಈ ಟಿಬಿ ಡ್ಯಾಂ. ಮುಂಗಾರಿನಲ್ಲಿ ಕಲ್ಯಾಣ ಕರ್ನಾಟಕದಲ್ಲಿ (Kalyana Karnataka) ಮಳೆ ಕಣ್ಣಾಮುಚ್ಚಾಲೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದರು. ಅನ್ನದಾತರು 2ನೇ ಬೆಳೆಯನ್ನಾದರೂ ಚೆನ್ನಾಗಿ ತೆಗೆಯುವ ನಿರೀಕ್ಷೆಯಲ್ಲಿದ್ದರು. ಆದರೆ, 2ನೇ ಬೆಳೆಗೆ ನೀರು ಸಿಗಲ್ಲ ಎಂದು ಸರ್ಕಾರ ಕಡ್ಡಿ ಮುರಿದಂತೆ ಹೇಳಿದೆ. ಟಿಬಿ ಡ್ಯಾಂ ನೀರನ್ನೇ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆ ರೈತರು ಆಶ್ರಯಿಸಿದ್ದಾರೆ. ಗೇಟ್ ದುರಸ್ತಿ ಆಗಬೇಕಿದ್ದರೆ, ಡ್ಯಾಂನಿಂದ ನೀರನ್ನು ಹೊರ ಬಿಡಲೇಬೇಕಿದೆ. ಹಾಗಾಗಿ, ರೈತರೀಗ ಪರಿಹಾರವನ್ನಾದರೂ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ.
ಈ ಮಧ್ಯೆ ವಿಪಕ್ಷ ನಾಯಕ ಆರ್. ಅಶೋಕ್ ತುಂಗಭದ್ರಾ ಡ್ಯಾಂ ಗೇಟ್ ರಿಪೇರಿಯನ್ನು ಪರಿಶೀಲಿಸಿದ್ದಾರೆ. ಗೇಟ್ ರಿಪೇರಿ ನಡೆಸುತ್ತಿರುವವರ ಜತೆ ಸಾಧಕ-ಬಾಧಕ ಚರ್ಚಿಸಿದ್ದಾರೆ. 2ನೇ ಬೆಳೆಗೆ ನೀರು ಕೊಡಲೇಬೇಕು. ಇಲ್ಲದಿದ್ದರೆ ಎಕರೆಗೆ 50 ಸಾವಿರ ರೂ. ಪರಿಹಾರ ಕೊಡಬೇಕು. ಪರಿಹಾರ ಕೊಡದಿದ್ದರೆ, ಜಿಲ್ಲಾವಾರು ಹೋರಾಟ ಮಾಡುತ್ತವೆ ಎಂದು ಅಶೋಕ್ ಗುಡುಗಿದ್ದಾರೆ.
ಸದ್ಯದಲ್ಲೇ ವಿಧಾನಸಭೆ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದೆ. ರೈತರಿಗೆ ನೀರು ಕೊಡದ ವಿಚಾರವನ್ನೇ ವಿಪಕ್ಷಗಳು ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸುವ ಸಾಧ್ಯತೆ ಇದೆ.
ತುಂಗಭದ್ರಾ ಡ್ಯಾಂನ ಹಲವು ಗೇಟ್ಗಳಿಗೆ ಹಾನಿ
ಕಳೆದ ವರ್ಷ ತುಂಗಭದ್ರಾ ಡ್ಯಾಂನ ಒಂದು ಕ್ರೆಸ್ಟ್ಗೇಟ್ ಮುರಿದುಹೋಗಿದ್ದ ಕಾರಣ ಅಪಾರ ಪ್ರಮಾಣದ ನೀರು ಪೋಲಾಗಿತ್ತು. ನಂತರ ಅದನ್ನು ಸರಿಪಡಿಸಲಾಗಿತ್ತು. ಆದರೆ, ತುಂಗಭದ್ರಾ ಜಲಾಶಯದ ಏಳು ಗೇಟ್ಗಳು ಬೆಂಡ್ ಆಗಿವೆ ಎಂದು ಡ್ಯಾಂ ಸೇಫ್ಟಿ ರೀವಿವ್ ಕಮೀಟಿ ವರದಿ ನೀಡಿರುವುದಾಗಿ ಸಚಿವ ಶಿವರಾಜ್ ತಂಗಡಗಿ ಕಳೆದ ಆಗಸ್ಟ್ನಲ್ಲಿ ಮಾಹಿತಿ ನೀಡಿದ್ದರು. ಗೇಟ್ ನಂಬರ್ 4 ಸೇರಿದಂತೆ ಒಟ್ಟು ಏಳು ಗೇಟ್ಗಳು ಡ್ಯಾಮೇಜ್ ಆಗಿವೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಶಾಕಿಂಗ್ ನ್ಯೂಸ್: ತುಂಗಭದ್ರಾ ಡ್ಯಾಂನ 7 ಗೇಟ್ಗಳಿಗೆ ಡ್ಯಾಮೇಜ್; ಸಚಿವ ಶಿವರಾಜ್ ತಂಗಡಗಿ
ನವೆಂಬರ್ನಿಂದ ತುಂಗಭದ್ರಾ ಜಲಾಶಯದ ಗೇಟ್ ದುರಸ್ತಿ ಕಾರ್ಯ ನಡೆಯಲಿದೆ. ಹೀಗಾಗಿ ಈ ವರ್ಷ ಒಂದೇ ಬೆಳೆಗೆ ನೀರು ಒದಗಿಸಲಾಗುತ್ತದೆ ಎಂದೂ ಸಹ ಸಚಿವ ಶಿವರಾಜ್ ತಂಗಡಗಿ ಹೇಳಿದ್ದರು. ಸದ್ಯ ತುಂಗಭದ್ರಾ ಡ್ಯಾಂ ಗೇಟ್ಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಎರಡನೇ ಬೆಳೆಗೆ ನೀರು ದೊರೆಯದೇ ಇರುವ ವಿಚಾರ ರೈತರನ್ನು ಆತಂಕಕ್ಕೆ ಈಡುಮಾಡಿದೆ.



