AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೆಂಬರ್​​ನಿಂದ ತುಂಗಭದ್ರಾ ಡ್ಯಾಂ ಗೇಟ್ ಬದಲಾವಣೆ ಕಾರ್ಯ: ಈ ವರ್ಷ ಒಂದೇ ಬೆಳೆಗೆ ನೀರು, ಆತಂಕದಲ್ಲಿ ರೈತರು

ನವೆಂಬರ್​​​ನಿಂದ ತುಂಗಭದ್ರಾ ಜಲಾಶಯದ ಗೇಟ್ ಅಳಡವಿಕೆ ಕಾರ್ಯ ಶುರುವಾಗಲಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಜೊತೆಗೆ ಈ ವರ್ಷ ಒಂದೇ ಬೆಳೆಗೆ ನೀರು ಪೂರೈಕೆ ಮಾಡಲಾಗುವುದು ಎಂದಿದ್ದಾರೆ. ಆ ಮೂಲಕ ಸಿಹಿ ಸುದ್ದಿ ಜೊತೆಗೆ ರೈತರಿಗೆ ಕಹಿ ಸುದ್ದಿಯನ್ನು ನೀಡಿದ್ದಾರೆ.

ನವೆಂಬರ್​​ನಿಂದ ತುಂಗಭದ್ರಾ ಡ್ಯಾಂ ಗೇಟ್ ಬದಲಾವಣೆ ಕಾರ್ಯ: ಈ ವರ್ಷ ಒಂದೇ ಬೆಳೆಗೆ ನೀರು, ಆತಂಕದಲ್ಲಿ ರೈತರು
Tungabhadra Dam
ಶಿವಕುಮಾರ್ ಪತ್ತಾರ್
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 22, 2025 | 12:39 PM

Share

ಕೊಪ್ಪಳ, ಸೆಪ್ಟೆಂಬರ್​ 22: ತುಂಗಭದ್ರಾ ಜಲಾಶಯ (Tungabhadra Dam) ನಾಲ್ಕು ಜಿಲ್ಲೆಗಳ ಜೀವನಾಡಿ. ಈ ಜೀವನಾಡಿ ಇದೀಗ ಅಪಾಯದಂಚಿನಲ್ಲಿದೆ. ಕಳೆದ ವರ್ಷ ಒಂದು ಗೇಟ್ (crest gate) ಕಿತ್ತುಕೊಂಡು ಹೋಗಿತ್ತು. ಸದ್ಯ ಆ ಗೇಟ್​​ನ್ನು ತಾತ್ಕಾಲಿಕಬವಾಗಿ ಅಳವಡಿಕೆ ಮಾಡಲಾಗಿದೆ. ಇದರ ಬೆನ್ನಲ್ಲೆ ಜಲಾಶಯದ ಏಳು ಗೇಟ್ ಜಾಮ್ ಆಗಿರುವ ಆತಂಕಕಾರಿ ಮಾಹಿತಿ ಕೂಡ ಬಹಿರಂಗವಾಗಿತ್ತು. ಯಾವಾಗ ಜಲಾಶಯಕ್ಕೆ ಏನಾಗತ್ತೆ ಎಂಬ ಭಯ ನಾಲ್ಕು ಜಿಲ್ಲೆಯ ರೈತರಲ್ಲಿ ಮನೆ ಮಾಡಿದೆ. ಸರ್ಕಾರ ಜಲಾಶಯದ ಗೇಟ್ ಯಾವಾಗ ಬದಲಾವಣೆ ಮಾಡುತ್ತೆ ಎಂದು ಕಾದು ಕುಳಿತ್ತಿದ್ದ ರೈತರಿಗೆ ಇದೀಗ ಸಿಹಿ ಸುದ್ದಿಯೊಂದು ಸಿಕ್ಕಿದೆ. ಇದೀಗ ಅದಕ್ಕೆ ಕಾಲ ಕೂಡಿ ಬಂದಿದ್ದು, ನವೆಂಬರ್​​ನಿಂದ ಜಲಾಶಯದ ಗೇಟ್ ಬದಲಾವಣೆ ಕಾರ್ಯ ಆರಂಭವಾಗಲಿದೆ. ಆದರೆ ಗೇಟ್ ಬದಲಾವಣೆ ಮಾಡಲಾಗುತ್ತಿದ್ದರೂ ಸಿಹಿ ಸುದ್ದಿ ಜೊತೆಗೆ ರೈತರಿಗೆ ಒಂದು ಶಾಕ್ ಕೂಡ ಎದುರಾಗಿದೆ.

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಜೀವನಾಡಿ. ಇದೇ ಜಲಾಶಯದಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗತ್ತೆ, ಆದರೆ ಕಳೆದ ಒಂದು ವರ್ಷದಿಂದ ಜಲಾಶಯ ನಾಲ್ಕು ಜಿಲ್ಲೆಯ ರೈತರನ್ನ ನಿದ್ದೆಗೆಡಿಸಿದೆ. ಅದಕ್ಕೆ ಕಾರಣ ಜಲಾಶಯದ ಕ್ರಸ್ಟ್ ಗೇಟ್​ಗಳು.

ಇದನ್ನೂ ಓದಿ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಇನ್ನೂ ರಿಪೇರಿಯಾಗಿಲ್ಲ, ಸರ್ಕಾರದ ವಿರುದ್ಧ ಕಿಡಿಕಾರಿದ ಬಿಜೆಪಿ ನಾಯಕರು

ಇದನ್ನೂ ಓದಿ
Image
ತುಂಗಭದ್ರಾ ಡ್ಯಾಂನ 7 ಗೇಟ್​ಗಳು ಡ್ಯಾಮೇಜ್​: ಸಚಿವ ಶಿವರಾಜ್​ ತಂಗಡಗಿ
Image
ಜಲಾಶಯದಲ್ಲಿ 80 ಟಿಎಂಸಿ ನೀರು ಸಂಗ್ರಹಗೊಂಡರು ಉಳಿದ ಗೇಟ್​ಗಳಿಗೆ ಅಪಾಯ
Image
ತುಂಗಭದ್ರಾ ಆಯ್ತು, ಅಪಾಯದಲ್ಲಿದೆ ರಾಜ್ಯದ ಮತ್ತೊಂದು ಪ್ರಮುಖ ಡ್ಯಾಂ
Image
ತುಂಗಭದ್ರಾ ಡ್ಯಾಂನ ಹೊಸ ಗೇಟ್​ ನಿರ್ಮಾಣದ ಎಕ್ಸ್​ಕ್ಲೂಸಿವ್​ ದೃಶ್ಯ!

ಕಳೆದ ವರ್ಷ ತುಂಗಭದ್ರಾ ಜಲಾಶಯದ 19ನೇ ಗೇಟ್ ಕೊಚ್ಚಿಕೊಂಡು ಹೋಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು. ಇದುವರೆಗೂ ಆ ಗೇಟ್ ಕೂರಿಸುವುದಕ್ಕೆ ಸರ್ಕಾರಕ್ಕೆ ಆಗಿಲ್ಲ. ಆದರೆ ಇದೀಗ ಜಲಾಶಯದ ಏಳು ಗೇಟ್ ಡ್ಯಾಮೇಜ್ ಆಗಿರುವ ಮಾಹಿತಿಯಿಂದ ರೈತರು ಮತ್ತಷ್ಟು ಆತಂಕಗೊಂಡಿದ್ದಾರೆ.

ಒಂದು ವೇಳೆ ಜಲಾಶಯಕ್ಕೆ ಏನಾದರೂ ಆದರೆ ಹೇಗೆ ಎಂದು ರೈತರು, ನಾಲ್ಕು ಜಿಲ್ಲೆಯ ಜನ ಚಿಂತೆ ಮಾಡುವಂತಾಗಿದೆ. ಇದೀಗ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ನಾಲ್ಕು ಜಿಲ್ಲೆಯ ರೈತರಿಗೆ ಸಿಹಿ ಸುದ್ದಿ ಜೊತೆಗೆ ಕಹಿ ಸುದ್ದಿಯನ್ನು ನೀಡಿದ್ದಾರೆ. ಅದೇನೆಂದರೆ ನವೆಂಬರ್​ನಿಂದ ಜಲಾಶಯದ ಗೇಟ್ ಅಳಡವಿಕೆ ಕಾರ್ಯ ಶುರುವಾಗಲಿದೆ ಎಂದಿದ್ದಾರೆ.

ರೈತರಿಗೆ ಕಹಿ ಸುದ್ದಿ

ಈಗಾಗಲೇ ವಿಜಯನಗರ, ಗದಗ, ಬಳ್ಳಾರಿ ಸೇರಿ ನಾಲ್ಕು ಕಡೆ ಗೇಟ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜಲಾಯಶದ 33 ಗೇಟ್ ಬದಲಾವಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಒಂದು ಗೇಟ್ ಅಳವಡಿಕೆಗೆ ಕನಿಷ್ಟ 5 ರಿಂದ 6 ದಿನಗಳು ಬೇಕಾಗುತ್ತೆ. 33 ಗೇಟ್ ಬದಲಾವಣೆಗೆ 160ಕ್ಕೂ ಹೆಚ್ಚು ದಿನ ಬೇಕಾಗತ್ತೆ. ನೀರು ಹೊರಗಡೆ ಬಿಟ್ಟು ಗೇಟ್ ಅಳವಡಿಕೆ ಮಾಡಲಾಗತ್ತೆ. ಇದರ ಜೊತೆಗೆ ರೈತರಿಗೆ ಕಹಿ ಸುದ್ದಿ ಏನೆಂದರೆ ಈ ಬಾರಿ ಒಂದು ಬೆಳೆಗೆ ಮಾತ್ರ ನೀರು ಸಿಗಲಿದೆ ಎಂದು ಅವರು ಹೇಳಿದ್ದಾರೆ.

ಸಚಿವ ಶಿವರಾಜ್ ತಂಗಡಗಿ ಅವರ ಈ ಮಾತು ನಿಜಕ್ಕೂ ಅನ್ನದಾತರ ನಿದ್ದೆಗೆಡಿಸಿದೆ. ಡ್ಯಾಂ ಹಿತ ದೃಷ್ಟಿಯಿಂದ ಸರ್ಕಾರ ಒಂದು ಬೆಳೆಗೆ ನೀರು ಕೊಡಲು ತೀರ್ಮಾನ ಮಾಡಿದೆ. ನವೆಂಬರ್ 30ರವರೆಗೂ ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗತ್ತೆ, ಆ ಮೇಲೆ ಕಾಲುವೆಗಳಿಗೆ ನೀರು ಬಿಡದಿರಲು ತೀರ್ಮಾನ ಮಾಡಲಾಗಿದೆ.

ತುಂಗಭದ್ರಾ ಅಚ್ಚು ಕಟ್ಟು ಪ್ರದೇಶದಲ್ಲಿ ರೈತರು ಪ್ರತಿ ವರ್ಷ ಎರಡರಿಂದ ಮೂರು ಬೆಳೆ ಬೆಳೆಯುತ್ತಿದ್ದರು. ಆದರೆ ಈ ಬಾರಿ ಒಂದು ಬೆಳೆಗೆ ಮಾತ್ರ ನೀರು ಸಿಗಲಿರುವ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಖಚಿತ ಪಡಿಸಿದ್ದಾರೆ. ಇದು ಸಹಜವಾಗಿ ರೈತರಲ್ಲಿ ಆತಂಕ ಮನೆ ಮಾಡಿದೆ. ಈಗಾಗಲೇ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಪೋಲಾಗಿದ್ದು, ಹೆಚ್ಚು ಕಡಿಮೆ 400 ಟಿಎಂಸಿಯಷ್ಟು ನೀರು ನೆರೆಯ ಆಂಧ್ರದ ಪಾಲಾಗಿದೆ. ಜಲಾಶಯ ಕರ್ನಾಟಕದಲ್ಲಿದ್ದರೂ ಲಾಭ ಮಾತ್ರ ನೆರೆಯ ರಾಜ್ಯಕ್ಕೆ ಸಿಗುತ್ತಿದೆ. ಇದು ಕೂಡ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಪರಿಹಾರಕ್ಕೆ ಒತ್ತಾಯ

ಇನ್ನು ಈ ಒಂದು ಬೆಳೆಗೆ ನೀರು ಕೊಡುವ ನಿಯಮವನ್ನು ವಿಪಕ್ಷಗಳು ಒಪ್ಪುವುದರ ಜೊತೆಗೆ ರೈತರಿಗೆ ಬೆಳೆಯ ಪರ್ಯಾಯವಾಗಿ ಪರಿಹಾರ ಕೊಡಬೇಕು ಎಂಬ ಮಾತು ಕೂಡ ಕೇಳಿಬಂದಿದೆ. ಜಲಾಯಶದಲ್ಲಿ ನೀರಿದ್ದರೂ, ಎರಡನೇ ಬೆಳೆಗೆ ನೀರಿಲ್ಲ ಎಂದು ಸರ್ಕಾರ ಹೇಳಿದ್ದು, ಅದರ ಬದಲಾಗಿ ಪರಿಹಾರ ಕೊಡಿ ಎಂದು ಗಂಗಾವತಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ವಾದಿಸಿದ್ದಾರೆ.

ಇದನ್ನೂ ಓದಿ: ಶಾಕಿಂಗ್​ ನ್ಯೂಸ್​: ತುಂಗಭದ್ರಾ ಡ್ಯಾಂನ 7 ಗೇಟ್​ಗಳಿಗೆ ಡ್ಯಾಮೇಜ್​; ಸಚಿವ ಶಿವರಾಜ್​ ತಂಗಡಗಿ

ಸದ್ಯ ನಾಲ್ಕು ಜಿಲ್ಲೆಯ ರೈತರಿಗೆ ಗೇಟ್ ಅಳವಡಿಕೆ ವಿಚಾರ ತುಸು ನೆಮ್ಮದಿ ಕೊಟ್ಟಿದೆ. ಕಳೆದ ಒಂದು ವರ್ಷದಿಂದ ಗೇಟ್ ಅಳವಡಿಕೆ ಮಾಡುತ್ತೇವೆ ಅಂತಾ ಸರ್ಕಾರ ಹೇಳುತ್ತಾ ಬರುತ್ತಿದೆ. ಇದೀಗ ಸಚಿವರು ನವೆಂಬರ್ ಕೊನೆ ವಾರದಲ್ಲಿ ಗೇಟ್ ಅಳವಡಿಕೆ ಕಾರ್ಯ ಮಾಡುವುದಾಗಿ ಹೇಳಿದ್ದು, ರೈತ ಸಮೂಹಕ್ಕೆ ಖುಷಿ ವಿಚಾರ. ಆದರೆ ಜಲಾಶಯವನ್ನೇ ನಂಬಿ ಬದುಕು ಕಟ್ಟಿಕೊಂಡ ರೈತರಿಗೆ ಎರಡನೇ ಬೆಳೆಗೆ ನೀರು ಸಿಗಲ್ಲ ಅನ್ನೋದು ದುಃಖದ ವಿಚಾರವಾಗಿದೆ. ವಿಪಕ್ಷಗಳ ಒತ್ತಾಯಕ್ಕೆ ಮಣಿದು ಸರ್ಕಾರ ನೀರಿನ ಬದಲಿ ಪರಿಹಾರ ಹಣ ಕೊಡುತ್ತಾ ಕಾದು ನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.