ತುಂಗಭದ್ರಾ ಆಯ್ತು, ಅಪಾಯದಲ್ಲಿದೆ ರಾಜ್ಯದ ಮತ್ತೊಂದು ಪ್ರಮುಖ ಡ್ಯಾಂ
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ತುಂಗಭದ್ರ ಜಲಾಶಯದ ಕ್ರಸ್ಟ್ ಗೇಟ್ ಕಟ್ಟಾಗಿದ್ದು ರಾಜ್ಯ ಸರ್ಕಾರಕ್ಕೆ ತಲೆನೋವಾಗಿತ್ತು. ಕೂಡಲೆ ಎಚ್ಚತ್ತ ಸರ್ಕಾರ ಹೊಸ ಕ್ರಸ್ಟ್ ಗೇಟ್ ಅಳವಡಿಸಿತ್ತು. ಇದು ಮಾಸುವ ಮುನ್ನವೇ ರಾಜ್ಯದ ಮತ್ತೊಂದು ಜಲಾಶಯದಲ್ಲಿ ನೀರು ಸೋರಿಕೆ ಕಂಡುಬಂದಿದ್ದು, ಜನರ ಆತಂಕ್ಕೆ ಕಾರಣವಾಗಿದೆ. ಅದು ಯಾವ ಜಲಾಶಯ? ಇಲ್ಲಿದೆ ವಿವರ

ಶಿವಮೊಗ್ಗ, ಫೆಬ್ರವರಿ 21: ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್ ಗೇಟ್ ಕಟ್ ಆಗಿ, ಅಪಾರ ಪ್ರಮಾಣದ ನೀರು ನದಿ ಪಾಲಾಗಿದ್ದು ರಾಜ್ಯ ಸರ್ಕಾರದ ನಿದ್ದೆಗೆಡಿಸಿತ್ತು. ಇದರ ಬೆನ್ನಲ್ಲೇ ರಾಜ್ಯದ ಮತ್ತೊಂದು ಜಲಾಶಯ ಅಪಾಯದಲ್ಲಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಬಳಿ ಶರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಲಿಂಗನಮಕ್ಕಿ ಜಲಾಶಯದಲ್ಲಿ (Linganamakki Dam) ನೀರು ಸೋರಿಕೆ ಕಂಡುಬಂದಿದ್ದು, ಆತಂಕ್ಕೆ ಕಾರಣವಾಗಿದೆ.
ಲಿಂಗನಮಕ್ಕಿ ಜಲಾಶಯ ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯಕ್ಕೆ ಅತಿ ಹೆಚ್ಚು ಕೊಡುಗೆ ನೀಡುತ್ತದೆ. ಲಿಂಗನಮಕ್ಕಿ ಜಲಾಶಯ ಶೇ 25 ರಿಂದ 28ರಷ್ಟು ವಿದ್ಯುತ್ ಉತ್ಪಾದನೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಲಿಂಗನಮಕ್ಕಿ ಜಲಾಶಯದಲ್ಲಿನ ನೀರು ಸೋರಿಕೆ ಆಘಾತಕ್ಕೆ ಕಾರಣವಾಗಿದೆ.
ಇನ್ನು, ಜಲಾಶಯದಲ್ಲಿನ ಸೋರಿಕೆ ಕುರಿತು ಲಿಂಗನಮಕ್ಕಿ ಜಲಾಶಯ ಪ್ರಾಧಿಕಾರ ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಿದೆ. ಸೋರಿಕೆಯನ್ನು ರಿಪೇರಿ ಮಾಡಲು ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL) ತಿಳಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಜಲಾಶಯದಲ್ಲಿ ಸೋರಿಕೆಯಾಗುತ್ತಿರುವುದು ಇದೇ ಮೊದಲ ಬಾರಿಯೇನು ಅಲ್ಲ. ಈ ಹಿಂದೆ 2018ರಲ್ಲಿ ಜಲಾಶಯದಲ್ಲಿ ನೀರು ಸೋರಿಕೆ ಕಂಡುಬಂದಿತ್ತು. ಆಗ ರಿಪೇರಿ ಮಾಡಲಾಗಿತ್ತು. ಆದರೆ, ಇದೀಗ ಮತ್ತೆ ಅದೇ ಸಮಸ್ಯೆ ತಲೆದೂರಿದೆ.
ಈ ಬಗ್ಗೆ ಕೆಪಿಸಿಎಲ್ನ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಕುಮಾರ್ ಮಾತನಾಡಿ, ನೀರು ಸೋರಿಕೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ವಿದ್ಯುತ್ ಉತ್ಪಾದನೆಯಲ್ಲಿ ನಮಗೆ ಪ್ರತಿಯೊಂದು ಹಿನಿಯೂ ಮುಖ್ಯವಾಗುತ್ತದೆ. ನೀರು ಸೋರಿಕೆಯಾಗುತ್ತಿರುವ ಬಗ್ಗೆ ಈಗಾಗಲೇ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದ್ದು, ಅನುಮತಿಗಾಗಿ ಕಾಯುತ್ತಿದ್ದೇವೆ. ರಿಪೇರಿಗಾಗಿ ಟೆಂಡರ್ ಕೂಡ ಕರೆಯಲಾಗಿದ್ದು, ಸುಮಾರು 20 ಕೋಟಿ ರೂ. ಖರ್ಚಾಗುವ ಸಾಧ್ಯತೆ ಇದೆ ಎಂದರು.
ರಿಪೇರಿ ಮಾಡಲು ಎರಡು ವರ್ಷಗಳು ಸಮಯ ಬೇಕಾಗುತ್ತದೆ. ಮಳೆಗಾಲದಲ್ಲಿ ರಿಪೇರಿ ಮಾಡಲು ಸಾಧ್ಯವಾಗುವುದಿಲ್ಲ. ಸಂಪೂರ್ಣ ಬುಡದಿಂದ ರಿಪೇರಿ ಮಾಡಬೇಕಾಗುತ್ತದೆ. ಹೀಗಾಗಿ, ಇಷ್ಟು ಸುದೀರ್ಘ ಸಮಯ ಬೇಕಾಗುತ್ತದೆ. ಹೊರ ಹರಿವಿಕ್ಕಿಂತ ಕಡಿಮೆ ಮಿತಿಯಲ್ಲೇ ನೀರು ಸೋರಿಕೆಯಾಗುತ್ತಿದೆ. ಸೋರಿಕೆಯಾದ ನೀರು ತಲಕಾಲೆ ಜಲಾಶಯ ಸೇರುತ್ತಿದೆ. ಸೋರಿಕೆಯಾದ ನೀರಿನಿಂದ ಅಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ತುಂಗಭದ್ರಾ ಜಲಾಶಯ ಗೇಟ್ ದುರಸ್ತಿ ಸಂಪೂರ್ಣ ಮುಕ್ತಾಯ: ಹನಿ ನೀರು ಹೊರಹೋಗದಂತೆ ತಡೆಯುವಲ್ಲಿ ಸಿಬ್ಬಂದಿ ಯಶಸ್ವಿ
ನಿವೃತ್ತ ಕೆಪಿಸಿಎಲ್ ಇಂಜಿನಿಯರ್ ಮಾತನಾಡಿ, ಕಳೆದ 4-5 ವರ್ಷಗಳಿಂದ ಜಲಾಶಯದಲ್ಲಿ ನೀರು ಸೋರಿಕೆಯಾಗುತ್ತಿದೆ. ನೀರು ಸೋರಿಕೆಯಿಂದ ವಿದ್ಯುತ್ ಉತ್ಪಾದನೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ಜಲಾಯಶಕ್ಕೆ ಹೊಡೆತ ಬೀಳಲಿದೆ. ಹೀಗಾಗಿ, ಕೂಡಲೆ ರಿಪೇರಿಯಾಗಬೇಕಿದೆ ಎಂದು ಹೇಳಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:54 pm, Fri, 21 February 25