Dog Bite: ಬಳ್ಳಾರಿಯ ಬಾದನಹಟ್ಟಿಯಲ್ಲಿ ಹುಚ್ಚುನಾಯಿ ದಾಳಿ, ಇಬ್ಬರು ಮಕ್ಕಳು ಬಲಿ
ಬಳ್ಳಾರಿಯ ಬಾದನಹಟ್ಟಿ ಗ್ರಾಮದಲ್ಲಿ ಹುಚ್ಚುನಾಯಿ ದಾಳಿಯಿಂದ ಇಬ್ಬರು ಮಕ್ಕಳು ಬಲಿಯಾಗಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಬಳ್ಳಾರಿ: ಹುಚ್ಚುನಾಯಿ ಕಡಿತದಿಂದ (Dog Bite) ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 3 ವರ್ಷದ ಸುರಕ್ಷಿತಾ ಹಾಗೂ 7 ವರ್ಷದ ಶಾಂತಕುಮಾರ್ ಮೃತಪಟ್ಟ ದುರ್ದೈವಿ ಮಕ್ಕಳು. ಇಬ್ಬರು ಮಕ್ಕಳ ಸಾವಿನಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಮಕ್ಕಳನ್ನು ಹೊರಗೆ ಕಳುಹಿಸಲು ಗ್ರಾಮಸ್ಥರು ಹೆದರುತ್ತಿದ್ದಾರೆ.
ಆಟವಾಡುತ್ತಿದ್ದಾಗ ದಾಳಿ ಮಾಡಿದ್ದ ನಾಯಿ, ಸುರಕ್ಷಿತಾಳ ಮುಖಕ್ಕೆ ಹಾಗೂ ಶಾಂತಕುಮಾರ್ ಕೈಗೆ ಕಚ್ಚಿತ್ತು. ಇದರಿಂದ ತೀವ್ರ ಗಾಯಗೊಂಡಿದ್ದ ಸುರಕ್ಷಿತಾ ನವೆಂಬರ್ 21ರಂದು ಮೃತಪಟ್ಟಿದ್ದಳು. ಚುಚ್ಚು ಮದ್ದು ಹಾಕಿದರೂ ಸಹ ಸುರಕ್ಷಿತಾ ಬದುಕುಳಿಯಲಿಲ್ಲ. ಇನ್ನು ಸಕಾಲಕ್ಕೆ ಚಿಕಿತ್ಸೆ ಪಡೆಯದ ಶಾಂತಕುಮಾರ್, ನವಂಬರ್ 22ರಂದು ಸಾವನ್ನಪ್ಪಿದ್ದಾನೆ. ಆದ್ರೆ, ಈ ಘಟನೆ ಇಂದು(ಡಿಸೆಂಬರ್) ಬೆಳಕಿಗೆ ಬಂದಿದೆ. ಇದರಿಂದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಹೊರಗಡೆ ಆಟವಾಡಲು ಬಿಡುತ್ತಿಲ್ಲ.
ಮಕ್ಕಳ ಸಾವಿನ ನಂತರ ಗ್ರಾಮಾಸ್ಥರು ನಾಯಿಯನ್ನು ಹೊಡೆದು ಕೊಂದಿದ್ದಾರೆ. ಇನ್ನು ವಿಷಯ ತಿಳಿದು ಗ್ರಾಮಕ್ಕೆ ಡಿಎಚ್ ಓ ನೇತೃತ್ವದ ತಂಡ ಭೇಟಿ ನೀಡಿದ್ದು, ನಾಯಿಗಳಿಗೆ ವಾಕ್ಸಿನ್ ನೀಡಲು ಕ್ರಮಕೈಗೊಂಡಿದೆ. ಹಾಗೇ ನಾಯಿ ಕಡಿತ ಕಂಡು ಬಂದರೆ ಕೂಡಲೇ ಅಸ್ಪತ್ರೆಗೆ ದಾಖಲಿಸಲು ಜಾಗೃತಿ ಮೂಡಿಸಿದೆ.
ಭದ್ರಾವತಿಯಲ್ಲೂ ಬೀದಿ ನಾಯಿಗಳ ದಾಳಿಗೆ 4 ವರ್ಷದ ಬಾಲಕ ಸಾವು
ಶಿವಮೊಗ್ಗ: ಬೀದಿ ನಾಯಿಗಳ ದಾಳಿಗೆ ಗಾಯಗೊಂಡಿದ್ದ 4 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ಸೈಯದ್ ಮದನಿ ಎಂಬಾತನೇ ಮೃತಪಟ್ಟ ದುರ್ದೈವಿ ಬಾಲಕನಾಗಿದ್ದಾನೆ.
ನಿನ್ನೆ(ಬುಧವಾರ) ಸಂಜೆ 4 ಗಂಟೆ ಸುಮಾರಿಗೆ ಮಗುವಿನ ತಂದೆ ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ತಂದೆಯನ್ನ ಹಿಂಬಾಲಿಸಿಕೊಂಡು ಹೋಗುವಾಗ 7 ರಿಂದ 8 ಬೀದಿ ನಾಯಿಗಳ ಹಿಂಡು ಬಾಲಕನ ಮೇಲೆ ದಾಳಿ ಮಾಡಿತ್ತು. ಇದರಿಂದಾಗಿ ತೀವ್ರ ಅಸ್ವಸ್ಥತೆಯಿಂದ ಬಳಲಿದ ಬಾಲಕನನ್ನು ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸೈಯದ್ ಮದನಿ ಸಾವನಪ್ಪಿದ್ದಾನೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ