
ಬಳ್ಳಾರಿ, ಡಿಸೆಂಬರ್ 10: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ (VSK University) ವ್ಯಾಪ್ತಿಗೆ ಬರುವ ಕಾಲೇಜುಗಳು ಸುಮಾರು 10 ಕೋಟಿ ರೂ ಮೊತ್ತದ ವಿದ್ಯಾರ್ಥಿಗಳ ಶುಲ್ಕವನ್ನು (Student fees) ಬಾಕಿ ಉಳಿಸಿಕೊಂಡಿವೆ. ಹೀಗಾಗಿ ವಿದ್ಯಾರ್ಥಿಗಳ ಶುಲ್ಕ ಬಾಕಿ ಉಳಿಸಿಕೊಂಡ ಕಾಲೇಜುಗಳಿಗೆ ವಿವಿ ನೋಟಿಸ್ ನೀಡುವ ಮೂಲಕ ಚಾಟಿ ಬೀಸಿದೆ. ಒಂದು ವೇಳೆ ಬಾಕಿ ಪಾವತಿಸದಿದ್ದರೆ ವಿದ್ಯಾರ್ಥಿಗಳ ಪ್ರವೇಶಾತಿ ಮತ್ತು ಪರೀಕ್ಷೆಗೂ ಅನುಮತಿ ನಿರಾಕರಿಸುವುದಾಗಿ ಎಚ್ಚರಿಕೆ ನೀಡಿದೆ.
ಗಣಿನಾಡು ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು 2018-19ನೇ ಸಾಲಿನಿಂದ ಈವರೆಗೆ ವಿದ್ಯಾರ್ಥಿಗಳ ಶುಲ್ಕ ಪಾವತಿ ಬಾಕಿ ಉಳಿಸಿಕೊಂಡ ಕಾಲೇಜುಗಳಿಗೆ ಇದೀಗ ನೋಟಿಸ್ ಮೂಲಕ ಚಾಟಿ ಬೀಸಿದೆ. ಈ ವಿವಿ ವ್ಯಾಪ್ತಿಗೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ 10 ಸ್ನಾತಕೋತ್ತರ ಕೇಂದ್ರ, 50 ಪದವಿ ಹಾಗೂ 14 ಬಿ.ಎಡ್ ಕಾಲೇಜುಗಳು ಒಳಪಡುತ್ತಿವೆ. ಇದರಲ್ಲಿ 15 ಸರಕಾರಿ ಕಾಲೇಜುಗಳಿವೆ. ಬಹುತೇಕ ಕಾಲೇಜುಗಳು ವಿದ್ಯಾರ್ಥಿಗಳ ಪಾವತಿ ಶುಲ್ಕವನ್ನು ಬಾಕಿ ಉಳಿಸಿಕೊಂಡಿವೆ.
ಇನ್ನು ಈ ಹಿಂದೆ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ನೇರವಾಗಿ ಕಾಲೇಜುಗಳಿಗೆ ಬಿಡುಗಡೆಯಾಗುತ್ತಿತ್ತು. ಕಾಲೇಜಿನ ಪ್ರವೇಶಾತಿ ಶುಲ್ಕಕ್ಕೆ ವಿದ್ಯಾರ್ಥಿ ವೇತನ ಸರಿದೂಗಿಸಿಕೊಂಡು, ಉಳಿದ ಮೊತ್ತವನ್ನು ಆಯಾ ವಿದ್ಯಾರ್ಥಿಗೆ ಪಾವತಿಸಲಾಗುತ್ತಿತ್ತು. ಆದರೆ ಕೆಲವು ವರ್ಷಗಳಿಂದ ವಿದ್ಯಾರ್ಥಿ ವೇತನ ಆಯಾ ವಿದ್ಯಾರ್ಥಿಯ ಖಾತೆಗೆ ನೇರವಾಗಿ ಪಾವತಿಯಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ಪಾವತಿ ಶುಲ್ಕವನ್ನ ಸರಿದೂಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜೊತೆಗೆ ವಿದ್ಯಾರ್ಥಿಗಳು ಪಾವತಿ ಶುಲ್ಕ ನೀಡದಿರುವುದು ಇದೀಗ ಕಾಲೇಜುಗಳಿಗೆ ಸಮಸ್ಯೆ ತಂದೊಡ್ಡಿದೆ.
2018-19ನೇ ಸಾಲಿನಿಂದ ಈವರೆಗೆ ಸರಕಾರಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆದಿದ್ದ ವಿದ್ಯಾರ್ಥಿಗಳ ಪೈಕಿ ಬಹುತೇಕರು ಶುಲ್ಕ ಪಾವತಿ ಮಾಡಿಲ್ಲ. 2018-19ನೇ ಸಾಲಿನಲ್ಲಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿಗಳು ಈಗಾಗಲೇ ಪದವಿ, ಸ್ನಾತಕೋತ್ತರ ವ್ಯಾಸಂಗ ಪೂರ್ಣಗೊಳಿಸಿದ್ದಾರೆ. ಈಗಾಗಗಲೇ ಅವರೆಲ್ಲಾ ವಿವಿಯಿಂದ ಹೊರನಡೆದಿದ್ದಾರೆ. ಶುಲ್ಕ ಪಾವತಿಸದ ಈ ಸಾಲಿನ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುವುದು ಕಾಲೇಜುಗಳಿಗೆ ದೊಡ್ಡ ಸವಾಲಾಗಿದೆ.
ಇನ್ನು ಈ ಬಗ್ಗೆ ಮಾತನಾಡಿದ ವಿವಿ ಕುಲಪತಿ ಪ್ರೊ. ಎಮ್. ಮುನಿರಾಜು, 10 ಕೋಟಿಗೂ ಅಧಿಕ ಮೊತ್ತದ ವಿದ್ಯಾರ್ಥಿ ಪಾವತಿ ಶುಲ್ಕ ಕಾಲೇಜುಗಳು ಬಾಕಿ ಉಳಿಸಿಕೊಂಡಿವೆ. ಇದು ವಿವಿಗೆ ಆರ್ಥಿಕ ಸಮಸ್ಯೆ ತಂದೊಡ್ಡಿದೆ. ವಿವಿ ನಿರ್ವಹಣೆ ಆಗಬೇಕಾದರೆ ಹಣದ ಅವಶ್ಯತೆ ಇದೆ, ಹೀಗಾಗಿ ಪಾವತಿ ಶುಲ್ಕ ಬಾಕಿ ಉಳಿಸಿಕೊಂಡ ಕಾಲೇಜುಗಳಿಗೆ ನೋಟಿಸ್ ನೀಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ಅಂಕಪಟ್ಟಿಯಲ್ಲಿ ತನ್ನ ಬದಲಿಗೆ ಸ್ವಾಮೀಜಿ ಫೋಟೋ, ದಂಗಾದ ವಿದ್ಯಾರ್ಥಿ!
ಒಟ್ಟಿನಲ್ಲಿ ಗಣಿನಾಡು ಬಳ್ಳಾರಿಯಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ವಿದ್ಯಾರ್ಥಿ ಪಾವತಿ ಶುಲ್ಕ ಬಾಕಿ ಉಳಿಸಿಕೊಂಡ ಕಾಲೇಜುಗಳಿಗೆ ನೋಟಿಸ್ ಇದೀಗ ಬಿಸಿ ಮುಟ್ಟಿಸಿದೆ. ಮುಂದೆ ಇದು ಯಾವ ರೀತಿ ಪರಿಣಾಮ ಬಿರಲಿದೆ ಎನ್ನುವುದು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:16 pm, Wed, 10 December 25