Bengaluru Lockdown: ಬೆಂಗಳೂರು ನಗರದ ಕೊವಿಡ್ ಪಾಸಿಟಿವಿಟಿ ರೇಟ್ ಶೇ.6ಕ್ಕೆ ಇಳಿಕೆ; ಲಾಕ್ಡೌನ್ ತೆರವುಗೊಳಿಸಲಿದೆಯೇ ಸರ್ಕಾರ?
Bengaluru Unlock: ಆಟೋ, ಓಲಾ, ಉಬರ್, ಬಿಎಂಟಿಸಿ ಕೆಎಸ್ಆರ್ಟಿಸಿ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದ್ದು, ಕೊವಿಡ್ ತಡೆ ನಿಯಮಾವಳಿ ಪಾಲನೆ ಕಡ್ಡಾಯವಾಗಲಿದೆ. ಶೇ.50 ರಷ್ಟು ಮಾತ್ರ ಪ್ರಯಾಣಿಕರು ಮಾತ್ರ ಪ್ರಯಾಣಿಸಬೇಕು ಎಂಬ ನಿಯಮ ಮಾಡಲು ನಿರ್ಧರಿಸಲಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ಕೊವಿಡ್ ಪಾಸಿಟಿವಿಟಿ ದರ ಶೇಕಡಾ 5ಕ್ಕೆ ಬಂದಲ್ಲಿ ಲಾಕ್ಡೌನ್ ತೆರವುಗೊಳಿಸುವುದಾಗಿ ಸ್ವತಃ ಸಿಎಂ ಯಡಿಯೂರಪ್ಪ ಅವರೇ ಈ ಮುನ್ನ ತಿಳಿಸಿದ್ದಾರೆ. ಸದ್ಯ ನಿನ್ನೆ (ಮೇ4) ನಡೆಸಲಾದ ಕೊವಿಡ್ ಪರೀಕ್ಷೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಪಾಸಿಟಿವಿಟಿ ರೇಟ್ ಶೇಕಡಾ 6 ಕ್ಕೆ ಇಳಿದಿದ್ದು, ಇನ್ನೂ 2 ದಿನಗಳಲ್ಲಿ ಇನ್ನಷ್ಟು ಕಡಿಮೆಯಾಗುವ ಸಂಭವವಿದೆ. ಆದರೂ ಜೂನ್ 14ರವರೆಗೆ ಲಾಕ್ಡೌನ್ ಮುಂದುವರೆಸುವ ಕುರಿತು ಅಧಿಕಾರಿಗಳಿಗೆ ಒಲವಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಗಳ ಹಿತದೃಷ್ಟಿಯಿಂದ ಲಾಕ್ಡೌನ್ ಮುಂದುವರೆಸಿ, ಜೂನ್ 14ರ ನಂತರವಷ್ಟೇ ಹಂತಹಂತವಾಗಿ ಲಾಕ್ಡೌನ್ ತೆರವುಗೊಳಿಸುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಂದೊಮ್ಮೆ ಜೂನ್ 14 ನಂತರ ಬೆಂಗಳೂರಿನಲ್ಲಿ ಲಾಕ್ಡೌನ್ ತೆರವುಗೊಳಿಸಿದರೂ ಕೆಲ ಕ್ಷೇತ್ರಗಳಿಗೆ, ವಾಣಿಜ್ಯ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದ ಅನುಮತಿ ನೀಡದಿರಲು ಸರ್ಕಾರ ನಿರ್ಧರಿಸಲಿದೆ ಎಂದು ತಿಳಿದುಬಂದಿದೆ. ಲಾಕ್ಡೌನ್ ತೆರವುಗೊಳಿಸಿದ ತಕ್ಷಣವೇ ಸಿನಿಮಾ ಥಿಯೇಟರ್ ಓಪನ್ ಮಾಡದಿರಲು ಬಿಬಿಎಂಪಿ ನಿರ್ಧರಿಸಿದ್ದು, ಶೇ.50 ಅಥವಾ ಶೇ 75 ಪ್ರೇಕ್ಷಕರಿಗೆ ಅವಕಾಶ ಎಂಬ ಯಾವ ವಿನಾಯಿತಿಯನ್ನೂ ನೀಡದೆ ಸಂಪೂರ್ಣ ಬಂದ್ ಮಾಡಲು ನಿಶ್ಚಯಿಸಿದೆ ಎನ್ನಲಾಗಿದೆ. ಜತೆಗೆ ಜೂನ್ 14ರ ನಂತರವೂ ಮಾಲ್ಗಳನ್ನು ತೆರೆಯಲು ಅವಕಾಶ ನೀಡುವ ಸಾಧ್ಯತೆ ಇಲ್ಲ.
ಹೋಟೆಲ್,ಬಾರ್,ಹೂ ಹಣ್ಣು ಮಾರುಕಟ್ಟೆಗೆ ಅವಕಾಶ? ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಕೇವಲ ಪಾರ್ಸೆಲ್ಗೆ ಮಾತ್ರ ಅವಕಾಶ ನೀಡುವ ಸಾಧ್ಯತೆ ಇದ್ದು, ಬಾರ್, ಪಬ್ಗಳನ್ನು ಸಂಪೂರ್ಣ ಪ್ರಮಾಣದಲ್ಲಿ ತೆರೆಯಲು ಅವಕಾಶ ನೀಡುವ ಸಾಧ್ಯತೆ ಇಲ್ಲ. ಅವಕಾಶ ನೀಡಿದರೂ ಪಾರ್ಸೆಲ್ಗೆ ಮಾತ್ರ ಅವಕಾಶ ನೀಡುವ ಸಾಧ್ಯತೆಯಿದೆ.
ಸದ್ಯ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಬಾರ್ಗಳಲ್ಲಿ ಖರೀದಿಗೆ ಅವಕಾಶ ಇದ್ದು, ಜೂನ್ 14ರ ನಂತರ ಹಿಂದಿನಂತೆ ಬೆಳಗ್ಗೆ 10 ಗಂಟೆಯಿಂದ ಸಂಜೆವರೆಗೂ ಓಪನ್ ಮಾಡಿ, ಕೇವಲ ಪಾರ್ಸೆಲ್ಗೆ ಮಾತ್ರ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ.
ಆಟೋ, ಓಲಾ, ಉಬರ್, ಬಿಎಂಟಿಸಿ ಕೆಎಸ್ಆರ್ಟಿಸಿ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದ್ದು, ಕೊವಿಡ್ ತಡೆ ನಿಯಮಾವಳಿ ಪಾಲನೆ ಕಡ್ಡಾಯವಾಗಲಿದೆ. ಶೇ.50 ರಷ್ಟು ಮಾತ್ರ ಪ್ರಯಾಣಿಕರು ಮಾತ್ರ ಪ್ರಯಾಣಿಸಬೇಕು ಎಂಬ ನಿಯಮ ಮಾಡಲು ನಿರ್ಧರಿಸಲಾಗಿದೆ.
ಜಿಮ್, ಪಾರ್ಕ್, ಸ್ವಿಮ್ಮಿಂಗ್ ಪೂಲ್ಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡುವುದಿಲ್ಲ. ಮದುವೆಗೆ 40, ಅಂತ್ಯಸಂಸ್ಕಾರದಲ್ಲಿ 10 ಜನ ಜನರಿಗೆ ಮಾತ್ರ ಅವಕಾಶ ಕಲ್ಪಿಸಬಹುದು. ಆದರೆ ಸಭೆ, ಸಮಾರಂಭ, ಪ್ರತಿಭಟನೆಗಳನ್ನು ನಡೆಸದಂತೆ ನಿರ್ಬಂಧ ಹೇರಲಾಗುತ್ತದೆ. ತರಕಾರಿ, ಹೂ ಹಣ್ಣು ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆಯಿಂದ ಸಂಜೆವರೆಗೂ ಖರೀದಿಗೆ ಅವಕಾಶ ನೀಡಲಾಗುತ್ತದೆ. ಆದರೆ ಬೃಹತ್ ಮಾರುಕಟ್ಟೆಗಳಾದ ಕೆ.ಆರ್ ಮಾರ್ಕೆಟ್, ರಸೆಲ್ ಮಾರ್ಕೆಟ್ಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: CET 2021: ಪಿಯು ಪರೀಕ್ಷೆ ರದ್ದುಗೊಂಡರೂ ಸಿಇಟಿ ನಡೆಯಲಿದೆ: ಡಿಸಿಎಂ ಅಶ್ವತ್ಥ್ ನಾರಾಯಣ
ಕೊವಿಡ್ ನಿರ್ವಹಣೆಗೆ ಪ್ರತಿ ಗ್ರಾಮ ಪಂಚಾಯತ್ಗೂ 50 ಸಾವಿರ ಅನುದಾನ ಬಿಡುಗಡೆ: ಸಿಎಂ ಯಡಿಯೂರಪ್ಪ (Bangalore Covid Positivity Rate Decreases at 6 percent Will the Karnataka government clear the lockdown GGD)