ಬಾಂಗ್ಲಾ ಯುವತಿ ಅತ್ಯಾಚಾರ ಪ್ರಕರಣ: ತನಿಖೆ ವೇಳೆ ಹೊರಬಿತ್ತು ಬೃಹತ್ ಮಾನವ ಕಳ್ಳಸಾಗಣೆ ಜಾಲದ ಕರಾಳ ಮುಖ

ಕಳ್ಳಸಾಗಣೆ ಮೂಲಕ ಭಾರತಕ್ಕೆ ಬಂದ ಜನರಿಗೆ ಪಶ್ಚಿಮ ಬಂಗಾಳದಲ್ಲಿ ದಲ್ಲಾಳಿ ಆಧಾರ್ ಕಾರ್ಡ್​ ಮಾಡಿಕೊಡುತ್ತಿದ್ದ. ಆಧಾರ್ ಕಾರ್ಡ್ ಮಾಡಿಸಿದ ನಂತರ ಅವರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿತ್ತು.

ಬಾಂಗ್ಲಾ ಯುವತಿ ಅತ್ಯಾಚಾರ ಪ್ರಕರಣ: ತನಿಖೆ ವೇಳೆ ಹೊರಬಿತ್ತು ಬೃಹತ್ ಮಾನವ ಕಳ್ಳಸಾಗಣೆ ಜಾಲದ ಕರಾಳ ಮುಖ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಹಲ್ಲೆ ಪ್ರಕರಣ ತನಿಖೆಯ ವೇಳೆ ಬೃಹತ್​ ಮಾನವ ಕಳ್ಳಸಾಗಣೆ ವಿಚಾರ ಪತ್ತೆಯಾಗಿದೆ. ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೇಸ್ ವಿಚಾರಣೆ ಸಂದರ್ಭ ಮಾನವ ಕಳ್ಳಸಾಗಣೆ ವಿಚಾರ ಬೆಳಕಿಗೆ ಬಂದಿದೆ. ಯಾವುದೇ ವೀಸಾ, ಪಾಸ್​ಪೋರ್ಟ್​ ಇಲ್ಲದೆ ಮಾನವ ಕಳ್ಳಸಾಗಣೆ ಮಾಡಲಾಗುತ್ತದೆ. ದಲ್ಲಾಳಿಗಳು ಜನರನ್ನು ಬಾಂಗ್ಲಾದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡುತ್ತಾರೆ ಎಂದು ತಿಳಿದುಬಂದಿದೆ.

ಮಾನವ ಕಳ್ಳಸಾಗಣೆಗೆ ಕೆಲಸ ಮಾಡುವ ದಲ್ಲಾಳಿಗಳು ಭಾರತಕ್ಕೆ ಬರಲು ಇಷ್ಟಪಡುವವರನ್ನು ಸಂಪರ್ಕಿಸುತ್ತಿದ್ದರು. ಬಳಿಕ, ರಾತ್ರಿ ವೇಳೆ ಭಾರತದ ಗಡಿಗೆ ನಡೆದುಕೊಂಡು ಬರುವಂತೆ ಹೇಳುತ್ತಿದ್ದರು. ನಂತರ, ಪಶ್ಚಿಮ ಬಂಗಾಳಕ್ಕೆ ನುಸುಳಿ ಕೆಲವು ದಿನ ಅಲ್ಲೇ ಇರುತ್ತಿದ್ದರು. ಹೀಗೆ ಭಾರತದ ಗಡಿ ತಲುಪಿಸಿದ ಅಲ್ಲಿನ ದಲ್ಲಾಳಿಗೆ 30ರಿಂದ 50 ಸಾವಿರ ರೂಪಾಯಿ ಹಣ ನೀಡಲಾಗುತ್ತಿತ್ತು. ಆಮೇಲೆ, ಮತ್ತೋರ್ವ ದಲ್ಲಾಳಿ ಜೊತೆ ಭಾರತಕ್ಕೆ ಕಳುಹಿಸಿಕೊಡಲಾಗುತ್ತಿತ್ತು ಎಂಬ ಅಂಶ ತಿಳಿದುಬಂದಿದೆ.

ಕಳ್ಳಸಾಗಣೆ ಮೂಲಕ ಭಾರತಕ್ಕೆ ಬಂದ ಜನರಿಗೆ ಪಶ್ಚಿಮ ಬಂಗಾಳದಲ್ಲಿ ದಲ್ಲಾಳಿ ಆಧಾರ್ ಕಾರ್ಡ್​ ಮಾಡಿಕೊಡುತ್ತಿದ್ದ. ಆಧಾರ್ ಕಾರ್ಡ್ ಮಾಡಿಸಿದ ನಂತರ ಅವರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿತ್ತು. ಬೆಂಗಳೂರು, ಹೈದರಾಬಾದ್ ಸೇರಿದಂತೆ ಬೇರೆ ನಗರಗಳಿಗೆ ಕಳುಹಿಸಲಾಗುತ್ತಿತ್ತು. ದೇಶದ ದೊಡ್ಡ ದೊಡ್ಡ ನಗರಗಳಿಗೆ ಯುವತಿಯರ ಸ್ಥಳಾಂತರ ಮಾಡಲಾಗುತ್ತಿತ್ತು ಎಂಬ ಮಾಹಿತಿ ಹೊರಬಿದ್ದಿದೆ.

ಅವರನ್ನು ವಿಮಾನ, ರೈಲು ಟಿಕೆಟ್​ ಬುಕ್​ ಮಾಡಿ ಕರೆಸಿಕೊಳ್ಳುತ್ತಾರೆ. ಮಹಾನಗರಗಳಲ್ಲಿ ಇರುವ ದಲ್ಲಾಳಿಗಳು ಕೆಲಸ ಕೊಡಿಸುತ್ತಾರೆ. ಬಹುತೇಕ ಯುವತಿಯರನ್ನು ಮಸಾಜ್ ಪಾರ್ಲರ್​ಗೆ ಕಳಿಸಿಕೊಡುತ್ತಾರೆ. ಮಸಾಜ್​​ ಪಾರ್ಲರ್​ಗಳಲ್ಲಿ ಒತ್ತೆ ಇರಿಸಿ ಕೆಲಸ ಮಾಡಿಸುತ್ತಾರೆ. ಗ್ಯಾಂಗ್​ರೇಪ್ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿಗಳು ಹಾಗೂ ಸಂತ್ರಸ್ತೆ ಕೂಡ ಇದೇ ಮಾರ್ಗದಲ್ಲಿ ಭಾರತಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಬೆಂಗಳೂರು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.

ಇದನ್ನೂ ಓದಿ: ಬಾಂಗ್ಲಾ ಯುವತಿ ಗ್ಯಾಂಗ್ ರೇಪ್ ಪ್ರಕರಣ; ಆರೋಪಿಗಳಿಂದ ತಪ್ಪೊಪ್ಪಿಗೆ

ಬೆಂಗಳೂರಿನಲ್ಲಿ ಬಾಂಗ್ಲಾ ಯುವತಿ ಮೇಲೆ ಅತ್ಯಾಚಾರ ಪ್ರಕರಣದ ಬಂಧಿತರಿಗೆ ಆಧಾರ್ ಕಾರ್ಡ್ ಸಿಕ್ಕಿದ್ದೇಗೆ?