AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವ ಸ್ಥಾನ ಸಿಗದೇ ಇದ್ದರೂ ಪರವಾಗಿಲ್ಲ, ರಾಜ್ಯದ ಅಭಿವೃದ್ಧಿಯೇ ನನ್ನ ಕನಸು ಎಂದ ಯತ್ನಾಳ್

ಯಡಿಯೂರಪ್ಪ ಸಂಪುಟದಲ್ಲಿ ನಾನು ಸಚಿವನಾಗುವುದಿಲ್ಲ, ಸಚಿವನಾಗಬಾರದೆಂದು ನಿರ್ಣಯ ಮಾಡಿದ್ದೇನೆ. ನಾನು ಸಚಿವನಾಗಬೇಕೆಂದು ಯಡಿಯೂರಪ್ಪ ಹೇಳುವುದಿಲ್ಲ. ನನಗೆ ಅಷ್ಟೊಂದು ವಿಶ್ವಾಸವಿದೆ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ.

ಸಚಿವ ಸ್ಥಾನ ಸಿಗದೇ ಇದ್ದರೂ ಪರವಾಗಿಲ್ಲ, ರಾಜ್ಯದ ಅಭಿವೃದ್ಧಿಯೇ ನನ್ನ ಕನಸು ಎಂದ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್ (ಸಂಗ್ರಹ ಚಿತ್ರ)
TV9 Web
| Edited By: |

Updated on:Apr 06, 2022 | 9:14 PM

Share

ವಿಜಯಪುರ: ತನಗೆ ಸಚಿವ ಸ್ಥಾನದ ಆಕಾಂಕ್ಷೆ ಇಲ್ಲ. ಯಡಿಯೂರಪ್ಪ ಸಂಪುಟದಲ್ಲಿ ನಾನು ಸಚಿವನಾಗುವುದಿಲ್ಲ, ಸಚಿವನಾಗಬಾರದೆಂದು ನಿರ್ಣಯ ಮಾಡಿದ್ದೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಯತ್ನಾಳ್, ಸಚಿವ ಸಂಪುಟ ವಿಸ್ತರಣೆ, ಸಚಿವ ಸ್ಥಾನದ ಆಕಾಂಕ್ಷೆ, ಕೇಂದ್ರದ ಶಿಸ್ತು ಕ್ರಮ ಸಹಿತ ಕೆಲವಾರು ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನಾನು ಸಚಿವನಾಗಬೇಕೆಂದು ಯಡಿಯೂರಪ್ಪ ಹೇಳುವುದಿಲ್ಲ. ನನಗೆ ಅಷ್ಟೊಂದು ವಿಶ್ವಾಸವಿದೆ ಎಂದು ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ವ್ಯಂಗ್ಯವಾಡಿದರು.

ಸಚಿವ ಸ್ಥಾನಕ್ಕಾಗಿ ನಾನು ಯಾವತ್ತೂ ಒತ್ತಾಯ ಮಾಡಿಲ್ಲ. ಈ ಹಿಂದೆ ನನ್ನ ಯೋಗ್ಯತೆಯ ಆಧಾರದ ಮೇಲೆ ಕೇಂದ್ರದಲ್ಲಿ ಸಚಿವನಾಗಿದ್ದೆ. ಕಾಡಿಬೇಡಿ ದಲ್ಲಾಳಿಗಳ ಮೂಲಕ ಸಚಿವನಾಗಲು ಪ್ರಯತ್ನ ಮಾಡುವುದಿಲ್ಲ. ನನ್ನ ಬಯೋಡೇಟಾ ಪ್ರಧಾನಿಗಳ ಕಚೇರಿಯಲ್ಲಿ, ಗೃಹ ಸಚಿವರ ಕಾರ್ಯಾಲಯದಲ್ಲಿ, ರಾಷ್ಟ್ರೀಯ ಅಧ್ಯಕ್ಷರ ಕಚೇರಿಯಲ್ಲಿದೆ. ನನಗೆ ಸಚಿವ ಸ್ಥಾನ ಸಿಗದೇ ಇದ್ದರೂ ಪರವಾಗಿಲ್ಲ. ರಾಜ್ಯದ ಅಭಿವೃದ್ಧಿಯೇ ನನ್ನ ಕನಸು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ತಿಳಿಸಿದ್ದಾರೆ.

ನನಗೆ ಸಚಿವ ಸ್ಥಾನದ ಮೇಲೆ ಆಸೆಯಿಲ್ಲ. ಕೃಷ್ಣಾ ನದಿ ಯೋಜನೆಗಳಿಗೆ ಹಣ ಮೀಸಲಿಡಬೇಕೆಂದು ಒತ್ತಾಯವಿದೆ. ಮುಂದಿನ ಬಜೆಟ್​ನಲ್ಲಿ 25,000 ಕೋಟಿ ರೂಪಾಯಿ ಹಣ ಮೀಸಲಿಡಬೇಕೆಂದು ಒತ್ತಾಯವಿದೆ. ವಿಜಯಪುರಕ್ಕೆ ಮೆಡಿಕಲ್ ಕಾಲೇಜು ಬೇಕು. ನಗರದ ಅಭಿವೃದ್ಧಿಗೆ 150 ಕೋಟಿ ರೂಪಾಯಿ ಬೇಕು. ಕೊರೊನಾ ಕಾರಣದಿಂದ ಆರ್ಥಿಕ ಸಮಸ್ಯೆಯಾಗಿರುವ ಹಿನ್ನಲೆಯಲ್ಲಿ, ಬಜೆಟ್​ನಲ್ಲಿ ಕೆಲವೊಂದು ಕೆಲಸಕ್ಕೆ ಬಾರದ ಯೋಜನೆಗಳನ್ನು ತೆಗೆಯಬೇಕು. ನೀರಾವರಿ, ವಸತಿ, ಮೂಲ ಸೌಕರ್ಯಕ್ಕೆ ಬಜೆಟ್​ನಲ್ಲಿ ಒತ್ತು ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯತ್ನಾಳ್​ ವಿರುದ್ಧ ಕ್ರಮ ಕೈಗೊಳ್ಳಲು, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಿಂದ ಕೇಂದ್ರ ಶಿಸ್ತು ಸಮಿತಿಗೆ ಶಿಫಾರಸು ಮಾಡಿದ ಬಗ್ಗೆ ಅವರು ಪ್ರತಿಕ್ರಿಯಿಸಿದ ಅವರು, ಕೇಂದ್ರ ಶಿಸ್ತು ಸಮಿತಿ ನೋಟಿಸ್​ ಕೊಡುತ್ತದೋ ಇಲ್ಲವೋ ಗೊತ್ತಿಲ್ಲ. ನಾನು ಈವರೆಗೆ ಪಕ್ಷದ ಶಿಸ್ತು ಮೀರಿಲ್ಲ. ಇದುವರೆಗೆ ಯಾರೂ ನೋಟಿಸ್ ಕೊಟ್ಟಿಲ್ಲ. ನೋಟಿಸ್​ ಬಂದಿಲ್ಲ ಎಂದು ತಿಳಿಸಿದ್ದಾರೆ.

‘ಸಂಕ್ರಾಂತಿಯ ನಂತರ ಮಹತ್ವದ ಬದಲಾವಣೆಯಾಗಲಿದೆ’ ಎಂದ ತಮ್ಮ ಹೇಳಿಕೆಯ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ ನೀಡಿದ್ದಾರೆ. ಜನವರಿ 14ರಂದು ಸಂಕ್ರಮಣವಿದೆ. ಈ ಬಾರಿ ಉತ್ತರಾಯಣ 20 ಅಥವಾ 21ಕ್ಕೆ ಇದೆ. ನಾನು ಇದರ ಬಗ್ಗೆ ಮಾತ್ರ ಹೇಳಿಕೆಯನ್ನು ನೀಡಿದ್ದೇನೆ. ನೀವ್ಯಾಕೆ ಗಡಿಬಿಡಿ ಮಾಡುತ್ತೀರಿ ಎಂದು ಮರುಪ್ರಶ್ನೆ ಹಾಕಿದರು.

ಕೂಡಲಸಂಗಮದ ಬಸವಣ್ಣನವರ ಐಕ್ಯಸ್ಥಳದಲ್ಲಿ ಸಂಕ್ರಮಣದ ಬಳಿಕ ಮಹತ್ವದ ಬದಲಾವಣೆ ಆಗಲಿದೆ ಎಂದು ಹೇಳಿಕೆ ನೀಡಿದ್ದೆ. ಇವತ್ತು ಬೆಳಗಾಗುವುದರೊಳಗೆ ಮುಖ್ಯಮಂತ್ರಿಗಳಿಗೆ ದೆಹಲಿಯ ಬುಲಾವ್ ಬಂದಿದೆ ಎಂದು ಯತ್ನಾಳ್ ಹೇಳಿದ್ದಾರೆ. ಇದೇ ಮಕರ ಸಂಕ್ರಮಣದ ಉತ್ತರಾಯಣದ ಸಂಕೇತ ಎಂದು ಮಾತನಾಡಿದ್ದಾರೆ.

ಉತ್ತರಾಯಣ ಬದಲಾವಣೆಯ ಪರ್ವ‌ಕಾಲ. ಹಾಗಾಗಿ, ಸಚಿವ ಸಂಪುಟದಲ್ಲಿ ಬದಲಾವಣೆಯಾಗಬಹುದು ಪುನಾರಚನೆ ಆಗಬಹುದು ಅಥವಾ ಏನೇನೋ ಆಗಬಹುದು ಎಂದು ಯತ್ನಾಳ್ ಮಾರ್ಮಿಕವಾಗಿ ನುಡಿದಿದ್ದಾರೆ. ಸಚಿವ ಸಂಪುಟದ ವಿಚಾರವನ್ನು ಕೇಂದ್ರ ನಾಯಕರು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಸಂಪುಟ ವಿಸ್ತರಣೆ ಬಗ್ಗೆ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ನಿರ್ಧಾರ ಮಾಡಬಹುದು. ಪ್ರದೇಶವಾರು, ಜಿಲ್ಲಾವಾರು, ಜಾತಿವಾರು ಸಚಿವಸ್ಥಾನ ಹಂಚಿಕೆ ಬಗ್ಗೆ ವರಿಷ್ಠರಿಂದ ನಿರ್ಧಾರ ಸಿಗಬಹುದು. ಬಿಜೆಪಿ ವರಿಷ್ಠರು ಎಲ್ಲವನ್ನೂ ಗಂಭೀರವಾಗಿ ಪರಿಗಣಿಸಬಹುದು. ಸಂಪುಟದಲ್ಲಿ ಏನೇನು ಬದಲಾವಣೆ ಮಾಡುತ್ತಾರೆಂದು ಗೊತ್ತಿಲ್ಲ. ಒಟ್ಟಾರೆ ಪ್ರಮುಖ ನಿರ್ಣಯ ಕೈಗೊಳ್ಳಲು ಮುಖ್ಯಮಂತ್ರಿ ಕರೆಸಿದ್ದಾರೆ ಎಂದು ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿಕೆ ನೀಡಿದ್ದಾರೆ.

ಮಂತ್ರಿಗಿರಿಗಾಗಿ ನಾನು ಸಿಎಂ ಮನೆಗೆ ಎಂದೂ ಹೋಗಿಲ್ಲ.. ನಾನು ಯಾವುದಕ್ಕೂ ಅಂಜೋ ಮಗ ಅಲ್ಲ: ಯತ್ನಾಳ್​ ವಾಗ್ದಾಳಿ

Published On - 4:59 pm, Sun, 10 January 21