ಬೀದಿ ಬದಿ ವ್ಯಾಪಾರ ಮಾಡ್ತಿದ್ದ ಅಜ್ಜನಿಗೆ ಕಿರುಕುಳ: ಬಿಬಿಎಂಪಿ ಮಾರ್ಷಲ್ ನಡೆಗೆ ನೆಟ್ಟಿಗರ ಆಕ್ರೋಶ
ಬೆಂಗಳೂರಿನ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ವಯಸ್ಸಾದ ವ್ಯಕ್ತಿಗೆ ವ್ಯಾಪಾರ ಮಾಡದಂತೆ ಬಿಬಿಎಂಪಿ ಮಾರ್ಷಲ್ ತಡೆದು ಕಿರುಕುಳ ನೀಡಿದ್ದಾರೆ. ಹಿರಿಯ ವ್ಯಕ್ತಿ ಎಂಬ ಗೌರವ, ಕನಿಕರವಿಲ್ಲದೆ ಕಟುವಾಗಿ ವರ್ತಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕಿಡಿಕಾರಿದ್ದಾರೆ.
ಬೆಂಗಳೂರು, ಮಾರ್ಚ್.26: ಮಾನವೀಯತೆ ಮರೆತ ಬಿಬಿಎಂಪಿ ಮಾರ್ಷಲ್ಗಳು (BBMP Marshals) ಬೀದಿ ಬದಿಯ ವ್ಯಾಪಾರಿಗೆ ಕಿರುಕುಳ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾರ್ಷಲ್ ವರ್ತನೆಗೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರಿಗೆ (Bengaluru) ಹೊಸ ರೂಪ ನೀಡುವ ಸಲುವಾಗಿ ರೂಪಿಸಲಾಗಿರುವ ಬ್ರ್ಯಾಂಡ್ ಬೆಂಗಳೂರು (Brand Bengaluru) ಎಂಬ ಯೋಜನೆ ಹೆಸರಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಕಿರುಕುಳ ಹೆಚ್ಚಾಗಿದೆ. ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ವಯಸ್ಸಾದ ವ್ಯಕ್ತಿಗೆ ವ್ಯಾಪಾರ ಮಾಡದಂತೆ ಮಾರ್ಷಲ್ಗಳು ತಡೆದು ಕಿರುಕುಳ ನೀಡಿದ್ದಾರೆ.
70 ವರ್ಷದ ಹಿರಿಯ ಅಜ್ಜ ಬೀದಿ ಬದಿ ನಿಂತು ಬ್ಯಾಗ್ಗಳನ್ನು ಮಾರಾಟ ಮಾಡುತ್ತಿದ್ದರು. ಇದನ್ನು ಗಮನಿಸಿದ ಮಾರ್ಷಲ್ ಅಜ್ಜನ ಬಳಿ ತೆರಳಿ ಬೀದಿಯಲ್ಲಿ ಮಾರಾಟ ಮಾಡದಂತೆ ತಡೆದಿದ್ದಾರೆ. ಅಜ್ಜ ಎಷ್ಟೇ ಪರಿ ಪರಿಯಾಗಿ ಕೇಳಿಕೊಂಡ್ರು ಬಿಡದೇ ಮಾರ್ಷಲ್ ದೌರ್ಜನ್ಯ ಎಸಗಿದ್ದಾರೆ. ವ್ಯಾಪಾರಿಯ ಬ್ಯಾಗ್ ಕಸಿದಿದ್ದಾರೆ. ಅಂಗಲಾಚಿ ಬೇಡಿಕೊಂಡರೂ ಮಾನವೀಯತೆ ಮರೆತು, ಹಿರಿಯ ಎಂಬ ಕೊಂಚವೂ ಗೌರವ ನೀಡದೆ ಗದರಿ ಎಳೆದಾಡಿದ್ದಾರೆ. ನಿಂತಲ್ಲೇ ನಿಲ್ಲಲ್ಲ, ಓಡಾಡಿಕೊಂಡು ವ್ಯಾಪಾರ ಮಾಡ್ತೀನಿ ಅವಕಾಶ ಮಾಡಿಕೊಡಿ ಎಂದು ವೃದ್ಧ ಮನವಿ ಮಾಡಿದರೂ ಕ್ಯಾರೆ ಎನ್ನದೆ ಮಾರ್ಷಲ್ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ ಅಜ್ಜನ ಸಹಾಯಕ್ಕೆ ಬಂದ ಸಾರ್ವಜನಿಕರ ಮಾತನ್ನೂ ಕಿವಿಗೆ ಹಾಕಿಕೊಳ್ಳದಂತೆ ಸದ್ಯ ಮಾರ್ಷಲ್ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮಾರ್ಷಲ್ ನಡೆ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ