ಆನೇಕಲ್ : ಕಳೆದ ಮಾರ್ಚ್ ತಿಂಗಳ 28ನೇ ತಾರೀಖು ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಪರಾರಿಯಾಗಿದ್ದ ಕರಡಿ ಸೆರೆಯಾಗಿದೆ . ನಿನ್ನೆ (ಏಪ್ರಿಲ್ 9) ಬೆಳಗ್ಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿ ಉದ್ಯಾನವನ ವ್ಯಾಪ್ತಿಯ ಹುಚ್ಚನಕುಂಟೆ ಬಳಿ ಇರಿಸಿದ್ದ ಬೋನಿಗೆ ಕರಡಿ ಬಿದ್ದಿದೆ. ಸದ್ಯ ಕರಡಿಯನ್ನು ಉದ್ಯಾನವನದ ರೆಸ್ಕ್ಯೂ ಸೆಂಟರ್ನ ಬೋನಿನಲ್ಲಿಟ್ಟು ಆರೈಕೆ ಮಾಡಲಾಗುತ್ತಿದ್ದು, ಕರಡಿ ಆರೋಗ್ಯವಾಗಿದೆ ಎಂದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾರ್ಚ್ 28ನೇ ತಾರೀಖಿನಂದು ತುಮಕೂರಿನಿಂದ ರಕ್ಷಣೆ ಮಾಡಿ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕರಡಿಯನ್ನು ತರಲಾಗಿತ್ತು. ಈ ಸಂದರ್ಭದಲ್ಲಿ ಕರಡಿ ಬೋನ್ನಿಂದ ಶಿಫ್ಟ್ ಮಾಡುವ ವೇಳೆ ಉದ್ಯಾನವನದ ಸಹಾಯಕ ನಿರ್ದೇಶಕರ ಜೀಪ್ ಚಾಲಕ ಜಯಶಂಕರ್ ಮೇಲೆ ದಾಳಿ ಮಾಡಿ ಸಮೀಪದ ಕಾಡಿಗೆ ಪರಾರಿಯಾಗಿತ್ತು. ಉದ್ಯಾನವನದ ಸಿಬ್ಬಂದಿ ಶೋಧ ನಡೆಸಿದ್ದರು ಪತ್ತೆಯಾಗಿರಲಿಲ್ಲ.
ಎರಡು ದಿನದ ಬಳಿಕ ಹೆನ್ನಾಗರ ಸಮೀಪದ ಕಾಚನಾಯಕನಹಳ್ಳಿ ಕಾರ್ಖಾನೆಯೊಂದರ ಸೆಕ್ಯೂರಿಟಿ ಗಾರ್ಡ್ ಮೇಲೆ ದಾಳಿ ನಡೆಸಿತ್ತು. ಬಳಿಕ ಅದೇ ದಿನ ಚಂದಾಪುರ ಬಳಿ ಮುಂಜಾನೆ ಕಾಣಿಸಿಕೊಂಡಿದ್ದ ಕರಡಿ ಸಮೀಪದ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಾಲ್ವರ ಮೇಲೆ ದಾಳಿ ನಡೆಸಿ ಪರಾರಿಯಾಗಿತ್ತು. ಅರಣ್ಯ ಅಧಿಕಾರಿಗಳು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಪುನಃ ಎರಡು ದಿನದ ಬಳಿಕ ಎಲೆಕ್ಟ್ರಾನಿಕ್ ಸಿಟಿ ಸಮೀಪ ಬೇಗೂರಿನ ವಿಶ್ವಪ್ರಿಯ ಬಡಾವಣೆಯಲ್ಲಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿ ಮಾಯವಾಗಿತ್ತು. ಕಳೆದ ಮೂರು ದಿನಗಳಿಂದ ಜಿಗಣಿ ಸಮೀಪದ ಹುಲ್ಲಹಳ್ಳಿ, ಬನ್ನೇರುಘಟ್ಟ ಸಮೀಪದ ಬೇಗಿಹಳ್ಳಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭೀತಿ ಮೂಡಿಸಿತ್ತು.
ಇಂದು ಬೆಳಗ್ಗೆ ತಪ್ಪಿಸಿಕೊಂಡಿದ್ದ ಕರಡಿ ರೆಸ್ಕ್ಯೂ ಸೆಂಟರ್ನಿಂದ ಒಂದು ಕಿ.ಮಿ ದೂರದಲ್ಲಿ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ. ಸದ್ಯ ರೆಸ್ಕ್ಯೂ ಸೆಂಟರ್ನಲ್ಲಿ ಕರಡಿಯನ್ನು ಇರಿಸಲಾಗಿದೆ. ಆದರೆ ಸೆರೆ ಸಿಕ್ಕಿರುವ ಕರಡಿ ತುಮಕೂರಿನಿಂದ ಇಲ್ಲಿಗೆ ತರಲಾಗಿದ್ದ ಕರಡಿಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕಿದೆ. ಹಾಗಾಗಿ ಹೆಚ್ಚು ಮಾನವ ಸಂಪರ್ಕಕ್ಕೆ ಬರದಂತೆ ಪ್ರತ್ಯೇಕ ಕೇಜ್ನಲ್ಲಿರಿಸಿ ಆರೈಕೆ ಮಾಡಲಾಗುತ್ತಿದೆ.
ತುಮಕೂರು ಅರಣ್ಯ ಅಧಿಕಾರಿಗಳ ಬಳಿ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಸದ್ಯ ಸೆರೆ ಸಿಕ್ಕಿರುವ ಕರಡಿಯ ಕೂದಲು ಮತ್ತು ಇತರೆ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಹೈದರಾಬಾದ್ನ ಲ್ಯಾಬ್ಗೆ ಕಳುಹಿಸಲಾಗುವುದು. ಅಲ್ಲಿನ ತಜ್ಞರು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ ಕರಡಿ ಯಾವುದು ಎಂಬುದನ್ನು ತಿಳಿಸಲಿದ್ದಾರೆ. ಇನ್ನು ಕರಡಿ ಹಳ್ಳಿಗಳತ್ತ ಬರಲು, ಹಲವು ಕಾರಣಗಳಿವೆ. ಸಾಮಾನ್ಯವಾಗಿ ಕರಡಿಗಳು ಹಳ್ಳಿ ಪ್ರದೇಶ, ರೆಸಾರ್ಟ್ ಮತ್ತು ನಗರದ ಗಾರ್ಬೆಜ್ ಸುರಿಯುವ ಕಡೆ ಬರುತ್ತವೆ. ಅಲ್ಲಿ ಎಸೆದು ಹೋಗಿರುವ ಆಹಾರಕ್ಕಾಗಿ ಬರುತ್ತದೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.
ರಾತ್ರಿ ವೇಳೆ ಕರಡಿಗಳು ಹೆಚ್ಚು ಬರುತ್ತವೆ. ಇಂತಹ ಸನ್ನಿವೇಶದಲ್ಲಿ ಕರಡಿಗಳನ್ನು ಅನಗತ್ಯವಾಗಿ ಕೆಣಕಲು ಹೋಗಬಾರದು. ತನ್ನ ಪಾಡಿಗೆ ಅವುಗಳನ್ನು ಬಿಟ್ಟರೆ ಮರಳಿ ಕಾಡಿಗೆ ಹೊರಟು ಹೋಗುತ್ತವೆ. ಜೊತೆಗೆ ರೆಸಾರ್ಟ್ಗಳಲ್ಲಿ ತಿಂದು ಉಳಿದ ಆಹಾರವನ್ನು ಹೊರಗಡೆ ಎಸೆಯಬಾರದು ನಗರದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವುದನ್ನು ನಿಲ್ಲಿಸಿದರೆ ಕರಡಿಗಳು ಸಹ ಹಳ್ಳಿಗಳತ್ತ ಬರುವುದಿಲ್ಲ. ಕಂಡಲ್ಲಿ ಕೆಣಕುವ ಬದಲು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ಹೇಳಿದ್ದಾರೆ.
ಸೆರೆ ಸಿಕ್ಕಿರುವುದು ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಪರಾರಿಯಾಗಿದ್ದ ತುಮಕೂರು ಕರಡಿನಾ ಅಥವಾ ಬೇರೆ ಕರಡಿನಾ ಎಂಬುದು ಇದೀಗ ಅನುಮಾನವಿದ್ದು, ವೈಜ್ಞಾನಿಕ ವರದಿ ಬಂದ ಬಳಿಕ ಸೆರೆ ಸಿಕ್ಕಿರುವುದು ತುಮಕೂರು ಕರಡಿಯಾದರೆ ರೆಸ್ಕ್ಯೂ ಸೆಂಟರ್ನಲ್ಲಿ ಪೋಷಣೆ ಮಾಡಲಾಗುತ್ತದೆ. ಇಲ್ಲವಾದರೆ ಕಾಡಿಗೆ ಬಿಡಲಾಗುತ್ತದೆ. ಪುನಃ ಪರಾರಿಯಾಗಿದ್ದ ಕರಡಿಗೆ ಶೋಧ ಮುಂದುವರಿಸಬೇಕಾಗುತ್ತದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.
ಸದ್ಯ ಕರಡಿ ಸೆರೆಯಾಗಿದ್ದರೂ ಸಾರ್ವಜನಿಕರಲ್ಲಿ ಮಾತ್ರ ಆತಂಕ ದೂರವಾಗಿಲ್ಲ. ಕಳೆದ ಮೂರು ದಿನಗಳಿಂದ ರಾತ್ರಿ ವೇಳೆ ಬನ್ನೇರುಘಟ್ಟ ಅರಣ್ಯಕ್ಕೆ ಸಮೀಪದ ಬೇಗಿಹಳ್ಳಿ ಗ್ರಾಮದ ಸಮೀಪ ಕರಡಿ ಕಾಣಿಸಿಕೊಂಡಿದೆ. ಅರಣ್ಯ ಅಧಿಕಾರಿಗಳು ಮತ್ತು ಪೊಲೀಸರು ಕರಡಿಗಾಗಿ ತಡರಾತ್ರಿವರೆಗೂ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ: ಬನ್ನೇರುಘಟ್ಟ ಉದ್ಯಾನವನದಿಂದ ತಪ್ಪಿಸಿಕೊಂಡ ಕರಡಿಗೆ ಹುಡುಕಾಟ; ಶೆಟ್ಟಿಹಳ್ಳಿ ಗ್ರಾಮದ ಐವರ ಮೇಲೆ ಕರಡಿ ದಾಳಿ!
(Bear caught by forest department near Bannerghatta national park in Bangalore)